Tuesday, July 26, 2011

ಶಿವಮೊಗ್ಗೆಯ ಮಳೆ, ಒಂದು ಆಕ್ಸಿಡೆಂಟ್ ಹಾಗೂ ಆ ಸಜ್ಜನ


ಅಂದು ಮಳೆಯಲ್ಲಿ ಅದೆಷ್ಟು ಒದ್ದೆ ಮುದ್ದೆಯಾಗಿ ಮನಸೋ ಇಚ್ಛೆ ಮಿಂದಿದ್ದೆನೋ... ಹೇಳಲೊಲ್ಲೆ. ಎಷ್ಟೋ ಸಮಯದ ನಂತರ ಮಳೆಯಲ್ಲಿ ಮಳೆಯಾಗುವ ಮುಳುಗೇಳುವ ಭಾಗ್ಯ ಒದಗಿತ್ತು. ಶಿವಮೊಗ್ಗೆ, ಕುಂದಾದ್ರಿಯ ಆ ಉತ್ತುಂಗದಲ್ಲಿ ಕೊಚ್ಚಿಹೋಗುವಂಥ ಗಾಳಿ-ಮಳೆ, ನಮ್ಮನ್ನೇ ಹೊತ್ತೊಯ್ಯುವಂತೆ ಬೀಸುವ ಚಳಿಗಾಳಿ, ಅಡಿಮೇಲಾಗುವ ಕೊಡೆಗಳು, ಮಂಜು ಕವಿದ ಹಾದಿಯಲ್ಲಿ ಒಂಟಿ ಕಾರಿನ ಪಯಣ, ಚೂರೂ ಕಾಣದಂತೆ ಮಂಜಿನಲ್ಲಿ ಇನ್ನಿಲ್ಲದಂತೆ ಮುಚ್ಚಿ ಹೋದ ಜೋಗ, ಮಂಜಿನೊಂದಿಗೆ ಕಣ್ಣುಮುಚ್ಚಾಲೆಯಾಡುತ್ತಾ ದಿಡೀರ್ ಪ್ರತ್ಯಕ್ಷವಾಗುವ ರಾಜ- ರಾಣಿ ಧಾರೆಗಳು, ಕೆನ್ನೀರಿನಲ್ಲಿ ಮುಳುಗೆದ್ದ ಹಸಿರುಗದ್ದೆಗಳು, ಕಣ್ತೆರೆದಲ್ಲೆಲ್ಲಾ ಹರಿವ ಝರಿಗಳು... ಅಬ್ಬಬ್ಬಾ, ಒಂದೊಂದು ಚಿತ್ರಗಳೂ ಸಾಲಾಗಿ ಫ್ರೇಮು ಹಾಕಿ ಜೋಡಿಸಿಟ್ಟಂತೆ ಮನಸ್ಸಿನಲ್ಲಿ ದಾಖಲಾಗಿವೆ. ಬೆಂಗಳೂರು/ಚೆನ್ನೈಯ ತುಂತುರು ಮಳೆಗೆ ಕಪ್ಪೆದ್ದು ಹೋಗುವ ರಸ್ತೆಗಳನ್ನು ಕಂಡೂ ಕಂಡೂ ರಾಡಿಯಾಗಿದ್ದ ಮನಸ್ಸು ಕ್ಷಣದಲ್ಲಿ ಪ್ರಫುಲ್ಲವಾಗಿತ್ತು. ಅದೆಷ್ಟು ಬಾರಿ ಶಿವಮೊಗ್ಗ/ಜೋಗ/ಆಗುಂಬೆಯಲ್ಲಿ ಅಲೆದಾಡಿದ್ದರೂ, ಮಳೆಯಲ್ಲಿ ನೋಡುವ ಸೊಬಗೇ ಬೇರೆ. ಅಂತೂ ಸಮಯ ಕೂಡಿ ಬಂದಿತ್ತು. ಮನಸೋ ಇಚ್ಛೆ ಆ ಕ್ಷಣಗಳನ್ನು ಮೊಗೆಮೊಗೆದು ಅನುಭವಿಸಿದ್ದೂ ಆಗಿತ್ತು.

ಆದರೆ,

ಮರಳುವಾಗ..., ಆ ಎರಡು ದಿನಗಳು ಜೀವನದಲ್ಲಿ ಎಂದೂ ಮರೆಯಲಾಗದ ವೈರುಧ್ಯಗಳ ಪ್ರಯಾಣವಾಗಿತ್ತೆಂದು ಮುಂಚಿತವಾಗಿ ಹೇಗೆ ತಿಳಿದೀತು ಹೇಳಿ. ಹಾದಿಯಲ್ಲಿ ನಾವಿದ್ದ ಕಾರು ಬಸ್ಸಿಗೆ ಮುಖಾಮುಖಿ ಢಿಕ್ಕಿಯಾಗಿತ್ತು. ಅದೃಷ್ಟವೆಂದೇ ಹೇಳಬೇಕೇನೋ, ನಾವೆಲ್ಲ ಐದೂ ಮಂದಿ ಹೆಚ್ಚೇನೂ ಆಗದೆ, ಬದುಕುಳಿದಿದ್ದೆವು.

ಇದಾಗಿ, ವಾರ ಕಳೆದಿದೆ. ಈಗ ಮತ್ತೆ ಬಿಸಿಲೂರಿನಲ್ಲಿ ಬಂದು ಕೂತಿದ್ದೇನೆ. ಇಲ್ಲೂ ಆಗಾಗ ಮಳೆ ಸುರಿಯುತ್ತದೆ, ಹಠಾತ್ ಬರುವ ಅತಿಥಿಗಳಂತೆ! ಒಮ್ಮೊಮ್ಮೆ ಖುಷಿ, ಒಮ್ಮೊಮ್ಮೆ ಬೇಸರ. ಆದರೆ.., ಈಗ ಮಳೆ ಬರುವಾಗಲೆಲ್ಲ, ಶಿವಮೊಗ್ಗೆ ನೆನಪಾಗುತ್ತದೆ. ಆ ನೆನಪಿನ ಹಿಂದೆಯೇ ಆ ಬಸ್ಸು- ಕಾರು, ಧಡಾರ್, ಚೀರಾಟಗಳು ಮತ್ತೆ ಮತ್ತೆ ಕೇಳಿಸುತ್ತವೆ. ಕೊನೆಗೆ ಉಳಿಯುವುದು ಒಂದು ನಿಟ್ಟುಸಿರು, ಗಾಢ ಮೌನ.

ಇವಿಷ್ಟೇ ಅಲ್ಲ, ಇವೆಲ್ಲವುಗಳ ಜೊತೆಗೆ ಆ ಮುಖವೂ ಮತ್ತೆ ಮತ್ತೆ ಕಾಡುತ್ತದೆ. ಆ ಅಫಘಾತದ ಮುಂಜಾವಿನಲ್ಲಿ ನಮಗೆ ಮದ್ಯಾಹ್ನದವರೆಗೂ ಸಹಾಯದ ಮಳೆಯನ್ನೇ ಸುರಿಸಿದ ಬೆಂಗಳೂರಿನ ರಜನೀಶ್. ಪರಿಚಯವೇ ಇಲ್ಲದ ವ್ಯಕ್ತಿಯೊಬ್ಬರು ಹಾದಿ ಮಧ್ಯೆ ತಮ್ಮ ಕುಟುಂಬ ಸಮೇತರಾಗಿ ನಮಗೆ ನೀಡಿದ ಸಹಾಯದ ಮುಂದೆ ಇಲ್ಲಿ ಅಕ್ಷರಗಳು ಜೀವಕಳೆದುಕೊಳ್ಳುತ್ತದೆ. ರಜನೀಶ್ ಕುಟುಂಬ ಚೆನ್ನಾಗಿರಲಿ. ಗೆಳತಿ ಸುಷ್ಮಾ ಬೇಗ ಚೇತರಿಸಿಕೊಳ್ಳಲಿ...

Tuesday, July 12, 2011

ಕಾಡುವ ನಾಯಿಗಳು...

ಮೊನ್ನೆ ಮೊನ್ನೆ ತೇಜಸ್ವಿ ಅವರ 'ಅಣ್ಣನ ನೆನಪು' ಓದುತ್ತಿದ್ದೆ. ಕಂಟ್ರಿ ನಾಯಿಯ ಬಾಲ ಕತ್ತರಿಸಿ ಜಾತಿ ನಾಯಿ ಮಾಡುವ ಸಾಹಸ ಓದುತ್ತಾ ಹೋದಂತೆ, ಕುಪ್ಪಳ್ಳಿಯಲ್ಲಿ ಒಂದು ದಿನ ನಮ್ಮ ಜೊತೆಗಿದ್ದ ನಾಯಿಮರಿಯ ಚಿತ್ರವೇ ಪದೇ ಪದೇ ಕಣ್ಣ ಮುಂದೆ ತೇಲಿ ಬಂತು...

ಹೌದು. ನಾವು ನೋಡಿದ ಪರಿಸರ, ಅಲ್ಲಿ ನಡೆದ ಘಟನೆಗಳಿಗೂ ಪುಸ್ತಕದಲ್ಲಿ ಓದುವ ಕಥೆಗಳಿಗೂ ನಮಗರಿವಿಲ್ಲದೆ ಸಂಬಂಧ ಕಲ್ಪಿಸಿ ಅವುಗಳೇ ನಮ್ಮ ಮನಃಪಟಲದಲ್ಲಿ ಓದುತ್ತಿದ್ದ ಹಾಗೆ ಸಿನಿಮಾದಂತೆ ಚಿತ್ರಿಸಿಕೊಳ್ಳುವುದು ಎಷ್ಟೋ ಬಾರಿ ನಮಗೆ ರೂಢಿಯಾಗಿಬಿಟ್ಟಿರುತ್ತದೆ. ನಮಗೇ ಅರಿವಿಲ್ಲದ ಹಾಗೆ ನಾವು ಅನುಭವಿಸಿದ/ಕಂಡ ಸನ್ನಿವೇಶಗಳು ಯಾವುದೋ ಕಥೆಗಳ ಪಾತ್ರಧಾರಿಗಳಾಗಿ ಜೀವತಳೆದು ಬಿಡುತ್ತವೆ. ಹಾಗಾಗಿಯೇ ಆ ಪಾತ್ರಗಳು ನಮಗೆ ಮತ್ತೆ ಮತ್ತೆ ಕಾಡುತ್ತವೆ. ಹೀಗೆ, ಅಣ್ಣನ ನೆನಪೂ ಕೂಡಾ ನನಗೆ ಇತ್ತೀಚೆಗೆ ತೀವ್ರವಾಗಿ ಕಾಡಿಸತೊಡಗಿತು. ಕಾರಣ ಆ ಜಾತಿ ನಾಯಿ.

ಎಷ್ಟೋ ಬಾರಿ ನನಗೆ ಅನಿಸುವುದಿದೆ, ನಾಯಿಯಷ್ಟು ತೀವ್ರವಾಗಿ ಪ್ರೀತಿಯ ಭಾವನೆಗಳನ್ನು ಕಣ್ಣಿನಿಂದ ಹಾಗೂ ತನ್ನ ಆಂಗಿಕ ಭಾಷೆಯಿಂದ ವ್ಯಕ್ತಪಡಿಸುವ ಪ್ರಾಣಿ ಬೇರೊಂದಿಲ್ಲ. ಬಾಲವಲ್ಲಾಡಿಸಿ, ಮೂಸಿ, ನೆಕ್ಕಿ, ಕಾಲಿನ ಸುತ್ತ ಸುತ್ತು ಹಾಕಿ, ಕೈಗಳನ್ನು ಎತ್ತಿ, ಕುಸ್ ಕುಸ್ ಕುಂಯ್ ಕುಂಯ್ ಎಂಬ ಸ್ವರ ಹೊರಡಿಸಿ... ಆಹ್... ಈ ಎಲ್ಲವೂ ಮಿಳಿತವಾದ ಆ ಪ್ರೀತಿಯ ಜಗತ್ತು ಮಾತ್ರ ಇನ್ನೊಂದಿಲ್ಲ! ಕುಪ್ಪಳ್ಳಿಗೆ ಹೋಗಿದ್ದಾಗಲೂ ಹೀಗೇ ಆಯಿತು. ಆ ಒಂದು ಪುಟಾಣಿ ನಾಯಿ ಮರಿ ಕುವೆಂಪು ಮನೆಯೆದುರು ಅತ್ತಿಂದಿತ್ತ ಇತ್ತಿಂದತ್ತ ಚುರುಕಾಗಿ ಓಡಾಡುತ್ತಿತ್ತು. ಅದನ್ನು ನೋಡಿದಾಕ್ಷಣ ನಮಗೆ ಪ್ರೀತಿ ಬಂತು. ಒಂದೆರಡು ಬಿಸ್ಕತ್ತು ಹಾಕಿದೆವು. ಆಮೇಲೆ, ಮಾರನೇ ದಿನವೂ ಹೋಗುವರೆಗೂ ನಮ್ಮನ್ನು ಬಿಡಲಿಲ್ಲ. ನಮ್ಮ ಎಲ್ಲ ಫೋಟೋಗಳಿಗೂ ಭಾರೀ ಚೆನ್ನಾಗಿ ಪೋಸು ಕೊಟ್ಟ ಆ ನಾಯಿ ನಾವು ಹೊರಡುವ ದಿನ ನಮ್ಮ ಜೊತೆಗೆ ಹಿಂಬಾಲಿಸಿ ಬಲು ದೂರ ಬಂದು ಸೋತು ವಾಪಸ್ಸಾಯಿತು. ಮೊನ್ನೆಯೂ ಅಣ್ಣನ ನೆನಪಿನ ಜೊತೆ ಬಹಳವಾಗಿ ಕಾಡಿದ ಈ ನಾಯಿಯ ಪ್ರೀತಿಯನ್ನು ವಿವರಿಸುವಲ್ಲಿ ಮಾತ್ರ ನಾನು ಸೋಲೊಪ್ಪಿಕೊಳ್ಳುತ್ತೇನೆ.

ತಿಂಗಳ ಮೊದಲು ಚೆನ್ನೈನಿಂದ ಸುಮಾರು ಐವತ್ತು ಕಿಮೀ ದೂರದ ಮುದಲಿಯಾರ್ ಕುಪ್ಪಂಗೆ ಹೋಗಿದ್ದೆವು. ಉರಿ ಬಿಸಿಲಿನ ಮಧ್ಯಾಹ್ನ, ಹಾಗೆ ಕೂತು ಜ್ಯೂಸು ಹೀರುತ್ತಿದ್ದಾಗ ಪುಟಾಣಿ ನಾಯಿಮರಿ ಕಾಲೆಳೆಯುತ್ತಾ ಬಂತು. ಅದರ ಹಿಂಬದಿಯ ಎರಡೂ ಕಾಲುಗಳು ನಜ್ಜುಗುಜ್ಜಾಗಿದ್ದವು. ಪಾಪ, ಬಹುಶಃ ಯಾವುದೇ ವಾಹನದ ಅಡಿಗೆ ಸಿಕ್ಕಿ ಹಾಗಾಗಿದ್ದಿರಬೇಕು. ಆದರೆ ಗಾಯ ಗುಣವಾಗಿದ್ದರೂ, ಕಾಲು ಜೋಡಿರಲಿಲ್ಲವೆನಿಸುತ್ತದೆ. ನಡೆಯಲು ಅದಕ್ಕೆ ಆಧಾರ ಕೇವಲ ಮುಂಬದಿಯ ಕಾಲುಗಳು. ಭಾರೀ ಆತ್ಮವಿಶ್ವಾಸದ ಆ ಎರಡು ಕಾಲಿನ ನಾಯಿಮರಿ ನಮ್ಮತ್ತ ಬಂತು. ಎಂದಿನಂತೆ ಬಿಸ್ಕತ್ತು ಪ್ಯಾಕೆಟ್ಟುಗಳು ಖಾಲಿಯಾದವು. ತನ್ನ ದೇಹದ ಹಿಂಬದಿಯ ಶಕ್ತಿ ಕಳೆದುಕೊಂಡಿದ್ದ ಅದಕ್ಕೆ ಬಾಲವಾಡಿಸಲೂ ಆಗುತ್ತಿರಲಿಲ್ಲ. ಆದರೇನಂತೆ, ತಿಂದ ಮೇಲೆ ಕೊನೆಗೊಮ್ಮೆ ಪ್ರೀತಿಯಿಂದ ನೋಡಿ ತೃಪ್ತಿಯಿಂದ ಕಾಲೆಳೆಯುತ್ತ ಅಲ್ಲೆಲ್ಲೋ ಮರೆಯಾಯಿತು.

ಅದಿರಲಿ, ಇತ್ತೀಚೆಗೆ ಮೊನ್ನೆ ನಮ್ಮ ಅಪಾರ್ಟ್‌ಮೆಂಟಿಗೆ ಒಂದು ದಿನ ಬೆಳ್ಳಂಬೆಳಗ್ಗೆ ನಾಯಿ ಬಂದಿತ್ತು. ಪಕ್ಕಾ ಕಂಟ್ರಿ ನಾಯಿಯಾದರೇನಂತೆ, ಕೊರಳಲ್ಲಿ ಚೆಂದದ ಬೆಲ್ಟು. ಸ್ನಾನ ಮಾಡಿಸಿ ನುಣುಪಾಗಿದ್ದ ಕೂದಲು. ದಾರಿ ತಪ್ಪಿ ಬಂದಿದ್ದ ಅದು ಯಾರದೋ ಮನೆಯ ಸಿಕ್ಕಾಪಟ್ಟೆ ಮುದ್ದು ಮಾಡಿಸಿಕೊಳ್ಳುತ್ತಿದ್ದ ಸಾಕು ನಾಯಿ ಎಂದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಆದರೆ, ನಮ್ಮ ಅಪಾರ್ಟ್‌ಮೆಂಟಿನ ಮುಂದೆ ಪ್ರತ್ಯಕ್ಷವಾದಾಗಿನಿಂದ ಅದನ್ನು ಯಾವ ಮನೆಯವರೂ ಅವರವರ ಮನೆಯ ಮುಂದೆ ಮಲಗಲು ಅದನ್ನು ಬಿಡುತ್ತಿರಲಿಲ್ಲ. ಎಲ್ಲರೂ ಓಡಿಸುತ್ತಿದ್ದರು. ಸುಸ್ತಾದ ಅದು ಕೊನೆಗೆ ನಮ್ಮ ಮನೆಯ ಮೆಟ್ಟಿಲ ಕೆಳಗೆ ಬಂದು ಮಲಗಿತು. ದಯನೀಯವಾಗಿ ನೋಡುತ್ತಿದ್ದ ಅದಕ್ಕೆ ಬಿಸ್ಕತ್ತು, ಅನ್ನ- ಸಾಂಬಾರು ಹಾಕಿದೆವು, ಮಾರನೇ ದಿನ ಪಕ್ಕದ ಮನೆಯವರಿಂದ 'ಇನ್ನು ಅದು ಇಲ್ಲಿಂದ ಏಳಲ್ಲ ಬಿಡಿ, ಈ ಫ್ಲಾಟಿನಲ್ಲಿದ್ದೋರ ಕಥೆ ಮುಗೀತು' ಎಂಬರ್ಥದ ಕುಹಕದ ಮಾತುಗಳೂ ತೂರಿ ಬಂದವು. ಹಾಗೆ ಇದ್ದ ಅದು, ನಾಲ್ಕೈದು ದಿನ ಇದ್ದು ಚೆನ್ನಾಗಿ ತಿಂದುಂಡು ಒಮ್ಮೆ ಹೊರಟು ಹೋಯಿತು. ಹೇಗೆ, ಅದಕ್ಕೆ ಮತ್ತೆ ತನ್ನ ಮನೆ ಸಿಕ್ಕಿದೆ ಎಂದು ಗೊತ್ತಾಗಲಿಲ್ಲ.ಇರಲಿ, ಅಂತೂ ಅದಕ್ಕೆ ಅದರ ಮನೆಯ ದಾರಿ ಸಿಕ್ಕಿತ್ತು. ಇದಾಗಿ ವಾರದ ನಂತರ ಒಂದು ದಿನ ನಮ್ಮ ಮನೆಯ ಎರಡನೇ ಕ್ರಾಸಿನಲ್ಲಿ ರಾಜಗಾಂಭೀರ್ಯದಲ್ಲಿ ತನ್ನೊಡೆಯನ ಜೊತೆ ವಾಕಿಂಗ್ ಮಾಡುತ್ತಿದ್ದುದು ಕಣ್ಣಿಗೆ ಬಿತ್ತು. ಈಗ ದಿನವೂ ಮನೆಯ ಹತ್ತಿರವಿರುವ ಪಾರ್ಕಿಗೆ ತನ್ನೊಡೆಯನ ಜೊತೆ ಬರುತ್ತದೆ. ಕಂಡಾಗ ಪ್ರೀತಿಯಿಂದ ಕಣ್ಣು ಮಿಟುಕಿಸಿ ಬಾಲವಲ್ಲಾಡಿಸುತ್ತದೆ. ಕಾಡುವ ಇವುಗಳ ಪ್ರೀತಿಗಿಂತ ಇನ್ನೇನು ಬೇಕು ಹೇಳಿ???