Tuesday, April 14, 2009

ಒಂದು ಬಹಿರಂಗ ಪತ್ರ

ಪ್ರಿಯ...

'ರೇಡಿಯೋ ಸಿಟಿ ೯೧.೧... ಬೆಂಗಳೂರಿನ..' ಅಂತ ಕಿವಿಗಡಚಿಕ್ಕುವ ಸ್ವರ ಹಾಲ್ ನಿಂದ ಬೆಡ್ ರೂಂಗೆ ಬಂದಾಗಲೇ ನಾನು ಹಾಗೆ ಮೆತ್ತಗೆ ಮಗ್ಗುಲು ಬದಲಾಯಿಸುತ್ತಿದ್ದೆ. ಹೋ ಗಂಟೆ ಒಂಬತ್ತಾಯಿತೇ. 10ಕ್ಕೆ ಅಸೈನ್ಮೈಂಟ್ ಇದೆ. ಹೆಚ್ಚೆಂದರೆ ಮನೆಯಿಂದ ಆಫೀಸಿಗೆ ಅರ್ಧ ಗಂಟೆಯಿಲ್ಲದಿದ್ದರೆ ೧೩ ಕಿ.ಮೀ ದೂರಕ್ಕೆ ಜಪ್ಪಯ್ಯ ಅಂದರೂ ಹೋಗಲು ಸಾಧ್ಯವಿಲ್ಲ ಅನ್ನುತ್ತಲೇ, ನಾಳೆಯಿಂದ ಸ್ವಲ್ಪ ಬೇಗ ಏಳಬೇಕು. ಇಲ್ಲವಾದರೆ ಗಡಿಬಿಡಿಯಾಗುತ್ತದೆ. ಟ್ರಾಫಿಕ್ನಲ್ಲಿ ಸಿಕ್ಕಿ ಹಾಕಿಕೊಂಡರಂತೂ ಮುಗೀತು ಅಂತ ನಾನೇ ನನಗೆ ಹೇಳುತ್ತಾ ಹಾಲ್ಗೆ ಬರುತ್ತಿದ್ದೆ. ಆದರೆ, ಪ್ರತಿಸಲವೂ ಬೇಗ ಏಳಬೇಕು ಅನ್ನುತ್ತಲೇ ಇದ್ದರೂ ದಿನಚರಿ ಮಾತ್ರ ಬದಲಾವಣೆ ಕಂಡಿರಲಿಲ್ಲ. ಒಮ್ಮೊಮ್ಮೆ ನೀನು ಫೋನ್ ಮಾಡಿದಾಗ 'ಮಲಗಿದ್ದೀಯಾ' ಅಂತಲೇ ಮಾತು ಆರಂಭಿಸುತ್ತಿದ್ದೆ. ಆದರೇನು ಮಾಡೋಣ, ಮನೆಗೆ ಬರುತ್ತಿದ್ದುದೇ ೧೧, ೧೧.೩೦ ರಾತ್ರಿಗೆ. ಹಾಗಾಗಿ ಇದೆಲ್ಲ ಮಾಮೂಲು ಅಂತ ನಿನಗೂ ಗೊತ್ತು, ನನಗೂ ಗೊತ್ತು.

ಇರಲಿ ಬಿಡು. ಆಗೆಲ್ಲಾ ರಾತ್ರಿ ೧೧ ಗಂಟೆಗೆ ಮನೆಗೆ ಬಂದು ಬಾತ್ರೂಂನಲ್ಲಿ ಬೆಂಗಳೂರಿನ ಚಳಿಗೆ ಬಿಸಿನೀರು ಹೊಯ್ಯುತ್ತಿದ್ದರೆ, ಆಹಾ ಎಂಥಾ ಸುಖ. ಇಡೀ ದಿನದ ಸುಸ್ತೆಲ್ಲ ಬಸಿದುಹೋದ ಅನುಭವ. ಆಮೇಲೆ ಊಟ, ನಂತರ ಯಾವುದೋ ಪುಸ್ತಕವೋ, ಟಿವಿ ನ್ಯೂಸೋ ಆವಾಹನೆಯಾದರೆ ಮುಗೀತು. ರಾತ್ರಿ ಒಂದೋ, ಎರಡೋ ಗಂಟೆ ಗ್ಯಾರೆಂಟಿ. ಹೀಗಾಗಿ ರೇಡಿಯೋಸಿಟಿಗೆ ಬೆಳಗಾದರೂ ನನಗೆ ಬೆಳಗಾಗುತ್ತಿರಲಿಲ್ಲ. ತಮ್ಮ ತಿಂಡಿ ಮುಗಿಸಿ ಆಫೀಸಿಗೆ ಹೊರಡುವ ಸಂದರ್ಭ ಶಿಸ್ತಾಗಿ ಶೂಲೇಸ್ ಕಟ್ಟುವಾಗ ರೇಡಿಯೋ ಸಿಟಿಯ ಗುಂಡಿ ಅಮುಕುತ್ತಿದ್ದ. ಹೀಗಾಗಿ, ಆಗೆಲ್ಲಾ ನನಗೆ ರೇಡಿಯೋ ಸಿಟಿಯೇ ನಿತ್ಯವೂ ಸುಪ್ರಭಾತ ಹಾಡುತ್ತಿತ್ತು. ನಿಧಾನಕ್ಕೆ ಪೇಪರ್ ಮೇಲೆ ಕಣ್ಣಾಡಿಸಿ ನನ್ನ ಪ್ರತಿಸ್ಪರ್ಧಿಗಳ ಬೈಲೈನ್ ಏನಾದರೂ ಇದೆಯೇ, ನನ್ನ ಸ್ಟೋರಿ ಅವರಿಗೆ ಸಿಕ್ಕಿಲ್ಲ ಅಂತ ಖಾತ್ರಿಪಡಿಸಿ ಏನೋ ಘನಾಂದಾರಿ ತೃಪ್ತಿಯಿಂದ ಆಫೀಸಿಗೆ ಹೊರಡುತ್ತಿದ್ದೆ.

ಆದರೆ ಈಗ ಹಾಗಿಲ್ಲ. ಚೆನ್ನೈಯಲ್ಲಿ ಹಾಯಾಗಿದ್ದೇನೆ. 'ಬೆಂಗಳೂರಿನ...' ಅಂತ ರಾಗ ಹಾಡುತ್ತಿದ್ದ ರೇಡಿಯೋ ಸಿಟಿ ಇಲ್ಲಿ ಬೆಳಗಾತ ಎದ್ದು 'ಚೆನ್ನೈಯೋಡ...' ಅಂತ ರಾಗ ಹಾಡುತ್ತದೆ. ವ್ಯತ್ಯಾಸವೇನೂ ಇಲ್ಲ. 'ಅಣ್ಬೇ ಅಣ್ಬೇ ಕೊಲ್ಲಾದೇ..' ಅಂತ ಎಲ್ಲಿಂದಲೋ ತೇಲಿ ಬರುವ ಲಹರಿಯಿಂದ ನಾನು ಎಲ್ಲಿಗೋ ತಪ್ಪಿ ಬಂದಿಳಿದಂತೇನೂ ಅನಿಸುವುದಿಲ್ಲ. ಭಾಷೆ ಯಾವುದಾದರೇನು.. ಕಿವಿ ತಂಪಾದರೆ ಮನಸ್ಸು ಕುಣಿಯುತ್ತದೆ. ಆದರೆ, ವಿಚಿತ್ರವೋ, ವಿಷಾದವೋ ಗೊತ್ತಿಲ್ಲ. ಯಾವ ಚಾನಲ್ ಗುಂಡಿ ಒತ್ತಿದರೂ ಕೇಳುವ ಹಾಡು ನಮ್ಮ ಕನ್ನಡ ನೆಲದ್ದೇ ಅನಿಸುತ್ತದೆ. ಯಾಕೆಂದರೆ, ತಮಿಳಿನ ಪ್ರಸಾದವನ್ನೇ ತಾನೇ ಕನ್ನಡದ ಜನ ಥಿಯೇಟರ್ನಲ್ಲಿ ರಿಮೇಕ್ ಹೆಸರಲ್ಲಿ ನೋಡಿ ಪಾವನರಾಗುತ್ತಿರುವುದು.

ಇದೆಲ್ಲ ನಮ್ಮ ಕನ್ನಡದ ಈಗಿನ ವ್ಯಥೆ, ಹೇಳಿ ಏನು ಪ್ರಯೋಜನ ಅಂತೀಯಾ. ಸರಿ ಬಿಡು. ಆ ವಿಷಯ ಅಲ್ಲಿಗೇ ಬಿಡೋಣ. ಏನೇ ಆದರೂ, ಇಲ್ಲಿ ಎಷ್ಟೇ ಅಡ್ಡಾಡಿದರೂ ನಾನು ದಿನಸಿ ಅಂಗಡಿ ಮುಂದೆ ನಿಂತರೆ ಮಾತ್ರ ಬಾಯಿ ಕಟ್ಟಿದಂತಾಗುತ್ತದೆ. ಅವನಿಗೋ ಇಂಗ್ಲೀಷು, ಹಿಂದಿ ಬರುವುದಿಲ್ಲ. ನನಗೋ ತಮಿಳು ಬರುವುದಿಲ್ಲ. 'ತಮಿಳ್ ತೆರಿಯಾದಾ' ಅಂತ ಆತ ಕೇಳಿದರೆ ಬಾಯಿಯಿಂದ ಪೆಚ್ಚುಮೋರೆಯ ನನ್ನ ಉತ್ತರ ಅವನಿಗೆ ಕಾದಿರುತ್ತದೆ. ಏನೋ ಅಲ್ಪಸ್ವಲ್ಪ ತುಳು ಮಿಕ್ಸ್ ಮಾಡಿ ಕರ್ನಾಟಕದ ಗಡಿಭಾಗದಲ್ಲಿದ್ದುದರಿಂದ ಮಲಯಾಳವನ್ನೂ ಮಿಕ್ಸ್ ಮಾಡಿದರೆ ಮುಗೀತು. ತಮಿಳೇ ಅಲ್ಲದಿದ್ದರೂ, ಅವನಿಗೆ ಅರ್ಥವಾಗುವ ಒಂದು ಭಾಷೆಯಂತೂ ರೆಡಿಯಾಗುತ್ತದೆ.

ಆದರೆ, ಜೇಪಿನಗರ, ಜಯನಗರ, ವಸಂತನಗರ, ಶಿವಾಜಿನಗರ ಅಂತೆಲ್ಲ ಹೊರಳುತ್ತಿದ್ದ ನಾಲಿಗೆ ಮಾತ್ರ ಯಾಕೋ ನನ್ನ ಜತೆ ಇಲ್ಲಿ ಸಹಕರಿಸುತ್ತಿಲ್ಲ ಪ್ರಿಯ. ವಡಪಳನಿ, ಅಂಜಿಗೆರೆ, ಎಗ್ಮೋರ್, ಮಾಂಬಳಂ, ನುಂಗಂಬಾಕಂ, ಪರಶುವಾಕಂ, ಚೂಲೆಮೇಡು, ಕೋಡಂಬಾಕಂ ಅನ್ನುವಾಗ ಹೋಟೆಲ್ಲಿನ ಮೆನು ಲಿಸ್ಟಿನಂತೆ ನನ್ನನ್ನು ಸಿಕ್ಕಾಪಟ್ಟೆ ಕನ್ಫ್ಯೂಸ್ ಮಾಡಿ ಹಾಕುತ್ತದೆ. ಮಾಂಬಳದ ನೆನಪೂ ಎಲ್ಲೋ ಕಾಡಿದಂತಾಗಿ ಬಾಯಲ್ಲೂ ನೀರೂರುತ್ತದೆ. ನುಂಗಂಬಾಕಂ ಅನ್ನಲು ಹೋಗಿ ಗಡಿಬಿಡಿಯಲ್ಲಿ ನುಂಬಂಗಾಪಂ ಅಂದುಬಿಟ್ಟು ನನ್ನ ನಾಲಿಗೆಯೇ ಕಚ್ಚಿಕೊಳ್ಳಬೇಕಾಗುತ್ತದೆ.

ಇನ್ನು ಬೆಳಗ್ಗೆ ಆಫೀಸಿಗೆ ನನ್ನ ಕರ್ನಾಟಕ ನೋಂದಣಿಯ ಗಾಡಿಯಲ್ಲಿ ಹೋಗುವ ಮಜಾವೇ ಬೇರೆ ಪ್ರಿಯ. ಎಲ್ಲ ಟಿಎನ್ ಗಾಡಿಗಳ ಮಧ್ಯೆ ನನ್ನದೊಂದು ಕೆಎ. ಬೆಂಗಳೂರಿನ ತಂಪಿನಲ್ಲಿ ಕಿವಿಯನ್ನೂ ಮುಚ್ಚಿ ಹೆಲ್ಮೆಟ್ ಏರಿಸಿ ಹೋಗುತ್ತಿದ್ದರೆ ಏನೋ ಖುಷಿ. ಇಲ್ಲಿ ಬೆಳ್ಳಂಬೆಳಗ್ಗೆಯೇ ಹಣೆಯಿಂದ ತೊಟ್ಟಿಕ್ಕುವ ಬೆವರ ಜಲಧಾರೆಯ ತಂಪಿನಲ್ಲಿ ಹೆಲ್ಮೆಟ್ ಮುಚ್ಚಿ ಆಫೀಸು ಬಂದಾಗ ತೆಗೆಯುವಾಗ ಆಹಾ ಅನ್ನುವ ಖುಷಿಯ ಉದ್ಗಾರವೇ ಇನ್ನೊಂದು ಖುಷಿ. ಒಂದಕ್ಕೊಂದು ತುಂಬಾ ಸಾಮ್ಯತೆ ಅಂತೀಯಾ.

ಸರಿ ಬಿಡು. ಆದರೂ ಮುರುಗನ್ ಇಡ್ಲಿ ಶಾಪಿನಲ್ಲಿ ಕೂತು ತಿನ್ನುತ್ತಿದ್ದರೆ, ಮಲ್ಲೇಶ್ವರದ ಹಳ್ಳಿಮನೆಯಲ್ಲಿ ಕೂತಂತೇ ಹೊಟ್ಟೆ ತುಂಬುತ್ತದೆ. ನೀಲಾಂಗರೆಯ ಬೀಚಿನಲ್ಲಿ ಬಿಸಿಲ ಮಧ್ಯಾಹ್ನಗಳಲ್ಲಿ ಅಡ್ಡಾಡಿದರೆ, ಥೇಟ್ ಅದೇ ಪಣಂಬೂರು ಮೈತೆರೆದಂತೆ ಅನಿಸುತ್ತದೆ. ಸುತ್ತಲ ಕರಿಮುಖಗಳ ನಡುವಲ್ಲಿ ಮಿಂಚುಗಣ್ಣುಗಳು ನನ್ನ ನಿಟ್ಟಿಸುವಾಗ, ಊರಿನಲ್ಲಿ ಅಕ್ಕಪಕ್ಕದ ಮನೆಮಂದಿ ಬಹಳ ಸಮಯದ ನಂತರ ಕಾಣಸಿಕ್ಕಿದರೆ ಅಡಿಯಿಂದ ಮುಡಿಯವರೆಗೆ ನಿಲುಕಿಸಿದಂತೆ ಆಪ್ತತೆ ಕಾಣುತ್ತದೆ.

ಆದರೂ.. ಯಾಕೋ...

...ಮಳೆಯ ಹನಿಯಲ್ಲೇ ನೆನೆಯುತ್ತಾ ಆಫೀಸಿನ ಬ್ಯುಸಿಯಲ್ಲೇ ಪುರುಸೊತ್ತು ಮಾಡಿ ಹೋಟೆಲ್ ಕ್ಯಾಪಿಟಲ್ ಪಕ್ಕದಿಂದಾಗಿ ರಾಜಭವನವನ್ನು ಬಳಸಿ ನಾವು ಹೋಗುತ್ತಿದ್ದ ಸಂಜೆಯ ಪುಟ್ಟ ವಾಕ್, ಕೆಲಸ ಮುಗಿಸಿ ಮನೆಗೆ ಹೊರಡುವ ಅಪರಾತ್ರಿಯಲ್ಲೂ ಒಂದರ್ಧ ಗಂಟೆ ಕೂತು ಹರಟುತ್ತಿದ್ದ ಆಪ್ತಘಳಿಗೆ, ವಿಧಾನಸೌಧದ ಎದುರಲ್ಲೇ ಮೆಲ್ಲುತ್ತಿದ್ದ ಮಸಾಲೆಪುರಿ, ಚಳಿಮಳೆಯಲ್ಲೂ ತಡರಾತ್ರಿಯಲ್ಲಿ ನಡುಗುತ್ತಾ ಒದ್ದೆಯಾಗಿ ಮನೆಗೆ ಹೋಗುವ ರಾತ್ರಿಗಳು... ಇವೆಲ್ಲಾ ಮಾತ್ರ ಯಾಕೋ ತುಂಬ ಕಾಡುತ್ತವೆ. ನೆನಪಾಗುತ್ತದೆ.

ಸರಿ, ಹೊತ್ತಾಯಿತು. ಇನ್ನೊಮ್ಮೆ ಬರುತ್ತೇನೆ ಪತ್ರದಲ್ಲಿ.
ರಾಧಿಕಾ