Thursday, January 29, 2009

ಸುಮ್ಮನೆ, ಒಂದು ಕ್ಷಣದ ಮೌನ...

ಊರಿಗೆ ಬಂದು ಭರ್ತಿ ಮೂರು ದಿನಗಳಾಗಿದ್ದವು. ಅಮ್ಮನ ಜತೆ ಹಾಳುಮೂಳು ಹರಟೆ, ಲೊಟ್ಟೆ ಪಟ್ಟಾಂಗ ಹೊಡೆಯದೆ ಬಹಳ ದಿನಗಳಾಗಿದ್ದವು. ಇನ್ನೂ ಬಹಳ ಇದೆ ಮಾತಾಡೋದಿಕ್ಕೆ ಅಂದುಕೊಳ್ಳುತ್ತಿರುವಾಗಲೇ ಹೊರಡುವ ದಿನ ಬಂದುಬಿಟ್ಟಿತ್ತು. ಹೊರಡುವಾಗ ಯಾಕೋ ಮನಸ್ಸು ಖಾಲಿ ಖಾಲಿ. ಅಮ್ಮನ ಚಕ್ಕುಲಿ, ಉಂಡ್ಲಕಾಳು, ನೇಂದ್ರ ಬಾಳೆಕಾಯಿ ಚಿಪ್ಸು... ಇನ್ನೂ ಏನೇನೋ, ಜತೆಗೆ ಒಂದಿಷ್ಟು ಅಮ್ಮನ ಪ್ರೀತಿ, ಅಪ್ಪನ ನೇವರಿಕೆಗಳೆಲ್ಲವೂ ಸೇರಿ ಇದ್ದ ನಾಲ್ಕು ಬ್ಯಾಗುಗಳೂ ಮಣಭಾರವಾಗಿಬಿಟ್ಟಿದ್ದವು. ವಿಟ್ಲ ಬಸ್‌ಸ್ಟಾಂಡಿನಲ್ಲಿ ಆಟೋದಿಂದ ಇಳಿಸುವಷ್ಟರಲ್ಲಿ ಸಾಕು ಸಾಕಾಗಿತ್ತು. ಇನ್ನು ದೂರದ ಚೆನ್ನೈಗೆ ಇದನ್ನು ಸಾಗಿಸುವಷ್ಟರಲ್ಲಿ.. ಅಂತ ನನ್ನ ಹೈರಾಣುತನದ ಕಲ್ಪನೆಯಲ್ಲೇ ನಿಂತಿದ್ದೆ. ಅಪ್ಪ ಅದೇನೋ ಕೆಲಸಕ್ಕೆಂದು ಆಚೆ ಹೋಗಿದ್ದರು. ಇಷ್ಟಾದಾಗ ಅದೆಲ್ಲಿಂದಲೋ ಆ ಸಣಕಲು ಪೇಪರ್‌ ಮನುಷ್ಯ ನನಗೆ ತಗುಲಿ ಹಾಕಿಕೊಂಡು ಬಿಟ್ಟ.
‘ಪೇಪರ್‌ ಬೇಕಾ? ಉದಯವಾಣಿ, ವಿಜಯ ಕರ್ನಾಟಕ, ಡೆಕ್ಕನ್‌ ಹೆರಾಲ್ಡ್‌..’ ಎಮ್ಮೆ ಉಚ್ಚೆ ಹೊಯ್ದಂತೆ ತನ್ನ ರಾಗ ದಾಟಿಸಿದ ನನ್ನತ್ತ. ಬೇಡ ಅಂದೆ. ನನ್ನ ಕಣ್ಣೋ ಪಕ್ಕದಲ್ಲಿ ನಾನಿಟ್ಟಿದ್ದ ನಾಲ್ಕು ಬ್ಯಾಗುಗಳನ್ನು ಬಿಟ್ಟು ಕದಲುತ್ತಿರಲಿಲ್ಲ. ಮುಖದ ಮೇಲೆ ಸೂರ್ಯನ ಬಿಸಿಲು ನೇರವಾಗಿ ಬೀಳುತ್ತಿತ್ತು. ಇದನ್ನೇ ಗಮನಿಸಿದಂತೆ, ಪೇಪರ್ ಮನುಷ್ಯ, ‘ಆ ಕಡೆ ನೆರಳಿನಲ್ಲಿ ನಿಲ್ಲಿ’ ಅಂದ. ನಾನು ಮಾತನಾಡಲಿಲ್ಲ. ‘ಬ್ಯಾಗು ಇದೆ ಅಂತ ತಲೆ ಬಿಸಿ ಮಾಡಬೇಡಿ. ನಾನಿದ್ದೇನೆ. ಬ್ಯಾಗು ಇಲ್ಲಿ ಏನೂ ಆಗುವುದಿಲ್ಲ’ ಅಂದ. ನನಗೆ ಸಿಟ್ಟು ಬರಲು ಶುರುವಾಗಿತ್ತು. ‘ಅರೆ, ನಾನು ನನ್ನ ಪಾಡಿಗೆ ನನ್ನ ಬ್ಯಾಗಿನ ಜತೆ ನಿಂತರೆ ಇವನ್ಯಾರು ತಲೆಹರಟೆ? ಸಿಟಿ ರೋಗ ಇಲ್ಲಿಗೂ ತಗುಲಿರ್‍ಬೇಕು. ಇಲ್ಲದಿದ್ದರೆ, ನಾನು ಬಿಸಿಲಿನಲ್ಲಿ ಒಣಗಿಹೋದರೆ ಇವನಿಗೇನು ತಲೆಬಿಸಿ. ಸುಮ್ಮನೆ ಕೊನೆಗೆ ದುಡ್ಡು ಕೇಳುವ ವರಸೆಯನ್ನು ಇಲ್ಲಿಂದಲೇ ಆರಂಭಿಸುತ್ತಿದ್ದಾನೆ...’ ಅಂದುಕೊಂಡೆ. ಹೀಗೆ ಅಂದುಕೊಳ್ಳುತ್ತಿರುವಾಗಲೇ ಅಪ್ಪ ಬರುತ್ತಿರುವುದು ಕಾಣಿಸಿತು. ಅಷ್ಟಾಗಲೇ ಮಂಗಳೂರು ಬಸ್ಸೂ ಸರಿಯಾಗಿ ಹಾಜರಿತ್ತು. ಈಗ ನಾಲ್ಕು ಮಣಭಾರದ ಬ್ಯಾಗನ್ನು ಮಂಗಳೂರು ಬಸ್ಸಿನ ಮಡಿಲಿಗೆ ಹಾಕುವ ನೇತೃತ್ವ ಅಪ್ಪ ವಹಿಸುವ ಮೊದಲೇ.. ಪೇಪರ್‌ ಮನುಷ್ಯ, ‘ ಓ ಈರೆನ ಮಗಳಾ.. ’ ಅನ್ನುತ್ತಾ ತಾನೇ ಆ ಕಾರ್ಯಕ್ರಮದ ನೇತೃತ್ವ ವಹಿಸಿದ. ಓಹೋ ನಾನು ಊಹಿಸಿದಂತೆಯೇ ಈತ ದುಡ್ಡು ಮಾಡಲು ಇಷ್ಟೆಲ್ಲ ಹೆಲ್ಪ್‌ ಮಾಡ್ತಾ ಇದ್ದಾನೆ ಅಂತ ನಾನು ಮೊದಲು ಊಹಿಸಿದ್ದು ಸರಿಯಾಗೇ ಇದೆ ಇದೆ ಅಂದುಕೊಂಡೆ. ಎಷ್ಟು ಬೇಗ ಸಿಟಿ ಸಂಸ್ಕೃತಿಯನ್ನು ಊರಲ್ಲೂ ಕಲಿತುಬಿಟ್ಟರು ಅಂದುಕೊಳ್ಳುತ್ತಲೇ ಬಸ್ಸೇರಿದೆ.
ಪೇಪರ್‌ ಮನುಷ್ಯ ನಗುತ್ತಾ ಅಪ್ಪನ ಜತೆ ಮಾತನಾಡುತ್ತಾ ನಿಂತಿದ್ದ. ನಾನು ೨೦ರ ನೋಟೊಂದನ್ನು ಪರ್ಸಿನಿಂದ ತೆಗೆದು ಅಪ್ಪನ ಕೈಗೆ ದಾಟಿಸಿದೆ. ಪ್ರಶ್ನಾರ್ಥಕವಾಗಿ ಅಪ್ಪ ನನ್ನನ್ನೇ ನೋಡುತ್ತಾ, ‘ನಿನ್ನ ಬೆಂಗ್ಳೂರು ಬುದ್ಧಿ ಇಲ್ಲಿ ತೋರಿಸಬೇಡ’ ಅಂದರು. ಅಪ್ಪನಿಗೆ ಈ ಪೇಪರ್‌ ಮನುಷ್ಯ ಇಷ್ಟು ಸಹಾಯ ಮಾಡಿದ್ದು ಯಾಕೆ ಅಂತ ಅರ್ಥವೇ ಆಗಿಲ್ಲ ಅಂದುಕೊಳ್ಳುತ್ತಲೇ ಆ ೨೦ರ ನೋಟನ್ನು ನಾನೇ ಪೇಪರ್‌ ಮನುಷ್ಯನ ಕೈಗೆ ದಾಟಿಸಿದೆ. ನನ್ನ ಕೈಯ ೨೦ರ ನೋಟು ಅವನ ಕಣ್ಣಿಗೆ ಬೀಳುತ್ತಲೇ ಸರಕ್ಕನೆ ಹಿಂದೆ ಸರಿದ. ಆತನ ಮುಖದಲ್ಲಾದ ಬದಲಾವಣೆ ನನಗೆ ಮುಜುಗರ ತರಿಸಿತ್ತು. ‘ಅಯ್ಯೋ, ಯಾನ್‌ ಇಂದೆಕ್ಕ್ ಅತ್ತ್‌ ಬ್ಯಾಗ್‌ ಬಸ್ಸ್‌ಗ್‌ ಪಾಡ್ದ್‌ನ. ಇಂಚಿನ ಬೇಲೆ ಮಾತ ಎಂಕ್ಲ್‌ ಮನ್‌ಪುಜ್ಯ (ಅಯ್ಯೋ, ನಾನು ಇದಕ್ಕಲ್ಲ ಬ್ಯಾಗ್‌ ಬಸ್ಸಿಗೆ ತಂದು ಹೆಲ್ಪ್‌ ಮಾಡಿದ್ದು. ಇಂಥ ಕೆಲಸ ಎಲ್ಲ ನಾನು ಮಾಡೋದಿಲ್ಲ.)’ ಅಂದು ಬಿಟ್ಟ. ನನಗೆ ನಾಚಿಕೆಯಾಗಿತ್ತು ಅನ್ನೋದಕ್ಕಿಂತಲೂ ನನ್ನ ಅಪ್ಪನ ಮುಖ ನನಗೆ ನೋಡೋದಕ್ಕೆ ಕಷ್ಟವಾಯಿತು. ‘ನಾನು ಮೊದಲೇ ಹೇಳಲಿಲ್ಲವಾ’ ಅಂದರು ಅಪ್ಪ. ನನಗೆ ಮಾತನಾಡಲು ಏನೂ ಉಳಿದಿರಲಿಲ್ಲ.
‘....ಛೇ. ಹೇಗಾಗಿಬಿಟ್ಟೆನಲ್ಲ’ ಅಂತನಿಸಿತು. ಆದರೂ, ಇಂಥ ಮುಗ್ಥ ಜಗತ್ತಿನಲ್ಲಿ ೨೦ ವರ್ಷ ಇದ್ದುದಕ್ಕೆ ಖುಷಿ ಪಡುತ್ತಾ, ನಗರ ನಾಲ್ಕು ಗೋಡೆಗಳ ವ್ಯಾವಹಾರಿಕ ಜಗತ್ತಿನೊಳಗೆ ಹುಟ್ಟುವ ಮುಗ್ಧ ಹಸುಳೆಗಳನ್ನು ನೆನೆಯುತ್ತಾ ಸುಮ್ಮನಾದೆ. ಸುಮ್ಮನೆ ಹೀಗೆ ಒಂದು ಕ್ಷಣ ನಮ್ಮ ಮೂವರೊಳಗೆ ದಾಟಿದ್ದು ಗೊತ್ತೇ ಆಗಲಿಲ್ಲ.
ಬಸ್ಸು ಹೊರಟಿತು. ಪೇಪರ್‌ ಮನುಷ್ಯನೆಡೆಗೆ ಒಂದು ಕೃತಜ್ಞತೆಗೆ ನಗು ದಾಟಿಸುವ ಧೈರ್ಯ ನನ್ನಲ್ಲಿರಲಿಲ್ಲ. ಆತ ಸುಮ್ಮನೆ ಬಸ್ಸಿಳಿದು ಹೋದ.

Friday, January 2, 2009

ಆ ಹೆಬ್ಬಂಡೆ...

ಆ ಗುಡ್ಡದ ತುದಿಯಲ್ಲಿ ರಾಜನಂತೆ ಕಂಗೊಳಿಸುತಿತ್ತು ಆ ಕಲ್ಲುಬಂಡೆ. ಅದರದೇ ಆದ ಹೊಳೆವ ಮೈಬಣ್ಣ; ಬೃಹದಾಕಾರ ತಾಳಿ ಅದೆಷ್ಟೋ ದೂರದಿಂದ ತನ್ನ ಅಸ್ತಿತ್ವ ಪ್ರತಿನಿಧಿಸುತಿತ್ತು. ಸುತ್ತಲ ಪರಿಸರವೂ ಹಾಗೆಯೇ.. ಬಂಡೆಯ ಅಸ್ತಿತ್ವಕ್ಕೆ ಪೂರಕ ವಾತಾವರಣವನ್ನೂ ನಿರ್ಮಾಣ ಮಾಡಿತ್ತು. ಬೆಳಗಿನ ಹಿತವಾದ ಮುಂಜಾವಿಗೆ ಮೈಯೊಡ್ಡಿ, ಮಂಜಿನ ಹನಿಗಳು ಮುತ್ತಿನಂತೆ ತನ್ನ ಮೇಲೆ ಉರುಳುವುದನ್ನು ತಾಯ ಮಮತೆಯಿಂದ ಕಣ್ತುಂಬಿಕೊಂಡು ನೋಡುತಿತ್ತು. ಬಿಸಿಲಿಗೆ ಕಾದು ಕೆಂಪಾದರೂ ಬಳಲಿ ಬೆಂಡಾಗದ ಆ ಧೀಮಂತ ಸ್ವರೂಪ ಲಕಲಕನೆ ಹೊಳೆಯುತ್ತಿತ್ತು. ಎಷ್ಟೋ ಜೀವಗಳ ಪುಟಾಣಿ ಕನಸುಗಳಿಗೆ ಚಿಗುರು ನೀಡುವ ನವಿರು ಸಮಯದಲ್ಲಿ ಮಂಜಿನಂತೆ ಕರಗುವ ತಾಕತ್ತೂ ಆ ಬಂಡೆಗಿತ್ತು. ಕೆಂಪು ಸಂಜೆಯಲ್ಲಿ ಪಶ್ಚಿಮ ದಿಗಂತದಲ್ಲಿ ಸೂರ್ಯ ದಿಗಂತಕ್ಕೆ ಚುಂಬಿಸುವ ರಸ ಸಮಯದಲ್ಲೂ ಬೆಂದು ಬಂದ ಬಾಡಿದ ಮನಗಳಿಗೆ ಆಸರೆ ನೀಡುವ ಹೃದಯ ವೈಶಾಲ್ಯತೆಯನ್ನೂ ಹೊಂದಿತ್ತು...
............... ................... ................
...... ಹೌದು. ಶಾಸ್ತ್ರಿಗಳು ಹಾಗೆಯೇ.. ಅವರದೇ ಆದ ಘನತೆ.. ಗಾಂಭೀರ್ಯ.. ಕಾಠಿಣ್ಯ. ವಯಸ್ಸು ೬೦ ದಾಟಿದರೂ ತುಂಬು ಸಂಸಾರ ನಡೆಸುವ ಮರ್ಜಿ ಇನ್ನೂ ಇಳಿದಿರಲಿಲ್ಲ. ಚಿಣ್ಣರ ಗುಸು ಗುಸು.. ಕಿಲ ಕಿಲ... ಪಿಸಿ ಪಿಸಿ ಶಬ್ದಗಳಿಂದ ಮನೆಯ ಗಲಗಲ ಸೌಂದರ್ಯ ಆ ಊರಿನಲ್ಲಿ ಎಲ್ಲರ ಹೊಟ್ಟೆ ಉರಿದುಹೋಗುವಂತೆ ಇತ್ತು. ಆದರೆ ನಿಧಾನವಾಗಿ ಆ ದೃಢತೆ.. ವಾತ್ಸಲ್ಯ... ಕಾಠಿಣ್ಯದ ಪ್ರತಿರೂಪಕ್ಕೂ ಸವಾಲಿನ ದಿನಗಳು ಬಂದೀತೆಂದು ಯಾರೂ ಭಾವಿಸಿರಲಿಲ್ಲ. ಹಾಗೇ ಒಂದು ದಿನ ಎಲ್ಲರ ಎಣಿಕೆ ತಪ್ಪಾಗಿ ಹೋಗಿತ್ತು...
................... ..................... ..................
ಅದೊಂದು ದಿನ ಎಲ್ಲಿಂದಲೋ ಒಂದು ದಂಡು ಬಂದಿತ್ತು; ಆ ಹೆಬ್ಬಂಡೆಯ ಬಳಿಗೆ. ಏನೋ ಮಾತುಕತೆಗಳು ನಡೆದವು. ವಿನಿಮಯಗಳೂ ಆದವು. ಇದಾಗಿ ಕೆಲದಿನಗಳ ನಂತರ ಕೆಲಸವೂ ಶುರುವಾಯ್ತು. ದೊಡ್ಡ ದೊಡ್ಡ ಲಾರಿ ಟ್ರಕ್ಕುಗಳು ತಮ್ಮ ರಕ್ಕಸಗಾಲನ್ನು ಇಟ್ಟವು. ಇದ್ದಕ್ಕಿದ್ದಂತೆ ತನ್ನ ಪಾಡಿಗೆ ಹಾಯಾಗಿದ್ದ ಶಾಂತ ಪರಿಸರ ಒಮ್ಮೆಲೇ ಬುಸುಗುಟ್ಟಿತು. ಆ ದಿನಗಳಲ್ಲಿ ಹೆಣೆದಿದ್ದ ಕನಸುಗಳು.. ಬರೆದಿದ್ದ ಬಯಕೆಗಳು.. ಎಲ್ಲವೂ ನಿಮಿಷದಲ್ಲಿ ಚೂರುಚೂರಾದವು. ಹೆಬ್ಬಂಡೆಗೆ ಒರಗಿ ದುಗುಡ.. ಬೇಸರ ಕಳೆಯುತ್ತಿದ್ದ ಜೀವಗಳ ಬಯಕೆಗಳೂ ಹಾಗೆಯೇ ಬಿರಿದು ಬರಡಾದವು. ಜತೆಗೆ ಕಿರಿಯ ಜೀವಗಳ ಪುಟ್ಟ ಪುಟ್ಟ ಕನಸುಗಳೂ...
....... ಕೊನೆಗೆ ಇವೆಲ್ಲವೂ ಇತಿಹಾಸವಾಗಿ ಹೋಯಿತು.

................... .................... ...................
ಇನ್ನು......., ನಮ್ಮೂರಿನಲ್ಲಿ ಈಗ ಕನಸುಗಳೇ ಇರುವುದಿಲ್ಲ. ಕಾರಣ, ಕನಸು ಕಾಣಲು ಕೂರಲು ಬಂಡೆಯೇ ಇಲ್ಲವಲ್ಲ?..