Friday, November 16, 2012

ಅಪ್ಪನಿಗಿಂದು ಅರುವತ್ತು..!

''ಒಂದಾನೊಂದು ಊರಿಲಿ ಒಂದು ಅಜ್ಜಿ ಇತ್ತಡ್ಡ''
''ಹುಂ''
''ಆ ಅಜ್ಜಿಗೆ ಮೂರು ಗೆಜ್ಜೆ ಇತ್ತಡ್ಡ''
''ಹುಂ''
''ಎಷ್ಟು ಗೆಜ್ಜೆ ಇತ್ತಡ್ಡ? ಹೇಳು ನೋಡುವಾ''
''ಮೂರು ಗೆಜ್ಜೆ''
''ನೀನು ಸರಿ ಕಥೆ ಕೇಳ್ತಾ ಇಲ್ಲೆ, ಆನು ಹೇಳ್ತಿಲ್ಲೆ''
''ನಿಂಗ ಹೇಳಿದ್ದು ಮೂರು ಹೇಳಿಯೇ. ಆನು ಕೇಳ್ತಾ ಇದ್ದೆ''
''ಸರಿ, ಶುರುವಿಂದ ಹೇಳ್ತೆ, ಕೇಳು''
''ಹುಂ, ಸರಿ''
''ಒಂದಾನೊಂದು ಊರಿಲಿ ಒಂದು ಅಜ್ಜಿ ಇತ್ತಡ್ದ''
 ''ಹುಂ''
''ಆ ಅಜ್ಜಿಗೆ ಮೂರು ಗೆಜ್ಜೆ ಇತ್ತಡ್ಡ. ಎಷ್ಟು ಗೆಜ್ಜೆ ಇತ್ತಡ್ಡ?''
''ಮೂರು ಗೆಜ್ಜೆ''
''ಎಲ ಕತೆಯೇ, ನೀನು ಸರಿ ಕಥೆ ಕೇಳಿದ್ದೇ ಇಲ್ಲೆ''
''ಇಲ್ಲೆ ಅಪ್ಪಾ, ಆನು ಕೇಳಿದ್ದೆ. ನಿಂಗ ಹೇಳಿದ್ದು ಮೂರು ಗೆಜ್ಜೆ ಹೇಳಿಯೇ. ಅದು ಸರಿ, ಮೂರು ಗೆಜ್ಜೆ ಎಂತಕ್ಕೆ ಅಪ್ಪಾ? ಎರಡು ಸಾಲದಾ?''
''ಅದಕ್ಕೇ ಹೇಳಿದ್ದು, ನೀನು ಸರಿ ಕಥೆ ಕೇಳ್ತಾ ಇಲ್ಲೆ ಹೇಳಿ, ಸರಿ ಮತ್ತೆ ಶುರುವಿಂದ ಹೇಳ್ತೆ, ಒಂದಾನೊಂದು ಊರಿಲಿ.....''
''ಅಯ್ಯೋ ಅಪ್ಪಾ, ಒಂದರಿ ನಿಲ್ಸುತ್ತಿರಾ ನಿಂಗಳ ಕಥೆಯ, ಎನಗೆ ನಿಂಗಳ ಕಥೆಯೂ ಬೇಡ ಎಂತದೂ ಬೇಡ''
ನಾನು ಸಿಟ್ಟು ಬಂದು ಓಡುತ್ತಿದ್ದೆ. ಅಪ್ಪ ಜೋರಾಗಿ ಬಾಯ್ತೆರೆದು ನಗುತ್ತಿದ್ದರು.

ಇವೆಲ್ಲ ನಿನ್ನೆ ಮೊನ್ನೆ ನಡೆದಂತಿದೆ. ಇನ್ನೂ ಆ ಚಿತ್ರಗಳು ಮಾಸಿಲ್ಲ. ಅಪ್ಪನ ತರಲೆಗಳೂ ಹಾಗೇ ಇವೆ. ತಲೆಯ ಕೆಂಚುಗೂದಲು ಇನ್ನೂ ಬಿಳಿಯಾಗಿಲ್ಲ, ಮೀಸೆಯಲ್ಲಿ ಅಲ್ಲಲ್ಲಿ ಬೆಳ್ಳಿರೇಖೆ. ಬಿಳಿ-ಕಪ್ಪಿನ ಮೂಲ ಹುಡುಕೋದು ಸಾಧ್ಯವೇ ಇಲ್ಲವೆಂಬಂತೆ ನೀಟಾಗಿ ಶೇವ್ ಮಾಡಿದ ಗಡ್ಡ; ಮೀಸೆಯಂಚಿನಲ್ಲಿ ಮಾತ್ರ ಅದೇ ಹಳೆಯ ತುಂಟ ತರಲೆ ನಗು. ಆದರೆ, ಅವರಿಗಿಂದಿಗೆ ಸರಿಯಾಗಿ ಅರುವತ್ತು!

ನನ್ನ ಅಪ್ಪ..!

ಒಂದು ಪುಟ್ಟ ಮರದ ರೀಪಿಗೆ ಬಣ್ಣ ಬಳಿದು ಅದರ ಮುಂತುದಿಗೆ ಕಣ್ಣು ಬಾಯಿಗಳಂತೆ ಹೆಡ್ ಲೈಟಿನ ಚಿತ್ರ ಬಿಡಿಸಿ ಬದಿಗಳುದ್ದಕ್ಕೂ ಕಿಟಕಿಯಂತೆ ಬರೆದು, ಕೆಳಗೆ ಎರಡು ತೂತು ಕೊರೆದು ಅದಕ್ಕೆ ಕುಟ್ಟಿಕೂರ ಪೌಡರ್ ಡಬ್ಬಿಯ ಮುಚ್ಚಳವನ್ನು ಮುರಿದ ಕೊಡೆ ಕಡ್ಡಿಗೆ ಜೋಡಿಸಿ ಚಕ್ರ ಮಾಡಿ ಬಸ್ಸು ಮಾಡಿ, ಎದುರಿಗೆ ಒಂದು ಹಗ್ಗ ಕಟ್ಟಿ ನನ್ನ ಪುಟ್ಟ ಕೈಗಿತ್ತು ನಾನು ಅದರಲ್ಲೇ ಆಡಿ ದೊಡ್ದವಳಾಗುವುದನ್ನು ಸಂಭ್ರಮದಿಂದ ನೋಡಿದ ಅಪ್ಪ! ಅದ್ಯಾವುದೋ ತಾಳೆಮರದ ಗೊರಟಿಗೆ ಕಣ್ಣು ಮೂಗು ಬಾಯಿಗಳನ್ನು ಬಿಡಿಸಿ ದೊಡ್ಡ ಮೀಸೆ ಇಟ್ಟು,  ಆ ಮುಖಕ್ಕೆ ಜೋಡುವಂತೆ ಹಳೇ ಬಾಟಲಿ ಜೋಡಿಸಿ ಹಳೇ ಬಟ್ಟೆ ಸುತ್ತಿ ಕೈಕಾಲು ಮಾಡಿ ಅಮ್ಮ ನಮಗೆ ಹೊಲಿದ ಅಂಗಿಗಳಲ್ಲಿ ಉಳಿದ ಚೂರು ಪಾರು ಬಣ್ಣದ ಬಟ್ಟೆಗಳಿಗೆ ಜರತಾರಿ ಜೋಡಿಸಿ ನೆರಿಗೆಗಳ ಅಂಗಿ ಮಾಡಿ, ರಟ್ಟಿನ ಕಿರೀಟ ಮಾಡಿ ಥೇಟ್ ಈಗಷ್ಟೇ ರಂಗಸ್ಥಳಕ್ಕೆ ಇಳಿದ ಬಣ್ಣದ ವೇಷವನ್ನೂ ನಾಚಿಸುವಂತೆ ಯಕ್ಷಗಾನ ಕಲಾವಿದನನ್ನು ಮನೆಯಲ್ಲೇ ರೂಪಿಸಿ ನಮ್ಮ ಪುಟ್ಟ ಕಣ್ಣುಗಳಲ್ಲಿ ಆಗಲೇ ಬೆರಗು ಮೂಡಿಸಿದ ನಮಗೂ ಅದೇ ರಕ್ತ ಹಂಚಿದ ಅಪ್ಪ! ಬೇಸಿಗೆ ರಜೆ ಬಂತೆಂದರೆ ಹಳೇ ಬಾಲಮಂಗಳ, ಚಂಪಕ, ಚಂದಮಾಮಗಳನ್ನೆಲ್ಲ ಮತ್ತೆ ಗುಡ್ದೆಹಾಕಿ ಓದಿದ್ದನ್ನೇ ಮತ್ತೆ ಮತ್ತೆ ಓದುವಾಗ 'ಅದೇ ಡಿಂಗ, ಫಕ್ರುಗಳನ್ನೇ ಯಾಕೆ ಬಾಯಿಪಾಠ ಮಾಡ್ತಿ?.. ಇದನ್ನೂ ಓದು' ಎಂದು ಒಳ್ಳೊಳ್ಳೆ ಪುಸ್ತಕಗಳನ್ನು ತಂದು ಕೊಟ್ಟು ನನಗೆ ಓದಿನ ರುಚಿ ಹತ್ತಿಸಿದ ಅಪ್ಪ! ನನ್ನ ಹಾಗೂ ಅಕ್ಕನ ಏಕಪಾತ್ರಾಭಿನಯ ಸ್ಪರ್ಧೆಗಳಿಗೆ ತಾನೇ ಪ್ರಸಂಗಗಳನ್ನು ಬರೆದು ಕೊಟ್ಟು ಅಭಿನಯಿಸಿ ತೋರಿಸಿ ಕಲಿಸಿಕೊಟ್ಟ ಅಪ್ಪ! ಛದ್ಮವೇಷ, ನಾಟಕ ಏನೇ ಇರಲಿ ಭಿನ್ನವಾದ ಐಡಿಯಾಗಳನ್ನು ಕೊಟ್ಟು ನಮ್ಮಿಬ್ಬರ ಕೈಯಲ್ಲೂ ಬಹುಮಾನ ಗೆಲ್ಲಿಸಿದ ಅಪ್ಪ! ಆ ಪುಟ್ಟ ಬಾಡಿಗೆ ಮನೆಯ ಕತ್ತಲ ರಾತ್ರಿಗಳಲ್ಲಿ ಗೋಡೆಯ ಮೇಲೆ ಬಿದ್ದ ಸೀಮೆ ಎಣ್ಣೆ ಬುಡ್ಡಿಯ ಮಂದ ಬೆಳಕಿನಲ್ಲಿ ವಿಧವಿಧ ಪ್ರಾಣಿಪಕ್ಷಿ ಸಂಕುಲವನ್ನು ತನ್ನ ಕೈಯ ನೆರಳಿನಲ್ಲಿ ಮಾಡಿ ತೋರಿಸಿ ಹಿನ್ನೆಲೆಯಾಗಿ ತಾನೇ ಆ ಪ್ರಾಣಿಪಕ್ಷಿಗಳ ಸ್ವರವನ್ನು ಅನುಕರಣೆ ಮಾಡಿ ಆ ದಿನಗಳನ್ನು ಪ್ರಜ್ವಲವಾಗಿಸಿದ ಅಪ್ಪ! ಅಜಕ್ಕಳದ ಕಾಡಿನಲ್ಲಿ ನಡೆವಾಗ ಹೆಗಲ ಮೇಲೆ ಹೊತ್ತು, ತಮ್ಮ ಕಾಲದ ಕಾಡಿನ ಕೌತುಕಕ ಕಥೆಗಳನ್ನು ಹೇಳುತ್ತಾ ಕಾಡಿನ ಬಗೆಗೆ ಅಚ್ಚರಿ-ಆಕರ್ಷಣೆಯನ್ನು ಮೂಡಿಸಿದ ಅಪ್ಪ! ತಾನೇ ಮಕ್ಕಳ ಪದ್ಯಗಳನ್ನು ಬರೆದು ಅದಕ್ಕೆ ರಾಗ ಜೋಡಿಸಿ ನಮ್ಮ ಕೈಯಲ್ಲಿ ಮನೆಯಲ್ಲಿ ಹಾಡಿಸಿ ಖುಷಿಪಟ್ಟು ನಮ್ಮ ಚಿಕ್ಕಂದಿನ ಹಾಡಿನ ಸರಕಿಗೆ ಇನ್ನಷ್ಟೂ ಮತ್ತಷ್ಟೂ ಸೇರಿಸಿದ ಅಪ್ಪ!

ಈಗ, ಥೇಟ್ ಥೇಟ್ ಅದೇ ಅಪ್ಪ, ಅಲ್ಲಲ್ಲ ಅಜ್ಜ! ಅಕ್ಕನ ಮಗಳ ಬೇಸಿಗೆ ರಜೆಯನ್ನು ಯಾವ ಬೇಸಿಗೆ ಶಿಬಿರಕ್ಕೂ ಕಮ್ಮಿಯಾಗದಂತೆ ಕಲರ್ ಫುಲ್ ಆಗಿಸುವ ಅದೇ ಹಳೆಯ ನಮ್ಮ ಅಪ್ಪ! ಒಟ್ಟಾರೆ ಅಪ್ಪನೆಂದರೆ ಈಗಲೂ ಅಚ್ಚರಿಯ ಕಣಜ!

ಇಂದಿಗೆ ಅಪ್ಪನಿಗೆ ಅರುವತ್ತು ತುಂಬಿತು ಎಂದರೆ ನನಗೇ ಆಶ್ಚರ್ಯ! ಈಗಲೂ ಥೇಟ್ ಅಂದಿನಂತೆ, ತಾನೇ ರಟ್ಟು/ಮರದ ತುಂಡಿನಿಂದ ಕತ್ತಿ ಗುರಾಣಿ ಮಾಡಿ ಕೊಟ್ಟು ಅಕ್ಕನ ಮಗಳೊಂದಿಗೆ ಯುದ್ಧ ಮಾಡುತ್ತಾ, ಅದೇ ಅಜ್ಜಿ ಕಥೆ ಹೇಳುತ್ತಾ, ಸ್ಕೂಟರಿನಲ್ಲಿ ಅವಳನ್ನು ಜಾತ್ರೆ, ಹುಲಿವೇಷ, ಆಟಿಕಳಂಜ ಎಂದೆಲ್ಲ ತೋರಿಸುತ್ತಾ ಬೆಂಗಳೂರಿನ ಕಾಂಕ್ರೀಟು ಕಾಡಿನಲ್ಲೂ ಅವಳ ಬಾಲ್ಯಕ್ಕೆ ಹಳ್ಳಿಯ ಸೊಗಡಿನ ಜೀವಂತಿಕೆಯನ್ನು ನೀಡುತ್ತಿರುವ ಅಪ್ಪನ ಈ ಜೀವನಪ್ರೀತಿಗೆ ಏನೆನ್ನಲಿ?

ಕೊನೆಯಲ್ಲಿ,

ಅಂದು ನಾನು ಒಂದನೇ ಕ್ಲಾಸಿನಲ್ಲಿರುವಾಗ ಅಪ್ಪನೇ ಬರೆದ ಹಲವು ಮಕ್ಕಳ ಕವನಗಳಲ್ಲಿ, ನನಗೆ ಅಂದಿಗೂ ಇಂದಿಗೂ ಇಷ್ಟವಾದ ಒಂದು ಕವನ ಈ ಹೊತ್ತಿನಲ್ಲಿ ಅಪ್ಪನಿಗಾಗಿ,

ಪೋಕರಿ ಕಿಟ್ಟ

ಸಂಜೆಯ ಹೊತ್ತಿಗೆ ಕಾಫಿಯ ಕುಡಿದು
ಪೇಟೆಗೆ ಹೋದನು ಪೋಕರಿ ಕಿಟ್ಟ

ಸಿಡಿಯುವ ಗುಂಡನು ಕೊಂಡನು ಕಿಟ್ಟ
ಹೊಳೆಯಿತು ಯೋಚನೆ ಬಲು ಕೆಟ್ಟ

ಮೆಲ್ಲಗೆ ಬೀದಿಯಲಿ ನಡೆಯುತ್ತ
ಇದ್ದಿತು ಬಳಿಯಲಿ ರಿಕ್ಷವು ಒಂದು

ರಿಕ್ಷದ ಚಕ್ರಕೆ ಸಿಡಿಗುಂಡಿಟ್ಟು
ಮೆಲ್ಲಗೆ ಅಡಗಿದ ಕಿರುಪೊದೆಯಲ್ಲಿ

ಚಾಲಕ ಬಂದು ನಡೆಸುತ ರಿಕ್ಷವ
ಹೊಟ್ಟಿತು ಕೆಳಗೆ ಸಿಡಿ ಗುಂಡೊಂದು

ಚಾಲಕ ಹೆದರಿ ಕೈಯನು ಬಿಟ್ಟು
ಹೊರಳಿತು ರಿಕ್ಷವು ಹೊಂಡದಲಿ

ಎದ್ದನು ಕೂಡಲೆ ಪೋಕರಿ ಕಿಟ್ಟ
ಮನೆಗೆ ಬೇಗನೆ ಕಾಲು ಕೊಟ್ಟ

ಚಾಪೆಗೆ ಕೂಡಲೆ ಕೈಕೊಟ್ಟ
ನಿದ್ದೆಯ ಹೊಡೆಯುತ ಬಾಯಿ ಬಿಟ್ಟ