Thursday, October 30, 2008

ಕೆಂಪುದೀಪದ ಆ ಸರದಾರರು..

ಇನ್ನೂ ೧೨೦ ಸೆಕೆಂಡುಗಳಿವೆ. ಉಫ್‌.. ಕೀಲಿಯನ್ನು ಎಡಕ್ಕೆ ತಿರುಗಿಸಿ ಆಫ್‌ ಮಾಡಿದೆ. ಅತ್ತಿತ್ತ ಕಣ್ಣು ತಿರುಗಿಸಿದರೆ ಎಲ್ಲರೂ ನನ್ನಂತೆ ಹೊರಟವರು. ವಾಚು ನೋಡಿದೆ. ಇನ್ನು ೧೫ ನಿಮಿಷ ಮಾತ್ರ ಇದೆ. ವಿಧಾನಸೌಧದವರೆಗಿನ ಸಿಗ್ನಲ್‌ ದಾಟಲು ೧೫ ನಿಮಿಷ ಸಾಕು. ಅಲ್ಲಿಂದ ಆಫೀಸಿಗೆ ಒಂದೇ ಸಿಗ್ನಲ್‌ ಇದ್ದರೂ ದಾಟಲು ಮಾತ್ರ ಈ ಹೊತ್ತಿನಲ್ಲಿ ಅಬ್ಬಬ್ಬಾ ಅಂದರೂ ೧೦ ನಿಮಿಷವಾದ್ರೂ ಬೇಕು. ಛೇ.. ಅಂತ ಮನಸ್ಸಲ್ಲೇ ಲೆಕ್ಕ ಹಾಕುತ್ತಾ ಕಣ್ಣುಮುಚ್ಚಿದೆ. ತೆರೆದಾಗ ಚಾಚಿದ ಕೈಯೊಂದು ನನ್ನ ಮುಂದೆ ದಯನೀಯ ದೃಷ್ಠಿ ನೇಯುತ್ತಿತ್ತು. ತಿದ್ದದೆ ತೀಡದೆ ಇದ್ದರೂ ಸ್ಟ್ರೈಟನಿಂಗ್‌ ಮಾಡಿಸಿಟ್ಟಂತಹ ನೇರ ಕೆಂಚು ಕೂದಲ ಆ ಹುಡುಗಿ ಅಳುಕಿಲ್ಲದೆ ಕೈಯನ್ನು ಮುಂದಕ್ಕೆ ಚಾಚಿದ್ದಳು. ಪಾಪ.. ಅಂತ ಒಂದು ಕ್ಷಣ ಅನಿಸಿದರೂ ಅಷ್ಟಾಗಲೇ ಕೆಂಪುದೀಪ ಮಾಯವಾಗಿತ್ತು. ಹಸಿರುದಾರಿ ಮುಂದಿತ್ತು. ಛೂ ಬಿಟ್ಟ ನಾಯಿಯಂತೆ ಒಂದೇ ಉಸಿರಿಗೆ ಓಡಿದ ವಾಹನಗಳಂತೆ ನಾನೂ ಅನಾಯಾಸವಾಗಿ ಮುಂದೆ ಚಲಿಸಿದೆ. ನೇರ ಕೆಂಚು ಕೂದಲ ಆ ಹುಡುಗಿ ಮನದಿಂದ ಮರೆಯಾದಳು.
............ ................ ............
ರಾತ್ರಿ ಗಂಟೆ ಹನ್ನೊಂದು ದಾಟಿರಬೇಕು. ಪುಟ್ಟ ಪುಟ್ಟ ಆಡುವ ಕೈಗಳಲ್ಲಿ ಬಣ್ಣಬಣ್ಣದ ಬಲೂನುಗಳು. ಆದರೆ, ಆಡಲಿಕ್ಕಲ್ಲ. ನಿಮಿಷಕ್ಕೊಂದು ಬಾರಿ ಹರಿದುಹೋಗುವ ವಾಹನಗಳು ಆ ಕೆಂಪು ದೀಪವನ್ನು ನೋಡಿ ನಿಂತುಬಿಡುತ್ತವಲ್ಲ.. ಆಗ ಮಾರಲಿಕ್ಕೆ. ನನ್ನಂತೆ ಕಚೇರಿಯ ಕೆಲಸ ಮುಗಿಸಿಯೋ.. ಅಥವಾ ಷಾಪಿಂಗು ಮುಗಿಸಿಯೋ.. ಇಲ್ಲವೇ, ಇನ್ನಾವುದೋ ಪಾರ್ಟಿಯಲ್ಲಿ ಮಿಂಚಿ ತಿಂದು ತೇಗಿಯೋ ಬರುತ್ತಿರುವ ಸಾವಿರಾರು ಮಂದಿಯೆದುರು ಬಲೂನು ಹಿಡಿದರೆ ಎರಡೋ, ನಾಲ್ಕೋ ಮಾರಾಟವಾಗುತ್ತವೆ. ಹೊಟ್ಟೆಯ ಬಲೂನೂ ತುಂಬುತ್ತದೆ. ಆಡುವ ಬಲೂನು ಹೊಟ್ಟೆಗೆ ಮಾತ್ರ ಹಿಟ್ಟು! ಆದರೆ... ಒಮ್ಮೊಮ್ಮೆ, ಅದೇ ಕೆಂಪುದೀಪ ದಾಟಿಯೇ ಹೋಗುವ ನನಗೆ ಆಡುವ ಕೈಗಳು ಮಾತ್ರವಲ್ಲ. ದಿನಗಳುರುಳಿ ತಿಂಗಳಾದರೂ ‘ಮಾಸದ ಗಾಯದ’ ಚಾಚುವ ಕೈಗಳೂ ಎದುರಾಗುತ್ತವೆ. ಹಣೆಗೊಂದು ಬಿಳಿಯ ಪಟ್ಟಿ. ಆ ಬಿಳಿ ಪಟ್ಟಿಯ ಮಧ್ಯದಲ್ಲೊಂದು ಕೆಂಪು ರಕ್ತದ ಕಲೆ. ಕೈಯಲ್ಲೊಂದು ಚೀಲ. ದಣಿದು ಎರಡು ದಿನಗಳಿಂದ ಹೊಟ್ಟೆಗೆ ಹಿಟ್ಟಿಲ್ಲದ ಮುಖಭಾವ. ಇವಿಷ್ಟಿದ್ದರೆ ಸಾಕು. ಆ ಕೆಂಪುದೀಪ ಆಶ್ರಯ ನೀಡುತ್ತದೆ. ವಿಚಿತ್ರವೆಂದರೆ.. ಆ ಕೆಂಪು ರಕ್ತದ ಕಲೆಯ ಬಿಳಿಪಟ್ಟಿ ವಾರಗಳೇ ಕಳೆದರೂ ಮಾಸುವುದಿಲ್ಲ. ಗಾಯವೂ ಗುಣವಾಗುವುದಿಲ್ಲ! ಪಾಪ...
............... ................. ...........
ಅದೊಂದು ದಿನ, ಸಮಾಜ ಕಲ್ಯಾಣ ಇಲಾಖೆ ಈ ಕೆಂಪುದೀಪದ ಸರದಾರರ ಬೇಟೆಗೆ ಹೊರಟಿತ್ತು. ಆ ದಿನ ಬೆಳ್ಳಂಬೆಳಗ್ಗೆಯೇ ಪತ್ರಕರ್ತರಾದ ನಮಗೂ ಆ ದೆಸೆ. ಇಲಾಖೆಯ ಜೀಪಿನಲ್ಲಿ ಹೊರಟೆವು. ನಗರವಿಡೀ ಸುತ್ತಿ ಹತ್ತಿಪ್ಪತ್ತು ಮಂದಿಯನ್ನು ಒಳಗೆ ಹಾಕಿದ್ದೂ ಆಯಿತು. ನಡು ಮಧ್ಯಾಹ್ನವಾಗುವ ಹೊತ್ತಿಗೆ ಕಮರ್ಶಿಯಲ್‌ ರಸ್ತೆಯ ಆ ಸಂದಿಗೆ ತಲುಪಿದೆವು. ಆ ಕೆಂಪುದೀಪದಡಿಯಲ್ಲಿ ಆಕೆಯ ಕಂಕುಳಲ್ಲಿ ತಿಂಗಳ ಮಗು ಒರಗಿತ್ತು. ಇಲಾಖೆಯ ಜೀಪಿ ಕಂಡಿದ್ದೇ ತಡ ತಿಂಗಳ ಮಗುವೂ ಆಕೆಗೆ ಬೇಡವಾಗಿತ್ತು. ರಸ್ತೆಗೆಸೆದು ಓಡಿಹೋದ ಆಕೆಯೇನೋ ಇಲಾಖೆಯ ಸಿಬ್ಬಂದಿ ಕೈಯಿಂದ ತಪ್ಪಿಸಿಕೊಂಡಳು. ಮಗು ಟಾರುರಸ್ತೆಗೆ ಬಿದ್ದ ರಭಸಕ್ಕೆ ರಕ್ತ ಒಸರುತ್ತಿತ್ತು. ಎಲ್ಲರ ಜತೆಗೆ ಈ ಮಗುವೂ ಇಲಾಖೆ ಪಾಲಾಯಿತು. ಅಷ್ಟರಲ್ಲಿ ಪಕ್ಕದ ಪೋಲೀಸ್‌ಠಾಣೆಗೆ ಕಣ್ಣೀರು ಸುರಿಸುತ್ತಾ ಮತ್ತೊಬ್ಬ ಪ್ರತ್ಯಕ್ಷ. ‘ಸಾರ್‌, ನನ್ನ ಮಗು ಎತ್ತಿಕೊಂಡು ಹೋದ್ರು ಸಾರ್‌’ ಅಂತ ಗೋಳಿಟ್ಟ. ಪಕ್ಕದಲ್ಲಿ ಆತನ ಹೆಂಡತಿಯಂತೆ. ಜೋರಾಗಿ ಅಳುತ್ತಿದ್ದಳು. ಇಲಾಖೆಯವರಿಗೆ ಫಚೀತಿ. ಮಗೂನ ಆ ರೀತಿ ರಸ್ತೆಗೆಸೆದು ಹೋದೋರು ಬೇರೇನೇ. ಈಗ ನನ್ನ ಮಗುವೆಂದು ಹೇಳುತ್ತಾ ಬಂದಿರುವ ಇಬ್ಬರು ಬೇರೇನೇ. ಪೋಲೀಸರು, ‘ಆ ಮಗು ನಿಮ್ಮದೆಂದು ಹೇಳಲು ನಿಮ್ಮಲ್ಲಿ ಯಾವ ದಾಖಲೆಯಿದೆ?’ ಅಂದರು. ‘ದಾಖಲೆ ಸಮೇತ ಇಲಾಖೆಯ ನಿರಾಶ್ರಿತರ ಪುನರ್ವಸತಿ ಕೇಂದ್ರಕ್ಕೆ ಹೋಗಿ. ನಿಮ್ಮ ಮಗು ನಿಮಗೇ ಕೊಡುತ್ತಾರೆ’ ಅಂದರು. ಅಳುತ್ತಾ ಆ ದಂಪತಿಗಳೆಂದು ಹೇಳಿಕೊಂಡವರು (ದಂಪತಿಗಳಂತೆ ಕಾಣಲಿಲ್ಲ ಬಿಡಿ) ಹೋದರು. ಅವರಿಗೆ ಬೆಂಬಲ ನೀಡಿ ಗಲಾಟೆ ಮಾಡಿದ ಹತ್ತಾರು ಮಂದಿಯೂ ಹಿಂದೆ ಸರಿದರು. ಹಸಿದ ಮಗುವಿಗೆ ಪ್ರೆಸ್‌ಕ್ಲಬ್‌ನಲ್ಲಿ ನಾನು, ರಶ್ಮಿ ಬಿಸ್ಕೆಟ್‌ ತಿನ್ನಿಸಿ ಹಾಲು ಕುಡಿಸಿದೆವು. ಆ ಮಗುವಿನತ್ತ ಎನ್‌ಜಿಒ ಬಾಸ್ಕೋದ ಮಂದಿ ತೋರಿದ ತಾಯಿಯ ಮಮತೆ ಮಾತ್ರ ಇನ್ನೂ ಕಣ್ಣಿಂದ ಮಾಯವಾಗೋದಿಲ್ಲ. ಅದೇನೇ ಇರಲಿ, ಆಮೇಲೆ ಯಾರೂ ಆ ನಿರಾಶ್ರಿತರ ಪುನರ್ವಸತಿ ತಾಣಕ್ಕೆ ಅದು ನನ್ನ ಮಗುವೆಂದು ಹೇಳಿಕೊಂಡು ಬರಲಿಲ್ಲವಂತೆ!
.......... ........... .........
ಆಮೇಲೆ.....ಯಾಕೋ..
... ಎರಡು ರುಪಾಯಿಯೇನು ಮಹಾ.. ಅಂತ ದಯನೀಯ ಕೈಗೆ ಹಾಕುತ್ತಿದ್ದ ನನ್ನ ಕೈಯೂ ಈಗ ಬರಿದಾಗಿವೆ.

Tuesday, September 23, 2008

ಮಗು ಕಂಡ ನಕ್ಷತ್ರ

.....ಆ ಮಗು ತನ್ನ ಸೂಕ್ಷ್ಮ ಮುದ್ದು ಕಣ್ಣುಗಳನ್ನು ಅಷ್ಟಗಲ ಮಾಡಿ ಆಗಸ ನಿಟ್ಟಿಸುತ್ತಿತ್ತು. ಅಮ್ಮ ಒಂದೊಂದೇ ತುತ್ತು ಉಂಡೆಕಟ್ಟಿ ಬಾಯಿಗಿಡುತ್ತಿದ್ದಳು. ಯಾವುದೋ ವಿಷಯ ಹೇಳಿ ಗಮನ ಬೇರೆಡೆಗೆ ಸೆಳೆದು ಉಣಿಸುವ ಕಷ್ಟ ಆ ಅಮ್ಮನಿಗೆ ಬಿಟ್ಟರೆ ಉಳಿದವರಿಗೆ ಗೊತ್ತಾಗಲಿಕ್ಕಿಲ್ಲ. ಮಗು ಕಣ್ಣಲ್ಲಿ ಆಗಸದ ತುಂಬ ನಕ್ಷತ್ರ. ಅಮ್ಮನಿಗೆ ಒಂದೊಂದು ತುತ್ತೂ ನಕ್ಷತ್ರದ ಮಿಂಚೇ. ಪಟಕ್ಕನೆ ಬಿಟ್ಟ ಬಾಯನ್ನು ಇಷ್ಟಗಲ ಮಾಡುತ್ತಾ ಮಗು ತನ್ನ ಹೊಳಹನ್ನು ಅಮ್ಮನಿಗೆ ಹಸ್ತಾಂತರಿಸಿತು...
‘ಅಮ್ಮಾ.., ಆ ನಕ್ಷತ್ರ ಎಷ್ಟು ಚೆಂದ ಅಲ್ವಾ...’
‘ಹೂಂ ಚೆಂದ... , ನಮ್ಮಂಥವರಿಗಲ್ವೇ...’ ಅನ್ನುತ್ತಾ ಮೆತ್ತಗೆ, ‘ಆ.... ದೊಡ್ಡ ಬಾಯಿ’ ಅನ್ನುತ್ತಾ ತಿನ್ನಿಸಿದ ತುತ್ತಿನೊಂದಿಗೆ ಅಮ್ಮನ ಬಾಯಿಂದ ಹೊರಬಿದ್ದ ‘ನಮ್ಮಂಥವರಿಗಲ್ಲ’ ಅನ್ನೋ ಮಾತು ಮಗುವಿನ ಸೂಕ್ಷ್ಮ ಕಿವಿಗೆ ಕೇಳಿಸದಿರಲಿಲ್ಲ.
ಅಮ್ಮನ ನಿಟ್ಟುಸಿರಿಗೆ ಉತ್ತರವಾಗಿ ಮಗುವಿಂದ ಪ್ರತಿ ಪ್ರಶ್ನೆ, ‘ಯಾಕಮ್ಮಾ...?’
‘ಚುಮ್ಮನೆ ಹೇಳ್ದೆ ಪುಟ್ಟಾ... ನಕ್ಷತ್ರಗಳೇ ಇಲ್ಲದ ಆಕಾಶ ಕೂಡಾ ಹೀಗೆ ಚೆಂದ ಅಂದೆ ಅಷ್ಟೇ..’ ಯಾಕೋ ಅಮ್ಮನಿಂದ ಸ್ಪರ್ಧಾತ್ಮಕ ಉತ್ತರ.
‘ಅದ್ಯಾಕಮ್ಮಾ...’
‘ನೋಡು ಪುಟ್ಟಾ.. ನಕ್ಷತ್ರಗಳೇ ಇಲ್ಲದ ಆಕಾಶ ಕಪ್ಪಗಿರುತ್ತೆ. ಕಪ್ಪು ಚೆಂದ ಅಲ್ವಾ. ಕಾಣೋದಕ್ಕಿಂತ ಏನೂ ಕಾಣಿಸದೇ ಇದ್ರೆ ಇನ್ನೂ ಚೆಂದ ಅಲ್ವಾ? ಅದಕ್ಕೆ ಹಾಗಂದೆ. ಬಿಡು, ಈ ತುತ್ತು ತಿನ್ನು. ನಿಂಗೆ ಅದೆಲ್ಲಾ ಈಗ ಅರ್ಥವಾಗಲ್ಲ..’
‘ಇಲ್ಲಮ್ಮಾ.. ನಕ್ಷತ್ರವಿದ್ರೆ ಆಕಾಶ ನೀಲಿಯಾಲಿ ಚೆಂದ ಕಾಣುತ್ತೆ. ಚಿಗಿಮಿಗಿ ಅಂತ ಮಿಂಚುತ್ತೆ. ಮೊನ್ನೆ ಅತ್ತೆ ಮದುವೆಗೆ ಜಿಗಿಮಿಗಿ ನಕ್ಷತ್ರಗಳನ್ನೆಲ್ಲಾ ಮಾಲೆ ಕಟ್ಟಿದ್ರಲ್ಲಮ್ಮಾ... ಎಷ್ಟು ಚೆಂದ ಕಾಣ್ತಿತ್ತು ಅಲ್ವಮ್ಮಾ...’ ಕೊಂಚವೂ ಸ್ಪರ್ಧೆಯಿಲ್ಲದ ಕುತೂಹಲಿ ಮಗುವಿನ ಉತ್ತರ ಅಷ್ಟೇ ಸರಾಗವಾಗಿ.
ಮಗುವಿನ ಉತ್ಸಾಹಕ್ಕೆ ಅಮ್ಮನಿಂದ ಹೂಂ ಎಂಬ ಉತ್ತರ.
‘ಅಮ್ಮಾ.. ನಾವು ಹಾಗೆ ನಕ್ಷತ್ರ ಮಾಲೆ ಕಟ್ಟಿ ನೇತಾಡಿಸೋದು ಯಾವಾಗ?’
‘ಅವೆಲ್ಲ ನಮ್ಮಂಥೋರಿಗೆ ಆಗಲ್ಲ ಪುಟ್ಟಾ... ಅದಕ್ಕೆಲ್ಲ ತುಂಬ ದುಡ್ಡು ಬೇಕು. ನೀನು ದೊಡ್ಡೋನಾದಾಗ ಮಾಡುವಿಯಂತೆ. ’ ಉತ್ತರ.
‘ಹಾಂ.. ಅಮ್ಮಾ ನಾವು ಆ ಮೇಲಿರೋ ನಕ್ಷತ್ರಗಳನ್ನೇ ತಂದು ಮನೇಲಿಟ್ರೆ? ನಮ್ಮನೇ ದೀಪಕ್ಕಿಂತ ಅದೇ ಚೆಂದ ಅಲ್ವಮ್ಮಾ..
ಇಲ್ಲ ಪುಟ್ಟಾ.. ದೀಪಾನೇ ಚೆಂದ. ದೀಪಾನಾದ್ರೆ ನಂದಿಸೋದಕ್ಕಾಗುತ್ತೆ. ನಕ್ಷತ್ರ ನಂದಿಸೋಕಾಗಲ್ವಲ್ಲ. ನಂದದ ದೀಪಕ್ಕಿಂತ ನಂದೋ ದೀಪಾನೇ ಚೆಂದ. ನೀನು ಓದಿ ದೊಡ್ಡೋನಾಗಬೇಕಂದ್ರೆ ದೀಪಾನೇ ಬೇಕು. ನಕ್ಷತ್ರ ಬೇಕಾಗಲ್ಲ ಪುಟ್ಟ...’ ಅಮ್ಮನ
ಮಾತಿನಲ್ಲಿ ಕೊಂಚ ಉತ್ಸಾಹ.
ತುತ್ತು ಮುಗಿದಿತ್ತು. ಮಗು ಇನ್ನೂ ಯೋಚಿಸುತ್ತಿತ್ತು.
‘ಅಮ್ಮಾ ನಿಂಗೆ ಹಾಗಾದ್ರೆ ನಂದಿಸೋ ದೀಪಾನೇ ಇಷ್ಟಾನಾ?’
‘ಹೂಂ ಪುಟ್ಟಾ.. ಯಾಕೆ..?’
‘ಮತ್ತೆ..., ನೀನು ಅಲ್ಲಿ ಒಳಗೆ ಫೋಟೋ ಮುಂದೆ ದೀಪಾ ಉರಿಸಿದ್ಯಲ್ಲಮ್ಮಾ.. ಯಾಕಮ್ಮಾ ಅದನ್ನ ನಂದಿಸೋದೇ ಇಲ್ಲ?’
‘ಅದು ಅಪ್ಪನ ಫೋಟೋ ಪುಟ್ಟ. ಅಪ್ಪ ಅಲ್ಲಿ ನಕ್ಷತ್ರ ಇರೋವಲ್ಲಿಗೆ ಹೋಗಿದ್ದಾರಲ್ಲಾ? ಅದಕ್ಕೆ ಅಪ್ಪನ ನೆನಪಿಗೆ ಆ ದೀಪ ನಂದಿಸೋದೇ ಇಲ್ಲ ಪುಟ್ಟ.’
‘ಅಮ್ಮಾ, ಹಾಗಾದ್ರೆ ನಿಂಗೆ ಅಪ್ಪ ಅಂದ್ರೆ ಇಷ್ಟ ಇಲ್ವಾ?’
‘ಯಾಕೆ ಪುಟ್ಟಾ..?’ ಬಾಣದಂತೆ ಬಂದೆರಗಿದ ಪ್ರಶ್ನೆಗೆ ಅಮ್ಮ ಕಂಗಾಲು.
‘ಯಾಕಂದ್ರೆ ನೀನು ಹೇಳಿದ್ಯಲ್ಲಮ್ಮಾ ಆಗ. ನಂದದ ದೀಪಕ್ಕಿಂತ ನಂದೋ ದೀಪಾನೇ ಚೆಂದ ಅಂತ.’
................................
ಮಗುವಿನ ಪ್ರಶ್ನೆಗೆ ಒಂದು ಕ್ಷಣ ಆಕೆಯಿಂದ ನಿರುತ್ತರ. ಎಂಜಲು ತಟ್ಟೆ ಅಲ್ಲೇ ಉಳಿದಿತ್ತು. ಒಂದು ಕ್ಷಣ ಯೋಚಿಸಿ ಒಳಹೋದ ಆಕೆ ಮತ್ತೆ ಹೊರ ಬಂದಳು. ಮಗು ಕಣ್ಣಲ್ಲಿ ಅದೇ ಆಕಾಶದ ನಕ್ಷತ್ರದ ಜಿನುಗು ಮಳೆ. ಒಳಮನೆಯ ನಂದಾದೀಪ ಕಣ್ಮುಚ್ಚಿತ್ತು. ಒಳಗೆ ಕತ್ತಲು. ಹೊರಬಂದ ಅಮ್ಮನ ಕಣ್ಣಲ್ಲಿ ನಂದಾದೀಪ...


Thursday, August 14, 2008

ಎರಡು ಮುಖ

.... ಸುಮಾರು ೧೦ ವರ್ಷದ ಹಿಂದಿನ ನೆನಪು.
ಅದೊಂದು ದಿನ ಜೋರಾಗಿ ಮಳೆ ಸುರಿಯುತ್ತಿತ್ತು. ನಾನು ಆಗಿನ್ನೂ ಹೈಸ್ಕೂಲಿನಲ್ಲಿದ್ದಿರಬಹುದು. ಹೊರಗೇನು ನಡೆಯುತ್ತಿದೆ ಎಂಬುದೂ ಕೇಳಿಸದಷ್ಟು ಜೋರಾಗಿ ಮಳೆ ಬರುತ್ತಿತ್ತು. ನಾನು ವಿಟ್ಲದ ನಮ್ಮ ಮನೆಯ ಜಗಲಿಯಲ್ಲಿ ಸುಮ್ಮನೆ ನಿಂತು ಎಲ್ಲೋ ನೋಡುತ್ತಿದೆ. ಅಮ್ಮ ಅದೇನೋ ಕೆಲಸದಲ್ಲಿದ್ದರು. ಇದ್ದಕ್ಕಿದ್ದಂತೆ, ಮಳೆಯ ಧೋ ಸದ್ದಿನಲ್ಲೂ ದೂರದಲ್ಲೆಲ್ಲೋ ಜೋರಾಗಿ ಅರಚುವ ಸದ್ದು ಕೇಳಿ ಬಂತು. ನಾನು, ಅಮ್ಮ ಇಬ್ಬರೂ ಕಿವಿಗೊಟ್ಟು ಕೇಳಿದಾಗ ಗೊತ್ತಾಗಿದ್ದು ಮೇಲಿನ ಮನೆಯಿಂದ ಅಂತ. ತಕ್ಷಣ ಇಬ್ಬರೂ ಛತ್ರಿ ಹಿಡಿದು ಓಡಿದೆವು. ಆಗ ಕಂಡ ದೃಶ್ಯ ಮಾತ್ರ ಎಂಥ ಕಟುಕನಲ್ಲೂ ವೇದನೆ ಹುಟ್ಟಿಸುವಂಥದ್ದು. ಹೆಣ್ಣುನಾಯಿಯೊಂದು ಮಳೆಯಲ್ಲೇ ಮೇಲಿನ ಮನೆಯ ತೆಂಗಿನ ಮರದ ಬುಡದಲ್ಲಿ ಮರಿ ಹಾಕುವ ಗಳಿಗೆಯಲ್ಲಿತ್ತು. ಪಕ್ಕದಲ್ಲೇ ಮೇಲಿನ ಮನೆಯ ಹುಡುಗರು ನಾಯಿಗೆ ಜೋರಾಗಿ ಹೊಡೆಯುತ್ತಿದ್ದರು. ದೂರದಿಂದಲ್ಲೇ ಇನ್ನಿಬ್ಬರು ನಾಯಿಯತ್ತ ಕಲ್ಲೆಸೆಯುತ್ತಿದ್ದರು. ಆ ನಾಯಿ ಅತ್ತ ಹೆರುವ ನೋವೂ ತಾಳಲಾರದೆ, ಇತ್ತ ಈ ಹುಡುಗರ ಕಾಟವೂ ತಾಳಲಾರದೆ ಒದ್ದಾಡುತ್ತಿತ್ತು. ನನ್ನಮ್ಮ ಹುಡುಗರನ್ನು ಎಷ್ಟು ಕೇಳಿಕೊಂಡರೂ ಅವರು ಹೊಡೆಯುವುದನ್ನು ನಿಲ್ಲಿಸಲಿಲ್ಲ. ನಾಯಿ ಒಂದು ಮರದ ಬುಡದಿಂದ ಮತ್ತೊಂದು ಮರದ ಬುಡಕ್ಕೆ ಕಷ್ಟಪಟ್ಟು ಓಡಿ ಹೋಗಿ ಕೂತಿತು. ಅಲ್ಲಿಗೂ ಬಿಡದ ಹುಡುಗರು, ಒಟ್ಟಾರೆ ಅವರ ಮನೆಯ ಕಾಂಪೌಂಡಿನಿಂದಲೇ ಓಡಿಸುವ ಶತ ಪ್ರಯತ್ನ ನಡೆಸುತ್ತಿದ್ದರು. ಯಾಕೆ ಹೀಗೆ ಹೋಡೀತಾ ಇದ್ದೀರಿ ಎಂದಾಗ ಅವರಿಂದ ಬಂದ ಉತ್ತರ, ‘ಅದು ಇಲ್ಲಿ ಮರಿ ಹಾಕಿದ್ರೆ, ಆ ಮರಿಗಳು ಇಲ್ಲಿಂದ ಎಷ್ಟು ದಿನವಾದ್ರೂ ಹೋಗಲ್ಲ. ಆಗ ನಮಗೆ ಕಷ್ಟವಾಗುತ್ತೆ’ ಎಂದು. (ಹಳ್ಳಿಗಳಲ್ಲಿ ಇದು ಸಾಮಾನ್ಯ. ಬೀದಿ ಹೆಣ್ಣು ನಾಯಿ ತಮ್ಮ ಮನೆ ಕಾಂಪೌಂಡಿನಲ್ಲಿ ಮರಿ ಹಾಕದಿದ್ದರೆ ಸಾಕು ಎಂದು ಎಲ್ಲರೂ ದೇವರಲ್ಲಿ ಪ್ರಾರ್ಥಿಸುತ್ತಲೇ ಇರುತ್ತಾರೆ.) ‘ಆದ್ರೂ ಇಂಥ ಸಂದರ್ಭ ನೀವು ಕಾಟ ಕೊಟ್ರೆ ನಿಮಗೆ ಅದರ ಶಾಪ ತಟ್ಟದಿರದು. ನೀವು ಅಂಥ ಸಂದರ್ಭದಲ್ಲಿದ್ದರೆ ನಿಮಗೆ ಗೊತ್ತಾಗುತ್ತೆ ಆ ನೋವು ಎಂಥಾದ್ದು ಅಂತ’ ಎಂದು ಅಮ್ಮ ಜೋರಾಗಿ ಅವರಿಗೆ ಬೈದಾಗ ಕೊನೆಗೂ ಕಲ್ಲು ಹೊಡೆಯೋದು ನಿಲ್ಲಿಸಿದ್ರು. ನಾಯಿ ಕೊನೆಗೂ ೩ ಮರಿಗಳನ್ನೂ ಹಾಕಿತು.

...... ಇದು ಮೊನ್ನೆ ಮೊನ್ನೆ ನಡೆದ ಘಟನೆ. ಅದ್ಯಾವುದೋ ಸುದ್ದಿಯ ಬೆನ್ನೇರಿ ಯಶವಂತಪುರಕ್ಕೆ ಹೋಗಿದ್ದೆ. ಹಿಂತಿರುಗಿ ಬರುತ್ತಿದ್ದಾಗ ರಸ್ತೆಯಲ್ಲಿ ಅದ್ಯಾಕೋ ಎಲ್ಲ ವಾಹನಗಳು ರಸ್ತೆಯ ಮಧ್ಯಭಾಗವನ್ನು ಹೊರತು ಪಡಿಸಿ ಬದಿಯಿಂದಲೇ ಸಾಗುತ್ತಿದ್ದವು. ಹೀಗಾಗಿ ಸಂಚಾರ ಸಹಜವಾಗಿಯೇ ಅಸ್ತವ್ಯಸ್ತವಾಗಿತ್ತು. ದೂರದಿಂದಲೇ ಸಂಚಾರದ ತೊಂದರೆ ಅನುಭವಕ್ಕೆ ಬಂದರೂ ಯಾಕೆ ಅಂತ ಗೊತ್ತಾಗಲಿಲ್ಲ. ಬೆಂಗಳೂರಲ್ಲಿ ಇದು ಸಾಮಾನ್ಯವಾದ್ದರಿಂದ ಸುಮ್ಮನೆ ಕಾರಲ್ಲಿ ಕೂತಿದ್ದೆವು. ಆದರೆ, ಹತ್ತಿರ ಹೋದಾಗಲೇ ಗೊತ್ತಾಗಿದ್ದು, ರಸ್ತೆಯ ಮಧ್ಯದಲ್ಲೇ ನಾಯಿಯೊಂದು ಮಲಗಿದೆ ಎಂದು. ಅದಕ್ಕೆ ಗಾಯವಾಗಿತ್ತು. ಏಳಲೂ ಆಗುತ್ತಿರಲಿಲ್ಲ. ಹಾಗಾಗಿ ನಿಶ್ಚಿಂತೆಯಿಂದ ಅದು ರಸ್ತೆ ಮಧ್ಯದಲ್ಲೇ ಮಲಗಿ ಬಿಟ್ಟಿತು. ಪರಿಸ್ಥಿತಿ ಏನೆಂದು ಅರ್ತವಾಗುತ್ತಿರುವ ಕ್ಷಣದಲ್ಲೇ ನಾಲ್ಕೈದು ಮಂದಿ ಬೈಕ್‌ ಸವಾರ ಯುವಕರು ರಸ್ತೆ ಬದಿಯಲ್ಲಿ ಬೈಕ್‌ ನಿಲ್ಲಿಸಿ ನಾಯಿಯನ್ನು ಅಲ್ಲಿಂದ ಎತ್ತಿದರು.
....... ಇದು ಎರಡು ಮುಖ.

Wednesday, July 2, 2008

ಹತ್ನಿಮಿಷ ಇಳಿದ್ರೆ ತಲೆ ಮೇಲೇ ನೀರು...!

ಎಲೆಕ್ಷನ್‌ ಸಮಯದ ಬಿಡುವಿರದ ಕೆಲಸ ಮುಗಿಸಿದ ಮೇಲೆ ಎಲ್ಲ ಮರೆತು ಬೆಟ್ಟ ಹತ್ತಲು ಮೊನ್ನೆ ಮೊನ್ನೆ ಅನಿರೀಕ್ಷಿತವಾಗಿ ಸಮಯ ದೊರೆಯಿತು. ಆಗ ಹೋಗಿದ್ದು ಚಾಮರಾಜನಗರದ ಹಿಮಗಿರಿಗಾದರೂ, ಪ್ರತಿ ಬೆಟ್ಟ ಹತ್ತುವಾಗಲೂ ನನ್ನ ನೆನಪಿನ ಕಟ್ಟೆಗೆ ದಸಕ್ಕೆಂದು ಬಂದು ಬೀಳೋದು ಅದೇ ಹಳೆಯ ಕಥೆ. ಅದ್ಯಾಕೋ ಅದನ್ನೇ ಬರೆಯೋಣ ಅನ್ನಿಸಿದ್ದಕ್ಕೆ ಈಗ ಆ ನೆನಪಿನ ಬೆನ್ನತ್ತಿ...
ಅದೊಂದು ದಿನ ನಾನು, ಪ್ರಿಯ ನಮ್ಮ ರೂಂಮೇಟ್‌ ಹಾಗೂ ಗೆಳತಿ ಶ್ರೀ ಮನೆಗೆ ಸಾಗರಕ್ಕೆ ಲಗ್ಗೆಯಿಟ್ಟಿದ್ದೆವು. ಇದು ನಾಲ್ಕೈದು ವರ್ಷದ ಹಿಂದಿನ ಮಾತು. ಆಗಿನ್ನೂ ದ್ವಿತೀಯ ಪದವಿ. ಆಗೆಲ್ಲಾ ಚಾರಣದ ಹುಚ್ಚು ಇನ್ನೂ ಹತ್ತಿರಲಿಲ್ಲ. ಎಲ್ಲೋ ಆಗೊಮ್ಮೆ ಈಗೊಮ್ಮೆ ನಮ್ಮ ಮನೆಗೆ ಒತ್ತಿಕೊಂಡಂತೆಯೇ ಇರುವ ಕಳಂಜಿಮಲೆಗೆ ಅಪ್ಪನ ಜತೆಗೆ ಹೋಗಿ ಅದೇ ಬಕಾಸುರನ ಗುಹೆಯನ್ನೇ ಕುತೂಹಲದಿಂದ ನೋಡುತ್ತಿದ್ದೆ. ಶ್ರೀ ಮನೆಯಲ್ಲಿ ಮಾರನೇ ದಿನವೇ ನಮ್ಮ ಪುಟ್ಟ ದಂಡು ಜೋಗಕ್ಕೆ ಹೊರಟಿತು. ನಾನು, ಶ್ರೀ, ಪ್ರಿಯ, ಶ್ರೀಯ ಅಮ್ಮ, ಜತೆಗೆ ಜೀಪಿನ ಪ್ರಕಾಶಣ್ಣ. ಬೆಳಗ್ಗೆ ಬೇಗನೇ ಹೊರಟಿದ್ದರಿಂದ ಮಧ್ಯಾಹ್ನ ೧೨ರ ಹೊತ್ತಿಗಾಗಲೇ ಜೋಗ ನೋಡಿಯಾಗಿತ್ತು. ಆಗ ಪ್ರಕಾಶಣ್ಣ ಒಂದು ಹೊಸ ಜಾಗದ ಬಗ್ಗೆ ಕುತೂಹಲ ಕೆರಳಿಸಿದ. ಪ್ರಕಾಶಣ್ಣ ಹೇಳಿದ್ದು ಇಷ್ಟೇ, ‘ಇಲ್ಲಿಂದ ಕೇವಲ ೧೫ ಕಿ.ಮೀ ದೂರದಲ್ಲಿ ಕೊಂಜವಳ್ಳಿ ಎಂಬಲ್ಲಿ ಜಲಪಾತ ಇದೆ. ಹತ್ತು ನಿಮಿಷ ಬೆಟ್ಟದಿಂದ ಇಳಿದ್ರೆ ನೀರು ತಲೆ ಮೇಲೇನೇ ಬೀಳುತ್ತೆ.’ ಎಲ್ಲದಕ್ಕೂ ಸೈ ಅನ್ನುವ ನಾವು ಇದಕ್ಕೂ ಒಕೆ ಅಂದೆವು.
೧೨.೩೦ರ ಹೊತ್ತಿಗಾಗಲೇ ನಾವು ಊಟ ಮುಗಿಸಿ ಕೊಂಜವಳ್ಳಿ ಕಡೆಗೆ ಹೊರಟಿದ್ದೆವು. ಸ್ವಲ್ಪ ದೂರ ಹೋದಾಗಲೇ ತಿಳೀತು ಇದು ಪ್ರಕಾಶಣ್ಣ ಹೇಳಿದಷ್ಟು ಸಮೀಪ ಇಲ್ಲ ಎಂದು. ಅಂತೂ ನಮ್ಮ ಜೀಪು ಸುಮಾರು ೨೫ ಕಿ.ಮೀ ದೂರದ ಕೊಂಜವಳ್ಳಿ (ಸಾಗರ- ಭಟ್ಕಳ ಹೆದ್ದಾರಿ) ತಲುಪಿತು. ಕೊಂಜವಳ್ಳಿಯಿಂದ ಐದಾರು ಕಿ.ಮೀ ನಿರ್ಜನ ಪ್ರದೇಶದಲ್ಲಿ ಮುಂದೆ ಹೋದಾಗ ಹೊಳೆ ಅಡ್ಡಲಾಗಿತ್ತು. ಮುಂದೆ ಜೀಪು ಸಾಗಲ್ಲ ಅಂತ ಗೊತ್ತಾದಾಗ ನಡೆಯಲು ಶುರು ಮಾಡಿದೆವು. ಆಗಲೇ ಕಾಡಿನ ಮಧ್ಯದ ಕಿರು ರಸ್ತೆಯುದ್ದಕ್ಕೂ ತಣ್ಣಗೆ ಮಲಗಿದ್ದ ಇಂಬಳಗಳು ಕತ್ತೆತ್ತಿ ಬಳುಕುತ್ತಾ ನಮ್ಮ ಕಾಲಿಗೆ ತಲೆಯಾನಿಸಲು ಶುರು ಮಾಡಿದವು.
ವಿಚಿತ್ರವೆಂದರೆ, ನಾವು ಇವಕ್ಕೆಲ್ಲ ತಯಾರಾಗೇ ಬಂದಿರಲಿಲ್ಲ. ಇಂಬಳದ ಜಗತ್ತೂ ನನಗೆ ಹೊಸದು. ಪಿಯುಸಿಯಲ್ಲಿ ಬಯಾಲಜಿ ಪ್ರಾಕ್ಟಿಕಲ್‌ ಮಾಡುವಾಗ ಮಾತ್ರ ಇಂಬಳವನ್ನು ದೂರದಿಂದಲೇ ನೋಡಿದ್ದೆ. ಇಂಬಳ ನೋಡಿ ಭಯ ಬೀಳದಂಥ ಪುಣ್ಯಾತ್ಮರು ನಮ್ಮ ಗುಂಪಿನಲ್ಲಿ ಇರಲಿಲ್ಲ. ಇಂತಿಪ್ಪ ನಮ್ಮ ತಂಡ ಸುಮಾರು ಎರಡು ಕಿ.ಮೀ ನಡೆಯುವಷ್ಟರಲ್ಲಿ ಎಲ್ಲರ ಕಾಲುಗಳಲ್ಲೂ ಇಂಬಳಗಳು ತಮ್ಮ ಸಾಮ್ರಾಜ್ಯ ಸ್ಥಾಪಿಸಿದ್ದವು. ಅಂತೂ ಇಂತೂ ಒಂದೆರಡು ಮನೆಗಳಿದ್ದ ಆ ಪ್ರದೇಶಕ್ಕೆ ತಲುಪಿ ಪ್ರಕಾಶಣ್ಣ ಹೇಳಿದ ತಲೆ ಮೇಲೆ ನೀರು ಬೀಳುವ ಜಲಪಾತದ ಹಾದಿ ಹಿಡಿದೆವು. ನಂತರ ಶುರುವಾಯಿತು ಇಳಿಯುವ ಹಾದಿ.
‘ಕೇವಲ ಹತ್ತೇ ನಿಮಿಷ. ಬೇರು ಹಿಡಿದು ಇಳಿದ್ರೆ ಮುಗೀತು, ಜಲಪಾತದ ನೀರು ನೇರ ತಲೆ ಮೇಲೆ’ ಎಂದಿದ್ದ ಪ್ರಕಾಶಣ್ಣನ ಮಾತು ಸುಳ್ಳು ಅಂತ ಗೊತ್ತಾಗಲು ಹೆಚ್ಚು ಹೊತ್ತು ಬೇಕಿರಲಿಲ್ಲ. ಮುಕ್ಕಾಲು ಗಂಟೆ ಇಳಿದ್ರೂ ಜಲಪಾತದ ಒಂದು ಹನಿಯೂ ನಮ್ಮ ತಲೆ ಮೇಲೆ ಬೀಳಲಿಲ್ಲ! ಬೆವರಹನಿ ಮಾತ್ರ ಧಾರೆದಾರೆಯಾಗಿ ಇಳಿಯುತ್ತಿತ್ತು. ಗಂಟೆ ಆಗಲೇ ನಾಲ್ಕು ತೋರಿಸುತ್ತಿತ್ತು. ಶ್ರೀಯ ಅಮ್ಮನಿಗೆ ಸಣ್ಣಗೆ ಭಯವಾಗಲು ಶುರುವಾಗಿತ್ತು. ಕಾಲಲ್ಲಿದ್ದ ಚಪ್ಪಲಿ ಕೈಗೆ ಬಂದಿತ್ತು. ಆಮೇಲೆ ಆ ಚಪ್ಪಲಿಯೂ ಅಲ್ಲೇ ಉಳೀತು. ನಾಲ್ಕೂ ಕಾಲಿನಲ್ಲಿ ಹಿಮ್ಮುಖವಾಗಿ ಬೇರುಗಳನ್ನು ಹಿಡಿಯುತ್ತಾ ಇಳಿದ ನಮಗೆ ಜಲಪಾತ ಮರಗಳೆಡೆಯಿಂದ ಗೋಚರಿಸುವಷ್ಟೇ ಸ್ಪಷ್ಟವಾಗಿ ಕೇಳಿಸುತ್ತಲೂ ಇತ್ತು. ಆದರೆ ಅಲ್ಲಿಗೆ ಹೋಗಲು ಬೇರು ಮಾತ್ರ ಅಲ್ಲ. ಹಗ್ಗವೇ ವೇಕಾಗಿತ್ತು. ಬಾವಿಗಿಳಿಯುವುದಕ್ಕೂ ಅಲ್ಲಿಗೆ ಇಳಿಯುವುದಕ್ಕೂ ಯಾವುದೇ ವ್ಯತ್ಯಾಸ ನಮಗೆ ಕಾಣಲಿಲ್ಲ. ಆದರೂ, ನಾನು, ಶ್ರೀ, ಪ್ರಿಯ ಇಳಿಯಹೊರಟೆವು. ಸೀರೆ ಉಟ್ಟಿದ್ದ ಶ್ರೀಯ ಅಮ್ಮ ಅಲ್ಲೇ ನಿಲ್ಲಬೇಕಾಯ್ತು. ಹತ್ತು ನಿಮಿಷ ಹಾಗೆ ನಾವು ಇಳಿದಾಗ ನೋಡಿದ್ದು ಮಾತ್ರ ಮರೆಯಲಾಗದ ದೃಶ್ಯ. ಆ ಜೋಗವೂ ಇದರ ಮುಂದೆ ಸಪ್ಪೆ ಎನಿಸುತ್ತಿತ್ತು. ಸುಳ್ಳು ಹೇಳಿ ಕರಕೊಂಡು ಬಂದ ಪ್ರಕಾಶಣ್ಣಗೆ ಥ್ಯಾಂಕ್ಸೂ ಹೇಳದೆ ನೀರಲ್ಲಿ ಮನಸೋ ಇಚ್ಚೆ ಕುಣಿದೆವು. ಪ್ರಕಾಶಣ್ಣ ಹೇಳಿದಂತೆ ಜಲಪಾತದಿಂದ ಎಷ್ಟು ದೂರ ನಿಂತರೂ ತಲೆ ಮೇಲೆ ನೀರು ಬೀಳುತ್ತಿತ್ತು ಅನ್ನೋದು ಮಾತ್ರ ಸತ್ಯ.
ಆಗ ಗಂಟೆ ಐದು ದಾಟಿ ಹೊತ್ತಾಗಿತ್ತು. ಮನಸೇ ಇಲ್ಲದಿದ್ದರೂ ಹತ್ತಲು ಶುರುಮಾಡಿದೆವು. ಶ್ರೀಯ ಅಮ್ಮನ ತಲೆಗಂತೂ ನೀರು ಬೀಳುವ ಭಾಗ್ಯ ದೊರೆಯಲಿಲ್ಲ. ಆದರೂ, ಇಳಿದುದಕ್ಕಿಂತಲೂ ವೇಗವಾಗಿ ಸುಲಭವಾಗೇ ಮೇಲೆ ಹತ್ತಿ ಆರುವರೆಯ ಹೊತ್ತಿಗೆ ಮೇಲೆ ತಲುಪಿದ್ದೆವು. ಇಳಿಯುವಾಗ ಏನೇನೂ ಮಾಹಿತಿ ತಿಳಿಯದ ಎಡಬಿಡಂಗಿಗಳು ನಾವು. ಅಲ್ಲೇ ಇದ್ದ ಮನೆಯಲ್ಲೂ ಮಾಹಿತಿ ಕೇಳದೆ ಹಾಗೇ ಬಂದಿದ್ದೆವು. ಆಮೇಲೆ ವಿಚಾರಿಸಿದ್ರೆ ಗೊತ್ತಾಯ್ತು, ಇದಕ್ಕೆ ಕೆಪ್ಪಜೋಗ ಅಂತ ಕರೀತಾರಂತೆ. ದಬ್ಬೆ ಅಂತಾನೂ ಕರೀತಾರಂತೆ. ಆ ಜೋಗಕ್ಕಿಂತನೂ ಇದು ಎತ್ತರವಂತೆ. ಆದರೆ, ನನಗ ಮಾತ್ರ ಹಾಗನಿಸಿರಲಿಲ್ಲ. ಎತ್ತರದಲ್ಲಿ ಜೋಗಕ್ಕೆ ತೀರಾ ಸಮೀಪವಿದೆ ಅಂತ ಅನ್ನಿಸಿದ್ರೂ, ಜೋಗಕ್ಕಿಂತ ಮುದ್ದಾಗಿದೆ ಈ ಕೆಪ್ಪಜೋಗ. ರಾತ್ರಿಯಾದರೆ, ಕಾಡುಪ್ರಾಣಿಗಳ ಭಯವಿದೆಯಂತೆ. ಚಾರಣಕ್ಕೆ ಬಹಳ ಮಂದಿ ಇಲ್ಲಿ ಬರೋದಿಲ್ವಂತೆ. ಆ ಮನೆಯಲ್ಲಿ ಹೀಗೆ ಅಂತೆ ಕಂತೆ ಕೇಳುತ್ತಾ ತಣ್ಣನೆ ನೀರು ಕುಡಿದು ಮತ್ತೆ ಮನೆಕಡೆ ಹೊರಟೆವು. ಶ್ರೀಯ ಅಮ್ಮ ಮಾತ್ರ ದಾರಿಯುದ್ದಕ್ಕೂ ಪ್ರಕಾಶಣ್ಣನ ಈ ಸಾಹಸಕ್ಕೆ ಚೆನ್ನಾಗಿ ಮಂಗಳಾರತಿ ಎತ್ತಿದರೂ, ನಮ್ಮ ತಂಡದ ಚಾರಣ ಪೂಜೆ ಮಾತ್ರ ಅಲ್ಲಿಂದಲೇ ಆರಂಭವಾಯ್ತು. ಈಗಲೂ ಆಗೊಮ್ಮೆ ಈಗೊಮ್ಮೆ.. ಹೀಗೆಯೇ...

Tuesday, June 17, 2008

ಹನಿಯೊಂದಿಗೆ ಒಂದು ಕ್ಷಣ...

ಮೊನ್ನೆ ಮೊನ್ನೆ ಆಗಸದಿಂದ
ನೇರ ನನ್ನ ಅಂಗೈಗೇ
ಹನಿಯೊಂದು ಫಳಕ್ಕನೆ
ಬಿದ್ದು, ಅತ್ತಿತ್ತ ಕತ್ತು ತಿರುಗಿಸಿ
ನನ್ನನ್ನೇ ಕಣ್ಣು ಬಿಟ್ಟು ನೋಡಿತ್ತು.

ಹನಿಗೋ ಉಭಯ ಸಂಕಟ
ಬಿದ್ದದ್ದು ನೆಲಕ್ಕಲ್ಲ, ತ್ರಿಶಂಕು ಸ್ವರ್ಗಕ್ಕೆ
ಕಣ್ಣರಳಿಸಿ ಅತ್ತಿತ್ತ ನೋಡಿತ್ತು,
ನನ್ನ ಅಂಗೈಯ ಹತ್ತು ದಾರಿಗಳಲ್ಲಿ
ಕಾಲು ಬಿಡಿಸಿ ನೋಡುತ್ತಾ ಓಲಾಡುತ್ತಿತ್ತು.

ಹನಿಗೋ ನೆಲಮುಟ್ಟುವಾಸೆ
ನನಗೋ ಅಂಗೈಲೇ ಜೋಗ
ಹನಿಯೊಂದು
ಧಾರೆ ಹಲವು
ಎಲ್ಲಿ ಸಿಗಬೇಕು ಇಂಥ ಪುಳಕ?

ನನ್ನ ಕಣ್ಣ ಕೊಳವೋ
ಪ್ರತಿದಿನವೂ ಮಂಜುಗಡ್ಡೆ
ಎಂದು ಹನಿದೀತು ಎಂದು
ಕಾಯುತ್ತಲೇ ಮೈಬಿಸಿ, ಕಣ್ಚಳಿ
ಆದರೆಲ್ಲಿ ಕರಗೀತು ಹೇಳಿ?

Sunday, June 8, 2008

ಅವನ ನೆನೆದು...,

ಇದು ೩ ವರ್ಷಗಳ ಹಿಂದಿನ ನೆನಪು. ಆಗ ನಾನಿನ್ನೂ ಅಂತಿಮ ಪತ್ರಿಕೋದ್ಯಮ ಪದವಿಯಲ್ಲಿದ್ದೆ. ವಿಶಾಖಪಟ್ಟಣದಲ್ಲಿ ಆಗಷ್ಟೇ ದಕ್ಷಿಣ ಭಾರತ ಮಟ್ಟದ ಪೇಂಟಿಂಗ್‌ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿ ರೈಲಿನಲ್ಲಿ ಮಂಗಳೂರಿಗೆ ಮರಳುತ್ತಿದ್ದ ಸಮಯ. ವಿಶಾಖಪಟ್ಟಣದಿಂದ ಚೆನ್ನೈ ರೈಲು ನಿಲ್ದಾಣಕ್ಕೆ ನಮ್ಮ ರೈಲು ಬೆಳಗ್ಗಿನ ಜಾವ ನಾಲ್ಕು ಗಂಟೆಗೇ ತಲುಪಿತ್ತು. ಮಂಗಳೂರಿಗೆ ಇನ್ನೊಂದು ರೈಲೇರಲು ಇನ್ನೂ ಬರೋಬ್ಬರಿ ಆರು ಗಂಟೆಗಳ ಸಮಯವಿತ್ತು. ಹಾಗಾಗಿ, ಸಹಜವಾಗಿಯೇ ಚೆನ್ನೈ ಸುತ್ತುವ ಹುಮ್ಮಸ್ಸಿನಲ್ಲಿ ನಮ್ಮ ಮಂಗಳೂರು ಕಪಿಸೈನ್ಯ ಮೊದಲು ಹೋಗಿದ್ದು ಮರೀನಾ ಸಮುದ್ರ ತೀರಕ್ಕೆ. ಹತ್ತು ಹನ್ನೆರಡು ಜನರಿದ್ದ ತಂಡದಲ್ಲಿ ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳಿದ್ದರೂ, ಅಷ್ಟಾಗಲೇ ನಮ್ಮ ನಡುವೆ ಸ್ನೇಹ ಮೊಳೆತಿತ್ತು. ಆಗಷ್ಟೇ ಕೆಂಬಣ್ಣದ ಸೂರ್ಯ ನಿಧಾನವಾಗಿ ನೀರಿನಿಂದ ಮೇಲೇಳುತ್ತಿದ್ದ. ನಮ್ಮೆಲ್ಲರ ಕ್ಯಾಮರಾಗಳು ಈ ಅಪರೂಪದ ಕ್ಷಣಗಳನ್ನು ಸೆರೆಹಿಡಿವಲ್ಲಿ ಮಗ್ನವಾಗಿದ್ದವು. ಇನ್ನೇನು ಹೊರಡಬೇಕೆನ್ನುವ ಹೊತ್ತಿನಲ್ಲಿ ನನಗ್ಯಾಕೋ ಸಮಾಧಾನವಿರಲಿಲ್ಲ. ನನ್ನ ಬೆರಳೆಣಿಕೆಯ ಗೆಳತಿಯರಿಗೆ ಏನನ್ನಾದರೂ ವಿಶೇಷವಾದುದನ್ನು ಖರೀದಿಸಬೇಕಿತ್ತಲ್ಲಾ ಎಂಬ ತುಡಿತ. ಅಂತೂ ನನ್ನ ಕಣ್ಣಿಗೆ ಸಮುದ್ರ ತೀರದಲ್ಲಿ ಕೆಲವು ಅಪರೂಪದ ಚಿಪ್ಪುಗಳನ್ನು ಹರವಿ ಕೂತ ವ್ಯಕ್ತಿ ಕಂಡ. ಅಂಗೈಯಗಲದ ವಿಶೇಷವಾದ ಆಕರ್ಷಕ ಚಿಪ್ಪುಗಳು ಆತನ ಬಳಿಯಿದ್ದವು. ಒಂದನ್ನೊಂದು ಮೀರಿಸುವ ಕುಸುರಿ ಆ ಚಿಪ್ಪುಗಳಲ್ಲಿದ್ದುದು ನನ್ನ ಉತ್ಸಾಹವನ್ನು ಹೆಚ್ಚಿಸಿದವು. ನೆನಪಿಗಾಗಿ ಕೊಡಲು, ನನ್ನ ಜತೆಯೇ ಇಡಲು ಇದಕ್ಕಿಂತ ಉತ್ತಮ ವಸ್ತು ಯಾವುದಾದರೂ ಇದೆಯೇ.. ಅಂತೂ, ಆತನ ಬಳಿ ಹಿಂದಿಯಲ್ಲಿ ಮಾತನಾಡುತ್ತಾ, ಸ್ವಲ್ಪ ಚೌಕಾಸಿ ಮಾಡಿ ಕಡಿಮೆ ಬೆಲೆಯಲ್ಲಿ ಹತ್ತಾರು ಚಿಪ್ಪುಗಳು ನನ್ನ ಬ್ಯಾಗು ಸೇರಿದವು. ಕಡಿಮೆ ಬೆಲೆಗೆ ಚಿಪ್ಪು ನೀಡಲು ಆತನ ಬಳಿಯೂ ಕಾರಣವಿತ್ತು. ಅದು ಆತನೂ ಕನ್ನಡಿಗ ಎಂಬುದು. ಗುಂಪಿನಲ್ಲಿ ಕನ್ನಡದಲ್ಲಿ ಹರಟುತ್ತಿದ್ದ ನಮ್ಮ ಸಂಭಾಷಣೆ ಕೇಳಿ ಆತನ ಮುಖ ಅಷ್ಟಗಲ ಅರಳಿತ್ತು.

ಒಂದು ವಾರದ ಆ ದೊಡ್ಡ ವಿಶಾಖಪಟ್ಟಣವನ್ನು ಹಾಗೂ ಮರೀನಾವನ್ನು ಆ ಸಣ್ಣ ಸಣ್ಣ ಚಿಪ್ಪುಗಳಲ್ಲಿ ತುಂಬಿ ನಾನು ಮತ್ತೆ ರೈಲೇರಿದೆ. ಬೆಳಗ್ಗಿನ ಜಾವ ೩ರ ಹೊತ್ತಿಗೆ ನಮ್ಮ ನಮ್ಮ ಲಗ್ಗೇಜುಗಳ ಜತೆ ನಾವು ಮಂಗಳೂರಲ್ಲಿದ್ದೆವು. ಎಲ್ಲರಿಗೂ ಬೈ ಹೇಳಿ ನಾನು ವಿಟ್ಲಕ್ಕೆ ಕಾಲ್ಕಿತ್ತೆ. ನಾವು ಮಂಗಳೂರಿಗೆ ಮರಳಿದ ದಿನ ಕಾಲೇಜು ಇರಲಿಲ್ಲ. ಕ್ರಿಸ್‌ಮಸ್‌ ಅಂಗವಾಗಿ ಎರಡು ದಿನ ರಜಾ ಇತ್ತು. ಸ್ಪರ್ಧೆಯಲ್ಲಿ ಪ್ರೈಸು ಬರಲಿಲ್ಲವಲ್ಲಾ ಎಂಬ ಬೇಸರವಿದ್ದರೂ ಆ ನೆನಪುಗಳೆಲ್ಲವೂ ಚಿಪ್ಪಿನೊಳಗೆ ಭದ್ರವಾಗಿದ್ದವು. ಗಳತಿಯರಿಗೆ ಆ ಚಿಪ್ಪುಗಳನ್ನು ಕೊಟ್ಟು ಅವರ ಖುಷಿಯನ್ನು ಸವಿಯುವ ಧಾವಂತವೂ ನನ್ನಲ್ಲಿತ್ತು. ಆದರೆ,ಅಷ್ಟಾಗಲೇ ವಿಧಿಲಿಖಿತ ಬೇರೆಯೇ ಆಗಿತ್ತು ಎಂಬ ಅರಿವು ನನ್ನಲ್ಲಿರಲಿಲ್ಲ.

ತಿರುಗಾಡಿ ಬಂದ ಸುಸ್ತಿನಲ್ಲೋ ಏನೋ, ಪ್ರಪಂಚ ಮುಳುಗಿದರೂ ಆ ದಿನ ಎಚ್ಚರಾಗುವ ಸ್ಥಿತಿಯಲ್ಲಿ ನಾನಿರಲಿಲ್ಲ. ಜತೆಗೆ, ಮಾರನೇ ದಿನ ಮುಂಜಾವಿನಲ್ಲೇ ಮನೆ ಬಿಟ್ಟು ಕ್ಲಾಸಿಗೆ ಹಾಜರಾಗಲೇಬೇಕಿತ್ತು. ಹಾಗಾಗಿ ಬೇಗನೇ ಹಾಸಿಗೆ ಸೇರಿದೆ. ಮಾರನೇ ದಿನ ಬೇಗ ಎದ್ದು ಬಿ.ಸಿ.ರೋಡ್‌ ಬಸ್‌ ನಿಲ್ದಾಣದಲ್ಲಿ ಧರ್ಮಸ್ಥಳ ಬಸ್ಸೇರಲು ಕಾಯುತ್ತಿದ್ದೆ. ಇದ್ದಕ್ಕಿದ್ದಂತೆ ದೊಡ್ಡ ತಲೆಬರಹ (‘ಭೂಮಿ ಕುಲುಕಿದರೆ, ಸಮುದ್ರ ತುಳುಕಾಡಿದರೆ, ನೀನ್ಯಾವ ಲೆಕ್ಕವೋ ಹುಲು ಮಾನವ?’ ಎಂಬ ತಲೆಬರಹವಿದ್ದಂತೆ ನೆನಪು) ಹಾಗೂ ಸಮುದ್ರ ತೆರೆಯ ಚಿತ್ರವಿದ್ದ ‘ಕನ್ನಡಪ್ರಭ’ ನನ್ನನ್ನು ಆಕರ್ಷಿಸಿತು. ಖರೀದಿಸಿದರೆ, ನನಗೆ ಆಘಾತವಾಗುವ ಸುದ್ದಿ ಅಲ್ಲಿತ್ತು. ಚೆನ್ನೈ ಮರೀನಾ ಬೀಚ್‌ನಲ್ಲಿ ಸುನಾಮಿ!.. ಸುನಾಮಿ ಹೆಸರೇ ಆಗ ಹೊಸದು. ಭೀಕರ ದೃಶ್ಯಗಳ ಚಿತ್ರಗಳು ಒಂದು ಕ್ಷಣ ನನ್ನಲ್ಲಿ ಬೀಕರ ಅಲೆಗಳನ್ನೆಬ್ಬಿಸಿದರೂ ಸುನಾಮಿಯ ಅರ್ಥ ನನಗಾಗ ನಿಜಕ್ಕೂ ತಿಳಿದಿರಲಿಲ್ಲ. ನಾವೆಲ್ಲರೂ ನಡೆದಾಡಿದ, ನಗುತ್ತಾ ನಿಂತು ಕ್ಲಿಕ್ಕಿಸಿಕೊಂಡ ಜಾಗಗಳೆಲ್ಲವೂ ಮುಳುಗಿ ಹೋಗಿದ್ದ ದೃಶ್ಗಳ ಚಿತ್ರಗಳು ಪತ್ರಿಕೆಯ ಮುಖಪುಟದಲ್ಲಿ ಇದ್ದವು. ನಾವು ಮರೀನಾ ಬೀಚ್‌ನಲ್ಲಿ ನಡೆದಾಡಿದ ಮಾರನೇ ದಿನವೇ ಆ ದುರ್ಘಟನೆ ನಡೆದಿತ್ತು.

ಹಾಗಾದರೆ, ಆ ಕನ್ನಡಿಗ ಚಿಪ್ಪು ಮಾರುವ ಮನುಷ್ಯನ ಗತಿ...?! ಮೊದಲು ನನ್ನಲ್ಲಿ ಉದ್ಭವಿಸಿದ ಪ್ರಶ್ನೆ ಇದು. ಪ್ರತಿನಿತ್ಯ ಆ ಮರೀನಾ ಬೀಚ್‌ನಲ್ಲಿ ಮುಂಜಾವಿನಿಂದಲೇ ಚಿಪ್ಪು ಮಾರಲು ಕೂರುವ ಆತ ಹಾಗಾದರೆ...? ಹೀಗೆ ಆಗ ಕಾಡಿದ ಆ ಪ್ರಶ್ನೆ ಈಗಲೂ ಕಾಡುತ್ತಲೇ ಇದೆ. ಅಂದಿದ್ದ ಆ ಸುಂದರ ಮುಂಜಾವು ಈಗಲೂ ದುಸ್ವಪ್ನವಾಗಿ ನನ್ನ ಜತೆ ಇದ್ದೇ ಇದೆ. ಆ ಚಿಪ್ಪುಗಳಲ್ಲಿದ್ದ ಸುಂದರ ಕ್ಷಣಗಳ ಜತೆ ಈ ಭಯಂಕರ ನೆನಪೂ ಸೇರಿಕೊಳ್ಳುತ್ತದೆ. ಅಂಗೈಯಗಲದ ಆ ಚಿಪ್ಪುಗಳು ಇನ್ನೂ ನನ್ನ ಬಳಿ ಇವೆ. ಅದನ್ನು ಯಾರಿಗಾದರೂ ಹೇಗೆ ಕೊಡಲಿ ನಾನು???..