Tuesday, April 10, 2012

ಕಾಡಿನ ಕಿಟ್ಟ

ಒಂದು ಕಾಲಲ್ಲಿ ನಾಲ್ಕೇ ಬೆರಳು! ಒಂದನೇ ಕ್ಲಾಸಿನಲ್ಲಿ 'ಕಾಲಲ್ಲಿ ಓಟ್ಟೆಷ್ಟು ಬೆರಳು, ಲೆಕ್ಕ ಹಾಕಿ' ಎಂದು ಟೀಚರ್ ಕೇಳಿದ್ದಾಗ ಒಂಭತ್ತು ಎಂದು ಹೇಳಿ ಹೊಡೆತ ತಿಂದಿದ್ದ ಈತ, ಸಣ್ಣವನಿದ್ದಾಗ ಮೊಣಕಾಲಲ್ಲಿ ಯಾವಾಗ್ಲೂ ಗಾಯದ ಗುರುತು ಮಾಸಲು ಬಿಡುತ್ತಿರಲಿಲ್ಲ. ಅರ್ಥಾತ್ ಅಷ್ಟು ಸಾರಿ ಬೀಳುತ್ತಿದ್ದ, ಬಿದ್ದರೂ, ಏನೂ ಆಗಿಲ್ಲವೆಂಬಂತೆ ಫೀನಿಕ್ಸಿನಂತೆ ಎದ್ದು ಬರುತ್ತಿದ್ದ. ಕಾಡಿನ ಮಧ್ಯದಲ್ಲಿದ್ದ ಜೋಪಡಿಯಲ್ಲಿ ಹಾಯಾಗಿರುತ್ತಿದ್ದ ಈತ ನನ್ನ ಅಂದಿನ ಮುಗ್ಧ ಕಣ್ಣಿನಲ್ಲಿ ಹೀರೋ. ಆಗ ನನ್ನ ಪಾಲಿಗೆ ಈತ ಸಾಕ್ಷಾತ್ 'ಕಾಡಿನ ಕಿಟ್ಟ'.

ತಿಂಗಳಿಗೆರಡು ಬಾರಿ ಬರುವ ಬಾಲಮಂಗಳದಲ್ಲಿ ಕಳೆದು ಹೋಗುತ್ತಿದ್ದ ದಿನಗಳಲ್ಲಿ, ಅದರಲ್ಲಿ ಬರುತ್ತಿದ್ದ 'ಕಾಡಿನ ಕಿಟ್ಟ' ಸರಣಿ ಚಿತ್ರಕಥೆಯಲ್ಲಿ ನನಗೆ ಮಾತ್ರ ಕಾಡಿನ ಕಿಟ್ಟನಾಗಿ ಕಣ್ಮುಂದೆ ಕಟ್ಟುತ್ತಿದ್ದ ಚಿತ್ರಗಳೆಲ್ಲವೂ ಈತನದೇ. ಅವನೇ ನನ್ನ ತಮ್ಮ ವಿಗ್ಗು. ನಮ್ಮಿಬ್ಬರ ವಯಸ್ಸು ಹೆಚ್ಚು ಕಡಿಮೆ ಒಂದೇ. ನನ್ನಿಂದ ಆರೇಳು ತಿಂಗಳು ಚಿಕ್ಕವ. ದೊಡ್ಡಪ್ಪನ ಮಗ. ಹೆಸರು ವಿಘ್ನರಾಜ. ಆದರೆ ಎಲ್ಲರಿಗೂ ವಿಗ್ಗುವೇ.

ಮೊನ್ನೆ ಫೇಸ್ ಬುಕ್ಕಿನಲ್ಲಿ ಹೊಕ್ಕು ಕೂತಿದ್ದೆ. ನನ್ನ ಈ ಕಾಡಿನ ಕಿಟ್ಟ ಹೇಗೆಲ್ಲ ಬದಲಾಗಿ ಬಿಟ್ಟಿದ್ದಾನಲ್ಲ ಅಂತ ಆಶ್ಚರ್ಯಾವಾಗ್ತಾ ಇತ್ತು. ಬೆಂಗಳೂರಿನ ಮಾಯೆಯೇ ಅದು. ಆಗೆಲ್ಲ ಫೋನು ನಮ್ಮನೆಗೆಲ್ಲ ಇನ್ನೂ ಬಾರದ ಕಾಲದಲ್ಲಿ ''ಅಕ್ಕ, ಮರದಲ್ಲಿ ಅಬ್ಳುಕ ಬಿಟ್ಟಿದೆ, ನಾಣಿಲು ಕೂಡಾ ಹಣ್ಣಾಗುತ್ತಿದೆ, ಪುನರ್ಪುಳಿ ಉದುರಲು ಶುರುವಾಗಿದೆ, ಕಾಟು ಮಾವಿನಣ್ಣು ಸಿಕ್ಕಪಟ್ಟೆ ಗಾಳಿಗೆ ಬೀಳುತ್ತಿದೆ, ಆಚೆ ಕಡೆ ಚೋಮುವಿನ ಗಲಾಟೆ ಜೋರಾಗಿದೆ. ನೀನು ಬೇಗನೆ ಬಾ, ಇಲ್ಲದಿದ್ದರೆ ಮಂಗಗಳು ತಿಂದು ಹಾಕುತ್ತವೆ'' ಎಂದು ಚಿಕ್ಕದಾಗಿ ಚೊಕ್ಕವಾಗಿ ಅಂಚೆಕಾರ್ಡೊಂದನ್ನು ಹಾಕುತ್ತಿದ್ದ. ನಾನು ಗಂಟು ಮೂಟೆ ಕಟ್ಟಿ ಅಜಕ್ಕಳವೆಂಬ ಆ ಗೊಂಢಾರಣ್ಯಕ್ಕೆ ಧಾವಿಸುತ್ತಿದ್ದೆ.

ಸಂಜೆಯ ಹೊತ್ತಲ್ಲಿ ಹೊಳೆಗೆ ಹೊರಟರೆ, ಸೀರೆಹೊಳೆಯ ಬೇಲಿಯಲ್ಲಿ ಆಕಾಶದೆತ್ತರಕ್ಕೆ ಬೆಳೆದ ಕಾಟು, ಹೊಳೆಮಾವಿಗೆ ಕಲ್ಲೆಸೆದರೆ, ಒಂದೇ ಏಟಿಗೆ ಹಣ್ಣು, ಕಾಯಿ ಎಲ್ಲವೂ ಪಟ ಪಟನೆ ಉದುರುತ್ತಿದ್ದವು. ನನಗಿದು ಆಗ ಭಾರೀ ಸೋಜಿಗದ ವಿಚಾರ. ನಾನೆಷ್ಟೇ ಪ್ರಯತ್ನಿಸಿದರೂ ನನ್ನ ಕಲ್ಲಿಗೆ ಅಪ್ಪಿ ತಪ್ಪಿ ಮಾವು ಬಿದ್ದರೂ, ಎಲ್ಲೋ ಒಂದೆರಡು. ಇನ್ನು, ಅಲ್ಲೇ ಹೊಳೆಯ ಬದಿ ಇರುವ ನಾಣಿಲು ಮರದ ಚಿಕ್ಕು ಹಣ್ಣಿನಷ್ಟೇ ಪರಿಮಳ ಭರಿತ, ಸಿಹಿಯಿರುವ ಹಣ್ಣುಗಳನ್ನು ತಿಂದು ಕಾಯಿಗಳನ್ನು ಅಕ್ಕಿ ಡಬ್ಬಿಯಲ್ಲಿ ಬೇಗನೆ ಹಣ್ಣಾಗಲು ಇಡುತ್ತಿದ್ದೆವು. ಮಂಗನನ್ನೂ ನಾಚಿಸುವಂತೆ ಚಕಚಕನೆ ಮರ ಹತ್ತುತ್ತಿದ್ದ ವಿಗ್ಗುವಿನ ಕೃಪೆಯಿಂದ ಅಬ್ಳುಕ, ಪುನರ್ಪುಳಿ, ಚಿಕ್ಕು... ಎಲ್ಲವೂ ಧಾರಾಳವಾಗಿ ದಕ್ಕುತ್ತಿತ್ತು. ಒಟ್ಟಾರೆ, ಅವನು ನನ್ನ ಜೊತೆಗಿದ್ದರೆ, ಆಸೆಪಟ್ಟಿದ್ದೆಲ್ಲ ತಕ್ಷಣ ಕೈಗೆ ನಿಲುಕುತ್ತಿದ್ದವು!

ಇನ್ನು ಸಂಜೆ ಲಗೋರಿ ಆಡಲು ಹೊರಟರೆ, ಊರಿನಲ್ಲಿದ್ದ ಮಕ್ಕಳೆಲ್ಲ ಒಂದು ತಂಡವಾದರೆ, ಈತನೊಬ್ಬನದೇ ಒಂದು ತಂಡ. ಆದರೆ, ಗೆಲ್ಲುತ್ತಿದ್ದುದೂ ಅವನೇ. ರಾತ್ರಿ ಅಶೋಕಣ್ಣನ ಮನೆಯಿಂದ ಅಪರೂಪಕ್ಕೊಮ್ಮೆ ಅನಂತನಾಗ್-ಲಕ್ಷ್ಮಿ ಅಭಿನಯದ 'ನಾ ನಿನ್ನ ಬಿಡಲಾರೆ' ಚಿತ್ರ ನೋಡಿ ಹೆದರಿ ಗುಡ್ಡ ಹತ್ತಿ ಮನೆಗೆ ಮರಳುತ್ತಿದ್ದಾಗ, ರಾತ್ರಿ ಹತ್ತರ ಗಾಢಾಂಧಕಾರದಲ್ಲಿ ಬರೀ ಚಂದ್ರನ ಬೆಳಕಿನಲ್ಲಿ ಜೊತೆಯಾಗಿ ಹೆಜ್ಜೆ ಹಾಕುತ್ತಿದ್ದೆವು. ನಾನು ಹಿಂದಿನಿಂದ ಭೂತ-ಗೀತ ಬಂದೀತೋ ಎಂದು ಹೆದರಿ, ನಮ್ಮದೇ ಕಾಲಿನಿಂದ ಹೊರಟ ತರಗೆಲೆ ಶಬ್ದಕ್ಕೂ ನಾನು ಹೆದರುತ್ತಿದ್ದರೆ, ಈ ತಮ್ಮ ಧೈರ್ಯದಿಂದ ಕತ್ತಲಲ್ಲಿ ಹೆಜ್ಜೆ ಹಾಕುತ್ತಿದ್ದ! ಹೀಗಾಗಿಯೇ ಆಗೆಲ್ಲ ನನಗೆ ಈತ ಹೀರೋ ಆಗಿ ಕಂಡಿದ್ದರಲ್ಲಿ ಆಶ್ಚರ್ಯವಿಲ್ಲ.

ಮಳೆಗಾಲದಲ್ಲಿ ಸೀರೆ ಹೊಳೆಯನ್ನು ದೋಣಿಯಲ್ಲಿ ದಾಟಿ ನಾಲ್ಕಾರು ಮೈಲಿ ದೂರದ ಶಾಲೆಗೆ ಹೋಗುತ್ತಿದ್ದ ಈ ವಿಗ್ಗು, ಊಟಕ್ಕೆ ಕೂತರೂ ನನ್ನನ್ನು ಮೀರಿಸುತ್ತಿದ್ದ. ದೊಡ್ಡಮ್ಮ ಒಲೆ ಮುಂದೆ ಕೂತು ಮಾಡುತ್ತಿದ್ದ ಒಂದೊಂದೇ ನೀರುದೋಸೆಯನ್ನು ನಾನು ಎರಡು ತಿನ್ನುವಷ್ಟರಲ್ಲಿ ನಾಲ್ಕು ಮುಗಿಸುತ್ತಿದ್ದ. ಆಗ ಮಾತ್ರ ನನಗೆ ಈತ ಬಾಲಮಂಗಳದ ಶಕ್ತಿಮದ್ದಿನ ಸಾಕ್ಷಾತ್ ಲಂಬೋದರನ ಥರ ಕಾಣುತ್ತಿದ್ದ. ಇನ್ನು ರಾತ್ರಿಯಾದರೆ ಸಾಕು, ದೊಡ್ದಪ್ಪನ 'ನಿಂಗ ಅಟ್ಟಕ್ಕೆ ಕಿಚ್ಚು ಹಿಡುಸುತ್ತಿ ನೋಡಿ' ಎಂಬ ಬೈಗುಳಕ್ಕೂ ಬಗ್ಗದೇ, ಸೀಮೆಎಣ್ಣೆ ದೀಪ ಹಿಡಿದು, ಅಡಿಕೆ ಮರದ ಸಲಾಕೆಯ ಏಣಿ ಹತ್ತಿ ಅಟ್ಟ ಸೇರಿ ಹಳೆಯ ಬಾಲ ಮಂಗಳ, ಚಂಪಕ, ದೊಡ್ಡಮ್ಮನ ಕರ್ಮವೀರ ಎಲ್ಲ ಓದಿ ಮುಗಿಸುತ್ತಿದ್ದೆವು. 

ಆಗೆಲ್ಲಾ ಜೊತೆಯಾಗಿ ಸೇರಿ ಸ್ಪರ್ಧೆಗಿಳಿದಂತೆ, ಡ್ರಾಯಿಂಗು ಪುಸ್ತಕದಲ್ಲಿ ಡಿಂಗನ ಚಿತ್ರಗಳನ್ನು ಬರೆದದ್ದೇ ಬರೆದದ್ದು. ಈಗ ಈ ಡಿಂಗ ಚಿತ್ರಕಲಾ ಪರಿಷತ್ತಿನಲ್ಲಿ ಓದಿ ತನ್ನ ಕನಸನ್ನು ನನಸಾಗಿಸಿದ್ದಾನೆ. ಜೊತೆಗೆ ನನ್ನ ಕನಸನ್ನೂ ಕೂಡಾ!

ಈಗ ಆ ಅಜಕ್ಕಳದ ಜೋಪಡಿ ಇಲ್ಲ. ಕದಿಯಲು ಕಾಟು ಮಾವಿನ ಮರವೂ ಅಲ್ಲಿಂದ ಕಾಣೆಯಾಗಿದೆ. ಹಿನ್ನೆಲೆಯಾಗಿ ಬರುತ್ತಿದ್ದ ಚೋಮುವಿನ ಗದರಿಕೆ ಕೇಳಲು ಚೋಮು ಕೂಡಾ ಇಹಲೋಕದಲ್ಲಿಲ್ಲ. ಆದರೆ, ಸೀರೆ ಹೊಳೆ ಅಲ್ಲೇ ಇದೆ. ಬೇಸಿಗೆಯಲ್ಲಿ ಬರಿದಾಗಿ, ಮಳೆಗಾಲದಲ್ಲಿ ಅಂದಿನ ಹಾಗೆ ತುಂಬಿ ಹರಿಯುತ್ತದೆ. ತೀರದಲ್ಲಿ ನಾಣಿಲು, ಹೊಳೆಮಾವು ಖಂಡಿತ ಈಗಲೂ ಇದೆ. ಕಾಡಿನಲ್ಲಿ ಅಬ್ಳುಕವೂ ನಮ್ಮ ಪುಣ್ಯಕ್ಕೆ ಹುಡುಕಿದರೆ ಸಿಗಬಹುದು. ಒಮ್ಮೆ ಹಾಗೆಯೇ ಮತ್ತೆ ಈ ಎಲ್ಲ ಕೆಲಸದ ಜಂಜಡ ಬಿಟ್ಟು ಅಂದಿನ ಹಾಗೆ ತಿರುಗಾಡುವಾಸೆ. ಹೇ ವಿಗ್ಗು, ನೀ ಮತ್ತೆ ನನ್ನ 'ಕಾಡಿನ ಕಿಟ್ಟ' ಆಗ್ತೀಯಾ…?

(ಫೋಟೋ ಕೃಪೆ- wallcoo.net)