Thursday, October 11, 2012

ಪಳೆಯುಳಿಕೆಗಳ ಸಾಗರ ಲಾಂಗ್ಝಾ


ಆ ಇಬ್ಬರು ಮಹಿಳೆಯರು ತಮ್ಮ ಮಡಿಲಲ್ಲಿ ಐದಾರು ಬಸವನಹುಳುವಿನಂಥ ರಚನೆಯಿದ್ದ ಪಳೆಯುಳಿಕೆಯನ್ನು (ಫಾಸಿಲ್) ತಂದು ಆ ಬೌದ್ಧ ವಿಹಾರದ ಗೋಡೆಯ ಬಳಿ ಹರವಿದರು. ಅವರ ಮುಖದಲ್ಲಿ ಆವತ್ತಿಗೆ ಎಷ್ಟು ದುಡ್ಡು ಸಿಗಬಹುದೆಂಬ ಆಶಾಭಾವನೆಯಿತ್ತು. ನನಗೋ, ಒಬ್ಬಾಕೆಯ ಮುಖದ ನಿರಿಗೆಗಳಲ್ಲಿ ಇಣುಕುತ್ತಿದ್ದ ಮುಗ್ಧತೆಯನ್ನು ನನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ತವಕ. ಕ್ಯಾಮರಾಗಳ ಕ್ಲಿಕ್ಕುಗಳು ಇತ್ತೀಚೆಗೆ ಸಾಮಾನ್ಯವಾದರೂ ಆಕೆಯ ಮೊಗದಲ್ಲಿ ನಾಚಿಕೆ.

ಅದು ಲಾಂಗ್ಝಾ. ಹಿಮಾಲಯದ ತಪ್ಪಲಿನ ಪುಟ್ಟ ಹಳ್ಳಿ. ಹಿಮಾಚಲ ಪ್ರದೇಶದ ಮೂಲೆಯ ಲಾಹೋಲ್ ಮತ್ತು ಸ್ಪಿತಿ ಜಿಲ್ಲೆಯ ಹಳ್ಳಿಯಿದು. ಕೇವಲ 148 ಮಂದಿ ಜನಸಂಖ್ಯೆ ಇರುವ, ಹೆಚ್ಚೆಂದರೆ ಹತ್ತಿಪ್ಪತ್ತು ಸಂಸಾರಗಳಿರುವ ಹಳ್ಳಿಯೆಂದರೆ ತೀರಾ ಹಳ್ಳಿ. ಬೆನ್ನಿಗೆ ವರ್ಷಪೂರ್ತಿ ಹಿಮದಿಂದ ಆವೃತವಾಗಿರುವ ಚೌ ಚೌ ಕಂಗ್ ನೀಲ್ಡಾ ಹಾಗೂ ಶಿಲಾ ಬೆಟ್ಟಗಳ ಕಣ್ಗಾವಲು. ಜೊತೆಗೆ, ಕಾಪಾಡಲು ಆಕಾಶಕ್ಕೇ ಮೊಗವೆತ್ತಿ ನಿಂತ ವರ್ಣಮಯ 22 ಅಡಿ ಎತ್ತರದ ಬೃಹತ್ ಮೆಡಿಸಿನ್ ಬುದ್ಧನ ವಿಗ್ರಹ. ಸದಾ ಹಬ್ಬದ ಸಂಕೇತದಂತೆ ಪ್ರವಾಸಿಗರನ್ನು ಚುಂಬಕದಂತೆ ಸೆಳೆಯುವ ಬಣ್ಣ ಬಣ್ಣದ ಪತಾಕೆಗಳ ಮೆರುಗು.

ನಮ್ಮ 10 ದಿನಗಳ ಸ್ಪಿತಿ ಕಣಿವೆ ಪ್ರವಾಸದಲ್ಲಿ, ಹೊತ್ತಿಗೊಮ್ಮೆ ಬಣ್ಣ ಬದಲಾಯಿಸುವ ಮೈನವಿರೇಳಿಸುವ ಚಂದ್ರತಾಲ್ ಸರೋವರದ ನಡುಗುವ ಚಳಿಯ ರಾತ್ರಿ, ಕೀ, ಢಂಕರ್, ಟಾಬೋ ಬೌದ್ಧ ವಿಹಾರಗಳು, ಪಿನ್ ಕಣಿವೆಯ ಬೌದ್ಧ ಉತ್ಸವಗಳಿಗಿಂತಲೂ ನನ್ನನ್ನು ತೀವ್ರವಾಗಿ ಕಾಡಿದ್ದು, ಲಾಂಗ್ಝಾವೆಂಬ ಈ ಪುಟ್ಟ ಹಳ್ಳಿ. ಆ ಹಳ್ಳಿಯ ಜನರ ಮುಖದ ನಿರಿಗೆಗಳಲ್ಲಿ ಕಾಣುವ ಅಕ್ಕರೆ, ಜೀವನ ಪ್ರೀತಿ, ಬಿಸಿಲಿನ ಝಳಕ್ಕೆ ಸುಟ್ಟ ಎಳಸು ಚರ್ಮಗಳ ಪುಟ್ಟ ಮಕ್ಕಳ ದುಂಡು ಮುಖಗಳು, ಅಪರಿಚಿತರನ್ನು ಕಂಡಾಗ ಕೈಯಲ್ಲಿ ಫಾಸಿಲ್ ಹಿಡಿದು ಓಡೋಡಿ ಬಂದು ತೋರಿಸುವ ಮಕ್ಕಳು- ಮುದುಕಿಯರು...

ಸ್ಪಿತಿ ಕಣಿವೆಯ ಕಾಝಾ ಪಟ್ಟಣದಿಂದ ಈ ಹಳ್ಳಿಗೆ 10 ಕಿಮೀ ದೂರವಾದರೂ, ಪರ್ವತ ಶಿಖರಗಳನ್ನು ಸುತ್ತಿ ಬಳಸಿ ಕಿರಿದಾದ ದುರ್ಗಮ ರಸ್ತೆಯ ಮೂಲಕ ಅಲ್ಲಿಗೆ ತಲುಪಲು ಕನಿಷ್ಟ ಒಂದು ಗಂಟೆಯಾದರೂ ಬೇಕು. ಕಾಝಾದಿಂದ ಮೇಲೇರುತ್ತಿದ್ದಂತೆಯೇ ಸಾಲು ಬೆಟ್ಟಗಳ ನಡುವೆ ಬಣ್ಣದ ಚುಕ್ಕಿಯಂತೆ ಗೋಚರಿಸುವ ಬೃಹತ್ ಬುದ್ಧನ ವಿಗ್ರಹ ನಾವು ಕ್ರಮಿಸಬೇಕಾದ ದೂರವನ್ನು ಸಾರಿ ಹೇಳಿದಂತಿತ್ತು. ಗಂಟೆ ಐದಕ್ಕೇ ನೆತ್ತಿಯ ಮೇಲೆ ಸುಡುವಂಥ ಸೂರ್ಯನ ಪ್ರಖರ ಬೆಳಕು, ರಾತ್ರಿ ಗಂಟೆ ಎಂಟಾದರೂ ಮುಳುಗದ ಸೂರ್ಯ... ಹೀಗೆ ಸೂರ್ಯನೇ ದಿನವಿಡೀ ನೆತ್ತಿಯ ಮೇಲಿರುವುದರಿಂದಲೇ ಆಡುವ ಮಕ್ಕಳ ಕೆನ್ನೆ, ಮೂಗಿನಲ್ಲಿ ಕಿತ್ತು ಹೋದ ಚರ್ಮ ನೋಡುವಾಗ ಏನೋ ವೇದನೆ.

ಜೊತೆಗೇ ಇದ್ದ ಇನ್ನೊಬ್ಬಾಕೆ ನಮ್ಮನ್ನು ತನ್ನ ಮನೆಗೆ ಸ್ವಾಗತಿಸಿದಳು. ಬಣ್ಣಬಣ್ಣದ ಪತಾಕೆಗಳಿರುವ ದೂರದಿಂದ ನೋಡಿದರೆ ಬೆಂಕಿಪೊಟ್ಟಣಗಳಂಥ ಒಂದೇ ಥರದ ಈ ಮನೆಗಳು ಮೊದಲಿನಿಂದಲೂ ನನ್ನ ಕುತೂಹಲ ಕೆರಳಿಸಿದ್ದವು. ಹೊರಗಿನಿಂದ ದೊಡ್ಡ ಮನೆಯಂತೆ ಕಂಡರೂ ಒಳಗೆ ಹೋಗಲು ಪುಟ್ಟ ಗೂಡಿನಂಥ ಬಾಗಿಲು. ಬಾಗಿಲು ದಾಟಿ ಒಳ ಹೊಕ್ಕರೆ, ಮೇಲಕ್ಕೇರಲು ಏಣಿ. ನನಗೋ ಸಣ್ಣವಳಾಗಿದ್ದಾಗ ಕಾಗಕ್ಕ- ಗುಬ್ಬಕ್ಕನ ಕಥೆಗಳಲ್ಲಿ ನಾನೇ ಚಿತ್ರಿಸಿಕೊಂಡ ಮನೆಯೊಂದು ಹಠಾತ್ತನೆ ಪ್ರತ್ಯಕ್ಷವಾದಂತೆ ಪುಳಕಗೊಂಡೆ. ಏಣಿ ಹತ್ತಿ ಮೇಲಕ್ಕೇರಿದರೆ, ಆಕೆ ಆಗಲೇ ಚಹಾ ತಯಾರಿಸಲು ಆರಂಭಿಸಿದ್ದಳು. ನಮಗೆ ಅಲ್ಲೇ ಹಾಸಿದ್ದ ಬೆಚ್ಚನೆಯ ದಪ್ಪದ ನೆಲಹಾಸಿನ ಮೇಲೆ ಕೂರಲು ಹೇಳಿದಳು. ಅವಳ ಉಪಚಾರಕ್ಕೆ ಮಂತ್ರಮುಗ್ಧರಾದವರಂತೆ ನಾವು ನೋಡುತ್ತಲೇ ಇದ್ದೆವು. ಅಷ್ಟರಲ್ಲಿ ಟೀ ರೆಡಿ. ಅದೂ ದೊಡ್ಡ ದೊಡ್ಡ ಕಪ್ಪುಗಳಲ್ಲಿ! ಈಗೆಲ್ಲಾ ಬೈಟೂನಲ್ಲೇ ದಿನವಿಡೀ ಕಳೆದುಹೋಗುವ ನಮಗೆ ಮತ್ತೆ ನಮ್ಮೂರಿನ ಮಳೆಗಾಲದ ದಿನಗಳು ನೆನಪಾಗತೊಡಗಿತ್ತು.

ಟೀ ಕಪ್ಪು ಬಾಯಿಗಿಡುವಷ್ಟರಲ್ಲಿ, ನಮ್ಮ ಮುಂದೆ ‘ತಿರಿ’ ಇತ್ತು. ದಕ್ಷಿಣ ಭಾರತೀಯರಾದ ನಮಗೆ ದೋಸೆ-ಇಡ್ಲಿ ಹೇಗೆ ಬೆಳಗ್ಗಿನ ಆರಾಧ್ಯ ದೈವವೋ ಹಾಗೇ ಅವರಿಗೆ ತಿರಿ. ಅದು ಹೆಚ್ಚು ಕಡಿಮೆ ನಾನ್ ನಂತಿದೆ. ಆದರೆ ಅದಕ್ಕಿಂತಲೂ ಮೆತ್ತಗೆ. ಅಷ್ಟರಲ್ಲಿ ಆಟವಾಡಿ ಓಡಿಬಂದ ಆಕೆಯ ಮಕ್ಕಳೂ ಕೂಡಾ ನಮ್ಮ ಪಕ್ಕದಲ್ಲೇ ಕೂತು ಮೊಸರಿನಲ್ಲಿ ಅದ್ದಿ ಅದ್ದಿ ತಿರಿ ತಿನ್ನತೊಡಗಿದರು.

ತಿಂದಾದ ಮೇಲೆ ಆಕೆ ನಮ್ಮನ್ನು ತುಂಬು ಮೊಗದಿಂದ ಬೀಳ್ಕೊಟ್ಟಳು. ಹೊರ ಬಂದಾಗ ನೆತ್ತಿ ಸುಡುತ್ತಿತ್ತು. ಆಮೇಲೆ ನಮ್ಮ ಗೈಡ್ ತಶಿ ಮೂಲಕ ತಿಳಿಯಿತು, ಪ್ರತಿ ಮನೆಯ ಮೇಲಿರುವ ಬಣ್ಣದ ಪತಾಕೆಗಳೂ ಕೂಡಾ ಆ ಮನೆಯಲ್ಲಿ ಎಷ್ಟು ಸದಸ್ಯರಿದ್ದಾರೆಂಬುದರ ಸಂಕೇತವಂತೆ. ಆರು ಬಣ್ಣದ ಬಾವುಟಗಳಿದ್ದರೆ, ಆ ಮನೆಯಲ್ಲಿ ಆರು ಮಂದಿಯಿದ್ದಾರೆಂದು ಅರ್ಥ. ಮನೆಯ ಪ್ರತಿ ಸದಸ್ಯನಿಗೂ ಒಂದೊಂದು ಬಣ್ಣ. ಇವೆಲ್ಲವನ್ನೂ ಬೌದ್ಧ ಗುರುಗಳು ಮನೆಯ ಯಜಮಾನನಿಗೆ ನೀಡುತ್ತಾರೆ. ಈ ಬಣ್ಣಗಳೆಂದರೆ ಅವರಿಗೆ ಅದೃಷ್ಟದ ಸಂಕೇತ.

ನಾವು ಸೀದಾ ಬೌದ್ಧ ವಿಹಾರದೊಳಗೆ ಹೋದೆವು. ಪುಟ್ಟ ಗೂಡಿನಂತಿದ್ದ ಆ ಬೌದ್ಧ ವಿಹಾರ ತನ್ನ ವಿಶಿಷ್ಟವಾದ ಬಣ್ಣಗಳಿಂದ ಬೇರೆಯವುಗಳಿಗಿಂತ ಭಿನ್ನವಾಗಿ ಕಾಣುತ್ತಿತ್ತು. ಲಾಂಗ್ಝಾ ಬೌದ್ಧ ವಿಹಾರ ಮೆಡಿಸಿನ್ ಬುದ್ಧನ ವಿಗ್ರಹದ ಪಕ್ಕದಲ್ಲೇ ಇದೆ. 22-25 ಅಡಿ ಎತ್ತರದ ಬುದ್ಧನ ವಿಗ್ರಹ ಕಾಝಾದ ಕಡೆಗಿನ ಕಣಿವೆಗಳನ್ನು ಎವೆಯಿಕ್ಕದೆ ದೃಷ್ಟಿಸುವಂತಿದೆ. ಬುದ್ಧನ ಎಡಗೈಯು ಧ್ಯಾನಮುದ್ರೆಯಲ್ಲಿದ್ದು, ಒಂದು ಬೋಗುಣಿ ತುಂಬಾ ಅಮೃತವನ್ನು ಹಿಡಿದಿರುವಂತೆ ಕೆತ್ತಲಾಗಿದೆ. ಪ್ರಪಂಚವಿಡೀ ಆರೋಗ್ಯದಿಂದಿರಲಿ ಎಂಬುದು ಇದರ ಒಳಾರ್ಥವಂತೆ. ಈ ಮೆಡಿಸಿನ್ ಬುದ್ಧನ ಬಳಿಯಲ್ಲಿ ಧ್ಯಾನ ಮಾಡಿದರೆ, ಮಾನಸಿಕ ದೈಹಿಕ ಆರೋಗ್ಯ ಪ್ರಾಪ್ತಿಯಾಗುವುದೆಂದು ನಂಬಿಕೆಯಿದೆ.

ಪಳೆಯುಳಿಕೆಗಳ ಸಾಗರ!: ಸಮುದ್ರಮಟ್ಟದಿಂದ 4,200 ಮೀಟರ್ (ಸುಮಾರು 14,000 ಅಡಿ) ಎತ್ತರದಲ್ಲಿರುವ ಲಾಂಗ್ಝಾ ಎಂಬ ಈ ಹಳ್ಳಿ ಒಂದು ವಿಚಿತ್ರವಾದ ಭೌಗೋಳಿಕ ಪ್ರದೇಶ. ಇಡೀ ಸ್ಪಿತಿ ಕಣಿವೆ ಪ್ರದೇಶದಲ್ಲಿಯೇ ಅತ್ಯಂತ ಸುಂದರವಾದದ್ದೂ ಕೂಡಾ. ಹಾಗೆ ನೋಡಿದರೆ ಈ ಪುಟ್ಟ ಹಳ್ಳಿಯೇ, ಇಡೀ ಹಿಮಾಲಯದ ಜೀವವಿಕಾಸಕ್ಕೊಂದು ಕಿಟಕಿಯಿದ್ದಂತೆ. ಭೂಗರ್ಭ ಶಾಸ್ತ್ರಜ್ಞರ ಪ್ರಕಾರ, ಮಿಲಿಯಗಟ್ಟಲೆ ವರುಷಗಳ ಹಿಂದೆ, ನಮ್ಮ ಭೂಮಿ ಎರಡೇ ಎರಡು ಬೃಹತ್ ಖಂಡಗಳನ್ನು ಹೊಂದಿದ್ದಾಗ, ಅವುಗಳ ಘರ್ಷಣೆಯಿಂದ ಹಿಮಾಲಯ ಪರ್ವತ ಶ್ರೇಣಿಯೇ ಉಗಮವಾದ ಕಥೆ ಬಹುತೇಕರಿಗೆ ತಿಳಿದಿರಬಹುದು. ಹೀಗೆ ಹಿಮಾಲಯ ಉಗಮವಾದ ಸಂದರ್ಭ, ಅದಕ್ಕೂ ಮೊದಲು ಸಾಗರದಡಿಯಲ್ಲಿದ್ದ ಭೂಭಾಗವೇ ಈ ಸುತ್ತಮುತ್ತಲ ಪ್ರದೇಶ. ಇಂತಹ ಸಂದರ್ಭ, ಇದ್ದಂತಹ ಜೀವಿಗಳೇ ಇಂದು ಪಳೆಯುಳಿಕೆಗಳಾಗಿವೆ. ಯಥೇಚ್ಛವಾಗಿ ಪಳೆಯುಳಿಕೆಗಳು ಕಂಡು ಬರುವ ಲಾಂಗ್ಝಾವೆಂಬ ಈ ಪುಟ್ಟ ಹಳ್ಳಿ, ನಾವು ಓದಿ-ಕೇಳಿ ಅರಿತುಕೊಂಡ ಜೀವವಿಕಾಸದ ಹಾದಿಗೊಂದು ಜ್ವಲಂತ ಸಾಕ್ಷಿಯೆಂಬಂತೆ ಕಂಡರೆ ಆಶ್ಚರ್ಯವಿಲ್ಲ. ಹಾಗಾಗಿಯೇ, ಇದು ಭೂಗರ್ಭಶಾಸ್ತ್ರ ವಿದ್ಯಾರ್ಥಿಗಳಿಗೂ ಸಂಶೋಧನಾಸಕ್ತರಿಗೂ ಸ್ವರ್ಗ. ಈ ಹಳ್ಳಿಯಲ್ಲಿ ಈಗಲೂ ಸಾಕಷ್ಟು ಪಳೆಯುಳಿಕೆಗಳು ಸಿಗುತ್ತಲೇ ಇರುತ್ತವೆ. ಬಸವನಹುಳು, ಆಮೆ... ಹೀಗೆ ಇನ್ನೇನೋ ಬಗೆಬಗೆಯ ಆಕಾರಗಳಲ್ಲಿ ಪಳೆಯುಳಿಕೆಗಳನ್ನು ಇಲ್ಲಿ ಕಾಣಬಹುದು. ನಮ್ಮ ಗೈಡ್ ತಶಿ ಪ್ರಕಾರ, ಮೊದಲೆಲ್ಲ ನಡೆದಲ್ಲೆಲ್ಲ ಕಾಣಸಿಗುತ್ತಿದ್ದ ಪಳೆಯುಳಿಕೆಗಳು ಈಗ ಪ್ರವಾಸಿಗರು ಹೊತ್ತೊಯ್ಯುತ್ತಿರುವ ಕಾರಣದಿಂದ ಕಡಿಮೆಯಾಗುತ್ತಿವೆ ಎಂದರು.

ಲಾಂಗ್ಝಾದ ಹಳ್ಳಿಗರು ಬೇಸಗೆಯಲ್ಲಿ ಗೋಧಿ, ಆಲೂಗಡ್ಡೆ, ಬಟಾಣಿ ಬೆಳೆಯನ್ನು ಬೆಳೆಯುತ್ತಾರೆ. ಉಳಿದಂತೆ, ಹೈನುಗಾರಿಗೆ, ವ್ಯಾಪಾರ, ನೇಯ್ಗೆ ಇವರ ಇತರ ಕಸುಬುಗಳು. ಸುತ್ತಲೂ ಕಾವಲಿರುವ ಹಿಮಬೆಟ್ಟಗಳು ಕರಗಿ ಬರುವ ನೀರನ್ನು ನಾಲೆಯ ಮೂಲಕ ತಮ್ಮ ಗದ್ದೆಗಳಿಗೆ ಹರಿಸಿ ಬೆವರು ಸುರಿಸಿ ಬೇಸಾಯ ಮಾಡುತ್ತಾರೆ. ಯಾಕ್ ಗಳ ಜೊತೆಗೆ, ಹಸು ಹಾಗೂ ಯಾಕ್ ಗಳೆರಡರ ಹೈಬ್ರಿಡ್ ತಳಿಯಾದ ಝೋ ಎಂಬ ಜಾನುವಾರುಗಳು ಇಲ್ಲಿನ ಜನರಿಗೆ ಕೃಷಿ ಚಟುವಟಿಕೆಗಳಿಗೆ ನೆರವಾಗುತ್ತವೆ. ಚಳಿಗಾಲದಲ್ಲಿ ಈ ಹಳ್ಳಿ ತನ್ನ ಸುತ್ತಮುತ್ತಲಿನ ಎಲ್ಲಾ ಹಳ್ಳಿಪಟ್ಟಣಗಳಿಂದಲೂ ವಾಹನ ಸಂಪರ್ಕವನ್ನು ಕಳೆದುಕೊಳ್ಳುತ್ತದೆ. ಏನೇ ಆದರೂ ದಟ್ಟ ಹಿಮದ ನಡುವೆ ಕಾಲುದಾರಿ ಮಾಡಿಕೊಂಡು ನಡೆದೇ ಸಾಗಬೇಕಾದ ಕಷ್ಟ.

ಪರ್ವತ ರಾಜಕುಮಾರಿಯ ಕಥೆ!: ಲಾಂಗ್ಝಾದಿಂದ ಕತ್ತೆತ್ತಿ ನೋಡಿದರೆ ಪ್ರಮುಖವಾಗಿ ಕಾಣುವ ಬೆಟ್ಟ ಚೌಚೌ ಕಂಗ್ ನೀಲ್ಡಾ. ಈ ಬೆಟ್ಟದ ಮೇಲೆ ಅಲ್ಲಿನ ನಿವಾಸಿಗಳಿಗೆ ಭಯ ಭಕ್ತಿ. ಈ ಬೆಟ್ಟದ ಚಾರಣ ತುಂಬ ಕ್ಲಿಷ್ಟಕರವಾದದ್ದಂತೆ. ಅಲ್ಲಿಯ ನಿವಾಸಿಗಳು ಹೇಳುವಂತೆ, ಅಲ್ಲಿನ ಬೋಟಿ ಭಾಷೆಯಲ್ಲಿ, ಚೌ ಚೌ ಎಂದರೆ ಪುಟ್ಟ ಹುಡುಗಿ ಅಥವಾ ರಾಜಕುಮಾರಿ ಎಂದರ್ಥ. ಕಂಗ್ ಎಂದರೆ ಹಿಮ ಮುಚ್ಚಿದ ಪರ್ವತಗಳು. ನೀ ಅಥವಾ ನೀಮಾ ಎಂದರೆ ಸೂರ್ಯ ಹಾಗೂ, ದಾ ಅಥವಾ ದಾವಾ ಎಂದರೆ ಚಂದ್ರ. ಹಾಗಾಗಿ ಇದರರ್ಥ, ಸದಾ ಸೂರ್ಯಚಂದ್ರರ ಬೆಳಕಿನಲ್ಲಿ ಹೊಳೆಯುವ ಹಿಮ ಮುಚ್ಚಿದ ಪರ್ವತ ರಾಜಕುಮಾರಿ!

ಇದರ ಹಿನ್ನೆಲೆಗೊಂದು ಜಾನಪದ ಕಥೆಯೂ ಇದೆ. ಲಾಂಗ್ಝಾದ ಹಳ್ಳಿಗನೊಬ್ಬ ಕೆಲಸ ಮಾಡಿ ಹೊಟ್ಟೆ ಹೊರೆದುಕೊಳ್ಳುದಕ್ಕಿಂತ ಹೆಚ್ಚು, ತನ್ನ ಪ್ರಿಯ ಸಂಗೀತವಾದ್ಯವಾದ ಲೂಟ್ ನುಡಿಸುವುದರಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದ. ಸ್ವಲ್ಪ ಹೆಚ್ಚೇ ಎನ್ನುವಷ್ಟು ಸೋಮಾರಿ ಆತ. ಲಾಂಗ್ಝಾ ಹಳ್ಳಿಗೆ ನೀರು ಹಿಮ ಪರ್ವತಗಳಿಂದ ಹರಿದು ಬರಬೇಕು. ಪ್ರತಿ ಬೇಸಿಗೆ ಹತ್ತಿರ ಬರುತ್ತಿದ್ದಂತೆಯೇ ಹಳ್ಳಿಗರು ಪರ್ವತಗಳಿಗೆ ಹೋಗಿ ನೀರು ಹರಿದು ಬರಲು ಅಡೆತಡೆಗಳಿದ್ದರೆ ಅದನ್ನು ಸರಿಸಿ ಬರಬೇಕು. ಈ ಹಳ್ಳಿಗ ಆ ಕೆಲಸವನ್ನು ಮಾಡಬೇಕಿತ್ತು. ಈತ ಪರ್ವತವೇರಿ ಒಂದು ಕಡೆ ಕೂತು ತನ್ನ ವಾದ್ಯ ಬಾರಿಸಲು ಶುರು ಮಾಡಿದ. ಎಷ್ಟು ತನ್ಮಯವಾಗಿ ಕಣ್ಣು ಮುಚ್ಚಿ ಬಾರಿಸಿದನೆಂದರೆ ತಾನು ಇರುವುದೆಲ್ಲಿ ಎಂಬುದೇ ಆತನಿಗೆ ಮರೆತು ಹೋಗಿತ್ತು. ಬಾರಿಸಿ ಎಚ್ಚೆತ್ತು ನೋಡಿದಾಗ ಆತನೆದುರಿಗೆ ಸುಂದರ ರಾಜಕುಮಾರಿ ನಿಂತಿದ್ದಳು. ಈತ ಬಿಟ್ಟ ಕಣ್ಣು ಹಾಗೇ ಬಿಡಲು, ಆಕೆ ‘ಮತ್ತೊಮ್ಮೆ ನುಡಿಸುವೆಯಾ?’ ಎಂದಳು. ಈತ ತನ್ಮಯನಾಗಿ ನುಡಿಸಿದ. ಆಕೆ, ತಾನು ಚೌ ಚೌ ಕಂಗ್ ನೀಲ್ಡಾ ದೇವತೆಯೆಂದೂ, ತನ್ನ ವಿಚಾರವನ್ನು ಯಾರಿಗೂ ಹೇಳಬೇಡವೆಂದೂ ಹೇಳಿದಳು. ಮತ್ತೆ ಬಂದು ತನಗಾಗಿ ವಾದ್ಯ ನುಡಿಸಬೇಕೆಂದೂ ಕೇಳಿಕೊಂಡಳು. ಒಪ್ಪಿ ಮರಳಿದ ಹಳ್ಳಿಗ ಪ್ರತೀ ಬೇಸಿಗೆಯಲ್ಲೂ ಆಕೆಯೆದುರು ವಾದ್ಯ ನುಡಿಸುತ್ತಿದ್ದ. ಹೀಗೆ ವರುಷಗಳು ಉರುಳಿದವು. ಒಮ್ಮೆ, ಈ ಮೈಗಳ್ಳ ಪತಿಯಿಂದ ರೋಸಿ ಹೋದ ಪತ್ನಿ ಗಂಡನನ್ನು ತರಾಟೆಗೆ ತೆಗೆದುಕೊಂಡಳು. ಕುಡಿದು ಮತ್ತೇರಿದ್ದ ಈತ, ನಿನಗಿಂತ ಚೌ ಚೌ ಕಂಗ್ ನೀಲ್ಡಾಳೇ ವಾಸಿ, ಆಕೆ ನನಗೆ ಕೆಲಸ ಮಾಡೆಂದು ಎಂದೂ ಹೇಳಿಲ್ಲ ಎಂದ. ಮರುದಿನ ಹಾಸಿಗೆಯಿಂದ ಏಳುವಾಗ ಮೈತುಂಬಾ ಗುಳ್ಳೆಗಳು. ಆಗ ಕುಡಿದ ಮತ್ತು ಇಳಿದಿತ್ತು. ಚೌಚೌ ಬಗ್ಗೆ ಯಾರಿಗೂ ಹೇಳಬಾರದೆಂದುಕೊಂಡದ್ದನ್ನೇ ಆತ ಅಮಲಿನಲ್ಲಿ ಹೇಳಿಬಿಟ್ಟಿದ್ದ. ಅದಕ್ಕಾಗಿಯೇ ಹೀಗೆ ಬೊಬ್ಬೆಗಳು ಬಂದಿವೆಯೆಂದು ಆತನಿಗೆ ಅರಿವಾಯಿತು. ಬೊಬ್ಬೆಗಳು ಉಲ್ಬಣಗೊಂಡವು, ಸುಂದರವಾಗಿದ್ದ ಮುಖ ವಿಕಾರವಾಯಿತು. ಆತ ಹಿಮ ಪರ್ವತದ ಕಡೆಗೆ ನಡೆದ. ಆದರೆ, ವಾತಾವರಣದಲ್ಲಿ ತಕ್ಷಣ ಬದಲಾವಣೆಗಳಾಗಿ ಪರ್ವತವೇರಲಾಗಲಿಲ್ಲ. ಆಕೆಯ ದರ್ಶನವೂ ಆಗಲಿಲ್ಲ. ಮರಳಿದ ಆತ ಅದೆಷ್ಟೋ ಬಾರಿ ಮತ್ತೆ ಮತ್ತೆ ಏರಲು ಪ್ರಯತ್ನಿಸಿದ, ಆದರೆ ಆಗಲಿಲ್ಲ. ಚೌ ಚೌ ಮುನಿದಿದ್ದಳು. ಈಗಲೂ, ಆಕೆ ಮುನಿದೇ ಇದ್ದಾಳೆಂಬುದು, ಇಂದಿಗೂ ಇಲ್ಲಿನ ಜನರ ನಂಬಿಕೆ. ಹಾಗಾಗಿ, ಯಾರೇ ಈ ಪರ್ವತವೇರಲು ಪ್ರಯತ್ನಿಸಿದರೂ ಏನಾದರೂ ತೊಂದರೆ ಕಟ್ಟಿಟ್ಟ ಬುತ್ತಿ. ಹಾದಿಯಲ್ಲಿ ವಾತಾವರಣದಲ್ಲಿ ಹಠಾತ್ ಬದಲಾವಣೆಗಳು ಕಟ್ಟಿಟ್ಟ ಬುತ್ತಿಯಂತೆ. ಹಾಗಾಗಿ ಸಾಮಾನ್ಯರಿಗೆ ಈ ಪರ್ವತಕ್ಕೆ ಕಾಲಿಡಲು ಸಾಧ್ಯವಿಲ್ಲವೆಂದು ಹಳ್ಳಿಗರು ಈಗಲೂ ನಂಬುತ್ತಾರೆ.

ಹೋಗೋದು ಹೇಗೆ?: ಹಿಮಾಚಲ ಪ್ರದೇಶದ ಒಂದು ಜಿಲ್ಲೆ ಲಾಹೋಲ್ ಮತ್ತು ಸ್ಪಿತಿ. ಇದು ಹಿಮಾಚಲ ಪ್ರದೇಶದಲ್ಲೇ ಅತೀ ದೊಡ್ಡ ಜಿಲ್ಲೆ ಕೂಡಾ. ಹಿಂದಿದ್ದ ಲಾಹೋಲ್ ಹಾಗೂ ಸ್ಪಿತಿ ಎಂಬ ಎರಡು ಜಿಲ್ಲೆಗಳು ಅಧಿಕೃತವಾಗಿ ಒಂದಾಗಿ ಒಂದೇ ಜಿಲ್ಲೆಯೆನಿಸಿದೆ. ಲಾಹೋಲಿನ ಕೇಲಾಂಗ್ ಎಂಬ ನಗರವೇ ಈ ಜಿಲ್ಲೆಯ ಪ್ರಮುಖ ಆಡಳಿತ ಪ್ರದೇಶವಾಗಿದೆ. ಕುಂಝುಮ್ ಪಾಸ್ ಅಥವಾ ಕುಂಝುಮ್ ಲಾ (ಸಮುದ್ರ ಮಟ್ಟದಿಂದ 4,551 ಮೀ ಅಥವಾ 14,931 ಅಡಿ ಎತ್ತರ) ಸ್ಪಿತಿ ಕಣಿವೆಗೆ ಮಹಾದ್ವಾರವಿದ್ದಂತೆ. ಈ ಕಣಿವೆ ಮನಾಲಿಯಿಂದ ರೋಹ್ತಂಗ್ ಪಾಸ್ ಮೂಲಕ ಸಂಪರ್ಕ ಹೊಂದಿದೆ. ಚಳಿಗಾಲದಲ್ಲಿ ರೋಹ್ತಂಗ್ ಪಾಸ್ ಸೇರಿದಂತೆ ರಸ್ತೆಯೇ ಹಿಮದಿಂದ ಮುಚ್ಚಿಹೋಗುವುದರಿಂದ, ಸ್ಪಿತಿಗೆ ಹೋಗಬೇಕಾದರೆ ಶಿಮ್ಲಾದಿಂದ ಸುತ್ತಿ ಬಳಸಿ ಸಾಗಿ ಇಲ್ಲಿಗೆ ತಲುಪಬಹುದು.

ಸ್ಪಿತಿ ಹಾಗೂ ಲಾಹೋಲ್ ಕಣಿವೆಗಳೆರಡೂ ಬಹಳ ವಿಶಿಷ್ಟವಾದದ್ದು, ಹಾಗೆಗೇ ವಿಭಿನ್ನವಾದದ್ದು ಕೂಡಾ. ಸ್ಪಿತಿ ಕಣಿವೆ ಶೀತ ಮರುಭೂಮಿಯಾಗಿದ್ದು, ಬರಡು ಹಾಗೂ ಕ್ಲಿಷ್ಟಕರವಾದದ್ದು. ಸ್ಪಿತಿ ನದಿ ಹಾಗೂ ಹಿಮ ಕರಗಿ ಇಳಿಯುವ ತೊರೆಗಳೇ ಇಲ್ಲಿಯ ಜೀವಜಲ. ಇಂತಹ ವಿಚಿತ್ರ, ಕ್ಲಿಷ್ಟ ಹಾಗೂ ಅಪರೂಪದ ಪ್ರದೇಶದಲ್ಲಿ ಜೀವನವೂ ಅಷ್ಟೇ ಕಷ್ಟಕರವಾದದ್ದು. ಹಾಗಾಗಿಯೇ ಇದು ಇಡೀ ಭಾರತದಲ್ಲೇ ಮೂರನೇ ಅತಿ ಕಡಿಮೆ ಜನಸಂಖ್ಯೆಯಿರುವ ಜಿಲ್ಲೆ. ಸ್ಪಿತಿಯ ಕೀ, ಟಾಬೋ, ಢಂಕರ್ ಬೌದ್ಧ ವಿಹಾರಗಳು ಸಾವಿರಾರು ವರ್ಷಗಳು ಹಳೆಯವುಗಳು ಹಾಗೂ ಅತಿ ಪುರಾತನವಾದವು.

ಹಿಮಾಚಲ ಪ್ರದೇಶದ ಮನಾಲಿಯಿಂದ ಸ್ಪಿತಿ ಕಣಿವೆಯ ಪ್ರಮುಖ ಪಟ್ಟಣ ಕಾಝಾಕ್ಕೆ ಇರುವ ದೂರ ಸುಮಾರು 210 ಕಿ.ಮೀ.ಗಳು. ಆದರೆ, ಹೈವೇನಲ್ಲಿ ಸಾಗಿದಂತೆ 3-4 ಗಂಟೆಯಲ್ಲಿ ಕಾಝಾ ತಲುಪಬಹುದೆಂದು ಲೆಕ್ಕಾಚಾರ ಹಾಕಿದರೆ, ಅದು ತಲೆಕೆಳಗಾಗುವುದು ಗ್ಯಾರೆಂಟಿ. ಕುಲುವಿನಿಂದ ಬೆಳಗ್ಗಿನ ಜಾವ ದಿನವೂ 3.30ಗೆ ಸರ್ಕಾರಿ ಬಸ್ಸು ಹೊರಡುತ್ತದೆ. ಅದು ಮನಾಲಿಯಿಂದ ಬೆಳಗ್ಗೆ 5ಕ್ಕೆ ಕಾಝಾ ಕಡೆಗೆ ರೋಹ್ತಂಗ್ ಪಾಸ್ ಮೂಲಕ ಸಾಗುತ್ತದೆ. ಹಾದಿ ಅತೀ ದುರ್ಗಮ. ರುದ್ರ ರಮಣೀಯ. ದೈತ್ಯ ಪರ್ವತಗಳಲ್ಲಿ ಹೆಬ್ಬಾವಿನಂತೆ ಸುರುಳಿ ಸುತ್ತಿ ಮಲಗಿರುವ ಏರು ತಗ್ಗಿನ ಕಲ್ಲು ಮುಳ್ಳಿನ ರಾಜ್ಯ ಹೆದ್ದಾರಿ(?!)ಯಲ್ಲಿ ಬಸ್ಸು ಸಾಗುತ್ತದೆ. ಹಾದಿ ಮಧ್ಯೆ ಏನೇ ತೊಂದರೆಗಳಾಗದೆ, ರೋಹ್ತಂಗ್ ಪಾಸ್ ನ ಟ್ರಾಫಿಕ್ಕಿನಲ್ಲಿ ಸಿಕ್ಕಿಹಾಕದಿದ್ದರೆ, ಬಸ್ಸು ಸರಿಯಾಗಿ ಕಾಝಾವನ್ನು ಸಂಜೆ 5ಕ್ಕೆ ತಲುಪುತ್ತದೆ, ಅಂದರೆ, 200 ಕಿ.ಮೀ ಸಾಗಲು ಬರೋಬ್ಬರಿ 12 ಗಂಟೆಗಳು ಬೇಕಾಗುತ್ತವೆ! ಈ ಲಾಂಗ್ಝಾ ಹಳ್ಳಿಯು ಕಾಝಾದಿಂದ ಸುಮಾರು 10 ಕಿ.ಮೀ ದೂರದಲ್ಲಿದೆ.

(ಅಕ್ಟೋಬರ್ 11, 2012ರ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ಬರಹ)