Friday, January 2, 2009

ಆ ಹೆಬ್ಬಂಡೆ...

ಆ ಗುಡ್ಡದ ತುದಿಯಲ್ಲಿ ರಾಜನಂತೆ ಕಂಗೊಳಿಸುತಿತ್ತು ಆ ಕಲ್ಲುಬಂಡೆ. ಅದರದೇ ಆದ ಹೊಳೆವ ಮೈಬಣ್ಣ; ಬೃಹದಾಕಾರ ತಾಳಿ ಅದೆಷ್ಟೋ ದೂರದಿಂದ ತನ್ನ ಅಸ್ತಿತ್ವ ಪ್ರತಿನಿಧಿಸುತಿತ್ತು. ಸುತ್ತಲ ಪರಿಸರವೂ ಹಾಗೆಯೇ.. ಬಂಡೆಯ ಅಸ್ತಿತ್ವಕ್ಕೆ ಪೂರಕ ವಾತಾವರಣವನ್ನೂ ನಿರ್ಮಾಣ ಮಾಡಿತ್ತು. ಬೆಳಗಿನ ಹಿತವಾದ ಮುಂಜಾವಿಗೆ ಮೈಯೊಡ್ಡಿ, ಮಂಜಿನ ಹನಿಗಳು ಮುತ್ತಿನಂತೆ ತನ್ನ ಮೇಲೆ ಉರುಳುವುದನ್ನು ತಾಯ ಮಮತೆಯಿಂದ ಕಣ್ತುಂಬಿಕೊಂಡು ನೋಡುತಿತ್ತು. ಬಿಸಿಲಿಗೆ ಕಾದು ಕೆಂಪಾದರೂ ಬಳಲಿ ಬೆಂಡಾಗದ ಆ ಧೀಮಂತ ಸ್ವರೂಪ ಲಕಲಕನೆ ಹೊಳೆಯುತ್ತಿತ್ತು. ಎಷ್ಟೋ ಜೀವಗಳ ಪುಟಾಣಿ ಕನಸುಗಳಿಗೆ ಚಿಗುರು ನೀಡುವ ನವಿರು ಸಮಯದಲ್ಲಿ ಮಂಜಿನಂತೆ ಕರಗುವ ತಾಕತ್ತೂ ಆ ಬಂಡೆಗಿತ್ತು. ಕೆಂಪು ಸಂಜೆಯಲ್ಲಿ ಪಶ್ಚಿಮ ದಿಗಂತದಲ್ಲಿ ಸೂರ್ಯ ದಿಗಂತಕ್ಕೆ ಚುಂಬಿಸುವ ರಸ ಸಮಯದಲ್ಲೂ ಬೆಂದು ಬಂದ ಬಾಡಿದ ಮನಗಳಿಗೆ ಆಸರೆ ನೀಡುವ ಹೃದಯ ವೈಶಾಲ್ಯತೆಯನ್ನೂ ಹೊಂದಿತ್ತು...
............... ................... ................
...... ಹೌದು. ಶಾಸ್ತ್ರಿಗಳು ಹಾಗೆಯೇ.. ಅವರದೇ ಆದ ಘನತೆ.. ಗಾಂಭೀರ್ಯ.. ಕಾಠಿಣ್ಯ. ವಯಸ್ಸು ೬೦ ದಾಟಿದರೂ ತುಂಬು ಸಂಸಾರ ನಡೆಸುವ ಮರ್ಜಿ ಇನ್ನೂ ಇಳಿದಿರಲಿಲ್ಲ. ಚಿಣ್ಣರ ಗುಸು ಗುಸು.. ಕಿಲ ಕಿಲ... ಪಿಸಿ ಪಿಸಿ ಶಬ್ದಗಳಿಂದ ಮನೆಯ ಗಲಗಲ ಸೌಂದರ್ಯ ಆ ಊರಿನಲ್ಲಿ ಎಲ್ಲರ ಹೊಟ್ಟೆ ಉರಿದುಹೋಗುವಂತೆ ಇತ್ತು. ಆದರೆ ನಿಧಾನವಾಗಿ ಆ ದೃಢತೆ.. ವಾತ್ಸಲ್ಯ... ಕಾಠಿಣ್ಯದ ಪ್ರತಿರೂಪಕ್ಕೂ ಸವಾಲಿನ ದಿನಗಳು ಬಂದೀತೆಂದು ಯಾರೂ ಭಾವಿಸಿರಲಿಲ್ಲ. ಹಾಗೇ ಒಂದು ದಿನ ಎಲ್ಲರ ಎಣಿಕೆ ತಪ್ಪಾಗಿ ಹೋಗಿತ್ತು...
................... ..................... ..................
ಅದೊಂದು ದಿನ ಎಲ್ಲಿಂದಲೋ ಒಂದು ದಂಡು ಬಂದಿತ್ತು; ಆ ಹೆಬ್ಬಂಡೆಯ ಬಳಿಗೆ. ಏನೋ ಮಾತುಕತೆಗಳು ನಡೆದವು. ವಿನಿಮಯಗಳೂ ಆದವು. ಇದಾಗಿ ಕೆಲದಿನಗಳ ನಂತರ ಕೆಲಸವೂ ಶುರುವಾಯ್ತು. ದೊಡ್ಡ ದೊಡ್ಡ ಲಾರಿ ಟ್ರಕ್ಕುಗಳು ತಮ್ಮ ರಕ್ಕಸಗಾಲನ್ನು ಇಟ್ಟವು. ಇದ್ದಕ್ಕಿದ್ದಂತೆ ತನ್ನ ಪಾಡಿಗೆ ಹಾಯಾಗಿದ್ದ ಶಾಂತ ಪರಿಸರ ಒಮ್ಮೆಲೇ ಬುಸುಗುಟ್ಟಿತು. ಆ ದಿನಗಳಲ್ಲಿ ಹೆಣೆದಿದ್ದ ಕನಸುಗಳು.. ಬರೆದಿದ್ದ ಬಯಕೆಗಳು.. ಎಲ್ಲವೂ ನಿಮಿಷದಲ್ಲಿ ಚೂರುಚೂರಾದವು. ಹೆಬ್ಬಂಡೆಗೆ ಒರಗಿ ದುಗುಡ.. ಬೇಸರ ಕಳೆಯುತ್ತಿದ್ದ ಜೀವಗಳ ಬಯಕೆಗಳೂ ಹಾಗೆಯೇ ಬಿರಿದು ಬರಡಾದವು. ಜತೆಗೆ ಕಿರಿಯ ಜೀವಗಳ ಪುಟ್ಟ ಪುಟ್ಟ ಕನಸುಗಳೂ...
....... ಕೊನೆಗೆ ಇವೆಲ್ಲವೂ ಇತಿಹಾಸವಾಗಿ ಹೋಯಿತು.

................... .................... ...................
ಇನ್ನು......., ನಮ್ಮೂರಿನಲ್ಲಿ ಈಗ ಕನಸುಗಳೇ ಇರುವುದಿಲ್ಲ. ಕಾರಣ, ಕನಸು ಕಾಣಲು ಕೂರಲು ಬಂಡೆಯೇ ಇಲ್ಲವಲ್ಲ?..

6 comments:

ಪ್ರಿಯಾ ಕೆರ್ವಾಶೆ said...

ಇದು ಉದಯವಾಣಿಯಲ್ಲಿ ಬಂದ ಕಥೆ ಅಲ್ವಾ? ಅಷ್ಟು ದಿನ ಬಿಟ್ಟು ಓದಿದ್ರೂ ಚೆನ್ನಾಗಿಲ್ಲ ಅನಿಸೋದಿಲ್ಲ. ಇದ್ರ ಜೊತೆಗೆ ಕ್ಯಾನ್‌ವಾಸ್‌ನಲ್ಲೂ ರಾಧಿಕೆಯನ್ನು ಕಾಣುವಾಸೆ.

ಆಲಾಪಿನಿ said...

ಮೇಡಮ್ ತಾವಿನ್ನೂ ಬೆಂಗಳೂರಲ್ಲೇ ಇದಿರೋ...

ಕಾರ್ತಿಕ್ ಪರಾಡ್ಕರ್ said...

chennagide.....pschology classina bagge bareyalu idu sakaala....!!baredu bidi...

www.kumararaitha.com said...

ಈ ಬರಹದ ಕೊಂಡಿಗಳು ಕಳಚಿಕೊಂಡಿವಿಯೇನೋ ಅನ್ನಿಸುತ್ತದೆ.ಆದರೆ ಹೆಬ್ಬಂಡೆ ಪ್ರಭಾವ ಮನಗಾಣಿಸುವಲ್ಲಿ ಇದು ಶಕ್ತ.ಈ ಬರಹ ಏಕಕಾದಲ್ಲಿ ಹೆಬ್ಬಂಡೆಗೆ ಸಲ್ಲಿಸಿದ ಶ್ರದ್ದಾಂಜಲಿಯೂ ಆಗಿದೆ.

dinesh said...

ಬರಹ ಚೆನ್ನಾಗಿದ.ಓದಿದ ಕ್ಷಣ ಯೋಚಿಸುವಂತೆ ಮಾಡಿತು.

Unknown said...

ಹಾಯ್,
ಪ್ರತಿ ವರ್ಷದ ಹಾಗೆ ಅಮ್ಮನ ಹುಟ್ಟು ಹಬ್ಬದ ಅಂಗವಾಗಿ ಮಾತೃ ಉತ್ಸವ ಮಾರ್ಚ್ ತಿಂಗಳ ಎರಡನೇ ಭಾನುವಾರ ಅಂದರೆ ಎಂಟನೇ ತಾರೀಖಿನಂದು ನಡೆಸಲಿದ್ದೇವೆ. ಅಂದವಾದ ಅಮ್ಮನಿಗೆ ಸಂಬಂಧಿಸಿದ ಒಳ್ಳೆಯ ಸೂಕ್ತಿಗಳು/ಕವನದ ಸಾಲುಗಳು/ Quotations ಇದ್ದರೆ ಬೇಕು. ನಿಮ್ಮಲ್ಲಿದ್ದರೆ ಫೆಬ್ರವರಿ ಎರಡನೇ ತಾರೀಖಿನೊಳಗೆ ನನಗೆ ಕಳುಹಿಸುವಿರಾ ? ಬರೆದವರ ಹೆಸರೂ ಇದ್ದರೆ ಅನುಕೂಲ.

ಅಂದ ಹಾಗೆ, ಆಹ್ವಾನ ಕಳುಹಿಸುವೆ … ತಪ್ಪದೆ ಬನ್ನಿ
ಧನ್ಯವಾದಗಳು,
ಶಮ, ನಂದಿಬೆಟ್ಟ
http://minchulli.wordpress.com