Sunday, March 18, 2012

ಫ್ಲ್ಯಾಶ್ ಬ್ಯಾಕ್...

ಚಿಂವ್ ಚಿಂವ್ ಎಂದು ಕೂಗಿ ಕರೆದಾಗ ಆ ಅಳಿಲು ಕತ್ತೆತ್ತಿ ನೋಡಿತು. ನಾವಿದ್ದಿದ್ದು, ಚೆನ್ನೈಯಿಂದ ಸುಮಾರು 80 ಕಿಮೀ ದೂರದಲ್ಲಿರುವ ವೇಡಂತಂಗಳ್ ಎಂಬ ಸುಂದರ ಪಕ್ಷಿಧಾಮದ 4-5 ಅಡಿ ಎತ್ತರದ ವಾಚ್ ಟವರ್ ಮೇಲೆ. ನಾವು ಕರೆದ ಸದ್ದು ಬಂದ ಕಡೆ ಕತ್ತೆತ್ತಿ ನೋಡಿದ ಅದು ಒಂದರೆ ಕ್ಷಣ ಅವಕ್ಕಾದಂತೆ ದಿಟ್ಟಿಸಿ ಮತ್ತೆ ತನ್ನ ಕೆಲಸದಲ್ಲಿ ನಿರತವಾಯಿತು, ಆದರೆ ಅದರ ತೀಕ್ಷ್ಣ ನೋಟ ಥೇಟ್ ನನ್ನ ಅಳಿಲಿನ ನೋಟದಂತೆಯೇ ಅನಿಸಿ, ಸಿನಿಮಾದಂತೆ ನನ್ನ ನೆನಪಿನ ರೀಲು ಹಿಂದಕ್ಕೋಡಿತು.

ನಮ್ಮ ಮನೆಯಲ್ಲಿ ನಾನು ಸಣ್ಣವಳಿದ್ದಾಗಿನಿಂದಲೂ ಅಳಿಲಿನ ಜೊತೆಗೇ ಬೆಳೆದವಳು. ಎರಡನೇ ತರಗತಿಯಲ್ಲಿದ್ದಾಗ ಅಪ್ಪ ತಂದ ಅಳಿಲು, ನಾನು ಪಿಯುಸಿಯಲ್ಲಿರುವರೆಗೂ 8-9 ವರ್ಷ ನಮ್ಮ ಜೊತೆ ಇದ್ದಿದ್ದು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಮೂರನೇ ತರಗತಿಯಲ್ಲಿದ್ದಾಗ ಅದೊಂದು ದಿನ ಅಪ್ಪ ರಾತ್ರಿ ಮನೆಗೆ ಬಂದಾಗ ಇನ್ನೂ ಕಣ್ಣು ಬಿಡದಿದ್ದ ಗಾಯಗೊಂಡಿದ್ದ ಅಳಿಲನ್ನು ತಂದಿದ್ದರು. ಅಪ್ಪನ ಕ್ಲಿನಿಕ್ಕಿನಲ್ಲಿ ಬೆಕ್ಕಿನ ಗಲಾಟೆಯಿಂದ ಮಾಡಿನ ಸಂದಿಯಿಂದ ಬಿದ್ದ ಅಳಿಲ ಮರಿಯದು. ಅಪ್ಪನೇ ಮಾಡಿದ ಒಂದು ವಿಶಾಲ ಗೂಡಿನಲ್ಲಿ ಅದನ್ನು ಹಾಕಿ ಹಾಲು ಕುಡಿಸಿ ಅದನ್ನು ಮುದ್ದಿನಿಂದ ಸಾಕಿದ್ದೆವು. ಮೂರ್ನಾಲ್ಕು ತಿಂಗಳು ನಮ್ಮ ಜೊತೆಯಲ್ಲಿ ಬೆಳೆದ ಅಳಿಲನ್ನು ಅಪ್ಪ ಗೂಡಿನಿಂದ ಹರಬಿಡಲು ನಿಶ್ಚಯಿಸಿದ್ದು ನನಗೂ ಅಕ್ಕನಿಗೂ ನುಂಗಲಾರದ ತುತ್ತಾಗಿತ್ತು. ಆದರೆ ಅಪ್ಪ ಅಮ್ಮ ನಿಶ್ಚಯಿಸಿಬಿಟ್ಟಿದ್ದರು. ಮರದಲ್ಲಿ ಸ್ವತಂತ್ರವಾಗಿ ಓಡಾಡಿಕೊಂಡಿರುವ ಅಳಿಲನ್ನು ಮನೆಯಲ್ಲಿ ಗೂಡಿನಲ್ಲಿ ಸಾಕೋದು ಅಪ್ಪನಿಗೆ ಇಷ್ಟವಿರಲಿಲ್ಲ. ಒಂದು ದಿನ ಬೆಳಗ್ಗೆ ಹೀಗೆ ಸ್ವತಂತ್ರಗೊಂಡ ಮರಿ ಎಲ್ಲಿಗೆ ಓಡುವುದೆಂದು ತೋಚದೆ ಕೊನೆಗೂ ಓಡಿ ಹೋಯಿತು. ಬೇಸರದಲ್ಲಿ ಆ ದಿನವಿಡೀ ಕಳೆದಿದ್ದು ನನಗಿನ್ನೂ ನೆನಪಿದೆ. ಆದರೆ ಮರುದಿನ ನಮಗೊಂದು ಆಶ್ಚರ್ಯ ಕಾದಿತ್ತು. ನಾವು ಏಳುವ ಹೊತ್ತಿಗಾಗಲೇ ಅಳಿಲು ನಮ್ಮ ಮನೆಯ ಹೊರಗಿನ ಕಂಬದ ಮೇಲೆ ಹಾಜರ್!

ವಿಚಿತ್ರವೆಂದರೆ, ಗೂಡಿನಲ್ಲಿದ್ದಾಗ ನಮ್ಮಂತೆ 7 ಗಂಟೆಗೆ ಪುಟ್ಟ ಬಟ್ಟಲಲ್ಲಿ ಟೀ ಕುಡಿಯೋದನ್ನು ಅಭ್ಯಾಸ ಮಾಡಿಕೊಂಡಿದ್ದ ಈ ಅಳಿಲು ಕರೆಕ್ಟಾಗಿ 7ಕ್ಕೇ ನಮ್ಮ ಮನೆಯ ಕಂಬದಲ್ಲಿ ಕುಳಿತಿತ್ತು. ಟೀ ಕುಡಿದ ಮೇಲೆ ಮರದೆಡೆಯಲ್ಲಿ ಮರೆಯಾಗುವ ಅದು ಮತ್ತೆ 9.30-10ರ ಸುಮಾರಿಗೆ ಅನ್ನ-ಹಾಲು ತಿನ್ನಲು ಬರುತ್ತಿತ್ತು, ಆಮೇಲೆ ಮಧ್ಯಾಹ್ನ 2ಕ್ಕೆ, ಸಂಜೆ ಆರರ ಮೊದಲು ಬಂದು ಅನ್ನ ಹಾಲು ತಿಂದು ಹೋಗುತ್ತಿತ್ತು. ನೀವು ನಂಬುತ್ತೀರೋ ಇಲ್ಲವೋ, ಈ ನಂಟು ಹಾಗೆಯೇ ಒಂದು ವರ್ಷ ನಿರಂತರವಾಗಿ ಸಾಗಿತು.

ಆದರೆ ನಾಲ್ಕೂ ಮಂದಿಗೆ ವಿಚಿತ್ರ ಸಂಕಟವಾಗಿದ್ದು ನಾವು ಆ ಮನೆ ಖಾಲಿ ಮಾಡಬೇಕಾಗಿ ಬಂದಾಗ! ನೆಲ್ಲಿಗುಡ್ಡೆ ಎಂಬ ಹಳ್ಳಿಯ ಆ ಒಂಟಿ ಮನೆಯನ್ನು ಖಾಲಿ ಮಾಡಿ ಅಪ್ಪ ಆಗ ತಾನೇ ಖರೀದಿಸಿದ್ದ ವಿಟ್ಲದ ಹೊಸ ಮನೆಗೆ ಹೋಗುವ ಖುಷಿ ಒಂದೆಡೆಯಾದರೆ, ಈ ಅಳಿಲಿಗೆ ಏನು ಮಾಡೋಣ ಎಂಬ ಚಿಂತೆ ಮತ್ತೊಂದೆಡೆ. ನಮ್ಮ ಸಾಮಾನು ಸರಂಜಾಮುಗಳನ್ನು ಲಾರಿಗೆ ಏರಿಸುವ ಮುನ್ನಾ ದಿನವೇ ಅಳಿಲನ್ನೂ ಗೂಡಿನಲ್ಲಿ ಕೂಡಿ ಹಾಕಿದ್ದೆವು. ತನ್ನನ್ನು ಯಾಕೆ ಕೂಡಿ ಹಾಕಿದ್ದೆಂದು ಮೂಕವಾಗಿ ನೋಡುತ್ತಾ, ಬೋನಿಗೆ ಬಿದ್ದ ಇಲಿಯಂತೆ ವಿಚಿತ್ರ ಸಂಕಟ ಅನುಭವಿಸುತಿತ್ತು. ಅಂತೂ ಹೊಸ ಮನೆಗೆ ಬಂದೆವು. ನನಗೆ, ಅಕ್ಕನಿಗೆ ಹೊಸ ಶಾಲೆಯಂತೆ, ಅದಕ್ಕೂ ಹೊಸ ಪರಿಸರ. ಗೂಡಿನಿಂದ ಹೊರ ಬಿಟ್ಟರೆ, ಹೊಸ ಪರಿಸರದಲ್ಲಿ ಎಲ್ಲಿ ಕಳೆದುಹೋಗುವುದೋ ಎಂಬ ಚಿಂತೆ ಅಪ್ಪ ಅಮ್ಮನಿಗೆ. ಹತ್ತಾರು ದಿನ ಗೂಡಿನಲ್ಲೇ ಕಳೆದ ನಂತರ ಅದನ್ನು ಹೊರ ಬಿಟ್ಟವು. ದಿಕ್ಕು ತಪ್ಪಿದಂತೆ ಒಮ್ಮೆ ಅತ್ತಿತ್ತ ಓಡಾಡಿ ಆಮೇಲೆ ಮರದೆಡೆಯಲ್ಲಿ ಮರೆಯಾಯಿತು ನಮ್ಮ ಅಳಿಲು.

ತಿಂಗಳೊಂದಾಯಿತು, ಎರಡಾಯಿತು... ಅಳಿಲಿನ ಪತ್ತೆಯೇ ಇಲ್ಲ. ಬಹುಶಃ ಅದಕ್ಕೆ ದಾರಿ ತಪ್ಪಿದೆ, ಅಪ್ಪ ಅಂದರು. ಏನು ಮಾಡೋಣ, ನಮ್ಮ ತೆಂಗಿನ ತೋಟದ ನಡುವಿನ ಗೇರು ಮರದಲ್ಲೆಲ್ಲಾ ಕಂಡ ಕಂಡ ಅಳಿಲನ್ನೆಲ್ಲಾ ನಮ್ಮದಿರಬಹುದೇ ಎಂದು  ಚಿಂವ್ ಚಿಂವ್ ಎಂದು ಕೂಗುತ್ತಾ ಕರೆಯುತ್ತಿದ್ದೆವು, ಆದರೆ ಆ ಬೇರೆ ಅಳಿಲುಗಳೆಲ್ಲವೂ ನಮ್ಮ ಸ್ವರಕ್ಕೆ ಏನೂ ಪ್ರತಿಕ್ರಿಯಿಸದೆ ಓಡಿ ಮರೆಯಾಗುತ್ತಿದ್ದವು. ಆದರೆ ಅದೊಂದು ದಿನ ಸಂಜೆ ಅಮ್ಮನ ದನಿಗೆ ಓಡೋಡಿ ಮರದಿಂದಿಳಿದು ಬಂದ ನಮ್ಮ ಅಳಿಲು ಅಮ್ಮನ ಹಿಂದೆಯೇ ಮನೆಯವರೆಗೂ ಬಂತು. ಅನ್ನ- ಹಾಲು ಕುಡಿದು ಮರೆಯಾಯಿತು. ಆಮೇಲೆ ಆರಂಭವಾಯಿತು, ನಿತ್ಯದ ಭೇಟಿ, ಬರೋಬ್ಬರಿ 8-9 ವರ್ಷ!

ಬಟ್ಟೆ ತೊಳೆಯುವ ಕಲ್ಲಿನಲ್ಲಿ ಬಂದು ಕೂತು ಹಾಲಲ್ಲಿ ಮುಳುಗಿರುವ ಅನ್ನದ ಅಗುಳನ್ನು ಎರಡೂ ಕೈಯಲ್ಲಿ ಎತ್ತಿ ತಿನ್ನುವ ಅದರ ಶೈಲಿ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಅದರ ಮೂರ್ನಾಲ್ಕು ಮರಿಗಳನ್ನು ದೂರದಲ್ಲಿ ನಿಲ್ಲಿಸಿ ಒಂದೊಂದೇ ಅಗುಳನ್ನು ತೆಗೆದುಕೊಂಡು ಹೋಗಿ ತಿನ್ನಿಸುವ ಪರಿ ಹೇಗೆ ಮರೆತೀತು. ವಿಚಿತ್ರವೆಂದರೆ, ನಮ್ಮ ತೊಡೆಯ ಮೇಲೆ ಕೂತು, ಮೈಮೇಲೆ ಹರಿದಾಡಿ ನಮ್ಮ ಕೈಯಿಂದ ಅನ್ನ ತಿನ್ನುತ್ತಿದ್ದ ಅದು, ಮರಿಗಳನ್ನು ದೂರದಲ್ಲೇ ನಿಲ್ಲಿಸುತ್ತಿತ್ತು. ಮರಿಗಳು ಬಂದರೂ ನಾವು ಹತ್ತಿರ ಹೋದರೆ ತಟ್ಟೆ ಬಿಟ್ಟು ಓಡಿ ಹೋಗುತ್ತಿದ್ದವು. ನಾನು ಪ್ರಥಮ ಪಿಯುಸಿವರೆಗೂ ದಿನವೂ ಬರುತ್ತಿದ್ದ ಅದು ಆಮೇಲೆ ಬರಲಿಲ್ಲ. ಸತ್ತು ಹೋಯಿತೆಂದು ನಾವು ನಂಬಿದೆವು. ಯಾಕೆಂದರೆ, ಆಗಲೇ ಅದಕ್ಕೆ 9 ವರ್ಷವಾಗಿತ್ತು.

ಬೆಂಗಳೂರಿನಲ್ಲಿ ಪ್ರೆಸ್ ಕ್ಲಬ್ಬಿನ ಮೂಲೆಗಳಲ್ಲಿ ಕಡ್ಲೆಪುರಿಯ ಕಡಲೇಕಾಳನ್ನು ತಿನ್ನಲು ಬರುತ್ತಿದ್ದ ಅಳಿಲುಗಳು, ಈಗ ನಮ್ಮ ಚೆನ್ನೈ ಮನೆಯ ಕಿಟಕಿ ಸಂದಿಯಲ್ಲಿ ನಾವು ಆಗಾಗ ಹಾಕುವ ಅಕ್ಕಿ ಕಾಳನ್ನು ನಾವಿಲ್ಲದಾಗ ಸಂತೃಪ್ತಿಯಿಂದ ತಿನ್ನುವ ಅಳಿಲನ್ನು ಮರೆಯಿಂದ ನೋಡುವಾಗ ಅಂದು ನಮ್ಮ ತೊಡೆಯ ಮೇಲೆ ಆರಾಮವಾಗಿ ಯಾವ ಭಯವೂ ಇಲ್ಲದೆ ಕುಳಿತು ತಿನ್ನುತ್ತಿದ್ದ ಅಳಿಲಿನ ನೆನಪಾಗುತ್ತದೆ. ಜೊತೆಜೊತೆಗೇ ಈ ಅಳಿಲನ್ನು ನಮ್ಮ ಜೊಂತೆ ಕಂಡು ಹೊಟ್ತೆಉರಿ ಪಟ್ಟು ಕುಂಯ್ ಕುಂಯ್ ರಾಗವೆಳೆಯುತ್ತಿದ್ದ ನಮ್ಮ ರೂಬಿ ನಾಯಿಯೂ ನೆನಪಾಗುತ್ತಾನೆ. ಆದರೆ, ಈಗ ಆ ಅದ್ಭುತ ಕ್ಷಣಗಳ ಒಂದು ಫೋಟೋವೂ ಇಲ್ಲದಿರುವುದು ನೆನೆಸಿ ಒಮ್ಮೊಂಮ್ಮೆ ಬೇಸರವೂ ಆಗುತ್ತದೆ. ಹಾಗಾಗಿ ಆ ಹಳೆಯ ನೆನಪಿಗೊಂದು ಈ ಹೊಸ ಫೋಟೋ-ಬರಹದ ಚೌಕಟ್ಟು.