Wednesday, July 2, 2008

ಹತ್ನಿಮಿಷ ಇಳಿದ್ರೆ ತಲೆ ಮೇಲೇ ನೀರು...!

ಎಲೆಕ್ಷನ್‌ ಸಮಯದ ಬಿಡುವಿರದ ಕೆಲಸ ಮುಗಿಸಿದ ಮೇಲೆ ಎಲ್ಲ ಮರೆತು ಬೆಟ್ಟ ಹತ್ತಲು ಮೊನ್ನೆ ಮೊನ್ನೆ ಅನಿರೀಕ್ಷಿತವಾಗಿ ಸಮಯ ದೊರೆಯಿತು. ಆಗ ಹೋಗಿದ್ದು ಚಾಮರಾಜನಗರದ ಹಿಮಗಿರಿಗಾದರೂ, ಪ್ರತಿ ಬೆಟ್ಟ ಹತ್ತುವಾಗಲೂ ನನ್ನ ನೆನಪಿನ ಕಟ್ಟೆಗೆ ದಸಕ್ಕೆಂದು ಬಂದು ಬೀಳೋದು ಅದೇ ಹಳೆಯ ಕಥೆ. ಅದ್ಯಾಕೋ ಅದನ್ನೇ ಬರೆಯೋಣ ಅನ್ನಿಸಿದ್ದಕ್ಕೆ ಈಗ ಆ ನೆನಪಿನ ಬೆನ್ನತ್ತಿ...
ಅದೊಂದು ದಿನ ನಾನು, ಪ್ರಿಯ ನಮ್ಮ ರೂಂಮೇಟ್‌ ಹಾಗೂ ಗೆಳತಿ ಶ್ರೀ ಮನೆಗೆ ಸಾಗರಕ್ಕೆ ಲಗ್ಗೆಯಿಟ್ಟಿದ್ದೆವು. ಇದು ನಾಲ್ಕೈದು ವರ್ಷದ ಹಿಂದಿನ ಮಾತು. ಆಗಿನ್ನೂ ದ್ವಿತೀಯ ಪದವಿ. ಆಗೆಲ್ಲಾ ಚಾರಣದ ಹುಚ್ಚು ಇನ್ನೂ ಹತ್ತಿರಲಿಲ್ಲ. ಎಲ್ಲೋ ಆಗೊಮ್ಮೆ ಈಗೊಮ್ಮೆ ನಮ್ಮ ಮನೆಗೆ ಒತ್ತಿಕೊಂಡಂತೆಯೇ ಇರುವ ಕಳಂಜಿಮಲೆಗೆ ಅಪ್ಪನ ಜತೆಗೆ ಹೋಗಿ ಅದೇ ಬಕಾಸುರನ ಗುಹೆಯನ್ನೇ ಕುತೂಹಲದಿಂದ ನೋಡುತ್ತಿದ್ದೆ. ಶ್ರೀ ಮನೆಯಲ್ಲಿ ಮಾರನೇ ದಿನವೇ ನಮ್ಮ ಪುಟ್ಟ ದಂಡು ಜೋಗಕ್ಕೆ ಹೊರಟಿತು. ನಾನು, ಶ್ರೀ, ಪ್ರಿಯ, ಶ್ರೀಯ ಅಮ್ಮ, ಜತೆಗೆ ಜೀಪಿನ ಪ್ರಕಾಶಣ್ಣ. ಬೆಳಗ್ಗೆ ಬೇಗನೇ ಹೊರಟಿದ್ದರಿಂದ ಮಧ್ಯಾಹ್ನ ೧೨ರ ಹೊತ್ತಿಗಾಗಲೇ ಜೋಗ ನೋಡಿಯಾಗಿತ್ತು. ಆಗ ಪ್ರಕಾಶಣ್ಣ ಒಂದು ಹೊಸ ಜಾಗದ ಬಗ್ಗೆ ಕುತೂಹಲ ಕೆರಳಿಸಿದ. ಪ್ರಕಾಶಣ್ಣ ಹೇಳಿದ್ದು ಇಷ್ಟೇ, ‘ಇಲ್ಲಿಂದ ಕೇವಲ ೧೫ ಕಿ.ಮೀ ದೂರದಲ್ಲಿ ಕೊಂಜವಳ್ಳಿ ಎಂಬಲ್ಲಿ ಜಲಪಾತ ಇದೆ. ಹತ್ತು ನಿಮಿಷ ಬೆಟ್ಟದಿಂದ ಇಳಿದ್ರೆ ನೀರು ತಲೆ ಮೇಲೇನೇ ಬೀಳುತ್ತೆ.’ ಎಲ್ಲದಕ್ಕೂ ಸೈ ಅನ್ನುವ ನಾವು ಇದಕ್ಕೂ ಒಕೆ ಅಂದೆವು.
೧೨.೩೦ರ ಹೊತ್ತಿಗಾಗಲೇ ನಾವು ಊಟ ಮುಗಿಸಿ ಕೊಂಜವಳ್ಳಿ ಕಡೆಗೆ ಹೊರಟಿದ್ದೆವು. ಸ್ವಲ್ಪ ದೂರ ಹೋದಾಗಲೇ ತಿಳೀತು ಇದು ಪ್ರಕಾಶಣ್ಣ ಹೇಳಿದಷ್ಟು ಸಮೀಪ ಇಲ್ಲ ಎಂದು. ಅಂತೂ ನಮ್ಮ ಜೀಪು ಸುಮಾರು ೨೫ ಕಿ.ಮೀ ದೂರದ ಕೊಂಜವಳ್ಳಿ (ಸಾಗರ- ಭಟ್ಕಳ ಹೆದ್ದಾರಿ) ತಲುಪಿತು. ಕೊಂಜವಳ್ಳಿಯಿಂದ ಐದಾರು ಕಿ.ಮೀ ನಿರ್ಜನ ಪ್ರದೇಶದಲ್ಲಿ ಮುಂದೆ ಹೋದಾಗ ಹೊಳೆ ಅಡ್ಡಲಾಗಿತ್ತು. ಮುಂದೆ ಜೀಪು ಸಾಗಲ್ಲ ಅಂತ ಗೊತ್ತಾದಾಗ ನಡೆಯಲು ಶುರು ಮಾಡಿದೆವು. ಆಗಲೇ ಕಾಡಿನ ಮಧ್ಯದ ಕಿರು ರಸ್ತೆಯುದ್ದಕ್ಕೂ ತಣ್ಣಗೆ ಮಲಗಿದ್ದ ಇಂಬಳಗಳು ಕತ್ತೆತ್ತಿ ಬಳುಕುತ್ತಾ ನಮ್ಮ ಕಾಲಿಗೆ ತಲೆಯಾನಿಸಲು ಶುರು ಮಾಡಿದವು.
ವಿಚಿತ್ರವೆಂದರೆ, ನಾವು ಇವಕ್ಕೆಲ್ಲ ತಯಾರಾಗೇ ಬಂದಿರಲಿಲ್ಲ. ಇಂಬಳದ ಜಗತ್ತೂ ನನಗೆ ಹೊಸದು. ಪಿಯುಸಿಯಲ್ಲಿ ಬಯಾಲಜಿ ಪ್ರಾಕ್ಟಿಕಲ್‌ ಮಾಡುವಾಗ ಮಾತ್ರ ಇಂಬಳವನ್ನು ದೂರದಿಂದಲೇ ನೋಡಿದ್ದೆ. ಇಂಬಳ ನೋಡಿ ಭಯ ಬೀಳದಂಥ ಪುಣ್ಯಾತ್ಮರು ನಮ್ಮ ಗುಂಪಿನಲ್ಲಿ ಇರಲಿಲ್ಲ. ಇಂತಿಪ್ಪ ನಮ್ಮ ತಂಡ ಸುಮಾರು ಎರಡು ಕಿ.ಮೀ ನಡೆಯುವಷ್ಟರಲ್ಲಿ ಎಲ್ಲರ ಕಾಲುಗಳಲ್ಲೂ ಇಂಬಳಗಳು ತಮ್ಮ ಸಾಮ್ರಾಜ್ಯ ಸ್ಥಾಪಿಸಿದ್ದವು. ಅಂತೂ ಇಂತೂ ಒಂದೆರಡು ಮನೆಗಳಿದ್ದ ಆ ಪ್ರದೇಶಕ್ಕೆ ತಲುಪಿ ಪ್ರಕಾಶಣ್ಣ ಹೇಳಿದ ತಲೆ ಮೇಲೆ ನೀರು ಬೀಳುವ ಜಲಪಾತದ ಹಾದಿ ಹಿಡಿದೆವು. ನಂತರ ಶುರುವಾಯಿತು ಇಳಿಯುವ ಹಾದಿ.
‘ಕೇವಲ ಹತ್ತೇ ನಿಮಿಷ. ಬೇರು ಹಿಡಿದು ಇಳಿದ್ರೆ ಮುಗೀತು, ಜಲಪಾತದ ನೀರು ನೇರ ತಲೆ ಮೇಲೆ’ ಎಂದಿದ್ದ ಪ್ರಕಾಶಣ್ಣನ ಮಾತು ಸುಳ್ಳು ಅಂತ ಗೊತ್ತಾಗಲು ಹೆಚ್ಚು ಹೊತ್ತು ಬೇಕಿರಲಿಲ್ಲ. ಮುಕ್ಕಾಲು ಗಂಟೆ ಇಳಿದ್ರೂ ಜಲಪಾತದ ಒಂದು ಹನಿಯೂ ನಮ್ಮ ತಲೆ ಮೇಲೆ ಬೀಳಲಿಲ್ಲ! ಬೆವರಹನಿ ಮಾತ್ರ ಧಾರೆದಾರೆಯಾಗಿ ಇಳಿಯುತ್ತಿತ್ತು. ಗಂಟೆ ಆಗಲೇ ನಾಲ್ಕು ತೋರಿಸುತ್ತಿತ್ತು. ಶ್ರೀಯ ಅಮ್ಮನಿಗೆ ಸಣ್ಣಗೆ ಭಯವಾಗಲು ಶುರುವಾಗಿತ್ತು. ಕಾಲಲ್ಲಿದ್ದ ಚಪ್ಪಲಿ ಕೈಗೆ ಬಂದಿತ್ತು. ಆಮೇಲೆ ಆ ಚಪ್ಪಲಿಯೂ ಅಲ್ಲೇ ಉಳೀತು. ನಾಲ್ಕೂ ಕಾಲಿನಲ್ಲಿ ಹಿಮ್ಮುಖವಾಗಿ ಬೇರುಗಳನ್ನು ಹಿಡಿಯುತ್ತಾ ಇಳಿದ ನಮಗೆ ಜಲಪಾತ ಮರಗಳೆಡೆಯಿಂದ ಗೋಚರಿಸುವಷ್ಟೇ ಸ್ಪಷ್ಟವಾಗಿ ಕೇಳಿಸುತ್ತಲೂ ಇತ್ತು. ಆದರೆ ಅಲ್ಲಿಗೆ ಹೋಗಲು ಬೇರು ಮಾತ್ರ ಅಲ್ಲ. ಹಗ್ಗವೇ ವೇಕಾಗಿತ್ತು. ಬಾವಿಗಿಳಿಯುವುದಕ್ಕೂ ಅಲ್ಲಿಗೆ ಇಳಿಯುವುದಕ್ಕೂ ಯಾವುದೇ ವ್ಯತ್ಯಾಸ ನಮಗೆ ಕಾಣಲಿಲ್ಲ. ಆದರೂ, ನಾನು, ಶ್ರೀ, ಪ್ರಿಯ ಇಳಿಯಹೊರಟೆವು. ಸೀರೆ ಉಟ್ಟಿದ್ದ ಶ್ರೀಯ ಅಮ್ಮ ಅಲ್ಲೇ ನಿಲ್ಲಬೇಕಾಯ್ತು. ಹತ್ತು ನಿಮಿಷ ಹಾಗೆ ನಾವು ಇಳಿದಾಗ ನೋಡಿದ್ದು ಮಾತ್ರ ಮರೆಯಲಾಗದ ದೃಶ್ಯ. ಆ ಜೋಗವೂ ಇದರ ಮುಂದೆ ಸಪ್ಪೆ ಎನಿಸುತ್ತಿತ್ತು. ಸುಳ್ಳು ಹೇಳಿ ಕರಕೊಂಡು ಬಂದ ಪ್ರಕಾಶಣ್ಣಗೆ ಥ್ಯಾಂಕ್ಸೂ ಹೇಳದೆ ನೀರಲ್ಲಿ ಮನಸೋ ಇಚ್ಚೆ ಕುಣಿದೆವು. ಪ್ರಕಾಶಣ್ಣ ಹೇಳಿದಂತೆ ಜಲಪಾತದಿಂದ ಎಷ್ಟು ದೂರ ನಿಂತರೂ ತಲೆ ಮೇಲೆ ನೀರು ಬೀಳುತ್ತಿತ್ತು ಅನ್ನೋದು ಮಾತ್ರ ಸತ್ಯ.
ಆಗ ಗಂಟೆ ಐದು ದಾಟಿ ಹೊತ್ತಾಗಿತ್ತು. ಮನಸೇ ಇಲ್ಲದಿದ್ದರೂ ಹತ್ತಲು ಶುರುಮಾಡಿದೆವು. ಶ್ರೀಯ ಅಮ್ಮನ ತಲೆಗಂತೂ ನೀರು ಬೀಳುವ ಭಾಗ್ಯ ದೊರೆಯಲಿಲ್ಲ. ಆದರೂ, ಇಳಿದುದಕ್ಕಿಂತಲೂ ವೇಗವಾಗಿ ಸುಲಭವಾಗೇ ಮೇಲೆ ಹತ್ತಿ ಆರುವರೆಯ ಹೊತ್ತಿಗೆ ಮೇಲೆ ತಲುಪಿದ್ದೆವು. ಇಳಿಯುವಾಗ ಏನೇನೂ ಮಾಹಿತಿ ತಿಳಿಯದ ಎಡಬಿಡಂಗಿಗಳು ನಾವು. ಅಲ್ಲೇ ಇದ್ದ ಮನೆಯಲ್ಲೂ ಮಾಹಿತಿ ಕೇಳದೆ ಹಾಗೇ ಬಂದಿದ್ದೆವು. ಆಮೇಲೆ ವಿಚಾರಿಸಿದ್ರೆ ಗೊತ್ತಾಯ್ತು, ಇದಕ್ಕೆ ಕೆಪ್ಪಜೋಗ ಅಂತ ಕರೀತಾರಂತೆ. ದಬ್ಬೆ ಅಂತಾನೂ ಕರೀತಾರಂತೆ. ಆ ಜೋಗಕ್ಕಿಂತನೂ ಇದು ಎತ್ತರವಂತೆ. ಆದರೆ, ನನಗ ಮಾತ್ರ ಹಾಗನಿಸಿರಲಿಲ್ಲ. ಎತ್ತರದಲ್ಲಿ ಜೋಗಕ್ಕೆ ತೀರಾ ಸಮೀಪವಿದೆ ಅಂತ ಅನ್ನಿಸಿದ್ರೂ, ಜೋಗಕ್ಕಿಂತ ಮುದ್ದಾಗಿದೆ ಈ ಕೆಪ್ಪಜೋಗ. ರಾತ್ರಿಯಾದರೆ, ಕಾಡುಪ್ರಾಣಿಗಳ ಭಯವಿದೆಯಂತೆ. ಚಾರಣಕ್ಕೆ ಬಹಳ ಮಂದಿ ಇಲ್ಲಿ ಬರೋದಿಲ್ವಂತೆ. ಆ ಮನೆಯಲ್ಲಿ ಹೀಗೆ ಅಂತೆ ಕಂತೆ ಕೇಳುತ್ತಾ ತಣ್ಣನೆ ನೀರು ಕುಡಿದು ಮತ್ತೆ ಮನೆಕಡೆ ಹೊರಟೆವು. ಶ್ರೀಯ ಅಮ್ಮ ಮಾತ್ರ ದಾರಿಯುದ್ದಕ್ಕೂ ಪ್ರಕಾಶಣ್ಣನ ಈ ಸಾಹಸಕ್ಕೆ ಚೆನ್ನಾಗಿ ಮಂಗಳಾರತಿ ಎತ್ತಿದರೂ, ನಮ್ಮ ತಂಡದ ಚಾರಣ ಪೂಜೆ ಮಾತ್ರ ಅಲ್ಲಿಂದಲೇ ಆರಂಭವಾಯ್ತು. ಈಗಲೂ ಆಗೊಮ್ಮೆ ಈಗೊಮ್ಮೆ.. ಹೀಗೆಯೇ...