Friday, January 6, 2017

ಕಂದಾ ನಿನ್ನ ತೋಳಿನಲ್ಲಿ ಅಮ್ಮಾ ನಾನು…


‘’ಅಮ್ಮಾ, ನಂಗೆ ಚಿವ್ವಲ್ (ಸಿಲ್ವರ್) ಕಲಲ್ (ಕಲರ್) ಬಟ್ಟಲಲ್ಲಿ ಜೀಜಿ (ನೀರು) ಕೊಡು.’’ ನನ್ನ ಮೂರು ವರ್ಷದ ಮಗ ವಿವಸ್ವಾನ ಅಡಿಗೆ ಕೋಣೆಗೆ ಬಂದು ನನ್ನ ಎಳೆಯತೊಡಗಿದ.
ಅದೆಲ್ಲ ಈಗ ಬೇಡ. ನೀನು ಫುಲ್ ಒದ್ದೆ ಮಾಡ್ಕೋತಿ. ಚಳಿ ಬೇರೆ ಇದೆ, ಶೀತ ಆಗುತ್ತೆ. ಆಮೇಲೆ ಅಲ್ಲೆಲ್ಲ ನೀರು ಚೆಲ್ಲಿ ಹಾಕಿ ಆಮೇಲೆ ಓಡಾಡಿ ಜಾರಿ ಬೀಳ್ತಿ. ಮಾತು ಕೇಳೋದೇ ಇಲ್ಲ. ಈಗ ಬಿಲ್ಡಿಂಗ್ ಸೆಟ್ಟಲ್ಲಿ ಒಂದು ಕಾರು ಮಾಡು ನೋಡೋಣಹೊಸ ಮಾಡೆಲ್.”
ಇಲ್ಲ ಅಮ್ಮಾಪೀಚ್ (ಪ್ಲೀಸ್) ನಾನು ಚೆಲ್ಲಲ್ಲ. ನಂಗೆ ಚಳಿ ಆಗಲ್ಲ.”
ಇಲ್ಲ ಅಂದ್ನಲ್ಲಾ ಪುಟ್ಟಾಒಮ್ಮೆ ಹೇಳಿದ್ರೆ ಕೇಳ್ಬೇಕು. ನೀನು ಗುಡ್ ಬಾಯ್ ಅಲ್ವಾ. ನಂಗೀಗ ಚೂರು ಕೆಲ್ಸ ಇದೆ.” ಅನ್ನುತ್ತಾ ಒಂದು ಮುತ್ತು ಕೊಟ್ಟೆ. ಹೊಸ ಮಾಡೆಲ್ ಕಾರು ಮಾಡಿದ್ಮೇಲೆ ನಾವು ಪಾರ್ಕಿಗೆ ಹೋಗಿ ಆಟ ಆಡೋಣ. ಇನ್ನರ್ಧ ಗಂಟೆ ಅಷ್ಟೆಅನ್ನುತ್ತಿದ್ದ ಹಾಗೆ ತನ್ನಷ್ಟಕ್ಕೆ ತಾನು ಅಲ್ಲೇ ಬಿಲ್ಡಿಂಗ್ ಸೆಟ್ಟಿನೊಂದಿಗೆ ಕೂತ. ಕನ್ವಿನ್ಸ್ ಆದ ಹಾಗೆ ಕಂಡಿತು. ನಾನು ನನ್ನ ಕೆಲಸದಲ್ಲಿ ಬ್ಯುಸಿಯಾದೆ.
ಇಷ್ಟಾಗಿ ಎರಡೇ ನಿಮಿಷ. ಮತ್ತೆ ಬಂದ.
ಅಮ್ಮಾ, ನಾನಿಂಗೊಂದು ಕಥೆ ಹೇಳಲಾ…”
ಒಹ್ ಇದೊಳ್ಳೆ ಕೆಲಸ, ಯಾವಗ್ಲೂ ನಾನಿಂಗೆ ಕಥೆ ಹೇಳ್ತೀನಲ್ಲಾ. ಈ ಸಲ ನೀನು ಹೇಳು. ವೆರಿ ಗುಡ್.”
ಒಂದೂರಲ್ಲಿ ಒಂದು ಪೈಪು ಇತ್ತಂತೆ…”
ಏನು?”
ಪೈಪುಜೀಜಿ (ನೀರು) ಬರುತ್ತಲ್ಲಾ ಪೈಪುಅದು.”
ಪೈಪಾ, ಸರಿ.”
ಅದರಲ್ಲಿ ಹಿಂಗೆ (ಅಭಿನಯ ಮಾಡಿ ತೋರಿಸಿ) ಜೀಜಿ (ನೀರು) ಬರ್ತಾ ಇತ್ತಂತೆ. ಬಾ ಹೆಂಗೆ ಅಂತ ತೋರಿಸ್ತೀನಿ ಬಾ.” ಅನ್ನುತ್ತಾ ನನ್ನ ಕೈಹಿಡಿದೆಳೆದ.
ಬೇಡ ಬೇಡ, ನೀ ಇಲ್ಲೇ ಕಥೆ ಹೇಳು, ಅಲ್ಲೆಲ್ಲ ಹೋಗಿ ತೋರಿಸೋದೆಲ್ಲ ಬೇಡ.” (ಅವನ ಪ್ಲಾನ್ ನಂಗೆ ತಿಳಿಯಿತು ಬಿಡಿ)
ಅವನೆಲ್ಲಿ ಕೇಳ್ತಾನೆ ಈ ಮಾತು. ಸರಿ, ಈ ಬಾರಿ ನಾನು ಸೋತೆ, ಹೀಗೆಲ್ಲ ಮಾಡುವಾಗ ಸೋಲದೆ ಇರೋದಾದ್ರೂ ಹೇಗೆ?! ಒಲೆ ಉರಿ ಸಿಮ್ನಲ್ಲಿಟ್ಟು, ಪೈಪಿನವರೆಗೂ ಹೋಗಿದ್ದಾಯಿತು. ಸರಿ ಈಗ ನಿನ್ನ ಕಥೆ ಕಥೆ ಹೇಳು ಅಂದೆ.
ಮತ್ತೆ ಹಿಂಗೆ ಪೈಪು ಬಿಟ್ಟರೆ, ಹಿಂಗೆ ನೀರು ಬಂತು. ಜುಳು ಜುಳು ಅಂತ ಜೀಜಿ ಬರ್ತಾ ಇತ್ತು.”
ಹುಂ ಒಕೆ ಮತ್ತೆ ಏನಾಯ್ತು
ಆಗ ಅಲ್ಲಿ ತುಂಬ ಬಬಲ್ಸ್ ಬಂತು. ಬಬಲ್ಸ್ ಎಲ್ಲ ಡಿಶುಂ ಅಂತ ಆಕ್ಸಿಡೆಂಟ್ ಮಾಡ್ಕೊಂಡು ಎಲ್ಲ ಕಾಣೆ ಆಯ್ತಂತೆ. ಮತ್ತೆ ಬಬಲ್ಸ್ ಬಂತು. ಹೊಸ ಹೊಸ ಬಬಲ್ಸ್ ಬರ್ತಾನೆ ಇತ್ತು.”
ಓಹೋಮತ್ತೆ?”
………. (ಉತ್ತರವಿಲ್ಲ)
……. “ಮತ್ತೆ, ಅಮ್ಮಾ ಬಬಲ್ಸ್ಗೆ ಇಂಗ್ಲೀಷಲ್ಲಿ ಏನಂತಾರೆ?”
ಅಯ್ಯೋ, ಇಂಗ್ಲೀಷಿನಲ್ಲೇ ಬಬಲ್ಸ್ ಅನ್ನೋದು.”
ಮತ್ತೆ ಕನ್ನಡದಲ್ಲಿ?”
ಕನ್ನಡದಲ್ಲಿ ಗುಳ್ಳೆ ಅಂತಾರೆ.”
ಕಥೆ ಮುಗೀತು. ಟಾಪಿಕ್ ಚೇಂಜ್ ಆಯ್ತು. ನೀರಿನಾಟ ಶುರು ಆಯ್ತು.
*******
ನಂಗೊಂದು ಮುತ್ತು ಕೊಡು ಪುಟ್ಟಾ
ಕೆನ್ನೆಗೊಂದು ಮುತ್ತು ಕೊಟ್ಟು, ನಾ ಇದಕ್ಕೆ ಮೆಣಸು ಹಾಕಿಲ್ಲ. ಬೆಲ್ಲ ಸಕ್ಕರೆ ಎಲ್ಲ ಹಾಕಿದ್ದೇನೆ ಓಕೆನಾ? ಸ್ವೀಟ್ ಇತ್ತಾ?”
ಹುಂ ತುಂಬಾ ಸ್ವೀಟ್ ಇತ್ತು ಮಗನೇ. ಥ್ಯಾಂಕ್ಯೂ ಕಂದಾ
ಅಮ್ಮಾ ನಂಗೀಗ ಜ್ಯೂಸ್ ಬೇಕುಮ್ಯಾಂಗೋ ಜ್ಯೂಸ್
ಚಳಿಗಾಲದಲ್ಲಿ ಮ್ಯಾಂಗೋ ಇರಲ್ಲ ಪುಟ್ಟಾಸೋ ಮ್ಯಾಂಗೋ ಜ್ಯೂಸ್ ಮಾಡೋಕಾಗಲ್ಲ. ಮತ್ತೆ ಚಳಿಗಾಲದಲ್ಲಿ ಜ್ಯೂಸ್ ಕುಡಿದ್ರೆ ಶೀತ ಆಗುತ್ತೆ. ನಾನೀಗ ನಿಂಗೆ ಗ್ರೀನ್ ಸೂಪ್ ಮಾಡ್ತೀನಿ. ಪಾಲಕ್ ಸೂಪ್ಓಕೆನಾ?
ಅಮ್ಮಾ ಹಾಗಾದ್ರೆ, ಚಳಿಗಾಲದಲ್ಲಿ ಚಿಲ್ಲಿ ಜ್ಯೂಸ್ ಮಾಡ್ತಾರಾ?”
ಚಿಲ್ಲಿ ಜ್ಯೂಸಾ? ಚಿಲ್ಲಿಯಿಂದ ಜ್ಯೂಸ್ ಎಲ್ಲಾ ಮಾಡಲ್ಲ
ಮೊನ್ನೆ ಮೊನ್ನೆ ಮೂಗಿನಿಂದ ಸೊರ ಸೊರ ಇಳಿಯುತ್ತಿದ್ದರೂ ಐಸ್ಕ್ರೀಂ ಬೇಕೆಂದು ಹಠ ಮಾಡಿದ್ದಕ್ಕೆ, ಚಳಿಗಾಲದಲ್ಲಿ ಐಸ್ಕ್ರೀಂಗೆ ಮೆಣಸು ಹಾಕ್ತಾರೆ ಅಂತ ಹಾಗೆ ಸುಮ್ಮನೆ ಒಂದು ಸುಳ್ಳು ಬಿಟ್ಟಿದ್ದೆ. ಅದರ ಎಫೆಕ್ಟ್ ಈ ಚಿಲ್ಲಿ ಜ್ಯೂಸ್!’
*****
ನಾನೀಗ ಅಪ್ಪ ಅಮ್ಮನ ಜೊತೆ ಮಾರ್ಕೆಟ್ ಹೋಗಿ ಬರ್ತೀನಿ. ಬೇಗ ಬರ್ತೀನಿ ಆಯ್ತಾ ಅಜ್ಜಿ?”
ನೀನು ಬೇಗ ಬಂದ್ಬಿಡು, ಇಲ್ಲ ಅಂದ್ರೆ ನಂಗೆ ತುಂಬ ಬೇಜಾರಾಗುತ್ತೆ ಅಜ್ಜಿಯ ಒಗ್ಗರಣೆ.
ಹುಂ ಬೇಗ ಬಂದ್ಬಿಡ್ತೀನಿ, ನಿಮ್ಗೆ ಏನು ತರ್ಲಿ? ಸಕ್ಕರೆ ತರ್ತೀನಿ ಓಕೆನಾ?”
ಸಕ್ಕರೆನಾ? ಯಾಕೆ? ನಂಗೆ ಬೇಡಪ್ಪಾ. ಸಕ್ಕರೆ ಹೆಚ್ಚು ತಿನ್ಬೇಡ ಅಂತ ಡಾಕ್ಟರು ಹೇಳಿದ್ದಾರೆ.”
ಮೊಸರಿಗೆ ಹಾಕಿ ಮಿಕ್ಸ್ ಮಾಡಿ ತಿನ್ನಲು ಸಕ್ಕರೆ?” ಮುಖದಲ್ಲಿ ಆಶ್ಚರ್ಯ. (ಮೊಸರು ಸಕ್ಕರೆ ಅವನ ಫೇವರಿಟ್)
ಬೇಡ. ಅದು ನಿಂಗೆ. ಮತ್ತೆ ನಂಗೆ?”
ನಿಂಗೆ ದೊಡ್ಡ ಕಾರು ತರ್ತೀನಿ. ಎಸ್ಯುವಿಒಕೆನಾ?”
ಒಕೆ. ಬೈ ಬೈ
******
ಮೊನ್ನೆ ಅಜ್ಜಿಯ ಫೋನು ಕಳೆದುಹೋಯ್ತು. ಅಜ್ಜಿ ಸಪ್ಪಗಿದ್ದರು.
ಅಜ್ಜೀ ಏನಾಯ್ತಜ್ಜೀ ನಿಮ್ಗೆ?”
ಫೋನು ಹೋಯ್ತು ಪುಟ್ಟ. ಕಳ್ಳ ಬಂದು ಫೋನು ಕದ್ದುಕೊಂಡು ಹೋಗಿಬಿಟ್ಟ.”
ಅಜ್ಜಿ ನಾನು ಕಳ್ಳನಿಗೆ ಫೋನು ಮಾಡ್ತೀನಿ. ಇರಿ. ನೀವು ಅಳ್ಬೇಡಿ.”
ಲ್ಯಾಂಡ್ಲೈನ್ ಫೋನು ತಂದು, ಏನೇನೋ ನಂಬರ್ ಒತ್ತಿ, “ಹಲೋ ಕಳ್ಳಾಏನ್ಮಾಡ್ತಿದಿಯಾ? ನಮ್ಮಜ್ಜಿ ಫೋನು ಕೊಡು. ಕದಿಯೋದು ಕೆಟ್ಟ ಬುದ್ಧಿ. ಯಾಕೆ ಕೆಟ್ಟ ಬುದ್ಧಿ ಮಾಡ್ತೀಯಾ ಹೇಳು. ಬೇಗ ಫೋನು ತಂದು ಕೊಡು ಆಯ್ತಾ? ಒಕೆನಾ?”
ಅಜ್ಜೀ, ನಾನು ಹೇಳಿದೆ, ಕಳ್ಳ ಮಾತಾಡ್ಲೇ ಇಲ್ಲ. ಅವ ತುಂಬ ಕೆಟ್ಟವನು.”
*****
ಕಳೆದ ತಿಂಗಳು ರಾಜಸ್ತಾನದ ಜೋಧ್ಪುರಕ್ಕೆ ಹೋಗಿದ್ದೆವು. ಅಲ್ಲಿ ಹಳ್ಳಿಯೊಂದರಲ್ಲಿ ಜೀಪ್ ಸಫಾರಿಗೆಂದು ಹೋಗಿ, ದೂರದಲ್ಲಿ, ನೀಲ್ಗಾಯ್, ಕೃಷ್ಣ ಮೃಗಗಳನ್ನು (ಬ್ಲ್ಯಾಕ್ ಬಕ್) ನೋಡಿದ್ದೆವು. ಆಗ ಅದೇ ಹಳ್ಳಿಯಲ್ಲೇ ಸಲ್ಮಾನ್ ಖಾನ್ ಬ್ಲ್ಯಾಕ್ ಬಕ್ಗೆ ಶೂಟ್ ಮಾಡಿದ್ದರೆಂಬುದನ್ನು ಅಲ್ಲಿರುವ ಗ್ರಾಮಸ್ಥ ಹೇಳಿದ. ಆಗ ನನ್ನ ಮಗರಾಯ, “ಏನಂತೆ ಅಮ್ಮಾ?”
ಸಲ್ಮಾನ್ ಖಾನ್ ಇದೇ ಜಾಗದಲ್ಲಿ ಬ್ಲ್ಯಾಕ್ ಬಕ್ಗೆ ಶೂಟ್ ಮಾಡಿದ್ದಂತೆ ನೋಡುಎಂದೆ.
ಅಯ್ಯೋ ಪಾಪ. ಬ್ಲ್ಯಾಕ್ ಬಕ್ ಪಾಪ. ಅದು ಕಚ್ಚಲ್ಲ. ಸಲ್ಮಾನ್ ಖಾನ್ ಯಾಕೆ ಶೂಟ್ ಮಾಡಿದ ಅಮ್ಮಾ?”
ಯಾರಿಗ್ಗೊತ್ತು. ಸುಮ್ಮನೆ ಶೂಟ್ ಮಾಡಿದ್ದಿರಬಹುದುಎಂದೆ.
ನಾನು ಸಲ್ಮಾನ್ ಖಾನಿಗೆ ಫೋನು ಮಾಡಿ, ಯಾಕೆ ಹೀಗೆಲ್ಲಾ ಕೆಟ್ಟ ಬುದ್ಧಿ ಮಾಡ್ತೀಯ ಅಂತ ಕೇಳ್ತೀನಿ’’ ಅಂತ ಫೋನು ಮಾಡಲು ಹೊರಟ.
******
ಮೊನ್ನೆ ಹೋಂವರ್ಕು ಮಾಡ್ತಾ ಕೂತಿದ್ವಿ. ‘ಆನೆ, ಸಿಂಹ, ಹುಲಿ, ಕರಡಿ ಇವೆಲ್ಲಾ ವೈಲ್ಡ್ ಅನಿಮಲ್ಸ್ಅಂತ ಗೊತ್ತಾಯ್ತು ಅವನಿಗೆ. ಹಾಗಾಗಿ, ನನಗೆ ತನ್ನ ಇನ್ನೊಂದು ಡೌಟ್ ಮುಂದಿಟ್ಟ. “ಅಮ್ಮಾ, ಹಾಗಾದ್ರೆ ಚಿಲ್ಲಿ, ‘ವೈಲ್ಡ್ ವೆಜಿಟೇಬಲ್ತಾನೇ?”
ಯಾಕೆ?”
ಸಿಂಹ, ಹುಲಿ ಎಲ್ಲಾ ತುಂಬಾ ಜೋರು ತಾನೇ. ಚಿಲ್ಲಿನೂ ಖಾರ ಅಲ್ವಾಇದು ಅವನ ಲಾಜಿಕ್ಕು. ನಂಗೆ ನಗುವೋ ನಗು.
*****
ಅಮ್ಮಾ ಮನೆಗೆ ಚಕ್ರ ಇರುತ್ತಾ?”
ಆಂಏನು?”
ಮನೆ … ‘ಹೌಸ್ ಮನೆ.’ ಅದಿಕ್ಕೆ ಚಕ್ರ ಇರುತ್ತಾ?”
ಮನೆಗೆ ಹೆಂಗೆ ಚಕ್ರ ಇರುತ್ತೆ ಹೇಳು? ಯಾರು ಹೇಳಿದ್ರು ನಿಂಗೆ? ಎಲ್ಲಿ ನೋಡಿದೆ?”
ಹಾಗಾದ್ರೆ ಅದು ಸುಮ್ಮನೆಯಾ? ಕಾಮಿಡಿಯಾ?”
ಕಾಮಿಡಿ ಅಲ್ಲ. ಬಟ್, ಎಲ್ಲಿ ನೋಡಿದೆ ನೀನು?”
“….. ಉತ್ತರ ಇಲ್ಲ.”
ಒಂದೆರಡು ದಿನ ಕಳೀತು. ಮನೆಗೆ ಚಕ್ರ ಇರುತ್ತಾ ಪ್ರಶ್ನೆ ಪದೇ ಪದೇ ರಿಪೀಟ್ ಆಗುತ್ತಾ ಇತ್ತು. ನನ್ನ ಉತ್ತರವೂ ರಿಪೀಟ್ ಆಗುತ್ತಾ ಇತ್ತು. ಆಮೇಲೆ ಮೊನ್ನೆ ಅಚಾನಕ್ಕಾಗಿ ಟಿವಿಯಲ್ಲಿ ಒಂದು ಪೈಂಟ್ ಕಂಪೆನಿಯ ಜಾಹಿರಾತಿನಲ್ಲಿ ಮನೆಗಳೆಲ್ಲ ಓಡುವುದು ಕಂಡಿತು. ಆಗ ಮಗನ ಗೊಂದಲದ ಕಾರಣ ಹೊಳೀತು. ಏನೆಲ್ಲಾ ಜಾಹಿರಾತು ಮಾಡ್ತಾರಪ್ಪಾ!
*****
ಹೀಗೆ….ದಿನವೂ ನೂರೆಂಟು ಪ್ರಶ್ನೆಗಳುಅವಕ್ಕೆ ಉತ್ತರಗಳು... ಚೇಷ್ಟೆಗಳುಮತ್ತೆ ಜಾರುಬಂಡಿಮಣ್ಣಿನಾಟನೀರಿನಾಟ…. ಉಯ್ಯಾಲೆಲಾಲಿಪಾಪ್ಐಸ್ಕ್ಯಾಂಡಿ…. ಅಆಇಈಎಬಿಸಿಡಿ…. ಬಾಲ್ಯ ಮತ್ತೆ ಮರಳಿದೆ. ಇಹಲೋಕದ ಸ್ವರ್ಗ ಇದೇ ಇರಬೇಕು!
(ಉದಯವಾಣಿಯ ‘ಅವಳು’ ಪುರವಣಿಯಲ್ಲಿ ಪ್ರಕಟಿತ ಬರಹ)