
ಅಂದು ಮಳೆಯಲ್ಲಿ ಅದೆಷ್ಟು ಒದ್ದೆ ಮುದ್ದೆಯಾಗಿ ಮನಸೋ ಇಚ್ಛೆ ಮಿಂದಿದ್ದೆನೋ... ಹೇಳಲೊಲ್ಲೆ. ಎಷ್ಟೋ ಸಮಯದ ನಂತರ ಮಳೆಯಲ್ಲಿ ಮಳೆಯಾಗುವ ಮುಳುಗೇಳುವ ಭಾಗ್ಯ ಒದಗಿತ್ತು. ಶಿವಮೊಗ್ಗೆ, ಕುಂದಾದ್ರಿಯ ಆ ಉತ್ತುಂಗದಲ್ಲಿ ಕೊಚ್ಚಿಹೋಗುವಂಥ ಗಾಳಿ-ಮಳೆ, ನಮ್ಮನ್ನೇ ಹೊತ್ತೊಯ್ಯುವಂತೆ ಬೀಸುವ ಚಳಿಗಾಳಿ, ಅಡಿಮೇಲಾಗುವ ಕೊಡೆಗಳು, ಮಂಜು ಕವಿದ ಹಾದಿಯಲ್ಲಿ ಒಂಟಿ ಕಾರಿನ ಪಯಣ, ಚೂರೂ ಕಾಣದಂತೆ ಮಂಜಿನಲ್ಲಿ ಇನ್ನಿಲ್ಲದಂತೆ ಮುಚ್ಚಿ ಹೋದ ಜೋಗ, ಮಂಜಿನೊಂದಿಗೆ ಕಣ್ಣುಮುಚ್ಚಾಲೆಯಾಡುತ್ತಾ ದಿಡೀರ್ ಪ್ರತ್ಯಕ್ಷವಾಗುವ ರಾಜ- ರಾಣಿ ಧಾರೆಗಳು, ಕೆನ್ನೀರಿನಲ್ಲಿ ಮುಳುಗೆದ್ದ ಹಸಿರುಗದ್ದೆಗಳು, ಕಣ್ತೆರೆದಲ್ಲೆಲ್ಲಾ ಹರಿವ ಝರಿಗಳು... ಅಬ್ಬಬ್ಬಾ, ಒಂದೊಂದು ಚಿತ್ರಗಳೂ ಸಾಲಾಗಿ ಫ್ರೇಮು ಹಾಕಿ ಜೋಡಿಸಿಟ್ಟಂತೆ ಮನಸ್ಸಿನಲ್ಲಿ ದಾಖಲಾಗಿವೆ. ಬೆಂಗಳೂರು/ಚೆನ್ನೈಯ ತುಂತುರು ಮಳೆಗೆ ಕಪ್ಪೆದ್ದು ಹೋಗುವ ರಸ್ತೆಗಳನ್ನು ಕಂಡೂ ಕಂಡೂ ರಾಡಿಯಾಗಿದ್ದ ಮನಸ್ಸು ಕ್ಷಣದಲ್ಲಿ ಪ್ರಫುಲ್ಲವಾಗಿತ್ತು. ಅದೆಷ್ಟು ಬಾರಿ ಶಿವಮೊಗ್ಗ/ಜೋಗ/ಆಗುಂಬೆಯಲ್ಲಿ ಅಲೆದಾಡಿದ್ದರೂ, ಮಳೆಯಲ್ಲಿ ನೋಡುವ ಸೊಬಗೇ ಬೇರೆ. ಅಂತೂ ಸಮಯ ಕೂಡಿ ಬಂದಿತ್ತು. ಮನಸೋ ಇಚ್ಛೆ ಆ ಕ್ಷಣಗಳನ್ನು ಮೊಗೆಮೊಗೆದು ಅನುಭವಿಸಿದ್ದೂ ಆಗಿತ್ತು.
ಆದರೆ,
ಮರಳುವಾಗ..., ಆ ಎರಡು ದಿನಗಳು ಜೀವನದಲ್ಲಿ ಎಂದೂ ಮರೆಯಲಾಗದ ವೈರುಧ್ಯಗಳ ಪ್ರಯಾಣವಾಗಿತ್ತೆಂದು ಮುಂಚಿತವಾಗಿ ಹೇಗೆ ತಿಳಿದೀತು ಹೇಳಿ. ಹಾದಿಯಲ್ಲಿ ನಾವಿದ್ದ ಕಾರು ಬಸ್ಸಿಗೆ ಮುಖಾಮುಖಿ ಢಿಕ್ಕಿಯಾಗಿತ್ತು. ಅದೃಷ್ಟವೆಂದೇ ಹೇಳಬೇಕೇನೋ, ನಾವೆಲ್ಲ ಐದೂ ಮಂದಿ ಹೆಚ್ಚೇನೂ ಆಗದೆ, ಬದುಕುಳಿದಿದ್ದೆವು.
ಇದಾಗಿ, ವಾರ ಕಳೆದಿದೆ. ಈಗ ಮತ್ತೆ ಬಿಸಿಲೂರಿನಲ್ಲಿ ಬಂದು ಕೂತಿದ್ದೇನೆ. ಇಲ್ಲೂ ಆಗಾಗ ಮಳೆ ಸುರಿಯುತ್ತದೆ, ಹಠಾತ್ ಬರುವ ಅತಿಥಿಗಳಂತೆ! ಒಮ್ಮೊಮ್ಮೆ ಖುಷಿ, ಒಮ್ಮೊಮ್ಮೆ ಬೇಸರ. ಆದರೆ.., ಈಗ ಮಳೆ ಬರುವಾಗಲೆಲ್ಲ, ಶಿವಮೊಗ್ಗೆ ನೆನಪಾಗುತ್ತದೆ. ಆ ನೆನಪಿನ ಹಿಂದೆಯೇ ಆ ಬಸ್ಸು- ಕಾರು, ಧಡಾರ್, ಚೀರಾಟಗಳು ಮತ್ತೆ ಮತ್ತೆ ಕೇಳಿಸುತ್ತವೆ. ಕೊನೆಗೆ ಉಳಿಯುವುದು ಒಂದು ನಿಟ್ಟುಸಿರು, ಗಾಢ ಮೌನ.
ಇವಿಷ್ಟೇ ಅಲ್ಲ, ಇವೆಲ್ಲವುಗಳ ಜೊತೆಗೆ ಆ ಮುಖವೂ ಮತ್ತೆ ಮತ್ತೆ ಕಾಡುತ್ತದೆ. ಆ ಅಫಘಾತದ ಮುಂಜಾವಿನಲ್ಲಿ ನಮಗೆ ಮದ್ಯಾಹ್ನದವರೆಗೂ ಸಹಾಯದ ಮಳೆಯನ್ನೇ ಸುರಿಸಿದ ಬೆಂಗಳೂರಿನ ರಜನೀಶ್. ಪರಿಚಯವೇ ಇಲ್ಲದ ವ್ಯಕ್ತಿಯೊಬ್ಬರು ಹಾದಿ ಮಧ್ಯೆ ತಮ್ಮ ಕುಟುಂಬ ಸಮೇತರಾಗಿ ನಮಗೆ ನೀಡಿದ ಸಹಾಯದ ಮುಂದೆ ಇಲ್ಲಿ ಅಕ್ಷರಗಳು ಜೀವಕಳೆದುಕೊಳ್ಳುತ್ತದೆ. ರಜನೀಶ್ ಕುಟುಂಬ ಚೆನ್ನಾಗಿರಲಿ. ಗೆಳತಿ ಸುಷ್ಮಾ ಬೇಗ ಚೇತರಿಸಿಕೊಳ್ಳಲಿ...