Wednesday, November 18, 2015

ಈ ಕಾಲ ಮಳೆಕಾಲ ಬಹಳ…

(ಸುಮಾರು ಮೂರು ವರ್ಷಗಳ ಹಿಂದೆ ಪುಟ್ಟ ಲಹರಿಯೊಂದನ್ನು ಬ್ಲಾಗಿನಲ್ಲಿ ಟೈಪಿಸಿ, ಪೋಸ್ಟು ಮಾಡದೆ ಹಾಗೇ ಬಿಟ್ಟಿದ್ದೆ. ಈಗ ಎರಡು ವರ್ಷಗಳ ಸುದೀರ್ಘ ಸಮಯದ ನಂತರ ಸುಮ್ಮನೆ ಬ್ಲಾಗಿನೊಳಗೊಮ್ಮೆ ಹೊಕ್ಕಿ ನೋಡಿದಾಗ, ಕಂಡು ನಗು ಬಂತು.  ಜೊತೆಗೆ ಅಳುವೂ… ಈ ವರ್ಷವಂತೂ ಧೋ ಎಂದು ಸುರಿದ ಮಳೆಗೆ ಚೆನ್ನೈಯೇ ತೇಲುತ್ತಿದೆ. ನಾನು ಕಿಟಕಿಗೆ ಮುಖ ಕೊಟ್ಟು ಹೊರ ನೋಡುತ್ತಿದ್ದೇನೆ. ಆದರೆ, ಈಗ ಫೋನು ಮಾಡಲು ಅಪ್ಪ ಇಲ್ಲ. ಅವತ್ತು ಅಪ್ಪನಿಗೆ 60ನೇ ಹುಟ್ಟುಹಬ್ಬಕ್ಕೆಂದು ಬ್ಲಾಗಿಸಿದ ಪತ್ರವೇ ಕೊನೆ (http://madhubanmeradhike.blogspot.in/2012/11/blog-post_15.html). ಮತ್ತೆ ಅಪ್ಪನಿಲ್ಲದ ಮೂರನೇ ಹುಟ್ಟುಹಬ್ಬವೂ ಮೊನ್ನೆ ಕಳೆದು ಹೋಯಿತು. ಈಗ ಅಂದು ಬರೆದ ಈ ಬರಹ ಸುಮ್ಮನೆ ಓದಿಗೆ ಇಲ್ಲಿ ಹಾಕಿದ್ದೇನೆ)


'ಈ ಕಾಲ ಮಳೆಕಾಲ ಬಹಳ.., ನನ್ನ ಗಂಡ ಕೂತಲ್ಲಿಂದ ಏಳ...' ಮೊನ್ನೆ ಭಾನುವಾರ ಮಧ್ಯಾಹ್ನವೇ ಸಂಜೆ ಆರರಂತೆ ಕಪ್ಪಿಟ್ಟು ಧೋ ಎಂದು ಸುರಿದ ಮಳೆಗೆ ಮನ ಮುದಗೊಂಡು ನನ್ನಷ್ಟಕ್ಕೆ ಕಿಟಕಿಗೆ ತಲೆಯಾನಿಸಿ ಹಾಡತೊಡಗಿದೆ. ಅಲ್ಲೇ ಕಾಲು ಚಾಚಿ ಮುಂಗೈ ಊರಿ ಭಾರೀ ಸಂಶೋಧನೆ ನಡೆಸುವಂತೆ ಪೇಪರು ಓದುತ್ತಿದ್ದ ನನ್ನ ಪತಿರಾಯ, 'ಇದ್ಯಾವುದೊಂದು ಹೊಸತು ಪದ್ಯ? ನೀನೇ ಕಟ್ಟಿದ್ದಾ?' ಮಲಗಿದ್ದೋ ಕೂತಿದ್ದೋ ಎಂದು ಹೇಳಲಾಗದ ಆ ತನ್ನ ಭಂಗಿಯು ಕೊಂಚವೂ ಕೊಂಕದಂತೆ, ಹೊಳೆನೀರಿನಿಂದ ಸ್ವಲ್ಪವೇ ಸ್ವಲ್ಪ ತಲೆ ಹೊರಹಾಕುವ ಒಳ್ಳೆಯಂತೆ ತಲೆ ಮಾತ್ರ ಆಡಿಸಿ ಕಿಚಾಯಿಸಿದ. 'ಇದು ನಾನು ಕಟ್ಟಿದ್ದಲ್ಲ, ತುಂಬಾ ಹಳೇ ಕಾಲದ ಪದ್ಯ. ನನ್ನ ಅಜ್ಜಿ ಹಪ್ಪಳ ಮಾಡ್ತಾ ಈ ಹಾಡು ಹೇಳ್ತಾ ಇದ್ರು. ಅತ್ತೆಗೆ ಗೊತ್ತಿರಬಹುದು, ತಡಿ ಕೇಳ್ತೀನಿ ಅನ್ನುತ್ತಾ, ಆ ರೂಮಿನಲ್ಲಿದ್ದ ಅತ್ತೆಯ ಬಳಿ ಓಡಿದೆ. ರಾಗವೇ ಇಲ್ಲದಂತೆ ಕವಿಗೋಷ್ಠಿಯಲ್ಲಿ ಕವನ ಮಂದಿಸುವಂತೆ ಆ ಎರಡು ಸಾಲು ಹೇಳಿ, 'ಅತ್ತೆ ಈ ಹಾಡು ನಿಮ್ಗೆ ಗೊತ್ತಿದೆ ಅಲ್ವಾ?' ಎಂದು ನನ್ನ ಅಜ್ಜಿ ಹಾಗೂ ಅತ್ತೆಯ ಅಮ್ಮ ಬಾಲ್ಯದಲ್ಲಿ ಜೊತೆಗೇ ಕುಂಟೆಬಿಲ್ಲೆ/ಜಿಲೇಬಿ ಆಡಿದವರಾದ್ದರಿಂದ ಖಂಡಿತ ಗೊತ್ತಿರುತ್ತೆ ಎಂಬ ವಿಶ್ವಾಸದಿಂದ ಕೇಳಿದೆ. 'ಈ ಪದ್ಯ ಕೇಳಿಲ್ವಲ್ಲಾ ನಾನು' ಅತ್ತೆ ನೆನಪ ಕೆರೆಯುತ್ತಾ ಹೇಳಿದರು. ಠುಸ್ಸ್ ಆದೆ ನಾನು. ಇವನ ಮುಖದಲ್ಲಿ ವಿಜಯದ ನಗೆ.

ಇರು, ಅಮ್ಮಂಗೆ ಕೇಳ್ತೀನಿ. ಅಜ್ಜಿಗೆ ಫೋನ್ ಮಾಡಿದ್ರೆ, ಅವರಿಗೆ ಹತ್ತು ಸರ್ತಿ ಈ ಹಾಡು ಫೋನಿನಲ್ಲಿ ಹೇಳಿದ್ರೂ ಸರೀ ಕೇಳಲಿಕ್ಕಿಲ್ಲ' ಎನ್ನುತ್ತಾ ಮನೆಗೆ ಫೋನು ಹಚ್ಚಿದೆ.
'ಹಲೋ' ಅಪ್ಪನ ಧ್ವನಿ. ಅಪ್ಪಾ, ಅಮ್ಮ ಇಲ್ವಾ? ಕೇಳಿದೆ. ಅಮ್ಮ ಪಕ್ಕದ ಪ್ರಸಾದ ಮಾವನ ಮನೆಗೆ ಹೋಗಿದ್ದಾರೆ, ಬರಬಹುದು, ಇನ್ನು ಸ್ವಲ್ಪ ಹೊತ್ತಲ್ಲಿ, ಏನು ವಿಷ್ಯಾ?
ಏನಿಲ್ಲ ಅಪ್ಪಾ? ನಿಂಗೆ ಈ ಕಾಲ ಮಳೆಕಾಲ ಹಾಡು ನೆನಪಿದೆ ತಾನೇ? ಅಜ್ಜನಮನೆ ಅಜ್ಜಿ ಹೇಳ್ತಾ ಇದ್ದಿದ್ದು, ನಾನು ಅಪ್ಪನ ಹಳೇ ನೆನಪಿಗೆ ಇಕ್ಕಳ ಹಾಕಿದೆ. ಈ ಹಾಡೇ ನೆನಪೇ ಬರ್ತಾ ಇಲ್ವೇ? ಯಾಕೆ ಈಗ ಅಪ್ಪ ಮರುಪ್ರಶ್ನೆ ಎಸೆದರು. ಏನಿಲ್ಲ. ಮಳೆಬರ್ತಾ ಇತ್ತು. ಹಾಡ್ತಾ ಇದ್ದೆ. ಮಹೇಶ್ ನೋಡಿ ನಾನೇ ಈ ಹಾಡು ಕಟ್ಟಿ ಅಜ್ಜಿ ಹೇಳ್ತಾ ಇದ್ರು ಅಂತ ಸುಳ್ಳು ಬಿಡ್ತೇನೆ ಅಂತ ದೂರು ಹಾಕ್ತಾ ಇದಾನೆ. ಅದಕ್ಕೆ, ಅಮ್ಮನತ್ರ ಕೇಳಿ ಅವನಿಗೆ ಸಾಕ್ಷಿ ಸಮೇತ ಉತ್ತರ ಹೇಳಲು ಫೋನ್ ಮಾಡಿದ್ದು' ಎಂದೆ. ಮಹೇಶ್ ನನ್ನ ಕೈಯಿಂದ ಫೋನ್ ಎಳೆಯುತ್ತಾ, ಮಾವಾ, ನಾನು ಸಿಟೀಲಿ ಹುಟ್ಟಿ ಬೆಳೆದಿದ್ದು ಅಂತ ಏನ್ ಹೇಳಿದ್ರೂ ನಾನು ನಂಬ್ತೀನಿ ಅಂದ್ಕೊಂಡಿದಾಳೆ, ಹಾಡನ್ನು ಅವಳೇ ಕಟ್ಟಿ ನನ್ನನ್ನು ಯಾಮಾರಿಸ್ತಾ ಇದ್ದಾಳೆ' ಎಂದ. ನನ್ನ ಮಗಳಲ್ವಾ' ಅಪ್ಪ ಹೇಳಿದ್ದು ಪಕ್ಕದಲ್ಲೇ ಇದ್ದ ನನಗೆ ಅಸ್ಪಷ್ಟವಾಗಿ ಕೇಳಿಸಿತು. ಮಾವ- ಅಳಿಯ ಜೋರಾಗಿ ನಗತೊಡಗಿದರು. ಅಮ್ಮ ಬರ್ಲಿ, ನಿಮ್ಗೆಲ್ಲಾ ಮಂಗಳಾರತಿ ಮಾಡ್ತೀನಿ ನಾನಂದೆ.

ಸಂಜೆ ಮತ್ತೆ ಫೋನು ಮಾಡಿದಾಗ ಅಮ್ಮ ಇದ್ದರು. ನಾನು ಅಮ್ಮ ಎನ್ನುವಾಗಲೇ ಅಮ್ಮ, 'ಈ ಕಾಲ ಮಳೆಕಾಲ ಬಹಳ.., ನನ್ನ ಗಂಡ ಕೂತಲ್ಲಿಂದ ಏಳ...' ಎಂದು ನಗತೊಡಗಿದರು. 'ಈ ಹಾಡು ಅಜ್ಜಿ ಹಾಡ್ತಾ ಇದ್ದಿದ್ದು ಹೌದಲ್ವಾ ಅಮ್ಮ. ನನ್ನ ಗಂಡನ ವಿಷ್ಯ ಬಿಡು, ನಿನ್ನ ಗಂಡನೂ ನಂಗೆ ಗೊತ್ತಿಲ್ಲ ಎಂದು ವಿಷಯಾಂತರ ಮಾಡ್ತಾ ಇದ್ದಾರೆ' ನಾನಂದೆ. 'ಏನೋಪ್ಪಾ ಅಪ್ಪನಿಗೆ ಗೊತ್ತುಂಟೋ ಇಲ್ವೋ, ಆದರೆ, ನನ್ನ ಅಮ್ಮ ಹಾಡ್ತಾ ಇದ್ದಿದ್ದು ಹೌದು. ಯಾರು ಕಟ್ಟಿದ್ದು ಇದನ್ನ ಅಂತೆಲ್ಲ ನಂಗೆ ಗೊತ್ತಿಲ್ಲ. ನಾನು ಸಣ್ಣದಿರುವಾಗ್ಲಿಂದಲೇ ಅಮ್ಮ ಹಾಡ್ತಾ ಇದ್ರು' ಅಮ್ಮ ಹೇಳಿದಳು. 'ನಿನಗೆ ಈಗ ಏನು ಇದ್ದಕ್ಕಿದ್ದ ಹಾಗೆ ಇದು ನೆನಪಾಗಿದ್ದು?' ಏನೋ ಸುಮ್ಮನೆ ಹಾಡ್ತಾ ಇದ್ದೆ, ಅದಕ್ಕೇ ಕುತೂಹಲ ಎಂದೆ. ಸರಿ ಈ ಎರಡೇ ಲೈನು ನಂಗೆ ಬರೋದು, ಮುಂದೆ ಏನಮ್ಮಾ? ನಾನು ಕೇಳಿದೆ. 'ಎಂಥದಪ್ಪಾ, ನಂಗೂ ನೆನಪು ಬತ್ತಾ ಇಲ್ಲವಲ್ಲೆ' ಎನ್ನುವಾಗ ಅಮ್ಮನ ಕಣ್ಣಿನ ನಾಚಿಕೆ ನನಗೆ ಫೋನಿನಲ್ಲೇ ಅರ್ಥವಾಯಿತು. 'ಏನಮ್ಮಾ? ಸೆನ್ಸಾರ್ ಕತ್ತರಿನಾ?' ನಾನು ಕೇಳಿದೆ. ಅವಳು ನಾಚಿ ನಕ್ಕಳು. ನಾನೂ. ಕೊನೆಗೂ ಅಮ್ಮ ಹೇಳಿದಳು. ಆದರೆ ನಾ ಇಲ್ಲಿ ಹೇಳಲಾರೆ.

No comments: