Monday, September 5, 2011

ವೆಂಕಟನ ಗಿರಿಯಲ್ಲಿ...

ನಮ್ಮ ತಂಡದಲ್ಲಿದ್ದ ಧರ್ಮೇಂದ್ರ ಆ ಪುಟಾಣಿ ತೊರೆಯನ್ನು ನಾಲ್ಕಾರು ಬಾರಿ ಅತ್ತಿಂದಿತ್ತ ಇತ್ತಿಂದತ್ತ ದಾಟುತ್ತಾ ಬಂಡೆಯಲ್ಲಿ ಕವುಚಿ ಮಲಗಿ ಪ್ರಾಣಿಗಳಂತೆ ನಾಲಗೆಯ ಮೂಲಕ ಬಗ್ಗಿ ನೆಕ್ಕಿ ನೆಕ್ಕಿ ನೀರು ಕುಡಿಯುತ್ತಿದ್ದ. ನಾನು, ಮಹೇಶ್ ಹಾಗೂ ಇನ್ನೂ ಒಂದಿಬ್ಬರು ಆ ಭಾನುವಾರ ಬೆಳಗಾತ ಎದ್ದು ನೀರಿನಲ್ಲಿ ಕಾಲು ಅದ್ದಿ ಮೀನುಗಳು ಕಾಲಿಗೆ ಮುತ್ತಿಕ್ಕುವ ಕಚಕುಳಿ ಅನುಭವಿಸುತ್ತಾ ಕೂತಿದ್ದೆವು. ಧರ್ಮೇಂದ್ರನ ಅವತಾರವೇ ವಿಚಿತ್ರವೆನಿಸಿತು ನನಗೆ. ಹಾಗೇ ನೋಡುತ್ತಾ ಇದ್ದೆ. ಯಾಕೋ ಕುತೂಹಲ ಮೂಡಿತು. ಆತನ ಹಾವಭಾವದಲ್ಲಿ ಕೊಂಚವೂ ನಾಟಕೀಯತೆ ಇರಲಿಲ್ಲ. ಬಹಳ ಹೊತ್ತು ತನ್ಮಯನಾಗಿ ಹಾಗೇ ನೀರು ಕುಡಿಯಲು ಕಷ್ಟಪಟ್ಟು ಕೊನೆಗೂ ಯಶಸ್ವಿಯಾದ. 'ಅಬ್ಬಾ' ಎಂದೆವು ಎಲ್ಲರೂ ಒಟ್ಟಾಗಿ. ಅಷ್ಟರಲ್ಲಿ ಚೆಂಚು ಓಡಿ ಬಂದ. ಬನ್ನಿ ಬನ್ನಿ ಹೋಗೋಣ, ಸಾಕು ಸಾಕು ಎಂದ. ಎಲ್ಲರೂ ಗಂಟು ಮೂಟೆ ಕಟ್ಟಿ ಹೊರಡಲು ಸನ್ನದ್ಧರಾದೆವು.

ಚೆನ್ನೈಗೆ ಬಂದ ಹೊಸತರಲ್ಲಿ ನನಗೆ ಜೀವ ಚೈತನ್ಯ ನೀಡಿದ್ದು ಈ ವೆಂಕಟಗಿರಿ. ಬೆಂಗಳೂರಿನ ಚುಮುಚುಮು ಚಳಿ ಬಿಟ್ಟು ಬಿಸಿಲೂರಿಗೆ ಬಂದಿದ್ದೆ. ಅದೇ ಸಮಯಕ್ಕೆ ಮಹೇಶ್ ಈ ವೆಂಕಟಗಿರಿ ಚಾರಣದ ಬಗ್ಗೆ ವಿಷಯ ಅರಹಿದ. ಮರುಭೂಮಿಯ ನಟ್ಟ ನಡುವೆ ಜೀವಜಲ ಕಂಡ ಹಾಗಿತ್ತು ನನ್ನ ಪರಿಸ್ಥಿತಿ. ಛಕ್ಕನೆ ಹೋಗೋಣ ಎಂದು ಹೊರಟಿದ್ದೂ ಆಗಿತ್ತು ಇಬ್ಬರೂ.

ಅಂದಹಾಗೆ, ಈ ವೆಂಕಟಗಿರಿ ಪರ್ವತ ತಿರುಪತಿಗೆ ತೀರ ಹತ್ತಿರವಾದದ್ದು. ತಿರುಮಲ ಪರ್ವತಕ್ಕೆ ಸಮಾಂತರವಾಗಿದೆ ಈ ಪರ್ವತ. ಹೀಗಾಗಿ ಎತ್ತ ನೋಡಿದರತ್ತ ಹಸಿರು ಹಸಿರು ಹಸಿರು. ಅಲ್ಲಲ್ಲಿ ಪುಟ್ಟ ತೊರೆಗಳು. ಮುಗಿಯದ ದಂಡಕಾರಣ್ಯದ ಹಾದಿ... ಎರಡು ದಿನಗಳು ಹಾಗೇ ಕಳೆದು ಹೋಗಿದ್ದವು.

ಚೆಂಚು ನಮ್ಮ ತಂಡದ ನಾಯಕ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಆತನ ಊರು ವೆಂಕಟಗಿರಿ. ನನಗೆ ನನ್ನೂರಿನ ಕಳಂಜಿಮಲೆ ಹೇಗೋ ಹಾಗೆಯೇ ಚೆಂಚುಗೆ ವೆಂಕಟಗಿರಿ. ಅದೆಷ್ಟೋ ಬಾರಿ ಆತ ವೆಂಕಟಗಿರಿಯಲ್ಲಿ ಅಲೆದಾಡಿದ್ದನೋ ಲೆಕ್ಕವಿಲ್ಲ. ಹೀಗಾಗಿ ಚೈನ್ನೈ ಟ್ರೆಕ್ಕಿಂಗ್ ಕ್ಲಬ್ಬಿನ ಹೆಸರಿನಲ್ಲಿ ಚೆಂಚು ಜೊತೆಗೆ ನಾವೂ ಸೇರಿದಂತೆ ಚೆನ್ನೈ ತಮಿಳರ ಒಂದು ಪುಟ್ಟ ಗುಂಪು ಸೇರಿತ್ತು. ಚೆನ್ನೈಯಿಂದ ಸುಮಾರು 170 ಕಿಮೀ ದೂರದ ವೆಂಕಟಗಿರಿಯೆಡೆಗೆ ನಮ್ಮ ತಂಡದ ಪ್ರಯಾಣ ಶನಿವಾರ ಮುಂಜಾವಿನಲ್ಲೇ ಹೊರಟಿತ್ತು. ಶನಿವಾರ ಬೆಳಗ್ಗೆ 11 ಗಂಟೆಗೆಲ್ಲಾ ವೆಂಕಟಗಿರಿಯಲ್ಲಿದ್ದೆವು. ಅಲ್ಲಿಂದ ಹೊರಟ ನಮ್ಮ ಚಾರಣ ಸುಮಾರು 4 ಗಂಟೆಗೆ ಮಲ್ಲೇಶ್ವರ ಕೋಣ ಎಂಬಲ್ಲಿಗೆ ಅಂತ್ಯವಾಗಿತ್ತು. ಅಲ್ಲೊಂದು ಪುಟ್ಟ ಶಿವ ದೇಗುಲ. ಶುದ್ಧ ತಮಿಳುನಾಡು ಶೈಲಿಯಲ್ಲಿ ಕೆಂಪು- ಬಿಳಿ ಪಟ್ಟೆ ಬಳಿದ ದೇಗುಲ ನಮ್ಮೂರಿನ ಪುಟ್ಟ ಮದುವೆ ಮಂಟಪದಂತಿತ್ತು. ವರ್ಷದಲ್ಲೊಮ್ಮೆ ಹರಕೆ ತೀರಿಸಲು ಬೆಟ್ಟದ ಸಮೀಪದ ಹಳ್ಳಿ ಜನರು ಈ ದೇಗುಲಕ್ಕೆ ಭೇಟಿ ಕೊಡುತ್ತಾರಂತೆ.

ಗಂಟೆ ಕೇವಲ ನಾಲ್ಕಾಗಿದ್ದರೂ, ದಟ್ಟಕಾನನದ ನಡುವೆ ಕತ್ತಲಾದ ಅನುಭವ. ಬೆವರಿಳಿದರೂ ಸುತ್ತಲಿನ ಸಮೃದ್ಧ ಗಾಢ-ಕಪ್ಪು ಹಸುರು, ದೇಗುಲದ ಹಿಂಬದಿಯಿಂದ ಕೇಳಿಬರುತ್ತಿದ್ದ ಝರಿಯ ನಿನಾದ, ಹರಿವ ತೊರೆಯ ಜುಳುಜುಳು. ಅಲ್ಲೇ ಒಂದರ್ಧ ತಾಸು ನೀರಿನಲ್ಲಿ ಮುಳುಗೆದ್ದು ಆಯಾಸ ಪರಿಹರಿಸಿ ನಮ್ಮ ಸಾಮಾನುಗಳನ್ನೆಲ್ಲಾ ಶಿವ ದೇಗುಲದಲ್ಲಿ ಬಿಟ್ಟು ಮತ್ತೆ ಬೆಟ್ಟ ಹತ್ತಲು ಅಣಿಯಾದೆವು. ಸಂಜೆಯ ವೇಳೆಗೆ ಬೆಟ್ಟದ ತುದಿ ಮುಟ್ಟಿ, ರಾತ್ರಿ 8 ಗಂಟೆಯ ಹೊತ್ತಿಗೆ ಮರಳಿ ದೇಗುಲಕ್ಕೆ ಬಂದೆವು. ಜೀರುಂಡೆಗಳ ಝೇಂಕಾರ, ದೂರದಲ್ಲೆಲ್ಲೋ ಊಳಿಡುತ್ತಿರ ನರಿ, ಎಲ್ಲವುಗಳ ನಡುವೆ ಗಾಢಾಂಧಕಾರದ ಮೌನದಲ್ಲಿ ಕೊರೆವ ಚಳಿಯಲ್ಲಿ ಲೋಕದ ಪರಿವೆಯಿಲ್ಲದೆ ನಿದ್ದೆ ಹೋಗಿದ್ದೆವು. ಮುಂಜಾನೆ ಎದ್ದ ಹಾಗೆ ಮತ್ತೆ ತೊರೆಯ ಬಳಿ ಕಾಲು ಇಳಿ ಬಿಟ್ಟು ಚಳಂಪಳ ಮಾಡುತ್ತಾ ಕೂತಿದ್ದೆವು.

ಮುಂಜಾನೆ ಮತ್ತೆ ಬೆಟ್ಟ ಹತ್ತಿಳಿದು, ಗಂಜಿ ಉಂಡು ನಿಧಾನಕ್ಕೆ ವೆಂಕಟಗಿರಿ ಪಟ್ಟಣದತ್ತ ಹೆಜ್ಜೆ ಹಾಕತೊಡಗಿದೆವು. ಬರೋಬ್ಬರಿ ಐದಾರು ಗಂಟೆಯ ಬಳಿಕ ಮುಸ್ಸಂಜೆಯ ಹೊತ್ತಿಗೆ ವೆಂಕಟಗಿರಿಗೆ ತಲುಪಿದೆವು. ಹಾದಿಯುದ್ದಕ್ಕೂ ನನಗೆ ಮಾತ್ರ ದಕ್ಕಿದ ಅದೃಷ್ಟವೇ ಬೇರೆ. ಕಂಡಕಂಡ ಪೊದೆಗಳಲ್ಲಿ ಮುಳ್ಳಂಕಾಯಿ, ಚೀರುಮುಳ್ಳು, ಕರಂಡೆ ಕಾಯಿ, ಕೇಪುಳಹಣ್ಣು... ಸಿಕ್ಕಿದ್ದೆಲ್ಲಾ ಬಾಯಿಗೆ ತುರುಕುತ್ತಿದ್ದ ನನ್ನನ್ನು ಕಂಡು ಉಳಿದವರು ವಿಚಿತ್ರವಾಗಿ ನೋಡುತ್ತಿದ್ದರು. ಪುಣ್ಯಕ್ಕೆ ಅವರು ರುಚಿ ನೋಡುವ ಧೈರ್ಯ ಮಾಡಲಿಲ್ಲ. ನಾನೂ ಒತ್ತಾಯಿಸಲಿಲ್ಲ, ನನ್ನ ಅದೃಷ್ಟಕ್ಕೆ ನಾನೇ ವಂದಿಸುತ್ತಾ ಪೂರ್ತಿ ಒಬ್ಬಳೇ ಗುಳುಂ ಮಾಡಿದೆ.

ಆದರೆ.., ಈಗಲೂ ಬೇಸರವಿದೆ. ವೆಂಕಟಗಿರಿ ಪರ್ವತ ಹತ್ತಿದರೂ ದುರ್ಗಂಗೆ ಹತ್ತಲಾಗದಿದ್ದುದು. 'ದುರ್ಗಂ' ಸುಂದರ ಹಾಗೂ ಕಠಿಣ ಚಾರಣ. ವೆಂಕಟಗಿರಿ ಚಾರಣಕ್ಕೆ ಹೊರಟಾಗಲೂ ನನ್ನ ಮನಸ್ಸಿನ ತುಂಬಾ ಈ ದುರ್ಗಂ ತುಂಬಿತ್ತು. ವೆಂಕಟಗಿರಿ ಪರ್ವತದ ತುತ್ತ ತುದಿಯಲ್ಲಿರುವ ಕೋಟೆಯಂಥ ರಚನೆಯೇ ಈ ದುರ್ಗಂ. ಹಿಂದೆ ಕಳ್ಳಕಾಕರು ಲೂಟಿ ಮಾಡಿದ ಒಡವೆಗಳನ್ನು ಇಲ್ಲಿ ಅಡಗಿಸಿಡುತ್ತಿದ್ದರೆಂಬ ರಸವತ್ತಾದ ಕಥೆಗಳು ಈ ಭಾಗದ ಜನರ ದಿನನಿತ್ಯದ ಅಜ್ಜಿಕಥೆಗಳಾಗಿ ಹೋಗಿವೆ. ಅದಕ್ಕೆ ಸಾಕಷ್ಟು ಆಧಾರಗಳೂ ಸಿಕ್ಕಿವೆಯಂತೆ. ಈಗಲೂ ಕೋಟೆಯ ಅಳಿದುಳಿದ ಭಾಗ ಬೆಟ್ಟದ ತುತ್ತ ತುದಿಯಲ್ಲಿದೆ. ಇನ್ನೂ ಚಾರಣಿಗರಿಂದ ಅಷ್ಟಾಗಿ ಪರಿಚಯಿಸಲ್ಪಡದ ಈ ದುರ್ಗಂ ಸೊಬಗು ಈಗಲೂ ನನ್ನನ್ನು ಸೆಳೆಯುತ್ತಿದೆ. ಹೋಗುವೆನೆಂಬ ವಿಶ್ವಾಸವೂ ಇದೆ.

ಅಂದಹಾಗೆ, ವೆಂಕಟಗಿರಿ ಹಾದಿಯಲ್ಲಿ ರಾಶಿರಾಶಿಯಾಗಿ ಸಿಕ್ಕ ಮುಳ್ಳುಹಂದಿಯ ಮುಳ್ಳು ಈಗ ಮನೆಯಲ್ಲಿದೆ. ಅದಕ್ಕೀಗ ಹೀಗೆ ಹೊಸ ರೂಪ ಕೊಟ್ಟಿದ್ದೇನೆ.

No comments: