Friday, January 18, 2013

ಚಂದಿರನೂರಿನಲ್ಲಿ...

ಅಷ್ಟರವರೆಗೆ ಒಂದು ಜಾಕೆಟಿನೊಳಗೆ ಮೈತೂರಿಸಿಕೊಂಡಿದ್ದ ನನಗೆ ಕತ್ತಲಾವರಿಸುತ್ತಿದ್ದಂತೆ ದಿಗಿಲಾಯಿತು. ಬ್ಯಾಗಿನೊಳಗೆ ತಡಕಾಡಿ ಇನ್ನೆರಡು ಶ್ವೆಟರನ್ನು ಹಾಕಿ ಮೇಲೆ ಜಾಕೆಟ್ ಹಾಕಿದೆ. ಎರಡೂ ಕೈಗಳು ನನಗೇ ಅರಿವಿಲ್ಲದಂತೆ ಪ್ಯಾಂಟು ಜೇಬಿನೊಳಗೆ ಕೂತಿದ್ದವು. ಕಿವಿ ಬೆಚ್ಚಗೆ ಒಳಗೆ ಕೂತಿದ್ದರೂ ಮತ್ತೊಂದು ಕಾಶ್ಮೀರಿ ಶಾಲನ್ನು ಯಾವ ಗಾಳಿಯೂ ಒಳ ಪ್ರವೇಶಿಸಲು ಸಾಧ್ಯವೇ ಆಗದಂತೆ ಕೊರಳು ಬಳಸಿ ಹೊದ್ದುಕೊಂಡೆ. ಈ ಊರಲ್ಲಿ ಶೂ ಹಾಕಿಕೊಳ್ಳುವುದೆಂದರೆ ಮಾರು ದೂರ ಹಾರುವ ನನಗೆ ಶೂವಿನ ಮಹತ್ವ ನಿಧಾನವಾಗಿ ಅರಿವಾಗತೊಡಗಿತ್ತು.
ಟೆಂಟ್ ಪರದೆಯಿಂದ ಹೊರಗಿಣುಕಿದೆ. ‘ಪರದೆ ಸರಿಸಬೇಡ, ಸಿಕ್ಕಾಪಟ್ಟೆ ಶೀತಗಾಳಿ ಬರ್ತಾ ಇದೆ’ ಒಳಗಿದ್ದ ಮಹೇಶ್ ನಡುಗುತ್ತಾ ಹೇಳಿದ. ಕತ್ತಲಲ್ಲೇ ಟೆಂಟ್ ಒಳಗೆ ಕೂರುವುದಕ್ಕಿಂತ ಹೊರಗಿಣುಕಿದರೆ ಹೇಗೆ ಎಂಬಂತೆ ನಾನು ಕಣ್ಣಿಗೆ ಮಾತ್ರ ಜಾಗ ನೀಡಿ ಪರದೆಯೆಡೆಯಿಂದ ಇಣುಕಿದೆ. ಹೊರಗೆ ಇನ್ನೂ ಸೂರ್ಯನ ಮಂದ ಬೆಳಕಿತ್ತು. ಚಂದ್ರ ಇನ್ನೂ ಮುಖ ತೋರಿರಲಿಲ್ಲ. ಮಂದ ಬೆಳಕಿನಲ್ಲೂ ಹಿಮಚ್ಛಾದಿತ ಬೆಟ್ಟ ಬೆಳ್ಳನೆ ಸುಂದರವಾಗಿ ಕಾಣುತ್ತಿತ್ತು. ಒಳಗೆ ಮಹೇಶ್ ದೀಪ ಉರಿಸಿದ. ಪಕ್ಕದ ಪ್ರಿಯಾ-ಹರೀಶರ ಟೆಂಟಿನಿಂದಲೂ ಮಿಣುಕು ದೀಪದ ಬೆಳಕು ಕಾಣಿಸಿತು. ಅಷ್ಟರಲ್ಲಿ ಅಡುಗೆಯವ ಬಿಸಿಬಿಸಿ ಸೂಪ್ ತಂದಿತ್ತು, ‘ಇನ್ನೊಂದು ಗಂಟೆಯಲ್ಲಿ ರಾತ್ರಿ ಊಟ ಸಿದ್ಧ’ ಎಂದು ಹೇಳಿ ಹತ್ತಿರದ ಟೆಂಟಿನೊಳಗೆ ಮರೆಯಾದಾಗಲೇ ನಮಗೆ ತಿಳಿದದ್ದು ಗಂಟೆ ಏಳಾಗಿದೆಯೆಂದು. ನಾಲ್ವರೂ ಒಂದೇ ಟೆಂಟಿನಲ್ಲಿ ಕೂತು ಕೈ ಉಜ್ಜಿಕೊಳ್ಳುತ್ತಾ ನಡುಗುವ ಚಳಿಯಲ್ಲೂ ಹಬೆಯಾಡುತ್ತಿದ್ದ ಬಿಸಿಸೂಪಿನ ಮಹಾತ್ಮೆಯನ್ನು ಕೊಂಡಾಡುತ್ತಾ ಬಿಸಿಯಾಗಿಯೇ ಹೀರತೊಡಗಿದೆವು.

ಹಿಮಾಲಯ ಪರ್ವತ ಶ್ರೇಣಿಯ ಆ ಸ್ಪಟಿಕ ಶುದ್ಧ ಚಂದ್ರತಾಲ್ ಸರೋವರ ತೀರದ ಆ ಗವ್ವೆನ್ನುವ ಮೌನದಲ್ಲಿ ನಮ್ಮ ಮಾತುಗಳೇ ಪ್ರತಿಧ್ವನಿಸುವಂತೆ ಹಿಂದಿನ ದಿನಗಳ ರೋಚಕ ಪ್ರಯಾಣದ ಬಗ್ಗೆ ಮಾತನಾಡುತ್ತಾ ಒಂದು ಗಂಟೆ ಕಳೆದಿದ್ದೇ ತಿಳಿಯಲಿಲ್ಲ. ಮತ್ತೆ ಅಡುಗೆಯಾತ ಬಂದು ‘ಡಿನ್ನರ್ ರೆಡೀ ಹೆ ಸಾಬ್’ ಅಂದಾಗಲೇ ಹೊತ್ತು ಹೋದದ್ದು ತಿಳಿದದ್ದು. ಹೊರಗಿಣುಕಿದಾಗ ಕೊರೆಯುವ ಚಳಿ ಇಮ್ಮಡಿಗೊಂಡಿತ್ತು. ಬಿಸಿ ಬಿಸಿ ರೋಟಿ, ದಾಲ್- ಚಾವಲ್ ಸವಿಯುತ್ತಾ ಮಾತುಕತೆ ಮುಂದುವರಿಸಿದೆವು. ಚಳಿಯೇ ಹಿತ ಅನ್ನುತ್ತಿದ್ದ ನಮಗೆಲ್ಲರಿಗೂ ಚಳಿಯಲ್ಲಿ ಅಡಗಿದ್ದ ಕರಾಳಮುಖದ ಸತ್ಯದರ್ಶನವಾಗಹತ್ತಿತು.

-------------------

ಸ್ಪಿತಿಯ ಮುಖ್ಯ ಕೇಂದ್ರ ಕಾಝಾದಿಂದ ಬೆಳಗ್ಗೆಯೇ ಹೊರಟಿದ್ದ ನಾವು ಬತಾಲಿನಲ್ಲಿ ಮಧ್ಯಾಹ್ನದ ಊಟ ಮುಗಿಸಿ 16 ಕಿಮೀ ದೂರದ ‘ಬಿದ್ದರೆ ಪ್ರಪಾತ, ಎದ್ದರೆ ಚಂದ್ರತಾಲ್’ ಎಂಬಂತ್ತಿದ್ದ ಏರುತಗ್ಗಿನ ಭಾರೀ ಪ್ರಪಾತಗಳ ರಸ್ತೆಯೆಂಬೋ ರಸ್ತೆಯಲ್ಲಿ ಏಳುತ್ತಾ ಬೀಳುತ್ತಾ, ಬೆಳಗ್ಗೆಯಷ್ಟೇ ಭಾರೀ ಪ್ರಪಾತದಲ್ಲಿ ಬಿದ್ದು ನಜ್ಜುಗುಜ್ಜಾಗಿ ಕಣ್ಣಳತೆಯಲ್ಲೇ ಬೆಂಕಿಪೊಟ್ಟಣದಂತೆ ಕಾಣುತ್ತಿದ್ದ ಕಾರನ್ನು ನೋಡಿ ಜೀವ ಕೈಯಲ್ಲಿ ಹಿಡಿದು ಕೂತಿದ್ದ ನಮಗೆ ಚಂದ್ರತಾಲಿನ ಬೇಸ್ ತಲುಪಿದಾಗಲೇ ಪ್ರಯಾಣದ ಸುಸ್ತು ಅರಿವಿಗೆ ಬಂದಿದ್ದು. ಕಣ್ಣು ಕುಕ್ಕುತ್ತಿದ್ದ ಸೂರ್ಯನ ಸಂಜೆ ಬಿಸಿಲಿಗೆ ಚಳಿಯೆಲ್ಲ ಹಾರಿ ಹೋದಂತಾಗಿ , ಹಕ್ಕಿಗಳಂತೆ ಒಂದೇ ಉಸಿರಿನಲ್ಲಿ ಚಂದ್ರತಾಲ್ ನತ್ತ ನಡೆಯತೊಡಗಿದೆವು. ಕೂತು ಕೂತು ಜೋಮು ಹಿಡಿದಂತಾಗಿದ್ದ ಕಾಲು ನಮ್ಮ ಮಾತನ್ನು ಸುಲಭವಾಗಿ ಕೇಳಲಿಲ್ಲ.

ಚಂದ್ರತಾಲ್ ದೂರದಿಂದಲೇ ಆಕಾಶವನ್ನೇ ಹೊದ್ದುಕೊಂಡು ಪರ್ವತಗಳ ಮರೆಯಲ್ಲಿ ಮಲಗಿದಂತೆ ಕಡುನೀಲಿಯಾಗಿ ಕಾಣಿಸಿತು. ತೀರದಲ್ಲಿ ಯಾವುದೋ ಒಂದು ಗುಂಪು ಬಾಟಲಿ ಹರವಿ ಕೂತಿದ್ದರು. ಒಂದೆಡೆ ಗಗನಕ್ಕೆ ಚುಂಬಿಸಿ ನಿಂತಿದ್ದ ಹಿಮಚ್ಛಾದಿತ ಪರ್ವತಗಳು, ಇನ್ನೊಂದೆಡೆ ಗಗನವೇ ಮಲಗಿದಂಥ ಪರಿಶುದ್ಧ ನೀಲಿ ಸರೋವರ, ತಲೆಯೆತ್ತಿದರೂ ನೀಲಿ, ಕಾಲಬುಡದಲ್ಲೂ ನೀಲಿ, ಎಂದೂ ಕಾಣದಿದ್ದ ಅಪೂರ್ವ ಸೌಂದರ್ಯ! ನಾನು- ಪ್ರಿಯ ನೀರೊಳಗೆ ಕಾಲು ಇಳಿಬಿಟ್ಟು ಕೂತೆವು. ಮೈಕತ್ತರಿಸುವ ಐಸುನೀರು. ಆಗಲಿಲ್ಲ, ಪಕ್ಕನೆ ಹೊರತೆಗೆದೆವು, ಆ ತೀರವೇ ಕಾಣದಷ್ಟು ವಿಶಾಲವಾಗಿ ಹರಡಿಕೊಂಡಿದ್ದ, ಸರೋವರದ ತೀರದುದ್ದಕ್ಕೂ ನಡೆಯಹತ್ತಿದ್ದೆವು. ಒಂದೊಂದು ಜಾಗದಲ್ಲೂ ಬೇರೆಬೇರೆಯದೇ ಆಗಿ ಕಾಣುವ ಆ ಅಪ್ರತಿಮ ಸೌಂದರ್ಯವನ್ನು ಆಸ್ವಾದಿಸುತ್ತಾ ಕ್ಲಿಕ್ಕಿಸುತ್ತಾ, ಗಂಟೆ ಆರು ದಾಟಿದ್ದು ನೋಡಿ, ಟೆಂಟು ಬಹಳ ದೂರವಿರುವುದು ನೆನಪಾಗಿ, ಅಪರಿಚಿತ ಪರಿಸರವೆಂದು ಜಾಗೃತರಾಗಿ, ಮುಂಜಾವಿನಲ್ಲಿ ಮತ್ತೆ ಬರೋಣವೆಂದು ಟೆಂಟಿನೆಡೆಗೆ ಹೆಜ್ಜೆಹಾಕಿದ್ದೆವು.

---------

ಊಟ ಮುಗಿಸಿ ಹೊರ ಬಂದಾಗ ಟೆಂಟಿನಲ್ಲಿ ಮಿಣುಕುದೀಪ ಕಾಣಿಸುತ್ತಿತ್ತು. ನಮ್ಮ ಡ್ರೈವರು ಹಾಗೂ ಮನಾಲಿಯವರೆಗೂ ನಮ್ಮ ಜೊತೆಗೆ ಬರುತ್ತೇನೆಂದು ಹೇಳಿ ಜೊತೆ ಸೇರಿದ್ದ ಗೈಡ್ ತಶಿ ಆ ಮೂಲೆಯ ಟೆಂಟಿಗೆ ನಡೆದರು. ಆಕಾಶದಲ್ಲಿ ಹೊಳೆವ ನಕ್ಷತ್ರದಂತೆ ದೂರದಲ್ಲಿ ಮಂದವಾಗಿ ಕಾಣುತ್ತಿದ್ದ ಬೆಳಕಿನ ಚುಕ್ಕಿಯೇ ಆ ಟೆಂಟು ನಮ್ಮಲ್ಲಿಂದ ಇರುವ ದೂರಕ್ಕೆ ಸಾಕ್ಷಿಯಾಗಿತ್ತು. ಹೆಚ್ಚು ಮಾತಾಡಿದರೆ ಬಾಯಿಯೊಳಗೂ ಎಲ್ಲಿ ಗಾಳಿ ಹೋಗಿ ಇನ್ನೂ ಚಳಿ ಹೆಚ್ಚಾದೀತೋ ಎಂಬಂತೆ ತುಟಿಬಿಚ್ಚದೆ, ಬೇಗ ಮಲಗಿ ನಾಳೆ ಮುಂಜಾವಿನ ಚಂದ್ರತಾಲ್ ಸೊಬಗನ್ನು ನೋಡುವ ಇರಾದೆಯಿಂದ ಮಲಗುವ ಚೀಲದೊಳಗೆ ತೂರಿಕೊಂಡೆವು.

ನನಗೆ ಕಣ್ಣಿಗೆ ನಿದ್ರೆ ಹತ್ತಲಿಲ್ಲ. ಹಿಂದಿನ ಐದಾರು ದಿನಗಳ ಸ್ಪಿತಿ ಕಣಿವೆಯ ತಿರುಗಾಟದ ಸುಸ್ತಿನಿಂದ, ಮಹೇಶ್ ಕಣ್ಣುಮುಚ್ಚಿದ ತಕ್ಷಣವೇ ನಿದ್ದೆಗೆ ಜಾರಿದ್ದ. ಅವನನ್ನು ನಿದ್ದೆ ಮಾಡದಂತೆ ಮಾಡಲು, ಆಗಾಗ ‘ಈಗ ಈ ಬದಿಯಿಂದ ಹಿಮಚಿರತೆ ಬಂದು ನನ್ನನ್ನು ಹೊತ್ತೊಯ್ದರೆ?’ ಎಂದು ತರಲೆ ಪ್ರಶ್ನೆಗಳನ್ನು ಕೇಳುತ್ತಿದ್ದೆ. ಆ ಕಡೆಯಿಂದ ಉತ್ತರ ಬರುವುದು ಕಡಿಮೆಯಾಗುತ್ತಾ ಬಂದಂತೆ, ನಿಜಕ್ಕೂ ಸಣ್ಣಗೆ ಭಯವಾಗಹತ್ತಿತು. ಪಕ್ಕದ ಟೆಂಟಿನಿಂದಲೂ ನಿಶ್ಯಬ್ದವೇ!

----------------

ಸ್ಪಿತಿ ಕಣಿವೆ ಪ್ರವಾಸದಲ್ಲಿ ನಮ್ಮೆಲ್ಲರ ಪ್ರಮುಖ ಆಸೆಯಾಗಿದ್ದುದು ಚಂದ್ರತಾಲ್. ಸಮುದ್ರಮಟ್ಟಕ್ಕಿಂತ 14,100 ಅಡಿ ಎತ್ತರದಲ್ಲಿರುವ ಚಂದ್ರತಾಲ್ ಸರೋವರ ಮಧ್ಯ ಹಿಮಾಲಯದ ಪರ್ವತ ಶ್ರೇಣಿಯಲ್ಲಿದೆ. ಹಿಮಾಚಲ ಪ್ರದೇಶದ ಲಾಹೋಲ್ ಮತ್ತು ಸ್ಪಿತಿ ಜಿಲ್ಲೆಯಲ್ಲಿರುವ ಇದು ಸ್ಪಿತಿ ಶೀತ ಮರುಭೂಮಿ ಕಣಿವೆಯಲ್ಲಿ ಅತ್ಯಂತ ಸುಂದರವಾದ ಸ್ಥಳ. ಈ ಸರೋವರ ಬತಾಲ್ ಹಾಗೂ ಕುಂಝುಂ ಪಾಸ್ ಗಳ ಮೂಲಕ ಮಾತ್ರವೇ ಹೋಗಬಹುದು. ವಿಚಿತ್ರವೆಂದರೆ, ಅಂತರ್ಜಲ ಹಾಗೂ ಹಿಮ ಕರಗಿದ ನೀರಿನಿಂದ ಸದಾ ಸಮೃದ್ಧವಾಗಿರುವ ಈ ಸರೋವರಕ್ಕೆ ಒಳಹರಿವು ಎಲ್ಲೂ ಕಾಣಿಸುವುದಿಲ್ಲ. ಇದರ ಹೊರಹರಿವೇ ಚಂದ್ರಾ ನದಿಯಾಗಿ, ಮುಂದೆ ಚಂದ್ರಭಾಗವಾಗಿ ಪ್ರಸಿದ್ಧಿಯಾಗಿದೆ.
 
---------
 
ನಾನಿಲ್ಲಿ ಹೀಗೆ ಆ ಹತ್ತು ದಿನಗಳಲ್ಲಿ ಒಂದು ದಿನದ ಕಥೆಯನ್ನು ನನ್ನ ಜೀವಮಾನದ ಅವಿಸ್ಮರಣೀಯ ಸಂಗತಿಯೆಂಬಂತೆ ಹೇಳಿಕೊಳ್ಳುತ್ತಿರುವ ಹೊತ್ತಲ್ಲಿ, ಅಲ್ಲಿ ರೋಹ್ತಂಗ್ ಪಾಸಿನ ಆ ತುದಿಯ ಪರ್ವತ ಕಣಿವೆಯಲ್ಲಿ ವಾಸ ಮಾಡುತ್ತಿರುವ ಲಾಹೋಲ್ ಸ್ಪಿತಿ ಕಣಿವೆಯ ಮಂದಿ ಅಕ್ಷರಶಃ ತಮ್ಮ ಸ್ಥಿತಿ ನೆನೆದು ಕಣ್ಣೀರೂ ಹಾಕಲಾರದ ಪರಿಸ್ಥಿತಿ. ಇದು ಒಂದೆರಡು ದಿನದ ಮಾತಲ್ಲ ಪ್ರತಿವರ್ಷದ 6-7 ತಿಂಗಳುಗಳು!

‘In Spiti, even tears turn into crystals!’ ಮೊನ್ನೆ ಮೊನ್ನೆ ಪತ್ರಿಕೆಯ ಮೂಲೆಯೊಂದರಲ್ಲಿ, ವರ್ಷದ ಆಗುಹೋಗಿನಂತೆ ಜಾಗ ಪಡೆದಿದ್ದ ಈ ಹೆಡ್ ಲೈನು ನನ್ನೆಲ್ಲಾ ಈ ಫ್ಲ್ಯಾಶ್ ಬಾಕಿಗೆ ಕಾರಣ. ‘-30 ಡಿಗ್ರಿ!’ ಊಹಿಸಿ ನೋಡಿ. ಪ್ರಪಂಚವಿಡೀ ನವಿರು ಚಳಿಯಲ್ಲಿ ಖುಷಿ ಅನುಭವಿಸುತ್ತಿರುವ ಹೊತ್ತು ಕೊರೆಯುವ ಚಳಿಯಲ್ಲಿ ಐದು ತಿಂಗಳು ಪ್ರಪಂಚದ ಸಂಪರ್ಕವನ್ನೇ ಕಡಿದುಕೊಂಡು ಮುದುರಿ ಕುಳಿತುಕೊಳ್ಳುವ ಪರಿಸ್ಥಿತಿ. ಗಂಟೆ ನೋಡಲು ಗಡಿಯಾರ ತಿರುಗುವುದಿಲ್ಲ. ಫೋನು ಮಾಡಲು ಕಾಲ್ ಹೋಗೋದಿಲ್ಲ. ನಳ್ಳಿ ತಿರುಗಿಸಿದರೆ ನೀರು ತಿರುಗಿಸಿದರೆ ನೀರು ಬರೋದಿಲ್ಲ. ಮನೆಯಿಂದ ಹೊರಹೊರಡಲು ಆಗೋದಿಲ್ಲ. ಟಿವಿ ಬರೋದಿಲ್ಲ. ಹೋಗಲಿ, ಅಳೋಣವೆಂದರೆ, ಅದೂ ಕಷ್ಟ. ಉಫ್... ನಮ್ಮಂಥವರಿಗೆ ಇದೆಲ್ಲ ಕಲ್ಪನಾತೀತ ಕಲ್ಪನೆಯಲ್ಲದೆ ಮತ್ತೇನು!

--------------

ಅಂತೂ ಇಂತೂ ಹಿಮಚಿರತೆಯ ಕುತೂಹಲ- ಭಯದಲ್ಲೇ ಸ್ಲೀಪಿಂಗ್ ಬ್ಯಾಗಿನಲ್ಲೇ ನಿದ್ದೆಹೋದ ನಮಗೆಲ್ಲ ಬೆಳಕು ಹರಿಯುವ ಮುನ್ನವೇ ಎಚ್ಚರವಾಗಿತ್ತು. ನಡುಗುವ ಚಳಿಯಲ್ಲೇ ಹೇಗೋ ಹಲ್ಲುಜ್ಜಿ, ಬಿಸಿಬಿಸಿ ಟೀ ಹೀರಿ ನಾವು ಮತ್ತೆ ಚಂದಿರನೂರಿಗೆ ಹೊರಟೆವು. ಅರೆ, ನಿನ್ನೆ ಸಂಜೆ ಕಂಡಿದ್ದ ಕಡುನೀಲಿ ಸರೋವರವೇ ಕಾಣುತ್ತಿಲ್ಲ, ಎನ್ನುತ್ತಾ ದೂರದಿಂದ ಓಡೋಡಿ ಬಂದ ನಮಗೆ ಕಂಡಿದ್ದೆಲ್ಲವೂ ಎರಡೆರಡು! ಸ್ವಲ್ಪವೇ ಹಿಮ ಹೊದ್ದುಕೊಂಡು ನಿಂತಿದ್ದ ಬೋಳು ಸಾಲುಪರ್ವತಗಳ ಅಪೂರ್ವದರ್ಶನ ಮಾಡಿಸಲು ಬೃಹತ್ ಕನ್ನಡಿಯನ್ನೇ ಕೆಳಗೆ ಹಾಸಿದಂತೆ, ಬಣ್ಣವೇ ಇಲ್ಲದ ಸ್ಪಟಿಕ ಶುದ್ಧ ನೀರಿನಲ್ಲಿ ಸುತ್ತಲ ಬೆಟ್ಟದ ಸಾಲಿನ ಬಿಂಬ. ಬೆಳ್ಳನೆಯ ಭಾರೀ 'ಬಾರಾ ಶಿಗ್ರಿ ಗ್ಲೇಶಿಯರ್'ನ ತುತ್ತ ತುದಿ ಮಂಜಿನಲ್ಲಿ ಕರಗಿದಂತೆ ಆಕಾಶದ ಬಿಳಿಯಲ್ಲಿ ಲೀನ! ಬೆಳಗ್ಗಿನ ನಡುಗುವ ಚಳಿಯಲ್ಲಿ ಹಲ್ಲುಜ್ಜಿದ ನೋವು, ಮುಕ್ಕಳಿಸಿದ ಬಾಯಿಯ ಮರಗಟ್ಟಿದ ಅನುಭವವೂ ಒಂದೇ ಕ್ಷಣದಲ್ಲಿ ಮರೆಸಿಬಿಡುವಂಥಾ ದಿಗ್ದರ್ಶನ! ಥರಗುಟ್ಟುವ ಈ ಬೆಳಗಿನ ಚಳಿಯೆಲ್ಲವೂ ಗೌಣ.

ಸರೋವರದ ಪಕ್ಕದಲ್ಲೇ ಅನಧಿಕೃತವಾಗಿ ಟೆಂಟು ಹಾಕಿ ಕೂತಿದ್ದ ಮಂದಿ ಹಿಂದಿನ ದಿನ ರಾತ್ರಿಯ ಕಥೆಯನ್ನು ರೋಚಕವಾಗಿ ಹೇಳುತ್ತಿದ್ದರು. ಮಧ್ಯರಾತ್ರಿಯಲ್ಲಿ ನೀರು ಕುಡಿಯಲು ಬಂದ ಹಿಮಚಿರತೆಗೂ ಟೆಂಟಿನ ನಾಯಿಗೂ ಆದ ವಾಕ್ಸಮರವನ್ನು ಅವರ ಬಾಯಿಂದ ಕೇಳಿ ಕೃತಾರ್ಥರಾಗಿ, ಅದರದ್ದೇ ಆಗಿರಬಹುದಾದ ‘ಕುರುಹನ್ನು’ ಮಾತ್ರ ನೋಡಿ ಧನ್ಯರಾಗಿ ಮನಾಲಿಯತ್ತ ಹೊರಟೆವು. ನೀಲಾಕಾಶಕ್ಕೆ ಮುತ್ತಿಕ್ಕಿ ನಿಂತಿದ್ದ ಬೆಳ್ಳನೆಯ ‘ಬಾರಾ ಶಿಗ್ರಿ ಗ್ಲೇಶಿಯರ್’ ಕೂಡಾ ದೂರ ದೂರ ಹೊರಟಿತು. ನಿಧಾನವಾಗಿ ಕರಗುತ್ತಿರುವ ಬಾರಾ ಶಿಗ್ರಿಯ ನೀರ್ಗಲ್ಲುಗಳು, ಕಠಿಣ ಚಾರಣದ ಕಥೆಗಳು, ವಿಮಾನ ಅಫಘಾತ, 25 ವರ್ಷ ಕಳೆದ ಮೇಲೆ ಸಿಕ್ಕಿದ ಅವಶೇಷಗಳು... ಹೀಗೆ ಹಳೇ ಕಥೆಗಳನ್ನು ತಶಿ ಹೇಳುತ್ತಾ ಹೇಳುತ್ತಾ ಹೋದಂತೆ ಬೆಳ್ಳನೆಯ ರಾಶಿ ನಿಗೂಢವಾಗತೊಡಗಿತು...