.....ಆ ಮಗು ತನ್ನ ಸೂಕ್ಷ್ಮ ಮುದ್ದು ಕಣ್ಣುಗಳನ್ನು ಅಷ್ಟಗಲ ಮಾಡಿ ಆಗಸ ನಿಟ್ಟಿಸುತ್ತಿತ್ತು. ಅಮ್ಮ ಒಂದೊಂದೇ ತುತ್ತು ಉಂಡೆಕಟ್ಟಿ ಬಾಯಿಗಿಡುತ್ತಿದ್ದಳು. ಯಾವುದೋ ವಿಷಯ ಹೇಳಿ ಗಮನ ಬೇರೆಡೆಗೆ ಸೆಳೆದು ಉಣಿಸುವ ಕಷ್ಟ ಆ ಅಮ್ಮನಿಗೆ ಬಿಟ್ಟರೆ ಉಳಿದವರಿಗೆ ಗೊತ್ತಾಗಲಿಕ್ಕಿಲ್ಲ. ಮಗು ಕಣ್ಣಲ್ಲಿ ಆಗಸದ ತುಂಬ ನಕ್ಷತ್ರ. ಅಮ್ಮನಿಗೆ ಒಂದೊಂದು ತುತ್ತೂ ನಕ್ಷತ್ರದ ಮಿಂಚೇ. ಪಟಕ್ಕನೆ ಬಿಟ್ಟ ಬಾಯನ್ನು ಇಷ್ಟಗಲ ಮಾಡುತ್ತಾ ಮಗು ತನ್ನ ಹೊಳಹನ್ನು ಅಮ್ಮನಿಗೆ ಹಸ್ತಾಂತರಿಸಿತು...
‘ಅಮ್ಮಾ.., ಆ ನಕ್ಷತ್ರ ಎಷ್ಟು ಚೆಂದ ಅಲ್ವಾ...’
‘ಹೂಂ ಚೆಂದ... , ನಮ್ಮಂಥವರಿಗಲ್ವೇ...’ ಅನ್ನುತ್ತಾ ಮೆತ್ತಗೆ, ‘ಆ.... ದೊಡ್ಡ ಬಾಯಿ’ ಅನ್ನುತ್ತಾ ತಿನ್ನಿಸಿದ ತುತ್ತಿನೊಂದಿಗೆ ಅಮ್ಮನ ಬಾಯಿಂದ ಹೊರಬಿದ್ದ ‘ನಮ್ಮಂಥವರಿಗಲ್ಲ’ ಅನ್ನೋ ಮಾತು ಮಗುವಿನ ಸೂಕ್ಷ್ಮ ಕಿವಿಗೆ ಕೇಳಿಸದಿರಲಿಲ್ಲ.
ಅಮ್ಮನ ನಿಟ್ಟುಸಿರಿಗೆ ಉತ್ತರವಾಗಿ ಮಗುವಿಂದ ಪ್ರತಿ ಪ್ರಶ್ನೆ, ‘ಯಾಕಮ್ಮಾ...?’
‘ಚುಮ್ಮನೆ ಹೇಳ್ದೆ ಪುಟ್ಟಾ... ನಕ್ಷತ್ರಗಳೇ ಇಲ್ಲದ ಆಕಾಶ ಕೂಡಾ ಹೀಗೆ ಚೆಂದ ಅಂದೆ ಅಷ್ಟೇ..’ ಯಾಕೋ ಅಮ್ಮನಿಂದ ಸ್ಪರ್ಧಾತ್ಮಕ ಉತ್ತರ.
‘ಅದ್ಯಾಕಮ್ಮಾ...’
‘ನೋಡು ಪುಟ್ಟಾ.. ನಕ್ಷತ್ರಗಳೇ ಇಲ್ಲದ ಆಕಾಶ ಕಪ್ಪಗಿರುತ್ತೆ. ಕಪ್ಪು ಚೆಂದ ಅಲ್ವಾ. ಕಾಣೋದಕ್ಕಿಂತ ಏನೂ ಕಾಣಿಸದೇ ಇದ್ರೆ ಇನ್ನೂ ಚೆಂದ ಅಲ್ವಾ? ಅದಕ್ಕೆ ಹಾಗಂದೆ. ಬಿಡು, ಈ ತುತ್ತು ತಿನ್ನು. ನಿಂಗೆ ಅದೆಲ್ಲಾ ಈಗ ಅರ್ಥವಾಗಲ್ಲ..’
‘ಇಲ್ಲಮ್ಮಾ.. ನಕ್ಷತ್ರವಿದ್ರೆ ಆಕಾಶ ನೀಲಿಯಾಲಿ ಚೆಂದ ಕಾಣುತ್ತೆ. ಚಿಗಿಮಿಗಿ ಅಂತ ಮಿಂಚುತ್ತೆ. ಮೊನ್ನೆ ಅತ್ತೆ ಮದುವೆಗೆ ಜಿಗಿಮಿಗಿ ನಕ್ಷತ್ರಗಳನ್ನೆಲ್ಲಾ ಮಾಲೆ ಕಟ್ಟಿದ್ರಲ್ಲಮ್ಮಾ... ಎಷ್ಟು ಚೆಂದ ಕಾಣ್ತಿತ್ತು ಅಲ್ವಮ್ಮಾ...’ ಕೊಂಚವೂ ಸ್ಪರ್ಧೆಯಿಲ್ಲದ ಕುತೂಹಲಿ ಮಗುವಿನ ಉತ್ತರ ಅಷ್ಟೇ ಸರಾಗವಾಗಿ.
ಮಗುವಿನ ಉತ್ಸಾಹಕ್ಕೆ ಅಮ್ಮನಿಂದ ಹೂಂ ಎಂಬ ಉತ್ತರ.
‘ಅಮ್ಮಾ.. ನಾವು ಹಾಗೆ ನಕ್ಷತ್ರ ಮಾಲೆ ಕಟ್ಟಿ ನೇತಾಡಿಸೋದು ಯಾವಾಗ?’
‘ಅವೆಲ್ಲ ನಮ್ಮಂಥೋರಿಗೆ ಆಗಲ್ಲ ಪುಟ್ಟಾ... ಅದಕ್ಕೆಲ್ಲ ತುಂಬ ದುಡ್ಡು ಬೇಕು. ನೀನು ದೊಡ್ಡೋನಾದಾಗ ಮಾಡುವಿಯಂತೆ. ’ ಉತ್ತರ.
‘ಹಾಂ.. ಅಮ್ಮಾ ನಾವು ಆ ಮೇಲಿರೋ ನಕ್ಷತ್ರಗಳನ್ನೇ ತಂದು ಮನೇಲಿಟ್ರೆ? ನಮ್ಮನೇ ದೀಪಕ್ಕಿಂತ ಅದೇ ಚೆಂದ ಅಲ್ವಮ್ಮಾ..
ಇಲ್ಲ ಪುಟ್ಟಾ.. ದೀಪಾನೇ ಚೆಂದ. ದೀಪಾನಾದ್ರೆ ನಂದಿಸೋದಕ್ಕಾಗುತ್ತೆ. ನಕ್ಷತ್ರ ನಂದಿಸೋಕಾಗಲ್ವಲ್ಲ. ನಂದದ ದೀಪಕ್ಕಿಂತ ನಂದೋ ದೀಪಾನೇ ಚೆಂದ. ನೀನು ಓದಿ ದೊಡ್ಡೋನಾಗಬೇಕಂದ್ರೆ ದೀಪಾನೇ ಬೇಕು. ನಕ್ಷತ್ರ ಬೇಕಾಗಲ್ಲ ಪುಟ್ಟ...’ ಅಮ್ಮನ
ಮಾತಿನಲ್ಲಿ ಕೊಂಚ ಉತ್ಸಾಹ.
ತುತ್ತು ಮುಗಿದಿತ್ತು. ಮಗು ಇನ್ನೂ ಯೋಚಿಸುತ್ತಿತ್ತು.
‘ಅಮ್ಮಾ ನಿಂಗೆ ಹಾಗಾದ್ರೆ ನಂದಿಸೋ ದೀಪಾನೇ ಇಷ್ಟಾನಾ?’
‘ಹೂಂ ಪುಟ್ಟಾ.. ಯಾಕೆ..?’
‘ಮತ್ತೆ..., ನೀನು ಅಲ್ಲಿ ಒಳಗೆ ಫೋಟೋ ಮುಂದೆ ದೀಪಾ ಉರಿಸಿದ್ಯಲ್ಲಮ್ಮಾ.. ಯಾಕಮ್ಮಾ ಅದನ್ನ ನಂದಿಸೋದೇ ಇಲ್ಲ?’
‘ಅದು ಅಪ್ಪನ ಫೋಟೋ ಪುಟ್ಟ. ಅಪ್ಪ ಅಲ್ಲಿ ನಕ್ಷತ್ರ ಇರೋವಲ್ಲಿಗೆ ಹೋಗಿದ್ದಾರಲ್ಲಾ? ಅದಕ್ಕೆ ಅಪ್ಪನ ನೆನಪಿಗೆ ಆ ದೀಪ ನಂದಿಸೋದೇ ಇಲ್ಲ ಪುಟ್ಟ.’
‘ಅಮ್ಮಾ, ಹಾಗಾದ್ರೆ ನಿಂಗೆ ಅಪ್ಪ ಅಂದ್ರೆ ಇಷ್ಟ ಇಲ್ವಾ?’
‘ಯಾಕೆ ಪುಟ್ಟಾ..?’ ಬಾಣದಂತೆ ಬಂದೆರಗಿದ ಪ್ರಶ್ನೆಗೆ ಅಮ್ಮ ಕಂಗಾಲು.
‘ಯಾಕಂದ್ರೆ ನೀನು ಹೇಳಿದ್ಯಲ್ಲಮ್ಮಾ ಆಗ. ನಂದದ ದೀಪಕ್ಕಿಂತ ನಂದೋ ದೀಪಾನೇ ಚೆಂದ ಅಂತ.’
................................
ಮಗುವಿನ ಪ್ರಶ್ನೆಗೆ ಒಂದು ಕ್ಷಣ ಆಕೆಯಿಂದ ನಿರುತ್ತರ. ಎಂಜಲು ತಟ್ಟೆ ಅಲ್ಲೇ ಉಳಿದಿತ್ತು. ಒಂದು ಕ್ಷಣ ಯೋಚಿಸಿ ಒಳಹೋದ ಆಕೆ ಮತ್ತೆ ಹೊರ ಬಂದಳು. ಮಗು ಕಣ್ಣಲ್ಲಿ ಅದೇ ಆಕಾಶದ ನಕ್ಷತ್ರದ ಜಿನುಗು ಮಳೆ. ಒಳಮನೆಯ ನಂದಾದೀಪ ಕಣ್ಮುಚ್ಚಿತ್ತು. ಒಳಗೆ ಕತ್ತಲು. ಹೊರಬಂದ ಅಮ್ಮನ ಕಣ್ಣಲ್ಲಿ ನಂದಾದೀಪ...
6 comments:
‘ನಮ್ಮಂಥವರಿಗಲ್ಲ’ಎಂಬ ಪದ ಏನೆಲ್ಲಾ ಅರ್ಥಗಳನ್ನು ಧ್ವನಿಸುತ್ತದೆ ಅಲ್ಲವೇ.. ನೋವು, ನಿರಾಸೆ, ಹತಾಶೆ, ಒಂಟಿತನ, ತಬ್ಬಲಿತನ, ತಿರಸ್ಕಾರ....
hey, its really good one. keep writing. liked it.
parwagilla..baritidiya annode khushi.mattashtu bare...
nenapidya andina dinagallli nakshatrada kategalannu naavu kattiddu...!depa hacida ssaalige nakshatragalu belagiddu, holapiddu...!
ಒಂದು ತುತ್ತಿನ ಓದು,
ಮೂರು ಹೊತ್ತು ಕಾಡುವಷ್ಟಿದೆ.....
ಮಧುಬನ ಆಪ್ತವೆನಿಸಿದೆ.
ಹರಿ
Parwagilve.......chennagide madhubana.......
hari
ಹೇ ರಾಧಿಕೆ, ಮಗುವಿನಂಥದೇ ಕೋಮಲ ಭಾವ ಈ ಕತೆಯ ಎಳೆ. ಕೆಲವೊಮ್ಮೆ ನಾವು ಬೆಳೆದಂತೆ ಮಗುತನವನ್ನೇ ಕಳೆದುಕೊಂಡ್ಬಿಡ್ತೀವಿ. ನಮ್ಮ ಗ್ರಹಿಕೆ ಕೂಡ ಬದಲಾಗತ್ತೆ. ಹಾಗೇ ನಮ್ಮ ಅಭಿವ್ಯಕ್ತಿ ಕೂಡ. ಅವೆಲ್ಲ ನಿನ್ನಲ್ಲಿ ಚಿಗುರ್‍ತಿವೆ ಅಂದ್ರೆ ಖುಷಿಯಾಗ್ತಿದೆ ಕಣೆ.
Post a Comment