Tuesday, June 26, 2012

ಆ 7.30ರ ಮುಸ್ಸಂಜೆ...



ಕೈಯಲ್ಲೊಂದು ಹಳದಿ ಬುಲ್ಡೋಜರ್! ಗಂಟೆ ಮುಸ್ಸಂಜೆ 7.30 ದಾಟಿದೆ. ಆ ಪುಟ್ಟ ಹುಡುಗ ತೂಕಡಿಸಿ ತೂಕಡಿಸಿ, ಆಗಷ್ಟೇ ಬಂದು ಆ ಸೀಟಿನಲ್ಲಿ ಕೂತ ನನ್ನ ಮೇಲೆ ಬಿದ್ದ.
ಮೆಲ್ಲನೆ ತಟ್ಟಿ ಎಬ್ಬಿಸಿದೆ. ಹಠಾತ್ತನೆ ಎಚ್ಚೆತ್ತು, ನನ್ನ ಮುಖವನ್ನೊಮ್ಮೆ ದಿಟ್ಟಿಸಿದ, ಆ ಕಡೆ ಕಂಡಕ್ಟರ್ ಬಂದು 'ಟಿಕೆಟ್' ಎಂದ, 'ಮಿಲಾಗ್ರಿಸ್ ಸರ್ಕಲ್ - ಒಂದು' ನಾನು ಟಿಕೆಟ್ ತೆಗೆದುಕೊಂಡೆ.
ಹುಡುಗನಿಗೆ ಟಿಕೆಟ್ ಸಿಗಲಿಲ್ಲ, ಆತ ಕೊಟ್ಟ ಎರಡು ರೂ ನಾಣ್ಯ ಕಿಸೆಗೆ ಹಾಕಿ ಕಂಡಕ್ಟರು ಹಿಂದಿನ ಸೀಟಿಗೆ ಹೋಗಿ ಕೂತ. ಹುಡುಗ ಟಿಕೆಟು ಸಿಗದ ಬೇಸರದಲ್ಲಿ, 'ಇವರು ಹೀಗೆಯೇ, ನಮಗೆ ಟಿಕೆಟ್ಟೇ ಕೊಡುವುದಿಲ್ಲ, ಮೊನ್ನೆಯೂ ಹೀಗೆಯೇ ಮಾಡಿದ್ದರು, ಚೆಕ್ಕಿಂಗಿನವ್ರು ಬಂದ್ರೆ, ನಮಗೆ ಬಯ್ತಾರೆ' ಎಂದ. ನಾನು ನಕ್ಕೆ.
'ಎಷ್ಟನೇ ಕ್ಲಾಸು?' ನಾನು ಕೇಳಿದೆ
'ನಾಲ್ಕನೇ ಕ್ಲಾಸು'
'ಯಾವ ಶಾಲೆ?'
'ಕೆಲಿಂಜ'
'ಹೆಸರು?'
'ಖಾದರ್'
'ಇಷ್ಟೊತ್ತಲ್ಲಿ ಯಾಕೆ ಒಬ್ಬನೇ ಬಸ್ಸಿನಲ್ಲಿ?'
'ಬುಲ್ಡೋಜರ್ ತೆಗೀಲಿಕ್ಕೆ ಪೇಟೆಗೆ ಬಂದಿದ್ದೆ'
'ಮನೇಲಿ ಹೇಳಿದ್ದೀಯಾ?'
'ಇಲ್ಲ'
'ಅವರು ಹುಡುಕಲ್ವಾ? ಅವರಿಗೆ ಭಯ ಆದ್ರೆ?'
'ಇಲ್ಲ, ಅವರಿಗೆ ಭಯ ಆಗಲ್ಲ. ಗಂಡು ಹುಡುಗ ಅಲ್ವಾ ನಾನು'
ಎಲಾ ಇವನಾ! ನಾನು ಅವಾಕ್ಕಾದೆ, ಚೋಟುದ್ದದ ಹುಡುಗನ ಪೌರುಷಕ್ಕೆ!
'ದುಡ್ಡು ಯಾರು ಕೊಟ್ರು?' ನಾನು ತಿರುಗಿ ಪ್ರಶ್ನೆ ಹಾಕಿದೆ.
ತಾಯಿ ಮೊನ್ನೆ ಕೊಟ್ಟಿದ್ರು, ಅದನ್ನು ಎತ್ತಿ ಇಟ್ಟಿದ್ದೆ. ನಮ್ಮ ಶಾಲೆಯಲ್ಲಿ ಎಲ್ಲ ಮಕ್ಕಳ ಹತ್ರನೂ ಬುಲ್ಡೋಜರ್ ಇದೆ'
ನಾನು ಮತ್ತೆ ಪ್ರಶ್ನಿಸಲಿಲ್ಲ. ಅಂಗಡಿಗಳ ಬೆಳಕಿನ ಸಾಲನ್ನು ಆಗಷ್ಟೇ ಮುಗಿಸಿ, ಕತ್ತಲನ್ನು ಸೀಳುತ್ತಾ ಬಸ್ಸು ಸಾಗುತ್ತಿತ್ತು.
'ನೀವು ಯಾವ ಕ್ಲಾಸು?' ಆತನೇ ಕೇಳಿದ.
'ನಾನು ಶಾಲೆಗೆ ಹೋಗಲ್ಲ'
'ಯಾಕೆ?'
'ಶಾಲೆಗೆ ಹೋಗಿ ಮುಗಿದಾಗಿದೆ'
'ಹೌದಾ? ಹಾಗಾದರೆ ಈಗ ಏನು ಮಾಡ್ತಾ ಇದ್ದೀರಿ?'
'ಕೆಲಸ ಮಾಡ್ತಾ ಇದ್ದೀನಿ'
'ಏನು? ಟೀಚರ್ ಕೆಲಸವಾ?'
'ಹೆಂಗಪ್ಪಾ ಹೇಳೋದು ಇವನಿಗೆ?' ಅಂತ ತಲೆಬಿಸಿಯಾಯ್ತು. 'ಟೀಚರ್ ಅಲ್ಲಪ್ಪಾ. ಟಿವಿ ನೋಡ್ತೀಯಾ, ಪೇಪರ್ ಓದ್ತೀಯಾ?' ನಾನು ಮರು ಪ್ರಶ್ನೆ ಹಾಕಿದೆ.
'ಹುಂ, ನೋಡ್ತೀನಿ'
'ನಾನು ಟಿವಿ/ ನ್ಯೂಸ್ ಪೇಪರಿಗೆ ಕೆಲಸ ಮಾಡೋದು'
'ಬಿಜೆಪಿ, ಕಾಂಗ್ರೆಸ್  ಅಂತೆಲ್ಲಾ ಪೇಪರಲ್ಲಿ ದಿನಾ ಬರುತ್ತಲ್ವಾ? ಅದೆಲ್ಲಾ ನೀವೇ ಬರೆಯೋದಾ?'
'...... ಹುಂ, ಹೌದು. ಅದೇ ಕೆಲಸ. ನಿನಗೆ ಇಂಟ್ರೆಸ್ಟ್ ಇದೆಯಾ ರಾಜಕೀಯ ಓದೋದಕ್ಕೆ?', ನಾನು ಕೇಳಿದೆ.
'ಇಲ್ಲ, ನಾನು ಓದಲ್ಲ. ತಂದೆ ಕಾಂಗ್ರೆಸ್ ಬಗ್ಗೆ ಓದ್ತಾರೆ. ನಮ್ಮ ಮನೆಯಲ್ಲಿ ಎಲ್ಲರೂ ಕಾಂಗ್ರೆಸ್'
ನಾನು ನಕ್ಕೆ.
ಅಷ್ಟರಲ್ಲಿ, ಬಸ್ಸು ಮಂಗಲಪದವು ದಾಟಿ ಮುಂದೆ ಸಾಗುತ್ತಿತ್ತು. ನಾನು ಬದಿಯ ಕಿಟಕಿಯಿಂದ, ವಿರುದ್ಧ ದಿಕ್ಕಿಗೆ ಚಲಿಸುತ್ತಿದ್ದ ಕಪ್ಪು ಮರಗಳನ್ನು ನೋಡುವುದನ್ನು ಮುಂದುವರಿಸಿದೆ. ಕತ್ತಲ ಹಿತವಾದ ಗಾಳಿಗೆ ಹಾರುತ್ತಿದ್ದ ಕೂದಲನ್ನು ಕಿವಿಯ ಹಿಂದಕ್ಕೆ ಅನಾಯಾಸವಾಗಿ ತಳ್ಳುತ್ತಲೇ ಇದ್ದೆ.
'ನೀವು ಎಲ್ಲಿ ಹೋಗ್ತಾ ಇದ್ದೀರಿ?' ಆತ ತನ್ನ ಪ್ರಶ್ನಾ ಸರಣಿಯನ್ನು ಮುಂದುವರಿಸಿದ.
'ಚೆನ್ನೈಗೆ'
ಚೈನ್ನೈ ಎಲ್ಲಿರೋದು? ಎಷ್ಟು ದೂರ ಇಲ್ಲಿಂದ?'
ತಮಿಳುನಾಡಲ್ಲಿ. ಇಲ್ಲಿಂದ ರೈಲಲ್ಲಿ ಸುಮಾರು  800 -900 ಕಿಮೀ ಆಗ್ಬಹುದು'
'ಭಯ ಆಗಲ್ವಾ? ರಾತ್ರಿ ಒಬ್ಬರೇ ಹೇಗೆ ಹೋಗ್ತೀರಿ?'
'ಚೋಟುದ್ದ ಇರೋ ನಿಂಗೇ ಭಯ ಆಗಲ್ಲ, ಇನ್ನು ನಂಗ್ಯಾಕಪ್ಪಾ ಭಯ?' ಎಂದೆ. ಇಬ್ಬರೂ ಮನಸಾರೆ ನಕ್ಕೆವು.
ಆಮೇಲೆ  ನಾನೇ, 'ಭಯ ಏನೂ ಇಲ್ಲ. ಮಂಗಳೂರಲ್ಲಿ ಇಳಿದು, ರೈಲು ಹತ್ತಿ ಹೋಗ್ತೀನಿ, ನಾಳೆ ಮಧ್ಯಾಹ್ನ ಚೆನ್ನೈ ತಲುಪುತ್ತೆ'
'ಚೆನ್ನೈ ದೊಡ್ಡ ಸಿಟಿ ಅಲ್ವಾ? ಅಲ್ಲಿ ದೊಡ್ಡ ದೊಡ್ಡ ಸಿನಿಮಾ ಟಾಕೀಸ್  ಇರುತ್ತದೆ ಅಲ್ವಾ?'
'ಹೌದು. ನೀನು ಹೋಗಿದ್ದೀಯಾ?'
'ಚೆನ್ನೈಗೆ ಹೋಗಿಲ್ಲ. ಆದ್ರೆ, ಅಲ್ಲೆಲ್ಲ ಇರುವ ಸಿನಿಮಾ ಟಾಕೀಸ್ ಥರಾನೇ ಮಂಗಳೂರಲ್ಲೂ ಈಗ ಶುರುವಾಗಿದೆ. ಒಮ್ಮೆ ನಾನು- ನನ್ನ ಫ್ರೆಂಡು ಅವತ್ತೊಮ್ಮೆ ಮಂಗಳೂರಿಗೆ ಹೋಗಿ ಪಿಕ್ಚರ್ ನೋಡಿ ಬಂದಿದ್ದೇವೆ'
'ಆಗ್ಲೂ ಮನೆಯಲ್ಲಿ ಹೇಳದೆ ಹೋಗಿದ್ದಾ?' ನಾನು ಕಣ್ಣು ಮಿಟುಕಿಸುತ್ತಾ ಕಾಲೆಳೆದೆ.
'ಹೌದು' ಎಂದು ಆತ ನಕ್ಕ. ಹಿಂದೆಯೇ ಇದ್ದ ಕಂಡಕ್ಟರ್ ಮೀಸೆಯಂಚಿನಲ್ಲೂ ನಗು.
ಅಷ್ಟರಲ್ಲಿ ಕೆಲಿಂಜ ಸ್ಟಾಪು ಬಂತು. ತನ್ನ ಹಳದಿ ಬುಲ್ಡೋಜರಿನ ಜೊತೆ ಎದ್ದ ಹುಡುಗ ಮೆಟ್ಟಲ ಬಳಿ ನಿಂತು ನನ್ನೆಡೆಗೆ ತಿರುಗಿ ನೋಡಿದ.
ನಾನು ಕಂಡಕ್ಟರ್ ಕಡೆಗೆ ತಿರುಗಿ, 'ಇನ್ನೊಮ್ಮೆ ಇವನು ಈ ಬಸ್ಸಿನಲ್ಲಿ ಬಂದ್ರೆ ಅವನಿಗೆ ಟಿಕೇಟು ಕೊಡಿ ಆಯ್ತಾ' ಎಂದು ನಕ್ಕೆ
ಕಂಡಕ್ಟರು ನಗುತ್ತಾ ಸೀಟಿ ಊದಿದರು.
ಖಾದರ್ ನಕ್ಕು ಟಾಟಾ ಮಾಡಿ ಕೆಳಗಿಳಿದ.
ಬಸ್ಸು ಅದೇ ವೇಗದಲ್ಲಿ ಮತ್ತೆ ಹೊರಟಿತು. ನಾನು ಕಿಟಕಿಯೆಡೆಗೆ ತಿರುಗಿದೆ. ಕಪ್ಪು ಮರಗಳು ಅದೇ ರಭಸದಲ್ಲಿ ಹಿಂದಕ್ಕೆ ಸಾಗುತ್ತಲೇ ಇದ್ದವು, ಯಾಕೋ ಬಸ್ಸು ನಿಧಾನ ಅನಿಸಿತು...