Sunday, July 17, 2016

ಮಾತು ಸುರಿಯಿತು... ಮಾತು ಮುರಿಯಿತು...

ಆಕೆ ವಸಂತದಲ್ಲಿ ಚಿಗುರಿದ ಮಾವಿನೆಲೆಯ ಹಾಗೆ ಕೆಂಪಗೆ ತೆಳ್ಳಗೆ ಇದ್ದಳು. ಕಿರಿ ಕಣ್ಣು, ಇಸ್ತ್ರಿ ಮಾಡಿದ ಗರಿ ಗರಿ ನೇರ ಕೂದಲು, ಚೂರೇ ಚೂರೂ ಕಲೆಗಳೇ ಇಲ್ಲದ ನುಣುಪಾದ ಚರ್ಮವಯಸ್ಸು ಖಂಡಿತ 20 ದಾಟಿರದು. ಈವರೆಗೆ ಪಾರ್ಲರಿನಲ್ಲಿ ಮೊಗ ಕಂಡಿಲ್ಲವಲ್ಲ ಎಂದು ಯೋಚಿಸುತ್ತಾ ಅವಳನ್ನೇ ನೋಡುತ್ತಿದ್ದಾಗ, ನಾನು ಬಂದಿದ್ದೇಕೆಂಬಂತೆ ನನ್ನೆಡೆಗೆ ನೋಡಿ ಶುದ್ಧ ತಮಿಳಿನಲ್ಲಿ ನನಗೇನು ಬೇಕೆಂಬಂತೆ ಕೇಳಿದಳು. ‘ಹೇರ್ ಕಟ್ ಎಂದೆ.

ಮನೆಯೆದುರಿನ ಪಾರ್ಲರಿಗೆ ಕೆಲಸ ಮಾಡಲು ಬಂದ ಹೊಸ ಹುಡುಗಿ. ಹೆಸರು ಮಂಜರಿ ಅಂತೆ. ವಾಹ್ಮುದ್ದಾದ ಹೆಸರು. ಹೆಸರಿಗೆ ತಕ್ಕಂತೆ ಮಾವಿನ ಚಿಗುರಿನಂತೆಯೇ  ಚುರುಕು ಚುರುಕಾಗಿ ಕಂಡಳು. ಊರು ದೂರದ ಡಾರ್ಜಿಲಿಂಗ್. ಮುಖ ನೋಡಿಯೇ ಈಶಾನ್ಯ ರಾಜ್ಯದವಳೆಂದು ಥಟ್ಟನೆ ಹೇಳಬಹುದಾದರೂ, ಚೆಂದಕ್ಕೆ ತಮಿಳು ಮಾತಾಡುತ್ತಿದ್ದಳು.

ಯಾವ ಹೆರ್ ಕಟ್ ಬೇಕು ನಿಮಗೆ?’ ಕೇಳಿದಳು. ‘ಸ್ಟೆಪ್ ಕಟ್ ಅಂದೆ. ನನ್ನನ್ನು ಅಲ್ಲೇ ಇದ್ದ ಎತ್ತರದ ಕುಳ್ಳಿರಿಸಿ, ಕೂದಲ ಸಿಕ್ಕು ಬಿಡಿಸಿ ಕೆಳಭಾಗವನ್ನು ಪ್ರತ್ಯೇಕಿಸಿ ಮೇಲ್ಭಾಗದ ಕೂದಲನ್ನು ಎತ್ತಿ ಅದನ್ನು ಕ್ಲಿಪ್ನಲ್ಲಿ ಬಂಧಿಸುತ್ತಾ, ಹಿಂದಿಯಲ್ಲಿ ಕೇಳಿದಳು, ‘ನೀವು ಹಿಂದಿಯಾ?’. ‘ಅಲ್ಲ, ಕನ್ನಡ ಅಂದೆ. ‘ಓಹ್ ಬೆಂಗಳೂರು ಅಂದಳು.

ಬೆಂಗಳೂರು ಚೆನ್ನಾಗಿ ಗೊತ್ತಾ?’ ಅಂದೆ. ‘ಕೋರ್ಸ್ ಮುಗಿಸಿದ ತಕ್ಷಣ ಮೊದಲು ನಂಗೆ ಕೆಲಸ ಸಿಕ್ಕಿದ್ದು ಬೆಂಗಳೂರಲ್ಲಿ. ವೈಟ್ಫೀಲ್ಡಿನಲ್ಲಿ ಒಂದು ವರ್ಷ ಕೆಲಸ ಮಾಡಿದೆ. ಅದು ಯುನಿಸೆಕ್ಸ್ ಸಲೂನ್. ಕೆಲವೊಮ್ಮೆ ಗಂಡಸರಿಗೂ ಪೆಡಿಕ್ಯೂರ್ ಮಾಡಬೇಕಾಗುತ್ತಿತ್ತು. ಅದು ಅಷ್ಟು ಸರಿಯಾಗುತ್ತಿರಲಿಲ್ಲ. ಅದಕ್ಕೆ ಅಲ್ಲಿ ಕೆಲಸ ಬಿಟ್ಟು ಬಂದೆ. ಅಲ್ಲಿ ಕಮಿಷನ್ ಸೇರಿ ಹೆಚ್ಚು ಸಂಬಳ, ಜೊತೆಗೆ ಉಳಿದುಕೊಳ್ಳಲು ಉಚಿತ ಹಾಸ್ಟೆಲ್ ನೀಡ್ತಾ ಇದ್ದರು. ಇಲ್ಲಿ ಅದೆಲ್ಲಾ ಇಲ್ಲ. ಕೇವಲ ಸಂಬಳ ಮಾತ್ರ. ಆದ್ರೂ ನೆಮ್ಮದಿ ಇದೆ ಅಂದಳು.

ಜೀವನ ಅನ್ನೋದು ಎಷ್ಟು ಕಷ್ಟ ಅಲ್ವಾ ಮೇಡಂ ಅನ್ನುತ್ತಾಇಷ್ಟು ಕಟ್ ಮಾಡ್ಲಾಎಂದು ನನ್ನ ಕೂದಲನ್ನು ಬೆರಳ ನಡುವಿರಿಸಿ ತೋರಿಸಿದಳು. ‘ಹುಂ ಅಂದೆ. ‘ಮೊದಲು ದುಡ್ದಿನ ಬೆಲೆ ಏನು ಅಂತ ಗೊತ್ತಿರ್ಲಿಲ್ಲ. ಇಲ್ಲಿ ಬಂದು ಒಂದು ರೂಪಾಯಿಗೂ ಎಷ್ಟು ಬೆಲೆ ಇದೆ ಅಂತ ಗೊತ್ತಾಯ್ತು ಎಂದು ದೊಡ್ಡವರ ಥರ ಮಾತಾಡಿದಳು.

ನಾನು ಅಪ್ಪ ಅಮ್ಮನನ್ನು ಬಿಟ್ಟು ಯಾರ ಕಾಲೂ ಮುಟ್ಟಿದವಳಲ್ಲ. ದುಡ್ಡು ಮಾಡಿ ನನ್ನ ಕಾಲ ಮೇಲೆ ನಿಲ್ಲಬೇಕೆಂದು ಊರಿಂದ ಇಲ್ಲಿಗೆ ಬಂದು ಬ್ಯೂಟೀಶಿಯನ್ ಕೋರ್ಸ್ ಸೇರಿದೆ. ಮೊದಲ ಬಾರಿಗೆ ಪೆಡಿಕ್ಯೂರ್ ಮಾಡಲು ಬೇರೆಯವರ ಕಾಲನ್ನು ನನ್ನ ಮಡಿಲಿನಲ್ಲಿರಿಸಿದಾಗ ಯಾಕೋ ದುಃಖ ಉಮ್ಮಳಿಸಿ ಬಂತು. ಏನು ಬೇಕಾದರೂ ಮಾಡುವೆ. ಆದ್ರೆ ಪೆಡಿಕ್ಯೂರ್ ಮಾತ್ರ ಮಾಡಲಾರೆ ಅಂತೆಲ್ಲ ಹೇಳಿದ್ದೆ. ಯಾಕಾದರೂ ಕೋರ್ಸಿಗೆ ಸೇರಿದೆನೋ ಎಂದು ತುಂಬ ಬೇಜಾರಾಗಿತ್ತು. ಬರಬರುತ್ತಾ ಅಭ್ಯಾಸವಾಗಿ ಹೋಯ್ತು. ಈಗ ನಾನು ಇಲ್ಲಿ ಹೆಚ್ಚು ಮಾಡೋದೇ ಪೆಡಿಕ್ಯೂರ್ ಎಂದು ನಗುತ್ತಾ ನುಡಿದಳಾಕೆ.

ಇಷ್ಟು ಚೆಂದಕ್ಕೆ ತಮಿಳು ಕಲ್ತಿದೀಯಲ್ಲಾಒಂದು ವರ್ಷ ಬೆಂಗಳೂರಿನಲ್ಲಿದ್ದು ಕನ್ನಡ ಕಲಿತಿಲ್ವಾ ಅಂದೆ. ‘ಬೆಂಗಳೂರಲ್ಲಿ ಯಾರು ಕನ್ನಡ ಮಾತಾಡ್ತಾರೆ ಮೇಡಂ, ಅಲ್ಲೆಲ್ಲಾ ಹಿಂದಿನೇ ಚೆನ್ನಾಗಿ ನಡೀತಿತ್ತು. ಹಾಗಾಗಿ ಕನ್ನಡ ಕಲಿಯುವ ಅನಿವಾರ್ಯತೆ ಬರಲಿಲ್ಲ. ಆದ್ರೂ ಮಾತಾಡಿದ್ರೆ ಅರ್ಥ ಆಗೋವಷ್ಟು ಕನ್ನಡ ಗೊತ್ತು ಅಂದಳು. ‘ಇಲ್ಲಿ ಬಂದು ಎರಡೇ ವರ್ಷ ಮೇಡಂ, ಅಷ್ಟರಲ್ಲಿ ತಮಿಳು ಬಂತು. ಇದಕ್ಕೂ ಮೊದಲು 6 ತಿಂಗಳು ಮಧುರೈನಲ್ಲಿದ್ದೆ, ಅಲ್ಲಿ ತಮಿಳು ಕಲಿಯದೆ ವಿಧಿ ಇರಲಿಲ್ಲ ಅಂದಳು.

ಹುಂ, ಅದೂ ಹೌದು ಅಂತ ನಾನು ಭಾರವಾದ ನಿಟ್ಟುಸಿರು ಬಿಡುವುದರೊಳಗಾಗಿ, ಇದ್ದಕ್ಕಿದ್ದಂತೆ, ಮೇಡಂ ಲವ್ ಮ್ಯಾರೇಜ್ ಒಳ್ಳೆಯದೋ ಅರೇಂಜ್ ಮ್ಯಾರೇಜೋ?’ ಎಂದಳು. ಥಟ್ಟನೆ ಬಂದ ಪ್ರಶ್ನೆಗೆ ಗಲಿಬಿಲಿಗೊಂಡೆ. ‘ಆಯ್ಕೆ ಸರಿಯಾಗಿದ್ದರೆ ಎರಡೂ ಒಕೆನೇ ಎಂದೆ. ‘ಯಾಕೆ ಧಿಡೀರ್ ಪ್ರಶ್ನೆ?’ ನಾನು ಮರುಪ್ರಶ್ನೆ ಹಾಕಿದೆ. ‘ನಾನು ಮದುವೆಯಾಗಿ ಹತ್ತು ದಿನವಷ್ಟೆ ಆಯ್ತು ಮೇಡಂ. ಲವ್ ಮ್ಯಾರೇಜ್ ಅನ್ನುತ್ತಾ ನಾಚಿದಳು. ‘ಓಹ್, ಹುಡುಗ ಯಾರು?’ ಎಂದೆ. ‘ಇಲ್ಲಿಯ ತಮಿಳಿನವರೇ. ಹೋಟೇಲ್ ಬ್ಯುಸಿನೆಸ್ ಇದೆ. ನಾವು ಓಡಿ ಹೋಗಿ ಮದುವೆಯಾದ್ವಿ ಅಂತ ಬೆರಳು ಕಚ್ಚಿದಳು.ಓಡಿಹೋಗಿಯಾ? ಹೇಗೂ ಇರೋದೇ ಮನೆಯಿಂದ ದೂರ. ಇನ್ನು ಓಡಿ ಹೋಗೋದೇನು ಬಂತು ಅಂದೆ. ‘ಮನೆಯವರಿಗೆ ಗೊತ್ತಾಗಬಾರದೆಂದು ಫೋನ್ ಸ್ವಿಚ್ ಆಫ್ ಮಾಡಿ, ಓಡಿ ಹೋಗಿ ಮದುವೆಯಾದ್ವಿ ಅಂದಳು.

ಎಲಾ ಇವಳಾ, ಇದೊಳ್ಳೆ ತಮಾಷೆಯಾಯಿತಲ್ಲ ಅಂತ ನನಗೆ ಜೋರು ನಗು ಬಂತು,’ ಸರಿ, ಓಡಿ ಹೋಗಿದ್ದಾದರೂ ಎಲ್ಲಿಗೆ?’ ಅಂದೆ. ‘ರಾಯಪೇಟಕ್ಕೆ ಅಂದಳು. ‘ಇಲ್ಲಿ 10-12 ಕಿ.ಮೀ ಓಡಿದ್ದಾ..?’ ಅನ್ನುತ್ತಾ ನಗತೊಡಗಿದೆ. ‘ಹೋಗಲಿ, ಈಗಲಾದರೂಮನೆಯವರಿಗೆ ಗೊತ್ತಾ?’ ಕೇಳಿದೆ. ‘ಹುಂ ನಿನ್ನೆಯಷ್ಟೆ ಹೇಳಿದೆ. ಮುಂದಿನ ಬಾರಿ ಬರೋವಾಗ ಕರೆದುಕೊಂಡು ಬಾ ಅಂದಿದ್ದಾರೆ ಅಂದಳು. ‘ಏನೇ ಆಗಲಿ ಒಳ್ಳೇದಾದ್ರೆ ಸಾಕು ಅಂದೆ. ‘ನಾವು ಆರು ತಿಂಗಳು ಲವ್ ಮಾಡಿದೀವಿ ಗೊತ್ತಾ ಒಳ್ಳೆ ಹುಡುಗ ಅಂದಳು. ಕಿರಿದಾದ ಕಣ್ಣಾದರೂ ಆ ಕಣ್ಣ ಸಂದಿಯಲ್ಲಿ ಹೆಮ್ಮೆಭರಿತ ನಾಚಿಕೆ ಭರ್ಜರಿಯಾಗಿಯೇ ಇಣುಕಿತು. ‘ಮದುವೆಯಾಗಿ ಅವನು ಅವನ ಮನೆಗೆ ಹೋದ, ನಾನು ನನ್ನ ಹಾಸ್ಟೆಲಿಗೆ ಬಂದೆ. ಮನೆ ಮಾಡಲು ಇನ್ನೊಂದು ವರ್ಷವಾದರೂ ಬೇಕು. ಹಾಸ್ಟೆಲಿನಲ್ಲಿ ಹೇಗೆ ಜೊತೆಗೆ ಇರೋಕಾಗುತ್ತೆ ಹೇಳಿ…’ ಅಂತ ಇನ್ನೂ ಹೇಳುತ್ತಲೇ ಇದ್ದಳು. ನಾವು ಬಾಲ್ಯದಲ್ಲಿ ಸೀಮೆಸುಣ್ಣದಲ್ಲಿ ನಾಲ್ಕು ಗೆರೆ ಎಳೆದು ಆಡುತ್ತಿದ್ದ ಮದುವೆಯಾಟ ನೆನಪಿಗೆ ಬಂತು. ಎಷ್ಟು ಸುಲಭವಾಗಿ ಹೇಳಿಬಿಟ್ಟಳಲ್ಲ, ಮದುವೆ ಕಥೆಯನ್ನು. …ಯಾಕೋ ಅವಳ ಭವಿಷ್ಯ ನೆನೆದು ಒಮ್ಮೆ ಸಣ್ಣಗೆ ಭಯವೆನಿಸಿತು.

ಆಯ್ತು ನೋಡಿ ಅನ್ನುತ್ತಾ, ಕೂದಲನ್ನು ಸೆಟ್ ಮಾಡತೊಡಗಿದಳು. ‘ಈಗ ನೋಡಿ ಹೇಗಾಯ್ತು?’ ಕನ್ನಡಿಯೊಂದನ್ನು ನನಗೆ ಕೊಡುತ್ತಾ ಹಿಂದಿನ ಕನ್ನಡಿಯಲ್ಲಿ ಚಿಕ್ಕದಾಗಿದ್ದ ಕತ್ತರಿಸಿ ಸೆಟ್ ಮಾಡಿದ್ದನ್ನು ನೊಡಲು ಹೇಳಿದಳು. ಅವಳ ಕಣ್ಣಲ್ಲಿ, ಹಿಡಿದ ಕೆಲಸವನ್ನು ಚೆಂದಕ್ಕೆ ಮುಗಿಸಿದ್ದ ಧನ್ಯತೆಯಿತ್ತು. ಧನ್ಯತೆ ನನ್ನ ಮೆಚ್ಚುಗೆಯನ್ನೂ ಬಯಸಿತ್ತು. ಯಾಕೋ ಯಾಂತ್ರಿಕವಾಗಿ ಮೆಚ್ಚುಗೆ ಸೂಚಿಸಿ ಹೊರಬಂದೆ.

ಇದಾಗಿ ಬಹುಷಃ ಆರೇಳು ತಿಂಗಳೇ ಆಗಿ ಹೋಯಿತೇನೋಮರೆತೇ ಬಿಟ್ಟಿದ್ದೆ. ಮೊನ್ನೆ ಮೊನ್ನೆ, ಹುಬ್ಬು ತೀಡಲು ಪಾರ್ಲರಿಗೆ ಕಾಲಿಟ್ಟೆ. ಅಂದಿನ ಆ ಚಿಗರೆಯಂಥಾ ಹುಡುಗಿ ಇವಳೇನಾ ಅನ್ನಿಸಿತು, ಅಂದು ಮಾತನಾಡಿದ ಸಲುಗೆಯಲ್ಲಿ, ‘ಹೇಗಿದೆ ಮ್ಯಾರೀಡ್ ಲೈಫು? ಎಂದು ಕೇಳೋಣವೆನೋ ಅಂದುಕೊಂಡರೂ, ಅವಳ ಗಂಭೀರವದನ ನೋಡಿ ನನ್ನ ಸ್ವರ ಬಾಯಿಗೆ ಬರಲಿಲ್ಲ. ಆಸಕ್ತಿಯಿಂದ ಕೆಲಸವನ್ನು ಮಾಡುತ್ತಿದ್ದ ಆಕೆಯ ಕೈಯಾಕೋ ಯಾಂತ್ರಿಕವಾದಂತೆ ಅನಿಸಿತು. ಹೀಗೆ ಅಂದುಕೊಳ್ಳುತ್ತಿದ್ದಾಗಲೇ ನನ್ನ ಹುಬ್ಬು ಮುಗಿಸಿ, ಬಾಯಲ್ಲಿ ಕಚ್ಚಿ ಹಿಡಿದಿದ್ದ ನೂಲನ್ನು ಕತ್ತರಿಸಿ ಎಸೆದು, ಆಯ್ತು ಮೆಡಂ ಎಂದು ಅವಸರದಲ್ಲಿ ಒಳನಡೆದಳು. ಅಂದು, ಓತಪ್ರೋತವಾಗಿ ಮಾತನಾಡಿದ್ದು ಈಕೆಯೇನಾ? ಇವಳ ದನಿಯೆಲ್ಲಿ ಅಡಗಿ ಹೋಯಿತು? ಮಾತಿರಲಿ, ನಗುವೂ ಬತ್ತಿ ಹೋಯಿತೇ? ಎಂಬ ಪ್ರಶ್ನೆಗಳು ನನ್ನ ಮನದಲ್ಲಿ ಸಾಲುಗಟ್ಟಿ ನಿಂತವು. ಯಾಂತ್ರಿಕವಾಗಿ ಕೈ ಪರ್ಸಿನತ್ತ ಹೋಯಿತು. ದುಡ್ಡು ಕೊಟ್ಟು ಹೊರಬಂದಾಗ, ರಸ್ತೆ ದಾಟಲಾಗದಷ್ಟು ಸಾಲುಗಟ್ಟಿ ನಿಂತ ವಾಹನಗಳು. ಹಸಿರು ಸಿಗ್ನಲ್ಲಿಗಾಗಿ ಕಾಯುತ್ತಿದ್ದವು.
('ಉದಯವಾಣಿ'ಯ 'ಅವಳು' ಪುರವಣಿಯಲ್ಲಿ ಪ್ರಕಟಿತ ಬರಹ)

Wednesday, November 18, 2015

ಈ ಕಾಲ ಮಳೆಕಾಲ ಬಹಳ…

(ಸುಮಾರು ಮೂರು ವರ್ಷಗಳ ಹಿಂದೆ ಪುಟ್ಟ ಲಹರಿಯೊಂದನ್ನು ಬ್ಲಾಗಿನಲ್ಲಿ ಟೈಪಿಸಿ, ಪೋಸ್ಟು ಮಾಡದೆ ಹಾಗೇ ಬಿಟ್ಟಿದ್ದೆ. ಈಗ ಎರಡು ವರ್ಷಗಳ ಸುದೀರ್ಘ ಸಮಯದ ನಂತರ ಸುಮ್ಮನೆ ಬ್ಲಾಗಿನೊಳಗೊಮ್ಮೆ ಹೊಕ್ಕಿ ನೋಡಿದಾಗ, ಕಂಡು ನಗು ಬಂತು.  ಜೊತೆಗೆ ಅಳುವೂ… ಈ ವರ್ಷವಂತೂ ಧೋ ಎಂದು ಸುರಿದ ಮಳೆಗೆ ಚೆನ್ನೈಯೇ ತೇಲುತ್ತಿದೆ. ನಾನು ಕಿಟಕಿಗೆ ಮುಖ ಕೊಟ್ಟು ಹೊರ ನೋಡುತ್ತಿದ್ದೇನೆ. ಆದರೆ, ಈಗ ಫೋನು ಮಾಡಲು ಅಪ್ಪ ಇಲ್ಲ. ಅವತ್ತು ಅಪ್ಪನಿಗೆ 60ನೇ ಹುಟ್ಟುಹಬ್ಬಕ್ಕೆಂದು ಬ್ಲಾಗಿಸಿದ ಪತ್ರವೇ ಕೊನೆ (http://madhubanmeradhike.blogspot.in/2012/11/blog-post_15.html). ಮತ್ತೆ ಅಪ್ಪನಿಲ್ಲದ ಮೂರನೇ ಹುಟ್ಟುಹಬ್ಬವೂ ಮೊನ್ನೆ ಕಳೆದು ಹೋಯಿತು. ಈಗ ಅಂದು ಬರೆದ ಈ ಬರಹ ಸುಮ್ಮನೆ ಓದಿಗೆ ಇಲ್ಲಿ ಹಾಕಿದ್ದೇನೆ)


'ಈ ಕಾಲ ಮಳೆಕಾಲ ಬಹಳ.., ನನ್ನ ಗಂಡ ಕೂತಲ್ಲಿಂದ ಏಳ...' ಮೊನ್ನೆ ಭಾನುವಾರ ಮಧ್ಯಾಹ್ನವೇ ಸಂಜೆ ಆರರಂತೆ ಕಪ್ಪಿಟ್ಟು ಧೋ ಎಂದು ಸುರಿದ ಮಳೆಗೆ ಮನ ಮುದಗೊಂಡು ನನ್ನಷ್ಟಕ್ಕೆ ಕಿಟಕಿಗೆ ತಲೆಯಾನಿಸಿ ಹಾಡತೊಡಗಿದೆ. ಅಲ್ಲೇ ಕಾಲು ಚಾಚಿ ಮುಂಗೈ ಊರಿ ಭಾರೀ ಸಂಶೋಧನೆ ನಡೆಸುವಂತೆ ಪೇಪರು ಓದುತ್ತಿದ್ದ ನನ್ನ ಪತಿರಾಯ, 'ಇದ್ಯಾವುದೊಂದು ಹೊಸತು ಪದ್ಯ? ನೀನೇ ಕಟ್ಟಿದ್ದಾ?' ಮಲಗಿದ್ದೋ ಕೂತಿದ್ದೋ ಎಂದು ಹೇಳಲಾಗದ ಆ ತನ್ನ ಭಂಗಿಯು ಕೊಂಚವೂ ಕೊಂಕದಂತೆ, ಹೊಳೆನೀರಿನಿಂದ ಸ್ವಲ್ಪವೇ ಸ್ವಲ್ಪ ತಲೆ ಹೊರಹಾಕುವ ಒಳ್ಳೆಯಂತೆ ತಲೆ ಮಾತ್ರ ಆಡಿಸಿ ಕಿಚಾಯಿಸಿದ. 'ಇದು ನಾನು ಕಟ್ಟಿದ್ದಲ್ಲ, ತುಂಬಾ ಹಳೇ ಕಾಲದ ಪದ್ಯ. ನನ್ನ ಅಜ್ಜಿ ಹಪ್ಪಳ ಮಾಡ್ತಾ ಈ ಹಾಡು ಹೇಳ್ತಾ ಇದ್ರು. ಅತ್ತೆಗೆ ಗೊತ್ತಿರಬಹುದು, ತಡಿ ಕೇಳ್ತೀನಿ ಅನ್ನುತ್ತಾ, ಆ ರೂಮಿನಲ್ಲಿದ್ದ ಅತ್ತೆಯ ಬಳಿ ಓಡಿದೆ. ರಾಗವೇ ಇಲ್ಲದಂತೆ ಕವಿಗೋಷ್ಠಿಯಲ್ಲಿ ಕವನ ಮಂದಿಸುವಂತೆ ಆ ಎರಡು ಸಾಲು ಹೇಳಿ, 'ಅತ್ತೆ ಈ ಹಾಡು ನಿಮ್ಗೆ ಗೊತ್ತಿದೆ ಅಲ್ವಾ?' ಎಂದು ನನ್ನ ಅಜ್ಜಿ ಹಾಗೂ ಅತ್ತೆಯ ಅಮ್ಮ ಬಾಲ್ಯದಲ್ಲಿ ಜೊತೆಗೇ ಕುಂಟೆಬಿಲ್ಲೆ/ಜಿಲೇಬಿ ಆಡಿದವರಾದ್ದರಿಂದ ಖಂಡಿತ ಗೊತ್ತಿರುತ್ತೆ ಎಂಬ ವಿಶ್ವಾಸದಿಂದ ಕೇಳಿದೆ. 'ಈ ಪದ್ಯ ಕೇಳಿಲ್ವಲ್ಲಾ ನಾನು' ಅತ್ತೆ ನೆನಪ ಕೆರೆಯುತ್ತಾ ಹೇಳಿದರು. ಠುಸ್ಸ್ ಆದೆ ನಾನು. ಇವನ ಮುಖದಲ್ಲಿ ವಿಜಯದ ನಗೆ.

ಇರು, ಅಮ್ಮಂಗೆ ಕೇಳ್ತೀನಿ. ಅಜ್ಜಿಗೆ ಫೋನ್ ಮಾಡಿದ್ರೆ, ಅವರಿಗೆ ಹತ್ತು ಸರ್ತಿ ಈ ಹಾಡು ಫೋನಿನಲ್ಲಿ ಹೇಳಿದ್ರೂ ಸರೀ ಕೇಳಲಿಕ್ಕಿಲ್ಲ' ಎನ್ನುತ್ತಾ ಮನೆಗೆ ಫೋನು ಹಚ್ಚಿದೆ.
'ಹಲೋ' ಅಪ್ಪನ ಧ್ವನಿ. ಅಪ್ಪಾ, ಅಮ್ಮ ಇಲ್ವಾ? ಕೇಳಿದೆ. ಅಮ್ಮ ಪಕ್ಕದ ಪ್ರಸಾದ ಮಾವನ ಮನೆಗೆ ಹೋಗಿದ್ದಾರೆ, ಬರಬಹುದು, ಇನ್ನು ಸ್ವಲ್ಪ ಹೊತ್ತಲ್ಲಿ, ಏನು ವಿಷ್ಯಾ?
ಏನಿಲ್ಲ ಅಪ್ಪಾ? ನಿಂಗೆ ಈ ಕಾಲ ಮಳೆಕಾಲ ಹಾಡು ನೆನಪಿದೆ ತಾನೇ? ಅಜ್ಜನಮನೆ ಅಜ್ಜಿ ಹೇಳ್ತಾ ಇದ್ದಿದ್ದು, ನಾನು ಅಪ್ಪನ ಹಳೇ ನೆನಪಿಗೆ ಇಕ್ಕಳ ಹಾಕಿದೆ. ಈ ಹಾಡೇ ನೆನಪೇ ಬರ್ತಾ ಇಲ್ವೇ? ಯಾಕೆ ಈಗ ಅಪ್ಪ ಮರುಪ್ರಶ್ನೆ ಎಸೆದರು. ಏನಿಲ್ಲ. ಮಳೆಬರ್ತಾ ಇತ್ತು. ಹಾಡ್ತಾ ಇದ್ದೆ. ಮಹೇಶ್ ನೋಡಿ ನಾನೇ ಈ ಹಾಡು ಕಟ್ಟಿ ಅಜ್ಜಿ ಹೇಳ್ತಾ ಇದ್ರು ಅಂತ ಸುಳ್ಳು ಬಿಡ್ತೇನೆ ಅಂತ ದೂರು ಹಾಕ್ತಾ ಇದಾನೆ. ಅದಕ್ಕೆ, ಅಮ್ಮನತ್ರ ಕೇಳಿ ಅವನಿಗೆ ಸಾಕ್ಷಿ ಸಮೇತ ಉತ್ತರ ಹೇಳಲು ಫೋನ್ ಮಾಡಿದ್ದು' ಎಂದೆ. ಮಹೇಶ್ ನನ್ನ ಕೈಯಿಂದ ಫೋನ್ ಎಳೆಯುತ್ತಾ, ಮಾವಾ, ನಾನು ಸಿಟೀಲಿ ಹುಟ್ಟಿ ಬೆಳೆದಿದ್ದು ಅಂತ ಏನ್ ಹೇಳಿದ್ರೂ ನಾನು ನಂಬ್ತೀನಿ ಅಂದ್ಕೊಂಡಿದಾಳೆ, ಹಾಡನ್ನು ಅವಳೇ ಕಟ್ಟಿ ನನ್ನನ್ನು ಯಾಮಾರಿಸ್ತಾ ಇದ್ದಾಳೆ' ಎಂದ. ನನ್ನ ಮಗಳಲ್ವಾ' ಅಪ್ಪ ಹೇಳಿದ್ದು ಪಕ್ಕದಲ್ಲೇ ಇದ್ದ ನನಗೆ ಅಸ್ಪಷ್ಟವಾಗಿ ಕೇಳಿಸಿತು. ಮಾವ- ಅಳಿಯ ಜೋರಾಗಿ ನಗತೊಡಗಿದರು. ಅಮ್ಮ ಬರ್ಲಿ, ನಿಮ್ಗೆಲ್ಲಾ ಮಂಗಳಾರತಿ ಮಾಡ್ತೀನಿ ನಾನಂದೆ.

ಸಂಜೆ ಮತ್ತೆ ಫೋನು ಮಾಡಿದಾಗ ಅಮ್ಮ ಇದ್ದರು. ನಾನು ಅಮ್ಮ ಎನ್ನುವಾಗಲೇ ಅಮ್ಮ, 'ಈ ಕಾಲ ಮಳೆಕಾಲ ಬಹಳ.., ನನ್ನ ಗಂಡ ಕೂತಲ್ಲಿಂದ ಏಳ...' ಎಂದು ನಗತೊಡಗಿದರು. 'ಈ ಹಾಡು ಅಜ್ಜಿ ಹಾಡ್ತಾ ಇದ್ದಿದ್ದು ಹೌದಲ್ವಾ ಅಮ್ಮ. ನನ್ನ ಗಂಡನ ವಿಷ್ಯ ಬಿಡು, ನಿನ್ನ ಗಂಡನೂ ನಂಗೆ ಗೊತ್ತಿಲ್ಲ ಎಂದು ವಿಷಯಾಂತರ ಮಾಡ್ತಾ ಇದ್ದಾರೆ' ನಾನಂದೆ. 'ಏನೋಪ್ಪಾ ಅಪ್ಪನಿಗೆ ಗೊತ್ತುಂಟೋ ಇಲ್ವೋ, ಆದರೆ, ನನ್ನ ಅಮ್ಮ ಹಾಡ್ತಾ ಇದ್ದಿದ್ದು ಹೌದು. ಯಾರು ಕಟ್ಟಿದ್ದು ಇದನ್ನ ಅಂತೆಲ್ಲ ನಂಗೆ ಗೊತ್ತಿಲ್ಲ. ನಾನು ಸಣ್ಣದಿರುವಾಗ್ಲಿಂದಲೇ ಅಮ್ಮ ಹಾಡ್ತಾ ಇದ್ರು' ಅಮ್ಮ ಹೇಳಿದಳು. 'ನಿನಗೆ ಈಗ ಏನು ಇದ್ದಕ್ಕಿದ್ದ ಹಾಗೆ ಇದು ನೆನಪಾಗಿದ್ದು?' ಏನೋ ಸುಮ್ಮನೆ ಹಾಡ್ತಾ ಇದ್ದೆ, ಅದಕ್ಕೇ ಕುತೂಹಲ ಎಂದೆ. ಸರಿ ಈ ಎರಡೇ ಲೈನು ನಂಗೆ ಬರೋದು, ಮುಂದೆ ಏನಮ್ಮಾ? ನಾನು ಕೇಳಿದೆ. 'ಎಂಥದಪ್ಪಾ, ನಂಗೂ ನೆನಪು ಬತ್ತಾ ಇಲ್ಲವಲ್ಲೆ' ಎನ್ನುವಾಗ ಅಮ್ಮನ ಕಣ್ಣಿನ ನಾಚಿಕೆ ನನಗೆ ಫೋನಿನಲ್ಲೇ ಅರ್ಥವಾಯಿತು. 'ಏನಮ್ಮಾ? ಸೆನ್ಸಾರ್ ಕತ್ತರಿನಾ?' ನಾನು ಕೇಳಿದೆ. ಅವಳು ನಾಚಿ ನಕ್ಕಳು. ನಾನೂ. ಕೊನೆಗೂ ಅಮ್ಮ ಹೇಳಿದಳು. ಆದರೆ ನಾ ಇಲ್ಲಿ ಹೇಳಲಾರೆ.

Wednesday, July 10, 2013

ರೋಮಾಂಚನವೀ ಕನ್ನಡ...

ಅದೊಂದು ದಿನ ಸೈಬರ್ ಕೆಫೆಯಲ್ಲಿ ಯಾವುದೋ ಪ್ರಿಂಟ್ ಔಟ್ ತೆಗೆಯಲು ಕೂತಿದ್ದೆ. ಪಕ್ಕದಲ್ಲಿ ಕೂತ ಇಬ್ಬರು ಅದ್ಯಾವುದೋ ಹಾಡು ಕೇಳುತ್ತಾ ಕೂತಿದ್ದರು. ಆ ಹಾಡು ಅವರ ಹೆಡ್ ಫೋನಿನಿಂದ ಹೊರಚಿಮ್ಮಿ ನನ್ನ ಕಿವಿಯಲ್ಲಿ ಗುಟ್ಟಿನಲ್ಲಿ ಯಾರೋ 'ಅನಿಸುತಿದೆ ಯಾಕೋ ಇಂದು...' ಎಂದು ಸುಶ್ರಾವ್ಯವಾಗಿ ಹಾಡಿದಂತನಿಸಿತು. ತಿರುಗಿದೆ. ಕಿವಿ ಮಾತ್ರ ಆ ಕಡೆಗೆ ಕೊಟ್ಟು, ನನ್ನ ಕೆಲಸದಲ್ಲಿ ಮಗ್ನಳಾದೆ. ಹೌದು, ಅವರು ಮುಂಗಾರು ಮಳೆ ಹಾಡು ಕೇಳುತ್ತಿದ್ದರು. ಹಾಡು ಕೇಳುತ್ತಿದ್ದಾಕೆ, ಹಾಡು ಕೇಳಿಸಿದಾಕೆಗೆ, ಇದು ಯಾವ ಭಾಷೆ? ಅಂದಳು. 'ತೆಲುಗು' ಸತ್ಯಕ್ಕೇ ಹೊಡೆದಂತೆ ಆಕೆ ಉತ್ತರಿಸಿದಳು. ನನಗೆ ಸುಮ್ಮನಿರಲಾಗಲಿಲ್ಲ. ಆಕೆಯೆಡೆಗೆ ತಿರುಗಿ, 'ನೋ, ಇದು ಕನ್ನಡ' ಎಂದೆ. ಇಬ್ಬರೂ ಹೌದಾ ಎಂಬಂತೆ ನನ್ನನ್ನೇ ನೋಡಿದರು!

ಚೆನ್ನೈಯೆಂಬ 'ತಮಿಳು'ನಾಡಿಗೆ ನಾನು ಕಾಲಿಟ್ಟಾಗ ನಡೆದ ಘಟನೆ ಇದು. ಮೊನ್ನೆ ಮೊನ್ನೆ ಬೆಂಗಳೂರಿಗೆ ಬಂದಿದ್ದೆ. ಯಥಾವತ್ ಜಯನಗರ ನಾಲ್ಕನೇ ಬಡಾವಣೆಯ ಪೇಪರ್ ಸ್ಟಾಲಿನಲ್ಲಿ ಮ್ಯಾಗಜಿನ್ ತಡಕಾಡುತ್ತಿದ್ದೆ. ಕನ್ನಡಕ್ಕಿಂತಲೂ ಸ್ವಲ್ಪ ಹೆಚ್ಚೇ ಎಂಬಂತೆ ಇತರ ಭಾಷೆಯ ಪತ್ರಿಕೆ, ಮ್ಯಾಗಜಿನ್, ಕಾದಂಬರಿಗಳು ಅಲ್ಲಿ ಕೂತಿದ್ದವು. ಯಾವುದೋ ಹೆಣ್ಣು ಮಗಳೊಬ್ಬಳು ಬಂದು, '2013ರ ರಾಶಿ ವರ್ಷ ಭವಿಷ್ಯ ಇದ್ಯಾ? ಕನ್ನಡದ್ದೇ ಕೊಡಿ' ಎಂದಾಗ ಆಕೆಯೆಡೆಗೆ ತಿರುಗಿದೆ. ಅಷ್ಟರಲ್ಲಿ, ಹಿಂದೆ ಇದ್ದ ಇಬ್ಬರು ಕನ್ನಡಿಗರು 'ಅಲೆಕ್ಸ್ ಪಾಂಡ್ಯನ್' ಎಂಬ ತಮಿಳು ಸಿನೆಮಾದ ಬಗ್ಗೆ ಭಾರೀ ಚರ್ಚೆ ನಡೆಸುತ್ತಿದ್ದರು.

ಈ ಎರಡೂ ವೈರುಧ್ಯಗಳು ಅಪ್ಪಟ ಸತ್ಯ. ನಾನು ಚೆನ್ನೈಗೆ ಬಂದ ಮೇಲೆ ನನಗೆ ನೆನಪಿರುವ ಹಾಗೆ, ಚೆನ್ನೈಯಲ್ಲಿ ಬಿಡುಗಡೆಯಾದ ಚಿತ್ರಗಳು ಕೇವಲ ನಾಲ್ಕು. ಒಂದು 'ಎರಡನೇ ಮದುವೆ'. ನಂತರ 'ಜಾಕಿ', ಆಮೇಲೆ 'ಅಣ್ಣಾಬಾಂಡ್'. ನಂತರ 'ಡ್ರಾಮಾ'. ಇದಕ್ಕೂ ಮೊದಲು ಬಲ್ಲವರ ಪ್ರಕಾರ, 'ಮುಂಗಾರು ಮಳೆ' ಚಿತ್ರ ಕೇವಲ ಒಂದು ದಿನ ಕನ್ನಡಿಗರಿಗೆ ತೋರಿಸಲಾಗಿತ್ತು. ಇನ್ನು 'ಎರಡನೇ ಮದುವೆ'ಯನ್ನು ಚೆನ್ನೈಯಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ ಎಂಬ ಪ್ರೀತಿಯಿಂದ ನೋಡಲು ಹೋದೆ. ಪರವಾಗಿಲ್ಲ ಎಂಬಷ್ಟು ಜನ ಸೇರಿದ್ದರು. ನೋಡಲು ಬಂದ ಎಲ್ಲರೂ ಕನ್ನಡಿಗರೇ ಇದ್ದಂತೆ ಕಾಣಲಿಲ್ಲ. ಯಾಕೋ ಖುಷಿಯಾಯಿತು. ಆಮೇಲೆ ಬಂದಿದ್ದು ಜಾಕಿ. ಇದು ನಗರದಿಂದ ಹೊರವಲಯದಲ್ಲಿರುವ ಮಲ್ಟಿಪ್ಲೆಕ್ಸ್ ನಲ್ಲಿ ಬಿಡುಗಡೆಯಾದ ಕಾರಣ, ನಮಗೆ ಸುದ್ದಿ ತಿಳಿಯುವಷ್ಟರಲ್ಲಿ, ಚಿತ್ರ ಅಲ್ಲಿಂದ ಜಾಗ ಖಾಲಿ ಮಾಡಿತ್ತು. ಇನ್ನು 'ಅಣ್ಣಾಬಾಂಡ್' ಸರದಿ!

ಅಂದು ಭಾನುವಾರ. ವಾರವಿಡೀ ಕೆಲಸ ಮಾಡಿ ಸುಸ್ತಾಗಿ ತಡವಾಗಿಯೇ ಎದ್ದೆ. ಚೆನ್ನೈಯಲ್ಲಿ ಕನ್ನಡ ಚಿತ್ರಗಳ ಪರಿಸ್ಥಿತಿ ಗೊತ್ತಿದ್ದರಿಂದ ಟಿಕೆಟ್ ಖಂಡಿತ ಸಿಗಬಹುದು ಎಂದು ಹೊರಟೆವು. ಸಿನೆಮಾ ಶುರುವಾಗಲು ಅರ್ಧ ಗಂಟೆ ಬಾಕಿ ಇತ್ತು. ಟಿಕೆಟ್ ಕೌಂಟರಿಗೆ ಹೋದರೆ, 'ಹೌಸ್ ಫುಲ್' ಎಂಬ ಉತ್ತರ. ಸಿಕ್ಕಾಪಟ್ತೆ ಖುಷಿ. ಟಿಕೆಟ್ ಸಿಗದಿದ್ದುದಕ್ಕೆ ನಾನು ಈವರೆಗೆ ಇಷ್ಟು ಖುಷಿಪಟ್ಟಿಲ್ಲ! ಆದರೆ, ಇಲ್ಲಿ ನಾನು ಖುಷಿ ಪಡಲು ಬೇರೆಯೇ ಕಾರಣ ಇತ್ತು. ಕನ್ನಡ ಚಿತ್ರ ಚೆನ್ನೈಯಲ್ಲಿ ಹೌಸ್ ಫುಲ್ ಆಯಿತಲ್ಲ ಎಂಬ ಸಂತೋಷ. 'ಮುಂದಿನ ಸಾಲು 10 ರೂಪಾಯಿಯದು ಎರಡೇ ಸೀಟ್ ಇವೆ. ಬೇಕಿದ್ರೆ ಕೊಡ್ತೀನಿ' ಅಂದ ಆತ. (ಚೆನ್ನೈ ಮಲ್ಟಿಪ್ಲೆಕ್ಸ್ ಗಳಲ್ಲಿ ಮುಂದಿನ ಸೀಟುಗಳು ಸಬ್ಸಿಡಿ ದರದಲ್ಲಿ 10 ರೂಪಾಯಿ ನಿಗದಿ ಮಾಡಲಾಗಿದೆ) ಸಿಕ್ಕಿದ್ದೇ ಚಾನ್ಸ್ ಎಂದು ಖರೀದಿಸಿದೆವು. ಜೊತೆಗೆ ನಾನು ಹೌಸ್ ಫುಲ್ ಆಗಿದ್ದನ್ನು ಕಣ್ಣಾರೆ ಕಾಣಬೇಕಿತ್ತು. ಜನರಿಂದ ಗಿಜಿಗುಡುತ್ತಿದ್ದ ಆ ಹಾಲ್ ಕೇಕೆ, ಸಿಳ್ಳಿನಿಂದ ತುಂಬಿತ್ತು. ನನ್ನ ಕಣ್ಣಂತೂ, ಬಂದಿರೋರಲ್ಲಿ ಎಲ್ಲರೂ ಕನ್ನಡಿಗರಾ, ಅಥವಾ ಅನ್ಯಭಾಷಿಕರೂ ಇದ್ದಾರಾ ಎಂದು ಅಳೆಯುವಲ್ಲೇ ಮಗ್ನವಾಗಿತ್ತು. ಇನ್ನು ಚಿತ್ರದ ಬಗ್ಗೆ ಹೇಳಬೇಕಾಗಿಲ್ಲ. ಎಲ್ಲರೂ ಬೇಕಾದಷ್ಟು ಬರೆದಿದ್ದಾರೆ!

ಮೊನ್ನೆ 'ಡ್ರಾಮಾ' ಚಿತ್ರ ತಮಿಳು ನೆಲಕ್ಕೆ ಕಾಲಿಟ್ಟಿದೆ ಎಂಬುದನ್ನು ಕನ್ನಡ ಪತ್ರಿಕೆಗಳ ಅಂತರ್ಜಾಲ ಪೇಜುಗಳಲ್ಲಿ ನೋಡಿ ಗೊತ್ತಾಯಿತು. ಸರಿ, ನಾನೂ, ಗೆಳತಿ ಸ್ನೇಹಾ ಇಬ್ಬರೂ ಸಂಶೋಧನೆ ಶುರು ಮಾಡಿದೆವು. ಕೊನೆಗೂ, ನಾವಿರುವ ಜಾಗದಿಂದ ತುಂಬಾ ದೂರವಿರುವ ಥಿಯೇಟರಿನಲ್ಲಿ ಅದು ಬಿಡುಗಡೆಯಾಗಿದೆ ಎಂದು ತಿಳಿಯಿತು. ಸರಿ, ಹೇಗಾದರೂ ಮಾಡಿ ಹೋಗಿ ನೋಡಲೇಬೇಕು ಎಂದು ನಾವು ಆನ್ ಲೈನಿನಲ್ಲಿ ಬುಕ್ ಮಾಡಲು ನೋಡಿದರೆ, ಆ ಪೇಜು, ಈ ಕನ್ನಡ ಚಿತ್ರದ ಯಾವ ಮಾಹಿತಿಯನ್ನೂ ನಮಗೆ ಕೊಡಲಿಲ್ಲ. ಸರಿ ಫೋನು ಮಾಡೋಣ ಎಂದು ಪ್ರಯತ್ನಿಸಿದರೂ, ಕನ್ನಡ ಚಿತ್ರ ಬಂದಿಲ್ಲ ಎಂಬ ಉತ್ತರ. ನಮ್ಮ ಉತ್ಸಾಹ ಠುಸ್ಸ್ ಆಯಿತು. ನಿಜಕ್ಕೂ ಡಾಮಾ ಚೆನ್ನೈಯಲ್ಲಿ ಬಿಡುಗಡೆ ಆಯಿತೋ ಎಂಬುದು ನಮಗೆ ಕೊನೆಗೂ ತಿಳಿಯಲೇ ಇಲ್ಲ.

ಮೊನ್ನೆ ಮೊನ್ನೆಯ ವಿಶ್ವರೂಪಂ ಸೇರಿದಂತೆ ಹಲವು ತಮಿಳು, ತೆಲುಗು ಚಿತ್ರಗಳು ಕನ್ನಡ ನೆಲದಲ್ಲಿ ಸದ್ದು ಮಾಡುವಾಗ, ಇಲ್ಲಿ ಕೂತ ನನಗೆ, 'ಛೇ, ಒಂದಾದರೂ ಕನ್ನಡ ಚಿತ್ರ ಇಲ್ಲಿ ಹೀಗೆ ಸದ್ದು ಮಾಡಬಾರದಾ?' ಅನಿಸುತ್ತದೆ. ಕನಿಷ್ಟ ಪಕ್ಷ, ಸದ್ದು ಮಾಡದಿದ್ದರೂ, ಬಿಡುಗಡೆಯಾದರೂ ಆಗಬಾರದಾ ಅನಿಸುತ್ತದೆ. ದಿನಬೆಳಗಾದರೆ, ಪತ್ರಿಕೆ ಬಿಡಿಸಿ ನೋಡುವಾಗ ಹಿಂದಿ, ತೆಲುಗು, ಮಲಯಾಳಂ ಚಿತ್ರಗಳು ನಗರದಲ್ಲಿ ಎಲ್ಲೆಲ್ಲಿ ಬಿಡುಗಡೆಯಾಗಿದೆ ಎಂಬ ಉದ್ದ ಪಟ್ಟಿ ಇದ್ದರೂ, ಅದರಲ್ಲಿ 'ಕನ್ನಡ' ಎಂಬ ಹೆಸರೂ ಪಟ್ಟಿಯಲ್ಲಿ ನೋಡಬೇಕೆಂದರೆ ಒಂದೋ ಎರಡೋ ವರ್ಷ ಕಾಯಬೇಕು. ಅನ್ಯ ಭಾಷಿಕರು, ತಮ್ಮ ಇತ್ತೀಚಿನ ಯಶಸ್ವೀ ಚಿತ್ರಗಳ ಬಗ್ಗೆ ಮಾತನಾಡುವಾಗ, ಹೆಮ್ಮೆಯಿಂದ ನಮ್ಮ ಚಿತ್ರಗಳನ್ನು ಉದಾಹರಿಸಲು ಹೋದರೆ, ಅದರಲ್ಲಿ ಅರ್ಧಕ್ಕರ್ಧ ಚಿತ್ರಗಳು, ತಮಿಳಿನಿಂದಲೋ, ತೆಲುಗಿನಿಂದಲೋ ಬಂದ ರಿಮೇಕುಗಳಾಗಿರುತ್ತವೆ. ಹಾಗಾಗಿಯೋ ಏನೋ, ಇಲ್ಲಿನ ಕನ್ನಡಿಗರು ತಮಿಳು, ಹಿಂದಿ, ತೆಲುಗು ಚಿತ್ರ ನೋಡುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಏನೇನು ನಡೆಯುತ್ತಿದೆ ಎಂಬುದೂ ಇಲ್ಲಿನ ಕನ್ನಡಿಗರಿಗೆ ತಿಳಿಯುವುದಿಲ್ಲ.

ಕಳೆದ ವರ್ಷ ತೆಲುಗಿನಲ್ಲಿ, 'ಈಗ' ಚಿತ್ರ ಭಾರೀ ಸುದ್ದಿ ಮಾಡಿತು. ತಮಿಳಿನಲ್ಲೂ 'ನಾನ್ ಈ' ಎಂಬ ಹೆಸರಿನಲ್ಲಿ ಇದು ಜನಪ್ರಿಯವಾಯಿತು. ನಾನೂ ನೋಡಲು ಹೋದೆ. ಇತ್ತೀಚಿನ ದಿನಗಳಲ್ಲಿ, ಕನ್ನಡ ನಟನೊಬ್ಬ ಪರನಾಡಿನಲ್ಲಿ ಈ ಮಟ್ಟಿಗೆ ಜನಪ್ರಿಯನಾಗಿದ್ದು ಹೊಸದು. ತಮಿಳು, ತೆಲುಗು ನಟ ನಟಿಯರ ಜನಪ್ರಿಯತೆ ಕನ್ನಡ ನೆಲದಲ್ಲಿ ಸಾಧಾರಣವೇ ಆಗಿದ್ದರೂ, ಕನ್ನಡ ನಟನ ಹೆಸರು ಇಲ್ಲಿ ಓಡುತ್ತಿರುವುದು ಹೊಸದು. ಚಿತ್ರಮಂದಿರದಲ್ಲೂ, ಎಲ್ಲರೂ ಸುದೀಪ್ ಬಗ್ಗೆ ಮಾತನಾಡುವವರೇ. ಸ್ಕ್ರೀನಿನಲ್ಲಿ 'ಕಿಚ್ಚ ಸುದೀಪ್' ಹೆಸರು ಮಿಂಚಿ ಮಾಯವಾದಾಗ ಅಕ್ಕಪಕ್ಕದವರ 'ಈ ನಟ ಕನ್ನಡದವರಂತೆ' ಎಂಬ ಪಿಸುಮಾತು ಖುಷಿಯೆನಿಸಿತು.

ಮೊನ್ನೆ ಮೊನ್ನೆ ತಮಿಳಿನ 'ಕುಮ್ಕಿ' ಚಿತ್ರ ನೋಡಿದೆ. ಒಂದು ಆನೆ, ನವಿರು ಪ್ರೇಮ ಕಥಾನಕವಿರುವ ಇದು ಒಂದು ಉತ್ತಮ ಪ್ರಯತ್ನ. ಅದರಲ್ಲೊಂದು ದೃಶ್ಯ ಬರುತ್ತದೆ. ನಾಯಕನಿಗೆ ನಾಯಕಿ ಜಲಪಾತ ತೋರಿಸಲು ಕೇಳುತ್ತಾಳೆ. ಅದು ನಮ್ಮ ಜೋಗ. ಇಂಥದ್ದೇ ಒಂದು ಸನ್ನಿವೇಶ ನಮ್ಮ ಮುಂಗಾರು ಮಳೆಯಲ್ಲೂ ಬರುತ್ತದೆ. ಮುಂಗಾರು ಮಳೆಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟ ಸನ್ನಿವೇಶವದು. ಜೋಗವನ್ನು ಅದ್ಭುತ ಎನ್ನುವ ರೀತಿಯಲ್ಲಿ ಕ್ಯಾಮೆರಾದಲ್ಲಿ ಸೆರೆಹಿಡಿದದ್ದು ಇದೇ ಸನ್ನಿವೇಶದಲ್ಲಿ. ಕುಮ್ಕಿಯ ಆ ಸನ್ನಿವೇಶ, ಅದರ ಛಾಯಾಗ್ರಹಣ ನೋಡಿ, ಅರೆ, ಇದು ಬಹುತೇಕ ಮುಂಗಾರು ಮಳೆಯಿಂದ ಸ್ಪೂರ್ತಿ ಪಡೆದಂತಿದೆಯಲ್ಲ ಅನಿಸಿದ್ದು ಸುಳ್ಳಲ್ಲ!

ಕೊನೆಯದಾಗಿ, ನನ್ನನ್ನು ಸಿಕ್ಕಾಪಟ್ಟೆ ತೀವ್ರವಾಗಿ ಕಾಡಿದ ಪತ್ರಿಕೆಗಳ ಬಗ್ಗೆ ಬರೆಯದಿದ್ದರೆ, ನನ್ನ ಮನಸ್ಸಿಗೆ ತೃಪ್ತಿಯಾಗದು. ಮೊನ್ನೆ ಕನ್ನಡದ ಹೆಸರಾಂತ ಮ್ಯಾಗಜಿನ್ ಒಂದು ಬೇಕಿತ್ತು. ಸರಿ ಗಾಡಿ ಹತ್ತಿ ಹೊರಟೆ. 'ಇಂಥಾ ಜಾಗದಲ್ಲಿ ಸಿಗಬಹುದು' ಎಂದು ಲೆಕ್ಕಾಚಾರ ಹಾಕಿ ಹಲವರು ಕೆಲವು ಸ್ಥಳಗಳನ್ನು ಉಲ್ಲೇಖಿಸಿದರು. ಎಲ್ಲಿ ಹುಡುಕಿದರೂ, ಊಹೂಂ, ಸಿಗಲೇ ಇಲ್ಲ. ಪ್ರತಿ ಅಂಗಡಿಯಲ್ಲೂ 'ತೆಲುಗು, ಮಲಯಾಳಂ ಇದೆ, ಕನ್ನಡ ಮಾತ್ರ ಇಲ್ಲ' ಎಂಬ ಉತ್ತರ. ಹುಡುಕಿ ಹುಡುಕಿ ಕೊನೆಗೂ ಸಿಗಲಿಲ್ಲ. ಆಮೇಲೆ ತಿಳಿಯಿತು, ಕೇವಲ ಒಂದು ಸ್ಥಳದಲ್ಲಿ ಮಾತ್ರ ಸಿಗುತ್ತೆ ಅಂತೆ. ಆನ್ ಲೈನಿನಲ್ಲಿ ಎಲ್ಲ ಪತ್ರಿಕೆಗಳು ಸಿಗುತ್ತಾದರೂ, ತಮಿಳುನಾಡಿನ ಅಂಗಡಿಯಲ್ಲಿ ಕನ್ನಡ ಪತ್ರಿಕೆ ಕೊಂಡು ಓದುವ ಸುಖವೇ ಬೇರೆ. ಬಹುಶಃ ಇಲ್ಲಿನ ಕನ್ನಡಿಗರು ಕನ್ನಡ ಪತ್ರಿಕೆ ಓದುವುದೇ ಇಲ್ಲವೋ ಗೊತ್ತಿಲ್ಲ. ಇಲ್ಲಿಯೇ ಹುಟ್ಟಿ ಬೆಳೆದ ಬಹುತೇಕ ಕನ್ನಡಿಗರಿಗೆ ಕನ್ನಡ ಓದಲು ಬಾರದು ಎಂಬುದೂ ನಿಜವೇ.

ಹಾಗೆಂದು ಇಲ್ಲಿ ಕನ್ನಡ ಕಾರ್ಯವೇ ನಡೆಯುವುದಿಲ್ಲವೆಂದಲ್ಲ. ಇಲ್ಲಿನ ಐನಾವರಂನಲ್ಲಿ ಸರ್ವಜ್ಞನ ಪ್ರತಿಮೆ ಅನಾವರಣವಾದಾಗ ಸೇರಿದ್ದ ಭಾರೀ ಜನಸಾಗರ, ಕರ್ನಾಟಕ ಸಂಘದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ, ಕರಾವಳಿ ಉತ್ಸವ, ಕರ್ನಾಟಕ ರಾಜ್ಯೋತ್ಸವಗಳಿಗೆ ಸೇರುವ ಜನಜಾತ್ರೆ ಇಲ್ಲಿನ ಕನ್ನಡಿಗರ ಕನ್ನಡ ಪ್ರೀತಿಗೆ ಸಾಕ್ಷಿ. ಆದರೂ, ನನಗೆ ಮಾತ್ರ ಇಲ್ಲಿಯೇ ಕೂತು ಕನ್ನಡ ಚಿತ್ರ ನೋಡುವಾಸೆ. ನನ್ನ ಹಾಗೆಯೇ ಇತರ ಭಾಷಿಗರೂ, ಕನ್ನಡ ಚಿತ್ರಗಳನ್ನು ನೋಡಲಿ, ಮೆಚ್ಚಿಕೊಳ್ಳಲಿ ಎಂಬ ಅತಿಯಾಸೆ. ತಮಿಳಿನ ಗೂಡಂಗಡಿಯಿಂದ ಕನ್ನಡ ಮ್ಯಾಗಜಿನ್ ಕೊಂಡುಕೊಳ್ಳುವಾಸೆ. ಕಡೇ ಪಕ್ಷ, ಅಂಗಡಿಯಾತ ಸಾಮಾನು ಸುತ್ತಿ ಕೊಟ್ಟ ಪೇಪರಾದರೂ ಕನ್ನಡವಾಗಿರಲಿ ಎಂಬಾಸೆ. ನನ್ನ ಆಸೆ ಎಂದು ಈಡೇರೀತು?!

(ಸಖಿ ಮ್ಯಾಗಜಿನ್ ನಲ್ಲಿ ಮಾರ್ಚ್ ತಿಂಗಳಲ್ಲಿ ಪ್ರಕಟಿತ ಲೇಖನ) (ಚಿತ್ರಕೃಪೆ- ಅಂತರ್ಜಾಲ)

Friday, January 18, 2013

ಚಂದಿರನೂರಿನಲ್ಲಿ...

ಅಷ್ಟರವರೆಗೆ ಒಂದು ಜಾಕೆಟಿನೊಳಗೆ ಮೈತೂರಿಸಿಕೊಂಡಿದ್ದ ನನಗೆ ಕತ್ತಲಾವರಿಸುತ್ತಿದ್ದಂತೆ ದಿಗಿಲಾಯಿತು. ಬ್ಯಾಗಿನೊಳಗೆ ತಡಕಾಡಿ ಇನ್ನೆರಡು ಶ್ವೆಟರನ್ನು ಹಾಕಿ ಮೇಲೆ ಜಾಕೆಟ್ ಹಾಕಿದೆ. ಎರಡೂ ಕೈಗಳು ನನಗೇ ಅರಿವಿಲ್ಲದಂತೆ ಪ್ಯಾಂಟು ಜೇಬಿನೊಳಗೆ ಕೂತಿದ್ದವು. ಕಿವಿ ಬೆಚ್ಚಗೆ ಒಳಗೆ ಕೂತಿದ್ದರೂ ಮತ್ತೊಂದು ಕಾಶ್ಮೀರಿ ಶಾಲನ್ನು ಯಾವ ಗಾಳಿಯೂ ಒಳ ಪ್ರವೇಶಿಸಲು ಸಾಧ್ಯವೇ ಆಗದಂತೆ ಕೊರಳು ಬಳಸಿ ಹೊದ್ದುಕೊಂಡೆ. ಈ ಊರಲ್ಲಿ ಶೂ ಹಾಕಿಕೊಳ್ಳುವುದೆಂದರೆ ಮಾರು ದೂರ ಹಾರುವ ನನಗೆ ಶೂವಿನ ಮಹತ್ವ ನಿಧಾನವಾಗಿ ಅರಿವಾಗತೊಡಗಿತ್ತು.
ಟೆಂಟ್ ಪರದೆಯಿಂದ ಹೊರಗಿಣುಕಿದೆ. ‘ಪರದೆ ಸರಿಸಬೇಡ, ಸಿಕ್ಕಾಪಟ್ಟೆ ಶೀತಗಾಳಿ ಬರ್ತಾ ಇದೆ’ ಒಳಗಿದ್ದ ಮಹೇಶ್ ನಡುಗುತ್ತಾ ಹೇಳಿದ. ಕತ್ತಲಲ್ಲೇ ಟೆಂಟ್ ಒಳಗೆ ಕೂರುವುದಕ್ಕಿಂತ ಹೊರಗಿಣುಕಿದರೆ ಹೇಗೆ ಎಂಬಂತೆ ನಾನು ಕಣ್ಣಿಗೆ ಮಾತ್ರ ಜಾಗ ನೀಡಿ ಪರದೆಯೆಡೆಯಿಂದ ಇಣುಕಿದೆ. ಹೊರಗೆ ಇನ್ನೂ ಸೂರ್ಯನ ಮಂದ ಬೆಳಕಿತ್ತು. ಚಂದ್ರ ಇನ್ನೂ ಮುಖ ತೋರಿರಲಿಲ್ಲ. ಮಂದ ಬೆಳಕಿನಲ್ಲೂ ಹಿಮಚ್ಛಾದಿತ ಬೆಟ್ಟ ಬೆಳ್ಳನೆ ಸುಂದರವಾಗಿ ಕಾಣುತ್ತಿತ್ತು. ಒಳಗೆ ಮಹೇಶ್ ದೀಪ ಉರಿಸಿದ. ಪಕ್ಕದ ಪ್ರಿಯಾ-ಹರೀಶರ ಟೆಂಟಿನಿಂದಲೂ ಮಿಣುಕು ದೀಪದ ಬೆಳಕು ಕಾಣಿಸಿತು. ಅಷ್ಟರಲ್ಲಿ ಅಡುಗೆಯವ ಬಿಸಿಬಿಸಿ ಸೂಪ್ ತಂದಿತ್ತು, ‘ಇನ್ನೊಂದು ಗಂಟೆಯಲ್ಲಿ ರಾತ್ರಿ ಊಟ ಸಿದ್ಧ’ ಎಂದು ಹೇಳಿ ಹತ್ತಿರದ ಟೆಂಟಿನೊಳಗೆ ಮರೆಯಾದಾಗಲೇ ನಮಗೆ ತಿಳಿದದ್ದು ಗಂಟೆ ಏಳಾಗಿದೆಯೆಂದು. ನಾಲ್ವರೂ ಒಂದೇ ಟೆಂಟಿನಲ್ಲಿ ಕೂತು ಕೈ ಉಜ್ಜಿಕೊಳ್ಳುತ್ತಾ ನಡುಗುವ ಚಳಿಯಲ್ಲೂ ಹಬೆಯಾಡುತ್ತಿದ್ದ ಬಿಸಿಸೂಪಿನ ಮಹಾತ್ಮೆಯನ್ನು ಕೊಂಡಾಡುತ್ತಾ ಬಿಸಿಯಾಗಿಯೇ ಹೀರತೊಡಗಿದೆವು.

ಹಿಮಾಲಯ ಪರ್ವತ ಶ್ರೇಣಿಯ ಆ ಸ್ಪಟಿಕ ಶುದ್ಧ ಚಂದ್ರತಾಲ್ ಸರೋವರ ತೀರದ ಆ ಗವ್ವೆನ್ನುವ ಮೌನದಲ್ಲಿ ನಮ್ಮ ಮಾತುಗಳೇ ಪ್ರತಿಧ್ವನಿಸುವಂತೆ ಹಿಂದಿನ ದಿನಗಳ ರೋಚಕ ಪ್ರಯಾಣದ ಬಗ್ಗೆ ಮಾತನಾಡುತ್ತಾ ಒಂದು ಗಂಟೆ ಕಳೆದಿದ್ದೇ ತಿಳಿಯಲಿಲ್ಲ. ಮತ್ತೆ ಅಡುಗೆಯಾತ ಬಂದು ‘ಡಿನ್ನರ್ ರೆಡೀ ಹೆ ಸಾಬ್’ ಅಂದಾಗಲೇ ಹೊತ್ತು ಹೋದದ್ದು ತಿಳಿದದ್ದು. ಹೊರಗಿಣುಕಿದಾಗ ಕೊರೆಯುವ ಚಳಿ ಇಮ್ಮಡಿಗೊಂಡಿತ್ತು. ಬಿಸಿ ಬಿಸಿ ರೋಟಿ, ದಾಲ್- ಚಾವಲ್ ಸವಿಯುತ್ತಾ ಮಾತುಕತೆ ಮುಂದುವರಿಸಿದೆವು. ಚಳಿಯೇ ಹಿತ ಅನ್ನುತ್ತಿದ್ದ ನಮಗೆಲ್ಲರಿಗೂ ಚಳಿಯಲ್ಲಿ ಅಡಗಿದ್ದ ಕರಾಳಮುಖದ ಸತ್ಯದರ್ಶನವಾಗಹತ್ತಿತು.

-------------------

ಸ್ಪಿತಿಯ ಮುಖ್ಯ ಕೇಂದ್ರ ಕಾಝಾದಿಂದ ಬೆಳಗ್ಗೆಯೇ ಹೊರಟಿದ್ದ ನಾವು ಬತಾಲಿನಲ್ಲಿ ಮಧ್ಯಾಹ್ನದ ಊಟ ಮುಗಿಸಿ 16 ಕಿಮೀ ದೂರದ ‘ಬಿದ್ದರೆ ಪ್ರಪಾತ, ಎದ್ದರೆ ಚಂದ್ರತಾಲ್’ ಎಂಬಂತ್ತಿದ್ದ ಏರುತಗ್ಗಿನ ಭಾರೀ ಪ್ರಪಾತಗಳ ರಸ್ತೆಯೆಂಬೋ ರಸ್ತೆಯಲ್ಲಿ ಏಳುತ್ತಾ ಬೀಳುತ್ತಾ, ಬೆಳಗ್ಗೆಯಷ್ಟೇ ಭಾರೀ ಪ್ರಪಾತದಲ್ಲಿ ಬಿದ್ದು ನಜ್ಜುಗುಜ್ಜಾಗಿ ಕಣ್ಣಳತೆಯಲ್ಲೇ ಬೆಂಕಿಪೊಟ್ಟಣದಂತೆ ಕಾಣುತ್ತಿದ್ದ ಕಾರನ್ನು ನೋಡಿ ಜೀವ ಕೈಯಲ್ಲಿ ಹಿಡಿದು ಕೂತಿದ್ದ ನಮಗೆ ಚಂದ್ರತಾಲಿನ ಬೇಸ್ ತಲುಪಿದಾಗಲೇ ಪ್ರಯಾಣದ ಸುಸ್ತು ಅರಿವಿಗೆ ಬಂದಿದ್ದು. ಕಣ್ಣು ಕುಕ್ಕುತ್ತಿದ್ದ ಸೂರ್ಯನ ಸಂಜೆ ಬಿಸಿಲಿಗೆ ಚಳಿಯೆಲ್ಲ ಹಾರಿ ಹೋದಂತಾಗಿ , ಹಕ್ಕಿಗಳಂತೆ ಒಂದೇ ಉಸಿರಿನಲ್ಲಿ ಚಂದ್ರತಾಲ್ ನತ್ತ ನಡೆಯತೊಡಗಿದೆವು. ಕೂತು ಕೂತು ಜೋಮು ಹಿಡಿದಂತಾಗಿದ್ದ ಕಾಲು ನಮ್ಮ ಮಾತನ್ನು ಸುಲಭವಾಗಿ ಕೇಳಲಿಲ್ಲ.

ಚಂದ್ರತಾಲ್ ದೂರದಿಂದಲೇ ಆಕಾಶವನ್ನೇ ಹೊದ್ದುಕೊಂಡು ಪರ್ವತಗಳ ಮರೆಯಲ್ಲಿ ಮಲಗಿದಂತೆ ಕಡುನೀಲಿಯಾಗಿ ಕಾಣಿಸಿತು. ತೀರದಲ್ಲಿ ಯಾವುದೋ ಒಂದು ಗುಂಪು ಬಾಟಲಿ ಹರವಿ ಕೂತಿದ್ದರು. ಒಂದೆಡೆ ಗಗನಕ್ಕೆ ಚುಂಬಿಸಿ ನಿಂತಿದ್ದ ಹಿಮಚ್ಛಾದಿತ ಪರ್ವತಗಳು, ಇನ್ನೊಂದೆಡೆ ಗಗನವೇ ಮಲಗಿದಂಥ ಪರಿಶುದ್ಧ ನೀಲಿ ಸರೋವರ, ತಲೆಯೆತ್ತಿದರೂ ನೀಲಿ, ಕಾಲಬುಡದಲ್ಲೂ ನೀಲಿ, ಎಂದೂ ಕಾಣದಿದ್ದ ಅಪೂರ್ವ ಸೌಂದರ್ಯ! ನಾನು- ಪ್ರಿಯ ನೀರೊಳಗೆ ಕಾಲು ಇಳಿಬಿಟ್ಟು ಕೂತೆವು. ಮೈಕತ್ತರಿಸುವ ಐಸುನೀರು. ಆಗಲಿಲ್ಲ, ಪಕ್ಕನೆ ಹೊರತೆಗೆದೆವು, ಆ ತೀರವೇ ಕಾಣದಷ್ಟು ವಿಶಾಲವಾಗಿ ಹರಡಿಕೊಂಡಿದ್ದ, ಸರೋವರದ ತೀರದುದ್ದಕ್ಕೂ ನಡೆಯಹತ್ತಿದ್ದೆವು. ಒಂದೊಂದು ಜಾಗದಲ್ಲೂ ಬೇರೆಬೇರೆಯದೇ ಆಗಿ ಕಾಣುವ ಆ ಅಪ್ರತಿಮ ಸೌಂದರ್ಯವನ್ನು ಆಸ್ವಾದಿಸುತ್ತಾ ಕ್ಲಿಕ್ಕಿಸುತ್ತಾ, ಗಂಟೆ ಆರು ದಾಟಿದ್ದು ನೋಡಿ, ಟೆಂಟು ಬಹಳ ದೂರವಿರುವುದು ನೆನಪಾಗಿ, ಅಪರಿಚಿತ ಪರಿಸರವೆಂದು ಜಾಗೃತರಾಗಿ, ಮುಂಜಾವಿನಲ್ಲಿ ಮತ್ತೆ ಬರೋಣವೆಂದು ಟೆಂಟಿನೆಡೆಗೆ ಹೆಜ್ಜೆಹಾಕಿದ್ದೆವು.

---------

ಊಟ ಮುಗಿಸಿ ಹೊರ ಬಂದಾಗ ಟೆಂಟಿನಲ್ಲಿ ಮಿಣುಕುದೀಪ ಕಾಣಿಸುತ್ತಿತ್ತು. ನಮ್ಮ ಡ್ರೈವರು ಹಾಗೂ ಮನಾಲಿಯವರೆಗೂ ನಮ್ಮ ಜೊತೆಗೆ ಬರುತ್ತೇನೆಂದು ಹೇಳಿ ಜೊತೆ ಸೇರಿದ್ದ ಗೈಡ್ ತಶಿ ಆ ಮೂಲೆಯ ಟೆಂಟಿಗೆ ನಡೆದರು. ಆಕಾಶದಲ್ಲಿ ಹೊಳೆವ ನಕ್ಷತ್ರದಂತೆ ದೂರದಲ್ಲಿ ಮಂದವಾಗಿ ಕಾಣುತ್ತಿದ್ದ ಬೆಳಕಿನ ಚುಕ್ಕಿಯೇ ಆ ಟೆಂಟು ನಮ್ಮಲ್ಲಿಂದ ಇರುವ ದೂರಕ್ಕೆ ಸಾಕ್ಷಿಯಾಗಿತ್ತು. ಹೆಚ್ಚು ಮಾತಾಡಿದರೆ ಬಾಯಿಯೊಳಗೂ ಎಲ್ಲಿ ಗಾಳಿ ಹೋಗಿ ಇನ್ನೂ ಚಳಿ ಹೆಚ್ಚಾದೀತೋ ಎಂಬಂತೆ ತುಟಿಬಿಚ್ಚದೆ, ಬೇಗ ಮಲಗಿ ನಾಳೆ ಮುಂಜಾವಿನ ಚಂದ್ರತಾಲ್ ಸೊಬಗನ್ನು ನೋಡುವ ಇರಾದೆಯಿಂದ ಮಲಗುವ ಚೀಲದೊಳಗೆ ತೂರಿಕೊಂಡೆವು.

ನನಗೆ ಕಣ್ಣಿಗೆ ನಿದ್ರೆ ಹತ್ತಲಿಲ್ಲ. ಹಿಂದಿನ ಐದಾರು ದಿನಗಳ ಸ್ಪಿತಿ ಕಣಿವೆಯ ತಿರುಗಾಟದ ಸುಸ್ತಿನಿಂದ, ಮಹೇಶ್ ಕಣ್ಣುಮುಚ್ಚಿದ ತಕ್ಷಣವೇ ನಿದ್ದೆಗೆ ಜಾರಿದ್ದ. ಅವನನ್ನು ನಿದ್ದೆ ಮಾಡದಂತೆ ಮಾಡಲು, ಆಗಾಗ ‘ಈಗ ಈ ಬದಿಯಿಂದ ಹಿಮಚಿರತೆ ಬಂದು ನನ್ನನ್ನು ಹೊತ್ತೊಯ್ದರೆ?’ ಎಂದು ತರಲೆ ಪ್ರಶ್ನೆಗಳನ್ನು ಕೇಳುತ್ತಿದ್ದೆ. ಆ ಕಡೆಯಿಂದ ಉತ್ತರ ಬರುವುದು ಕಡಿಮೆಯಾಗುತ್ತಾ ಬಂದಂತೆ, ನಿಜಕ್ಕೂ ಸಣ್ಣಗೆ ಭಯವಾಗಹತ್ತಿತು. ಪಕ್ಕದ ಟೆಂಟಿನಿಂದಲೂ ನಿಶ್ಯಬ್ದವೇ!

----------------

ಸ್ಪಿತಿ ಕಣಿವೆ ಪ್ರವಾಸದಲ್ಲಿ ನಮ್ಮೆಲ್ಲರ ಪ್ರಮುಖ ಆಸೆಯಾಗಿದ್ದುದು ಚಂದ್ರತಾಲ್. ಸಮುದ್ರಮಟ್ಟಕ್ಕಿಂತ 14,100 ಅಡಿ ಎತ್ತರದಲ್ಲಿರುವ ಚಂದ್ರತಾಲ್ ಸರೋವರ ಮಧ್ಯ ಹಿಮಾಲಯದ ಪರ್ವತ ಶ್ರೇಣಿಯಲ್ಲಿದೆ. ಹಿಮಾಚಲ ಪ್ರದೇಶದ ಲಾಹೋಲ್ ಮತ್ತು ಸ್ಪಿತಿ ಜಿಲ್ಲೆಯಲ್ಲಿರುವ ಇದು ಸ್ಪಿತಿ ಶೀತ ಮರುಭೂಮಿ ಕಣಿವೆಯಲ್ಲಿ ಅತ್ಯಂತ ಸುಂದರವಾದ ಸ್ಥಳ. ಈ ಸರೋವರ ಬತಾಲ್ ಹಾಗೂ ಕುಂಝುಂ ಪಾಸ್ ಗಳ ಮೂಲಕ ಮಾತ್ರವೇ ಹೋಗಬಹುದು. ವಿಚಿತ್ರವೆಂದರೆ, ಅಂತರ್ಜಲ ಹಾಗೂ ಹಿಮ ಕರಗಿದ ನೀರಿನಿಂದ ಸದಾ ಸಮೃದ್ಧವಾಗಿರುವ ಈ ಸರೋವರಕ್ಕೆ ಒಳಹರಿವು ಎಲ್ಲೂ ಕಾಣಿಸುವುದಿಲ್ಲ. ಇದರ ಹೊರಹರಿವೇ ಚಂದ್ರಾ ನದಿಯಾಗಿ, ಮುಂದೆ ಚಂದ್ರಭಾಗವಾಗಿ ಪ್ರಸಿದ್ಧಿಯಾಗಿದೆ.
 
---------
 
ನಾನಿಲ್ಲಿ ಹೀಗೆ ಆ ಹತ್ತು ದಿನಗಳಲ್ಲಿ ಒಂದು ದಿನದ ಕಥೆಯನ್ನು ನನ್ನ ಜೀವಮಾನದ ಅವಿಸ್ಮರಣೀಯ ಸಂಗತಿಯೆಂಬಂತೆ ಹೇಳಿಕೊಳ್ಳುತ್ತಿರುವ ಹೊತ್ತಲ್ಲಿ, ಅಲ್ಲಿ ರೋಹ್ತಂಗ್ ಪಾಸಿನ ಆ ತುದಿಯ ಪರ್ವತ ಕಣಿವೆಯಲ್ಲಿ ವಾಸ ಮಾಡುತ್ತಿರುವ ಲಾಹೋಲ್ ಸ್ಪಿತಿ ಕಣಿವೆಯ ಮಂದಿ ಅಕ್ಷರಶಃ ತಮ್ಮ ಸ್ಥಿತಿ ನೆನೆದು ಕಣ್ಣೀರೂ ಹಾಕಲಾರದ ಪರಿಸ್ಥಿತಿ. ಇದು ಒಂದೆರಡು ದಿನದ ಮಾತಲ್ಲ ಪ್ರತಿವರ್ಷದ 6-7 ತಿಂಗಳುಗಳು!

‘In Spiti, even tears turn into crystals!’ ಮೊನ್ನೆ ಮೊನ್ನೆ ಪತ್ರಿಕೆಯ ಮೂಲೆಯೊಂದರಲ್ಲಿ, ವರ್ಷದ ಆಗುಹೋಗಿನಂತೆ ಜಾಗ ಪಡೆದಿದ್ದ ಈ ಹೆಡ್ ಲೈನು ನನ್ನೆಲ್ಲಾ ಈ ಫ್ಲ್ಯಾಶ್ ಬಾಕಿಗೆ ಕಾರಣ. ‘-30 ಡಿಗ್ರಿ!’ ಊಹಿಸಿ ನೋಡಿ. ಪ್ರಪಂಚವಿಡೀ ನವಿರು ಚಳಿಯಲ್ಲಿ ಖುಷಿ ಅನುಭವಿಸುತ್ತಿರುವ ಹೊತ್ತು ಕೊರೆಯುವ ಚಳಿಯಲ್ಲಿ ಐದು ತಿಂಗಳು ಪ್ರಪಂಚದ ಸಂಪರ್ಕವನ್ನೇ ಕಡಿದುಕೊಂಡು ಮುದುರಿ ಕುಳಿತುಕೊಳ್ಳುವ ಪರಿಸ್ಥಿತಿ. ಗಂಟೆ ನೋಡಲು ಗಡಿಯಾರ ತಿರುಗುವುದಿಲ್ಲ. ಫೋನು ಮಾಡಲು ಕಾಲ್ ಹೋಗೋದಿಲ್ಲ. ನಳ್ಳಿ ತಿರುಗಿಸಿದರೆ ನೀರು ತಿರುಗಿಸಿದರೆ ನೀರು ಬರೋದಿಲ್ಲ. ಮನೆಯಿಂದ ಹೊರಹೊರಡಲು ಆಗೋದಿಲ್ಲ. ಟಿವಿ ಬರೋದಿಲ್ಲ. ಹೋಗಲಿ, ಅಳೋಣವೆಂದರೆ, ಅದೂ ಕಷ್ಟ. ಉಫ್... ನಮ್ಮಂಥವರಿಗೆ ಇದೆಲ್ಲ ಕಲ್ಪನಾತೀತ ಕಲ್ಪನೆಯಲ್ಲದೆ ಮತ್ತೇನು!

--------------

ಅಂತೂ ಇಂತೂ ಹಿಮಚಿರತೆಯ ಕುತೂಹಲ- ಭಯದಲ್ಲೇ ಸ್ಲೀಪಿಂಗ್ ಬ್ಯಾಗಿನಲ್ಲೇ ನಿದ್ದೆಹೋದ ನಮಗೆಲ್ಲ ಬೆಳಕು ಹರಿಯುವ ಮುನ್ನವೇ ಎಚ್ಚರವಾಗಿತ್ತು. ನಡುಗುವ ಚಳಿಯಲ್ಲೇ ಹೇಗೋ ಹಲ್ಲುಜ್ಜಿ, ಬಿಸಿಬಿಸಿ ಟೀ ಹೀರಿ ನಾವು ಮತ್ತೆ ಚಂದಿರನೂರಿಗೆ ಹೊರಟೆವು. ಅರೆ, ನಿನ್ನೆ ಸಂಜೆ ಕಂಡಿದ್ದ ಕಡುನೀಲಿ ಸರೋವರವೇ ಕಾಣುತ್ತಿಲ್ಲ, ಎನ್ನುತ್ತಾ ದೂರದಿಂದ ಓಡೋಡಿ ಬಂದ ನಮಗೆ ಕಂಡಿದ್ದೆಲ್ಲವೂ ಎರಡೆರಡು! ಸ್ವಲ್ಪವೇ ಹಿಮ ಹೊದ್ದುಕೊಂಡು ನಿಂತಿದ್ದ ಬೋಳು ಸಾಲುಪರ್ವತಗಳ ಅಪೂರ್ವದರ್ಶನ ಮಾಡಿಸಲು ಬೃಹತ್ ಕನ್ನಡಿಯನ್ನೇ ಕೆಳಗೆ ಹಾಸಿದಂತೆ, ಬಣ್ಣವೇ ಇಲ್ಲದ ಸ್ಪಟಿಕ ಶುದ್ಧ ನೀರಿನಲ್ಲಿ ಸುತ್ತಲ ಬೆಟ್ಟದ ಸಾಲಿನ ಬಿಂಬ. ಬೆಳ್ಳನೆಯ ಭಾರೀ 'ಬಾರಾ ಶಿಗ್ರಿ ಗ್ಲೇಶಿಯರ್'ನ ತುತ್ತ ತುದಿ ಮಂಜಿನಲ್ಲಿ ಕರಗಿದಂತೆ ಆಕಾಶದ ಬಿಳಿಯಲ್ಲಿ ಲೀನ! ಬೆಳಗ್ಗಿನ ನಡುಗುವ ಚಳಿಯಲ್ಲಿ ಹಲ್ಲುಜ್ಜಿದ ನೋವು, ಮುಕ್ಕಳಿಸಿದ ಬಾಯಿಯ ಮರಗಟ್ಟಿದ ಅನುಭವವೂ ಒಂದೇ ಕ್ಷಣದಲ್ಲಿ ಮರೆಸಿಬಿಡುವಂಥಾ ದಿಗ್ದರ್ಶನ! ಥರಗುಟ್ಟುವ ಈ ಬೆಳಗಿನ ಚಳಿಯೆಲ್ಲವೂ ಗೌಣ.

ಸರೋವರದ ಪಕ್ಕದಲ್ಲೇ ಅನಧಿಕೃತವಾಗಿ ಟೆಂಟು ಹಾಕಿ ಕೂತಿದ್ದ ಮಂದಿ ಹಿಂದಿನ ದಿನ ರಾತ್ರಿಯ ಕಥೆಯನ್ನು ರೋಚಕವಾಗಿ ಹೇಳುತ್ತಿದ್ದರು. ಮಧ್ಯರಾತ್ರಿಯಲ್ಲಿ ನೀರು ಕುಡಿಯಲು ಬಂದ ಹಿಮಚಿರತೆಗೂ ಟೆಂಟಿನ ನಾಯಿಗೂ ಆದ ವಾಕ್ಸಮರವನ್ನು ಅವರ ಬಾಯಿಂದ ಕೇಳಿ ಕೃತಾರ್ಥರಾಗಿ, ಅದರದ್ದೇ ಆಗಿರಬಹುದಾದ ‘ಕುರುಹನ್ನು’ ಮಾತ್ರ ನೋಡಿ ಧನ್ಯರಾಗಿ ಮನಾಲಿಯತ್ತ ಹೊರಟೆವು. ನೀಲಾಕಾಶಕ್ಕೆ ಮುತ್ತಿಕ್ಕಿ ನಿಂತಿದ್ದ ಬೆಳ್ಳನೆಯ ‘ಬಾರಾ ಶಿಗ್ರಿ ಗ್ಲೇಶಿಯರ್’ ಕೂಡಾ ದೂರ ದೂರ ಹೊರಟಿತು. ನಿಧಾನವಾಗಿ ಕರಗುತ್ತಿರುವ ಬಾರಾ ಶಿಗ್ರಿಯ ನೀರ್ಗಲ್ಲುಗಳು, ಕಠಿಣ ಚಾರಣದ ಕಥೆಗಳು, ವಿಮಾನ ಅಫಘಾತ, 25 ವರ್ಷ ಕಳೆದ ಮೇಲೆ ಸಿಕ್ಕಿದ ಅವಶೇಷಗಳು... ಹೀಗೆ ಹಳೇ ಕಥೆಗಳನ್ನು ತಶಿ ಹೇಳುತ್ತಾ ಹೇಳುತ್ತಾ ಹೋದಂತೆ ಬೆಳ್ಳನೆಯ ರಾಶಿ ನಿಗೂಢವಾಗತೊಡಗಿತು...

Friday, November 16, 2012

ಅಪ್ಪನಿಗಿಂದು ಅರುವತ್ತು..!

''ಒಂದಾನೊಂದು ಊರಿಲಿ ಒಂದು ಅಜ್ಜಿ ಇತ್ತಡ್ಡ''
''ಹುಂ''
''ಆ ಅಜ್ಜಿಗೆ ಮೂರು ಗೆಜ್ಜೆ ಇತ್ತಡ್ಡ''
''ಹುಂ''
''ಎಷ್ಟು ಗೆಜ್ಜೆ ಇತ್ತಡ್ಡ? ಹೇಳು ನೋಡುವಾ''
''ಮೂರು ಗೆಜ್ಜೆ''
''ನೀನು ಸರಿ ಕಥೆ ಕೇಳ್ತಾ ಇಲ್ಲೆ, ಆನು ಹೇಳ್ತಿಲ್ಲೆ''
''ನಿಂಗ ಹೇಳಿದ್ದು ಮೂರು ಹೇಳಿಯೇ. ಆನು ಕೇಳ್ತಾ ಇದ್ದೆ''
''ಸರಿ, ಶುರುವಿಂದ ಹೇಳ್ತೆ, ಕೇಳು''
''ಹುಂ, ಸರಿ''
''ಒಂದಾನೊಂದು ಊರಿಲಿ ಒಂದು ಅಜ್ಜಿ ಇತ್ತಡ್ದ''
 ''ಹುಂ''
''ಆ ಅಜ್ಜಿಗೆ ಮೂರು ಗೆಜ್ಜೆ ಇತ್ತಡ್ಡ. ಎಷ್ಟು ಗೆಜ್ಜೆ ಇತ್ತಡ್ಡ?''
''ಮೂರು ಗೆಜ್ಜೆ''
''ಎಲ ಕತೆಯೇ, ನೀನು ಸರಿ ಕಥೆ ಕೇಳಿದ್ದೇ ಇಲ್ಲೆ''
''ಇಲ್ಲೆ ಅಪ್ಪಾ, ಆನು ಕೇಳಿದ್ದೆ. ನಿಂಗ ಹೇಳಿದ್ದು ಮೂರು ಗೆಜ್ಜೆ ಹೇಳಿಯೇ. ಅದು ಸರಿ, ಮೂರು ಗೆಜ್ಜೆ ಎಂತಕ್ಕೆ ಅಪ್ಪಾ? ಎರಡು ಸಾಲದಾ?''
''ಅದಕ್ಕೇ ಹೇಳಿದ್ದು, ನೀನು ಸರಿ ಕಥೆ ಕೇಳ್ತಾ ಇಲ್ಲೆ ಹೇಳಿ, ಸರಿ ಮತ್ತೆ ಶುರುವಿಂದ ಹೇಳ್ತೆ, ಒಂದಾನೊಂದು ಊರಿಲಿ.....''
''ಅಯ್ಯೋ ಅಪ್ಪಾ, ಒಂದರಿ ನಿಲ್ಸುತ್ತಿರಾ ನಿಂಗಳ ಕಥೆಯ, ಎನಗೆ ನಿಂಗಳ ಕಥೆಯೂ ಬೇಡ ಎಂತದೂ ಬೇಡ''
ನಾನು ಸಿಟ್ಟು ಬಂದು ಓಡುತ್ತಿದ್ದೆ. ಅಪ್ಪ ಜೋರಾಗಿ ಬಾಯ್ತೆರೆದು ನಗುತ್ತಿದ್ದರು.

ಇವೆಲ್ಲ ನಿನ್ನೆ ಮೊನ್ನೆ ನಡೆದಂತಿದೆ. ಇನ್ನೂ ಆ ಚಿತ್ರಗಳು ಮಾಸಿಲ್ಲ. ಅಪ್ಪನ ತರಲೆಗಳೂ ಹಾಗೇ ಇವೆ. ತಲೆಯ ಕೆಂಚುಗೂದಲು ಇನ್ನೂ ಬಿಳಿಯಾಗಿಲ್ಲ, ಮೀಸೆಯಲ್ಲಿ ಅಲ್ಲಲ್ಲಿ ಬೆಳ್ಳಿರೇಖೆ. ಬಿಳಿ-ಕಪ್ಪಿನ ಮೂಲ ಹುಡುಕೋದು ಸಾಧ್ಯವೇ ಇಲ್ಲವೆಂಬಂತೆ ನೀಟಾಗಿ ಶೇವ್ ಮಾಡಿದ ಗಡ್ಡ; ಮೀಸೆಯಂಚಿನಲ್ಲಿ ಮಾತ್ರ ಅದೇ ಹಳೆಯ ತುಂಟ ತರಲೆ ನಗು. ಆದರೆ, ಅವರಿಗಿಂದಿಗೆ ಸರಿಯಾಗಿ ಅರುವತ್ತು!

ನನ್ನ ಅಪ್ಪ..!

ಒಂದು ಪುಟ್ಟ ಮರದ ರೀಪಿಗೆ ಬಣ್ಣ ಬಳಿದು ಅದರ ಮುಂತುದಿಗೆ ಕಣ್ಣು ಬಾಯಿಗಳಂತೆ ಹೆಡ್ ಲೈಟಿನ ಚಿತ್ರ ಬಿಡಿಸಿ ಬದಿಗಳುದ್ದಕ್ಕೂ ಕಿಟಕಿಯಂತೆ ಬರೆದು, ಕೆಳಗೆ ಎರಡು ತೂತು ಕೊರೆದು ಅದಕ್ಕೆ ಕುಟ್ಟಿಕೂರ ಪೌಡರ್ ಡಬ್ಬಿಯ ಮುಚ್ಚಳವನ್ನು ಮುರಿದ ಕೊಡೆ ಕಡ್ಡಿಗೆ ಜೋಡಿಸಿ ಚಕ್ರ ಮಾಡಿ ಬಸ್ಸು ಮಾಡಿ, ಎದುರಿಗೆ ಒಂದು ಹಗ್ಗ ಕಟ್ಟಿ ನನ್ನ ಪುಟ್ಟ ಕೈಗಿತ್ತು ನಾನು ಅದರಲ್ಲೇ ಆಡಿ ದೊಡ್ದವಳಾಗುವುದನ್ನು ಸಂಭ್ರಮದಿಂದ ನೋಡಿದ ಅಪ್ಪ! ಅದ್ಯಾವುದೋ ತಾಳೆಮರದ ಗೊರಟಿಗೆ ಕಣ್ಣು ಮೂಗು ಬಾಯಿಗಳನ್ನು ಬಿಡಿಸಿ ದೊಡ್ಡ ಮೀಸೆ ಇಟ್ಟು,  ಆ ಮುಖಕ್ಕೆ ಜೋಡುವಂತೆ ಹಳೇ ಬಾಟಲಿ ಜೋಡಿಸಿ ಹಳೇ ಬಟ್ಟೆ ಸುತ್ತಿ ಕೈಕಾಲು ಮಾಡಿ ಅಮ್ಮ ನಮಗೆ ಹೊಲಿದ ಅಂಗಿಗಳಲ್ಲಿ ಉಳಿದ ಚೂರು ಪಾರು ಬಣ್ಣದ ಬಟ್ಟೆಗಳಿಗೆ ಜರತಾರಿ ಜೋಡಿಸಿ ನೆರಿಗೆಗಳ ಅಂಗಿ ಮಾಡಿ, ರಟ್ಟಿನ ಕಿರೀಟ ಮಾಡಿ ಥೇಟ್ ಈಗಷ್ಟೇ ರಂಗಸ್ಥಳಕ್ಕೆ ಇಳಿದ ಬಣ್ಣದ ವೇಷವನ್ನೂ ನಾಚಿಸುವಂತೆ ಯಕ್ಷಗಾನ ಕಲಾವಿದನನ್ನು ಮನೆಯಲ್ಲೇ ರೂಪಿಸಿ ನಮ್ಮ ಪುಟ್ಟ ಕಣ್ಣುಗಳಲ್ಲಿ ಆಗಲೇ ಬೆರಗು ಮೂಡಿಸಿದ ನಮಗೂ ಅದೇ ರಕ್ತ ಹಂಚಿದ ಅಪ್ಪ! ಬೇಸಿಗೆ ರಜೆ ಬಂತೆಂದರೆ ಹಳೇ ಬಾಲಮಂಗಳ, ಚಂಪಕ, ಚಂದಮಾಮಗಳನ್ನೆಲ್ಲ ಮತ್ತೆ ಗುಡ್ದೆಹಾಕಿ ಓದಿದ್ದನ್ನೇ ಮತ್ತೆ ಮತ್ತೆ ಓದುವಾಗ 'ಅದೇ ಡಿಂಗ, ಫಕ್ರುಗಳನ್ನೇ ಯಾಕೆ ಬಾಯಿಪಾಠ ಮಾಡ್ತಿ?.. ಇದನ್ನೂ ಓದು' ಎಂದು ಒಳ್ಳೊಳ್ಳೆ ಪುಸ್ತಕಗಳನ್ನು ತಂದು ಕೊಟ್ಟು ನನಗೆ ಓದಿನ ರುಚಿ ಹತ್ತಿಸಿದ ಅಪ್ಪ! ನನ್ನ ಹಾಗೂ ಅಕ್ಕನ ಏಕಪಾತ್ರಾಭಿನಯ ಸ್ಪರ್ಧೆಗಳಿಗೆ ತಾನೇ ಪ್ರಸಂಗಗಳನ್ನು ಬರೆದು ಕೊಟ್ಟು ಅಭಿನಯಿಸಿ ತೋರಿಸಿ ಕಲಿಸಿಕೊಟ್ಟ ಅಪ್ಪ! ಛದ್ಮವೇಷ, ನಾಟಕ ಏನೇ ಇರಲಿ ಭಿನ್ನವಾದ ಐಡಿಯಾಗಳನ್ನು ಕೊಟ್ಟು ನಮ್ಮಿಬ್ಬರ ಕೈಯಲ್ಲೂ ಬಹುಮಾನ ಗೆಲ್ಲಿಸಿದ ಅಪ್ಪ! ಆ ಪುಟ್ಟ ಬಾಡಿಗೆ ಮನೆಯ ಕತ್ತಲ ರಾತ್ರಿಗಳಲ್ಲಿ ಗೋಡೆಯ ಮೇಲೆ ಬಿದ್ದ ಸೀಮೆ ಎಣ್ಣೆ ಬುಡ್ಡಿಯ ಮಂದ ಬೆಳಕಿನಲ್ಲಿ ವಿಧವಿಧ ಪ್ರಾಣಿಪಕ್ಷಿ ಸಂಕುಲವನ್ನು ತನ್ನ ಕೈಯ ನೆರಳಿನಲ್ಲಿ ಮಾಡಿ ತೋರಿಸಿ ಹಿನ್ನೆಲೆಯಾಗಿ ತಾನೇ ಆ ಪ್ರಾಣಿಪಕ್ಷಿಗಳ ಸ್ವರವನ್ನು ಅನುಕರಣೆ ಮಾಡಿ ಆ ದಿನಗಳನ್ನು ಪ್ರಜ್ವಲವಾಗಿಸಿದ ಅಪ್ಪ! ಅಜಕ್ಕಳದ ಕಾಡಿನಲ್ಲಿ ನಡೆವಾಗ ಹೆಗಲ ಮೇಲೆ ಹೊತ್ತು, ತಮ್ಮ ಕಾಲದ ಕಾಡಿನ ಕೌತುಕಕ ಕಥೆಗಳನ್ನು ಹೇಳುತ್ತಾ ಕಾಡಿನ ಬಗೆಗೆ ಅಚ್ಚರಿ-ಆಕರ್ಷಣೆಯನ್ನು ಮೂಡಿಸಿದ ಅಪ್ಪ! ತಾನೇ ಮಕ್ಕಳ ಪದ್ಯಗಳನ್ನು ಬರೆದು ಅದಕ್ಕೆ ರಾಗ ಜೋಡಿಸಿ ನಮ್ಮ ಕೈಯಲ್ಲಿ ಮನೆಯಲ್ಲಿ ಹಾಡಿಸಿ ಖುಷಿಪಟ್ಟು ನಮ್ಮ ಚಿಕ್ಕಂದಿನ ಹಾಡಿನ ಸರಕಿಗೆ ಇನ್ನಷ್ಟೂ ಮತ್ತಷ್ಟೂ ಸೇರಿಸಿದ ಅಪ್ಪ!

ಈಗ, ಥೇಟ್ ಥೇಟ್ ಅದೇ ಅಪ್ಪ, ಅಲ್ಲಲ್ಲ ಅಜ್ಜ! ಅಕ್ಕನ ಮಗಳ ಬೇಸಿಗೆ ರಜೆಯನ್ನು ಯಾವ ಬೇಸಿಗೆ ಶಿಬಿರಕ್ಕೂ ಕಮ್ಮಿಯಾಗದಂತೆ ಕಲರ್ ಫುಲ್ ಆಗಿಸುವ ಅದೇ ಹಳೆಯ ನಮ್ಮ ಅಪ್ಪ! ಒಟ್ಟಾರೆ ಅಪ್ಪನೆಂದರೆ ಈಗಲೂ ಅಚ್ಚರಿಯ ಕಣಜ!

ಇಂದಿಗೆ ಅಪ್ಪನಿಗೆ ಅರುವತ್ತು ತುಂಬಿತು ಎಂದರೆ ನನಗೇ ಆಶ್ಚರ್ಯ! ಈಗಲೂ ಥೇಟ್ ಅಂದಿನಂತೆ, ತಾನೇ ರಟ್ಟು/ಮರದ ತುಂಡಿನಿಂದ ಕತ್ತಿ ಗುರಾಣಿ ಮಾಡಿ ಕೊಟ್ಟು ಅಕ್ಕನ ಮಗಳೊಂದಿಗೆ ಯುದ್ಧ ಮಾಡುತ್ತಾ, ಅದೇ ಅಜ್ಜಿ ಕಥೆ ಹೇಳುತ್ತಾ, ಸ್ಕೂಟರಿನಲ್ಲಿ ಅವಳನ್ನು ಜಾತ್ರೆ, ಹುಲಿವೇಷ, ಆಟಿಕಳಂಜ ಎಂದೆಲ್ಲ ತೋರಿಸುತ್ತಾ ಬೆಂಗಳೂರಿನ ಕಾಂಕ್ರೀಟು ಕಾಡಿನಲ್ಲೂ ಅವಳ ಬಾಲ್ಯಕ್ಕೆ ಹಳ್ಳಿಯ ಸೊಗಡಿನ ಜೀವಂತಿಕೆಯನ್ನು ನೀಡುತ್ತಿರುವ ಅಪ್ಪನ ಈ ಜೀವನಪ್ರೀತಿಗೆ ಏನೆನ್ನಲಿ?

ಕೊನೆಯಲ್ಲಿ,

ಅಂದು ನಾನು ಒಂದನೇ ಕ್ಲಾಸಿನಲ್ಲಿರುವಾಗ ಅಪ್ಪನೇ ಬರೆದ ಹಲವು ಮಕ್ಕಳ ಕವನಗಳಲ್ಲಿ, ನನಗೆ ಅಂದಿಗೂ ಇಂದಿಗೂ ಇಷ್ಟವಾದ ಒಂದು ಕವನ ಈ ಹೊತ್ತಿನಲ್ಲಿ ಅಪ್ಪನಿಗಾಗಿ,

ಪೋಕರಿ ಕಿಟ್ಟ

ಸಂಜೆಯ ಹೊತ್ತಿಗೆ ಕಾಫಿಯ ಕುಡಿದು
ಪೇಟೆಗೆ ಹೋದನು ಪೋಕರಿ ಕಿಟ್ಟ

ಸಿಡಿಯುವ ಗುಂಡನು ಕೊಂಡನು ಕಿಟ್ಟ
ಹೊಳೆಯಿತು ಯೋಚನೆ ಬಲು ಕೆಟ್ಟ

ಮೆಲ್ಲಗೆ ಬೀದಿಯಲಿ ನಡೆಯುತ್ತ
ಇದ್ದಿತು ಬಳಿಯಲಿ ರಿಕ್ಷವು ಒಂದು

ರಿಕ್ಷದ ಚಕ್ರಕೆ ಸಿಡಿಗುಂಡಿಟ್ಟು
ಮೆಲ್ಲಗೆ ಅಡಗಿದ ಕಿರುಪೊದೆಯಲ್ಲಿ

ಚಾಲಕ ಬಂದು ನಡೆಸುತ ರಿಕ್ಷವ
ಹೊಟ್ಟಿತು ಕೆಳಗೆ ಸಿಡಿ ಗುಂಡೊಂದು

ಚಾಲಕ ಹೆದರಿ ಕೈಯನು ಬಿಟ್ಟು
ಹೊರಳಿತು ರಿಕ್ಷವು ಹೊಂಡದಲಿ

ಎದ್ದನು ಕೂಡಲೆ ಪೋಕರಿ ಕಿಟ್ಟ
ಮನೆಗೆ ಬೇಗನೆ ಕಾಲು ಕೊಟ್ಟ

ಚಾಪೆಗೆ ಕೂಡಲೆ ಕೈಕೊಟ್ಟ
ನಿದ್ದೆಯ ಹೊಡೆಯುತ ಬಾಯಿ ಬಿಟ್ಟ

Thursday, October 11, 2012

ಪಳೆಯುಳಿಕೆಗಳ ಸಾಗರ ಲಾಂಗ್ಝಾ


ಆ ಇಬ್ಬರು ಮಹಿಳೆಯರು ತಮ್ಮ ಮಡಿಲಲ್ಲಿ ಐದಾರು ಬಸವನಹುಳುವಿನಂಥ ರಚನೆಯಿದ್ದ ಪಳೆಯುಳಿಕೆಯನ್ನು (ಫಾಸಿಲ್) ತಂದು ಆ ಬೌದ್ಧ ವಿಹಾರದ ಗೋಡೆಯ ಬಳಿ ಹರವಿದರು. ಅವರ ಮುಖದಲ್ಲಿ ಆವತ್ತಿಗೆ ಎಷ್ಟು ದುಡ್ಡು ಸಿಗಬಹುದೆಂಬ ಆಶಾಭಾವನೆಯಿತ್ತು. ನನಗೋ, ಒಬ್ಬಾಕೆಯ ಮುಖದ ನಿರಿಗೆಗಳಲ್ಲಿ ಇಣುಕುತ್ತಿದ್ದ ಮುಗ್ಧತೆಯನ್ನು ನನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ತವಕ. ಕ್ಯಾಮರಾಗಳ ಕ್ಲಿಕ್ಕುಗಳು ಇತ್ತೀಚೆಗೆ ಸಾಮಾನ್ಯವಾದರೂ ಆಕೆಯ ಮೊಗದಲ್ಲಿ ನಾಚಿಕೆ.

ಅದು ಲಾಂಗ್ಝಾ. ಹಿಮಾಲಯದ ತಪ್ಪಲಿನ ಪುಟ್ಟ ಹಳ್ಳಿ. ಹಿಮಾಚಲ ಪ್ರದೇಶದ ಮೂಲೆಯ ಲಾಹೋಲ್ ಮತ್ತು ಸ್ಪಿತಿ ಜಿಲ್ಲೆಯ ಹಳ್ಳಿಯಿದು. ಕೇವಲ 148 ಮಂದಿ ಜನಸಂಖ್ಯೆ ಇರುವ, ಹೆಚ್ಚೆಂದರೆ ಹತ್ತಿಪ್ಪತ್ತು ಸಂಸಾರಗಳಿರುವ ಹಳ್ಳಿಯೆಂದರೆ ತೀರಾ ಹಳ್ಳಿ. ಬೆನ್ನಿಗೆ ವರ್ಷಪೂರ್ತಿ ಹಿಮದಿಂದ ಆವೃತವಾಗಿರುವ ಚೌ ಚೌ ಕಂಗ್ ನೀಲ್ಡಾ ಹಾಗೂ ಶಿಲಾ ಬೆಟ್ಟಗಳ ಕಣ್ಗಾವಲು. ಜೊತೆಗೆ, ಕಾಪಾಡಲು ಆಕಾಶಕ್ಕೇ ಮೊಗವೆತ್ತಿ ನಿಂತ ವರ್ಣಮಯ 22 ಅಡಿ ಎತ್ತರದ ಬೃಹತ್ ಮೆಡಿಸಿನ್ ಬುದ್ಧನ ವಿಗ್ರಹ. ಸದಾ ಹಬ್ಬದ ಸಂಕೇತದಂತೆ ಪ್ರವಾಸಿಗರನ್ನು ಚುಂಬಕದಂತೆ ಸೆಳೆಯುವ ಬಣ್ಣ ಬಣ್ಣದ ಪತಾಕೆಗಳ ಮೆರುಗು.

ನಮ್ಮ 10 ದಿನಗಳ ಸ್ಪಿತಿ ಕಣಿವೆ ಪ್ರವಾಸದಲ್ಲಿ, ಹೊತ್ತಿಗೊಮ್ಮೆ ಬಣ್ಣ ಬದಲಾಯಿಸುವ ಮೈನವಿರೇಳಿಸುವ ಚಂದ್ರತಾಲ್ ಸರೋವರದ ನಡುಗುವ ಚಳಿಯ ರಾತ್ರಿ, ಕೀ, ಢಂಕರ್, ಟಾಬೋ ಬೌದ್ಧ ವಿಹಾರಗಳು, ಪಿನ್ ಕಣಿವೆಯ ಬೌದ್ಧ ಉತ್ಸವಗಳಿಗಿಂತಲೂ ನನ್ನನ್ನು ತೀವ್ರವಾಗಿ ಕಾಡಿದ್ದು, ಲಾಂಗ್ಝಾವೆಂಬ ಈ ಪುಟ್ಟ ಹಳ್ಳಿ. ಆ ಹಳ್ಳಿಯ ಜನರ ಮುಖದ ನಿರಿಗೆಗಳಲ್ಲಿ ಕಾಣುವ ಅಕ್ಕರೆ, ಜೀವನ ಪ್ರೀತಿ, ಬಿಸಿಲಿನ ಝಳಕ್ಕೆ ಸುಟ್ಟ ಎಳಸು ಚರ್ಮಗಳ ಪುಟ್ಟ ಮಕ್ಕಳ ದುಂಡು ಮುಖಗಳು, ಅಪರಿಚಿತರನ್ನು ಕಂಡಾಗ ಕೈಯಲ್ಲಿ ಫಾಸಿಲ್ ಹಿಡಿದು ಓಡೋಡಿ ಬಂದು ತೋರಿಸುವ ಮಕ್ಕಳು- ಮುದುಕಿಯರು...

ಸ್ಪಿತಿ ಕಣಿವೆಯ ಕಾಝಾ ಪಟ್ಟಣದಿಂದ ಈ ಹಳ್ಳಿಗೆ 10 ಕಿಮೀ ದೂರವಾದರೂ, ಪರ್ವತ ಶಿಖರಗಳನ್ನು ಸುತ್ತಿ ಬಳಸಿ ಕಿರಿದಾದ ದುರ್ಗಮ ರಸ್ತೆಯ ಮೂಲಕ ಅಲ್ಲಿಗೆ ತಲುಪಲು ಕನಿಷ್ಟ ಒಂದು ಗಂಟೆಯಾದರೂ ಬೇಕು. ಕಾಝಾದಿಂದ ಮೇಲೇರುತ್ತಿದ್ದಂತೆಯೇ ಸಾಲು ಬೆಟ್ಟಗಳ ನಡುವೆ ಬಣ್ಣದ ಚುಕ್ಕಿಯಂತೆ ಗೋಚರಿಸುವ ಬೃಹತ್ ಬುದ್ಧನ ವಿಗ್ರಹ ನಾವು ಕ್ರಮಿಸಬೇಕಾದ ದೂರವನ್ನು ಸಾರಿ ಹೇಳಿದಂತಿತ್ತು. ಗಂಟೆ ಐದಕ್ಕೇ ನೆತ್ತಿಯ ಮೇಲೆ ಸುಡುವಂಥ ಸೂರ್ಯನ ಪ್ರಖರ ಬೆಳಕು, ರಾತ್ರಿ ಗಂಟೆ ಎಂಟಾದರೂ ಮುಳುಗದ ಸೂರ್ಯ... ಹೀಗೆ ಸೂರ್ಯನೇ ದಿನವಿಡೀ ನೆತ್ತಿಯ ಮೇಲಿರುವುದರಿಂದಲೇ ಆಡುವ ಮಕ್ಕಳ ಕೆನ್ನೆ, ಮೂಗಿನಲ್ಲಿ ಕಿತ್ತು ಹೋದ ಚರ್ಮ ನೋಡುವಾಗ ಏನೋ ವೇದನೆ.

ಜೊತೆಗೇ ಇದ್ದ ಇನ್ನೊಬ್ಬಾಕೆ ನಮ್ಮನ್ನು ತನ್ನ ಮನೆಗೆ ಸ್ವಾಗತಿಸಿದಳು. ಬಣ್ಣಬಣ್ಣದ ಪತಾಕೆಗಳಿರುವ ದೂರದಿಂದ ನೋಡಿದರೆ ಬೆಂಕಿಪೊಟ್ಟಣಗಳಂಥ ಒಂದೇ ಥರದ ಈ ಮನೆಗಳು ಮೊದಲಿನಿಂದಲೂ ನನ್ನ ಕುತೂಹಲ ಕೆರಳಿಸಿದ್ದವು. ಹೊರಗಿನಿಂದ ದೊಡ್ಡ ಮನೆಯಂತೆ ಕಂಡರೂ ಒಳಗೆ ಹೋಗಲು ಪುಟ್ಟ ಗೂಡಿನಂಥ ಬಾಗಿಲು. ಬಾಗಿಲು ದಾಟಿ ಒಳ ಹೊಕ್ಕರೆ, ಮೇಲಕ್ಕೇರಲು ಏಣಿ. ನನಗೋ ಸಣ್ಣವಳಾಗಿದ್ದಾಗ ಕಾಗಕ್ಕ- ಗುಬ್ಬಕ್ಕನ ಕಥೆಗಳಲ್ಲಿ ನಾನೇ ಚಿತ್ರಿಸಿಕೊಂಡ ಮನೆಯೊಂದು ಹಠಾತ್ತನೆ ಪ್ರತ್ಯಕ್ಷವಾದಂತೆ ಪುಳಕಗೊಂಡೆ. ಏಣಿ ಹತ್ತಿ ಮೇಲಕ್ಕೇರಿದರೆ, ಆಕೆ ಆಗಲೇ ಚಹಾ ತಯಾರಿಸಲು ಆರಂಭಿಸಿದ್ದಳು. ನಮಗೆ ಅಲ್ಲೇ ಹಾಸಿದ್ದ ಬೆಚ್ಚನೆಯ ದಪ್ಪದ ನೆಲಹಾಸಿನ ಮೇಲೆ ಕೂರಲು ಹೇಳಿದಳು. ಅವಳ ಉಪಚಾರಕ್ಕೆ ಮಂತ್ರಮುಗ್ಧರಾದವರಂತೆ ನಾವು ನೋಡುತ್ತಲೇ ಇದ್ದೆವು. ಅಷ್ಟರಲ್ಲಿ ಟೀ ರೆಡಿ. ಅದೂ ದೊಡ್ಡ ದೊಡ್ಡ ಕಪ್ಪುಗಳಲ್ಲಿ! ಈಗೆಲ್ಲಾ ಬೈಟೂನಲ್ಲೇ ದಿನವಿಡೀ ಕಳೆದುಹೋಗುವ ನಮಗೆ ಮತ್ತೆ ನಮ್ಮೂರಿನ ಮಳೆಗಾಲದ ದಿನಗಳು ನೆನಪಾಗತೊಡಗಿತ್ತು.

ಟೀ ಕಪ್ಪು ಬಾಯಿಗಿಡುವಷ್ಟರಲ್ಲಿ, ನಮ್ಮ ಮುಂದೆ ‘ತಿರಿ’ ಇತ್ತು. ದಕ್ಷಿಣ ಭಾರತೀಯರಾದ ನಮಗೆ ದೋಸೆ-ಇಡ್ಲಿ ಹೇಗೆ ಬೆಳಗ್ಗಿನ ಆರಾಧ್ಯ ದೈವವೋ ಹಾಗೇ ಅವರಿಗೆ ತಿರಿ. ಅದು ಹೆಚ್ಚು ಕಡಿಮೆ ನಾನ್ ನಂತಿದೆ. ಆದರೆ ಅದಕ್ಕಿಂತಲೂ ಮೆತ್ತಗೆ. ಅಷ್ಟರಲ್ಲಿ ಆಟವಾಡಿ ಓಡಿಬಂದ ಆಕೆಯ ಮಕ್ಕಳೂ ಕೂಡಾ ನಮ್ಮ ಪಕ್ಕದಲ್ಲೇ ಕೂತು ಮೊಸರಿನಲ್ಲಿ ಅದ್ದಿ ಅದ್ದಿ ತಿರಿ ತಿನ್ನತೊಡಗಿದರು.

ತಿಂದಾದ ಮೇಲೆ ಆಕೆ ನಮ್ಮನ್ನು ತುಂಬು ಮೊಗದಿಂದ ಬೀಳ್ಕೊಟ್ಟಳು. ಹೊರ ಬಂದಾಗ ನೆತ್ತಿ ಸುಡುತ್ತಿತ್ತು. ಆಮೇಲೆ ನಮ್ಮ ಗೈಡ್ ತಶಿ ಮೂಲಕ ತಿಳಿಯಿತು, ಪ್ರತಿ ಮನೆಯ ಮೇಲಿರುವ ಬಣ್ಣದ ಪತಾಕೆಗಳೂ ಕೂಡಾ ಆ ಮನೆಯಲ್ಲಿ ಎಷ್ಟು ಸದಸ್ಯರಿದ್ದಾರೆಂಬುದರ ಸಂಕೇತವಂತೆ. ಆರು ಬಣ್ಣದ ಬಾವುಟಗಳಿದ್ದರೆ, ಆ ಮನೆಯಲ್ಲಿ ಆರು ಮಂದಿಯಿದ್ದಾರೆಂದು ಅರ್ಥ. ಮನೆಯ ಪ್ರತಿ ಸದಸ್ಯನಿಗೂ ಒಂದೊಂದು ಬಣ್ಣ. ಇವೆಲ್ಲವನ್ನೂ ಬೌದ್ಧ ಗುರುಗಳು ಮನೆಯ ಯಜಮಾನನಿಗೆ ನೀಡುತ್ತಾರೆ. ಈ ಬಣ್ಣಗಳೆಂದರೆ ಅವರಿಗೆ ಅದೃಷ್ಟದ ಸಂಕೇತ.

ನಾವು ಸೀದಾ ಬೌದ್ಧ ವಿಹಾರದೊಳಗೆ ಹೋದೆವು. ಪುಟ್ಟ ಗೂಡಿನಂತಿದ್ದ ಆ ಬೌದ್ಧ ವಿಹಾರ ತನ್ನ ವಿಶಿಷ್ಟವಾದ ಬಣ್ಣಗಳಿಂದ ಬೇರೆಯವುಗಳಿಗಿಂತ ಭಿನ್ನವಾಗಿ ಕಾಣುತ್ತಿತ್ತು. ಲಾಂಗ್ಝಾ ಬೌದ್ಧ ವಿಹಾರ ಮೆಡಿಸಿನ್ ಬುದ್ಧನ ವಿಗ್ರಹದ ಪಕ್ಕದಲ್ಲೇ ಇದೆ. 22-25 ಅಡಿ ಎತ್ತರದ ಬುದ್ಧನ ವಿಗ್ರಹ ಕಾಝಾದ ಕಡೆಗಿನ ಕಣಿವೆಗಳನ್ನು ಎವೆಯಿಕ್ಕದೆ ದೃಷ್ಟಿಸುವಂತಿದೆ. ಬುದ್ಧನ ಎಡಗೈಯು ಧ್ಯಾನಮುದ್ರೆಯಲ್ಲಿದ್ದು, ಒಂದು ಬೋಗುಣಿ ತುಂಬಾ ಅಮೃತವನ್ನು ಹಿಡಿದಿರುವಂತೆ ಕೆತ್ತಲಾಗಿದೆ. ಪ್ರಪಂಚವಿಡೀ ಆರೋಗ್ಯದಿಂದಿರಲಿ ಎಂಬುದು ಇದರ ಒಳಾರ್ಥವಂತೆ. ಈ ಮೆಡಿಸಿನ್ ಬುದ್ಧನ ಬಳಿಯಲ್ಲಿ ಧ್ಯಾನ ಮಾಡಿದರೆ, ಮಾನಸಿಕ ದೈಹಿಕ ಆರೋಗ್ಯ ಪ್ರಾಪ್ತಿಯಾಗುವುದೆಂದು ನಂಬಿಕೆಯಿದೆ.

ಪಳೆಯುಳಿಕೆಗಳ ಸಾಗರ!: ಸಮುದ್ರಮಟ್ಟದಿಂದ 4,200 ಮೀಟರ್ (ಸುಮಾರು 14,000 ಅಡಿ) ಎತ್ತರದಲ್ಲಿರುವ ಲಾಂಗ್ಝಾ ಎಂಬ ಈ ಹಳ್ಳಿ ಒಂದು ವಿಚಿತ್ರವಾದ ಭೌಗೋಳಿಕ ಪ್ರದೇಶ. ಇಡೀ ಸ್ಪಿತಿ ಕಣಿವೆ ಪ್ರದೇಶದಲ್ಲಿಯೇ ಅತ್ಯಂತ ಸುಂದರವಾದದ್ದೂ ಕೂಡಾ. ಹಾಗೆ ನೋಡಿದರೆ ಈ ಪುಟ್ಟ ಹಳ್ಳಿಯೇ, ಇಡೀ ಹಿಮಾಲಯದ ಜೀವವಿಕಾಸಕ್ಕೊಂದು ಕಿಟಕಿಯಿದ್ದಂತೆ. ಭೂಗರ್ಭ ಶಾಸ್ತ್ರಜ್ಞರ ಪ್ರಕಾರ, ಮಿಲಿಯಗಟ್ಟಲೆ ವರುಷಗಳ ಹಿಂದೆ, ನಮ್ಮ ಭೂಮಿ ಎರಡೇ ಎರಡು ಬೃಹತ್ ಖಂಡಗಳನ್ನು ಹೊಂದಿದ್ದಾಗ, ಅವುಗಳ ಘರ್ಷಣೆಯಿಂದ ಹಿಮಾಲಯ ಪರ್ವತ ಶ್ರೇಣಿಯೇ ಉಗಮವಾದ ಕಥೆ ಬಹುತೇಕರಿಗೆ ತಿಳಿದಿರಬಹುದು. ಹೀಗೆ ಹಿಮಾಲಯ ಉಗಮವಾದ ಸಂದರ್ಭ, ಅದಕ್ಕೂ ಮೊದಲು ಸಾಗರದಡಿಯಲ್ಲಿದ್ದ ಭೂಭಾಗವೇ ಈ ಸುತ್ತಮುತ್ತಲ ಪ್ರದೇಶ. ಇಂತಹ ಸಂದರ್ಭ, ಇದ್ದಂತಹ ಜೀವಿಗಳೇ ಇಂದು ಪಳೆಯುಳಿಕೆಗಳಾಗಿವೆ. ಯಥೇಚ್ಛವಾಗಿ ಪಳೆಯುಳಿಕೆಗಳು ಕಂಡು ಬರುವ ಲಾಂಗ್ಝಾವೆಂಬ ಈ ಪುಟ್ಟ ಹಳ್ಳಿ, ನಾವು ಓದಿ-ಕೇಳಿ ಅರಿತುಕೊಂಡ ಜೀವವಿಕಾಸದ ಹಾದಿಗೊಂದು ಜ್ವಲಂತ ಸಾಕ್ಷಿಯೆಂಬಂತೆ ಕಂಡರೆ ಆಶ್ಚರ್ಯವಿಲ್ಲ. ಹಾಗಾಗಿಯೇ, ಇದು ಭೂಗರ್ಭಶಾಸ್ತ್ರ ವಿದ್ಯಾರ್ಥಿಗಳಿಗೂ ಸಂಶೋಧನಾಸಕ್ತರಿಗೂ ಸ್ವರ್ಗ. ಈ ಹಳ್ಳಿಯಲ್ಲಿ ಈಗಲೂ ಸಾಕಷ್ಟು ಪಳೆಯುಳಿಕೆಗಳು ಸಿಗುತ್ತಲೇ ಇರುತ್ತವೆ. ಬಸವನಹುಳು, ಆಮೆ... ಹೀಗೆ ಇನ್ನೇನೋ ಬಗೆಬಗೆಯ ಆಕಾರಗಳಲ್ಲಿ ಪಳೆಯುಳಿಕೆಗಳನ್ನು ಇಲ್ಲಿ ಕಾಣಬಹುದು. ನಮ್ಮ ಗೈಡ್ ತಶಿ ಪ್ರಕಾರ, ಮೊದಲೆಲ್ಲ ನಡೆದಲ್ಲೆಲ್ಲ ಕಾಣಸಿಗುತ್ತಿದ್ದ ಪಳೆಯುಳಿಕೆಗಳು ಈಗ ಪ್ರವಾಸಿಗರು ಹೊತ್ತೊಯ್ಯುತ್ತಿರುವ ಕಾರಣದಿಂದ ಕಡಿಮೆಯಾಗುತ್ತಿವೆ ಎಂದರು.

ಲಾಂಗ್ಝಾದ ಹಳ್ಳಿಗರು ಬೇಸಗೆಯಲ್ಲಿ ಗೋಧಿ, ಆಲೂಗಡ್ಡೆ, ಬಟಾಣಿ ಬೆಳೆಯನ್ನು ಬೆಳೆಯುತ್ತಾರೆ. ಉಳಿದಂತೆ, ಹೈನುಗಾರಿಗೆ, ವ್ಯಾಪಾರ, ನೇಯ್ಗೆ ಇವರ ಇತರ ಕಸುಬುಗಳು. ಸುತ್ತಲೂ ಕಾವಲಿರುವ ಹಿಮಬೆಟ್ಟಗಳು ಕರಗಿ ಬರುವ ನೀರನ್ನು ನಾಲೆಯ ಮೂಲಕ ತಮ್ಮ ಗದ್ದೆಗಳಿಗೆ ಹರಿಸಿ ಬೆವರು ಸುರಿಸಿ ಬೇಸಾಯ ಮಾಡುತ್ತಾರೆ. ಯಾಕ್ ಗಳ ಜೊತೆಗೆ, ಹಸು ಹಾಗೂ ಯಾಕ್ ಗಳೆರಡರ ಹೈಬ್ರಿಡ್ ತಳಿಯಾದ ಝೋ ಎಂಬ ಜಾನುವಾರುಗಳು ಇಲ್ಲಿನ ಜನರಿಗೆ ಕೃಷಿ ಚಟುವಟಿಕೆಗಳಿಗೆ ನೆರವಾಗುತ್ತವೆ. ಚಳಿಗಾಲದಲ್ಲಿ ಈ ಹಳ್ಳಿ ತನ್ನ ಸುತ್ತಮುತ್ತಲಿನ ಎಲ್ಲಾ ಹಳ್ಳಿಪಟ್ಟಣಗಳಿಂದಲೂ ವಾಹನ ಸಂಪರ್ಕವನ್ನು ಕಳೆದುಕೊಳ್ಳುತ್ತದೆ. ಏನೇ ಆದರೂ ದಟ್ಟ ಹಿಮದ ನಡುವೆ ಕಾಲುದಾರಿ ಮಾಡಿಕೊಂಡು ನಡೆದೇ ಸಾಗಬೇಕಾದ ಕಷ್ಟ.

ಪರ್ವತ ರಾಜಕುಮಾರಿಯ ಕಥೆ!: ಲಾಂಗ್ಝಾದಿಂದ ಕತ್ತೆತ್ತಿ ನೋಡಿದರೆ ಪ್ರಮುಖವಾಗಿ ಕಾಣುವ ಬೆಟ್ಟ ಚೌಚೌ ಕಂಗ್ ನೀಲ್ಡಾ. ಈ ಬೆಟ್ಟದ ಮೇಲೆ ಅಲ್ಲಿನ ನಿವಾಸಿಗಳಿಗೆ ಭಯ ಭಕ್ತಿ. ಈ ಬೆಟ್ಟದ ಚಾರಣ ತುಂಬ ಕ್ಲಿಷ್ಟಕರವಾದದ್ದಂತೆ. ಅಲ್ಲಿಯ ನಿವಾಸಿಗಳು ಹೇಳುವಂತೆ, ಅಲ್ಲಿನ ಬೋಟಿ ಭಾಷೆಯಲ್ಲಿ, ಚೌ ಚೌ ಎಂದರೆ ಪುಟ್ಟ ಹುಡುಗಿ ಅಥವಾ ರಾಜಕುಮಾರಿ ಎಂದರ್ಥ. ಕಂಗ್ ಎಂದರೆ ಹಿಮ ಮುಚ್ಚಿದ ಪರ್ವತಗಳು. ನೀ ಅಥವಾ ನೀಮಾ ಎಂದರೆ ಸೂರ್ಯ ಹಾಗೂ, ದಾ ಅಥವಾ ದಾವಾ ಎಂದರೆ ಚಂದ್ರ. ಹಾಗಾಗಿ ಇದರರ್ಥ, ಸದಾ ಸೂರ್ಯಚಂದ್ರರ ಬೆಳಕಿನಲ್ಲಿ ಹೊಳೆಯುವ ಹಿಮ ಮುಚ್ಚಿದ ಪರ್ವತ ರಾಜಕುಮಾರಿ!

ಇದರ ಹಿನ್ನೆಲೆಗೊಂದು ಜಾನಪದ ಕಥೆಯೂ ಇದೆ. ಲಾಂಗ್ಝಾದ ಹಳ್ಳಿಗನೊಬ್ಬ ಕೆಲಸ ಮಾಡಿ ಹೊಟ್ಟೆ ಹೊರೆದುಕೊಳ್ಳುದಕ್ಕಿಂತ ಹೆಚ್ಚು, ತನ್ನ ಪ್ರಿಯ ಸಂಗೀತವಾದ್ಯವಾದ ಲೂಟ್ ನುಡಿಸುವುದರಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದ. ಸ್ವಲ್ಪ ಹೆಚ್ಚೇ ಎನ್ನುವಷ್ಟು ಸೋಮಾರಿ ಆತ. ಲಾಂಗ್ಝಾ ಹಳ್ಳಿಗೆ ನೀರು ಹಿಮ ಪರ್ವತಗಳಿಂದ ಹರಿದು ಬರಬೇಕು. ಪ್ರತಿ ಬೇಸಿಗೆ ಹತ್ತಿರ ಬರುತ್ತಿದ್ದಂತೆಯೇ ಹಳ್ಳಿಗರು ಪರ್ವತಗಳಿಗೆ ಹೋಗಿ ನೀರು ಹರಿದು ಬರಲು ಅಡೆತಡೆಗಳಿದ್ದರೆ ಅದನ್ನು ಸರಿಸಿ ಬರಬೇಕು. ಈ ಹಳ್ಳಿಗ ಆ ಕೆಲಸವನ್ನು ಮಾಡಬೇಕಿತ್ತು. ಈತ ಪರ್ವತವೇರಿ ಒಂದು ಕಡೆ ಕೂತು ತನ್ನ ವಾದ್ಯ ಬಾರಿಸಲು ಶುರು ಮಾಡಿದ. ಎಷ್ಟು ತನ್ಮಯವಾಗಿ ಕಣ್ಣು ಮುಚ್ಚಿ ಬಾರಿಸಿದನೆಂದರೆ ತಾನು ಇರುವುದೆಲ್ಲಿ ಎಂಬುದೇ ಆತನಿಗೆ ಮರೆತು ಹೋಗಿತ್ತು. ಬಾರಿಸಿ ಎಚ್ಚೆತ್ತು ನೋಡಿದಾಗ ಆತನೆದುರಿಗೆ ಸುಂದರ ರಾಜಕುಮಾರಿ ನಿಂತಿದ್ದಳು. ಈತ ಬಿಟ್ಟ ಕಣ್ಣು ಹಾಗೇ ಬಿಡಲು, ಆಕೆ ‘ಮತ್ತೊಮ್ಮೆ ನುಡಿಸುವೆಯಾ?’ ಎಂದಳು. ಈತ ತನ್ಮಯನಾಗಿ ನುಡಿಸಿದ. ಆಕೆ, ತಾನು ಚೌ ಚೌ ಕಂಗ್ ನೀಲ್ಡಾ ದೇವತೆಯೆಂದೂ, ತನ್ನ ವಿಚಾರವನ್ನು ಯಾರಿಗೂ ಹೇಳಬೇಡವೆಂದೂ ಹೇಳಿದಳು. ಮತ್ತೆ ಬಂದು ತನಗಾಗಿ ವಾದ್ಯ ನುಡಿಸಬೇಕೆಂದೂ ಕೇಳಿಕೊಂಡಳು. ಒಪ್ಪಿ ಮರಳಿದ ಹಳ್ಳಿಗ ಪ್ರತೀ ಬೇಸಿಗೆಯಲ್ಲೂ ಆಕೆಯೆದುರು ವಾದ್ಯ ನುಡಿಸುತ್ತಿದ್ದ. ಹೀಗೆ ವರುಷಗಳು ಉರುಳಿದವು. ಒಮ್ಮೆ, ಈ ಮೈಗಳ್ಳ ಪತಿಯಿಂದ ರೋಸಿ ಹೋದ ಪತ್ನಿ ಗಂಡನನ್ನು ತರಾಟೆಗೆ ತೆಗೆದುಕೊಂಡಳು. ಕುಡಿದು ಮತ್ತೇರಿದ್ದ ಈತ, ನಿನಗಿಂತ ಚೌ ಚೌ ಕಂಗ್ ನೀಲ್ಡಾಳೇ ವಾಸಿ, ಆಕೆ ನನಗೆ ಕೆಲಸ ಮಾಡೆಂದು ಎಂದೂ ಹೇಳಿಲ್ಲ ಎಂದ. ಮರುದಿನ ಹಾಸಿಗೆಯಿಂದ ಏಳುವಾಗ ಮೈತುಂಬಾ ಗುಳ್ಳೆಗಳು. ಆಗ ಕುಡಿದ ಮತ್ತು ಇಳಿದಿತ್ತು. ಚೌಚೌ ಬಗ್ಗೆ ಯಾರಿಗೂ ಹೇಳಬಾರದೆಂದುಕೊಂಡದ್ದನ್ನೇ ಆತ ಅಮಲಿನಲ್ಲಿ ಹೇಳಿಬಿಟ್ಟಿದ್ದ. ಅದಕ್ಕಾಗಿಯೇ ಹೀಗೆ ಬೊಬ್ಬೆಗಳು ಬಂದಿವೆಯೆಂದು ಆತನಿಗೆ ಅರಿವಾಯಿತು. ಬೊಬ್ಬೆಗಳು ಉಲ್ಬಣಗೊಂಡವು, ಸುಂದರವಾಗಿದ್ದ ಮುಖ ವಿಕಾರವಾಯಿತು. ಆತ ಹಿಮ ಪರ್ವತದ ಕಡೆಗೆ ನಡೆದ. ಆದರೆ, ವಾತಾವರಣದಲ್ಲಿ ತಕ್ಷಣ ಬದಲಾವಣೆಗಳಾಗಿ ಪರ್ವತವೇರಲಾಗಲಿಲ್ಲ. ಆಕೆಯ ದರ್ಶನವೂ ಆಗಲಿಲ್ಲ. ಮರಳಿದ ಆತ ಅದೆಷ್ಟೋ ಬಾರಿ ಮತ್ತೆ ಮತ್ತೆ ಏರಲು ಪ್ರಯತ್ನಿಸಿದ, ಆದರೆ ಆಗಲಿಲ್ಲ. ಚೌ ಚೌ ಮುನಿದಿದ್ದಳು. ಈಗಲೂ, ಆಕೆ ಮುನಿದೇ ಇದ್ದಾಳೆಂಬುದು, ಇಂದಿಗೂ ಇಲ್ಲಿನ ಜನರ ನಂಬಿಕೆ. ಹಾಗಾಗಿ, ಯಾರೇ ಈ ಪರ್ವತವೇರಲು ಪ್ರಯತ್ನಿಸಿದರೂ ಏನಾದರೂ ತೊಂದರೆ ಕಟ್ಟಿಟ್ಟ ಬುತ್ತಿ. ಹಾದಿಯಲ್ಲಿ ವಾತಾವರಣದಲ್ಲಿ ಹಠಾತ್ ಬದಲಾವಣೆಗಳು ಕಟ್ಟಿಟ್ಟ ಬುತ್ತಿಯಂತೆ. ಹಾಗಾಗಿ ಸಾಮಾನ್ಯರಿಗೆ ಈ ಪರ್ವತಕ್ಕೆ ಕಾಲಿಡಲು ಸಾಧ್ಯವಿಲ್ಲವೆಂದು ಹಳ್ಳಿಗರು ಈಗಲೂ ನಂಬುತ್ತಾರೆ.

ಹೋಗೋದು ಹೇಗೆ?: ಹಿಮಾಚಲ ಪ್ರದೇಶದ ಒಂದು ಜಿಲ್ಲೆ ಲಾಹೋಲ್ ಮತ್ತು ಸ್ಪಿತಿ. ಇದು ಹಿಮಾಚಲ ಪ್ರದೇಶದಲ್ಲೇ ಅತೀ ದೊಡ್ಡ ಜಿಲ್ಲೆ ಕೂಡಾ. ಹಿಂದಿದ್ದ ಲಾಹೋಲ್ ಹಾಗೂ ಸ್ಪಿತಿ ಎಂಬ ಎರಡು ಜಿಲ್ಲೆಗಳು ಅಧಿಕೃತವಾಗಿ ಒಂದಾಗಿ ಒಂದೇ ಜಿಲ್ಲೆಯೆನಿಸಿದೆ. ಲಾಹೋಲಿನ ಕೇಲಾಂಗ್ ಎಂಬ ನಗರವೇ ಈ ಜಿಲ್ಲೆಯ ಪ್ರಮುಖ ಆಡಳಿತ ಪ್ರದೇಶವಾಗಿದೆ. ಕುಂಝುಮ್ ಪಾಸ್ ಅಥವಾ ಕುಂಝುಮ್ ಲಾ (ಸಮುದ್ರ ಮಟ್ಟದಿಂದ 4,551 ಮೀ ಅಥವಾ 14,931 ಅಡಿ ಎತ್ತರ) ಸ್ಪಿತಿ ಕಣಿವೆಗೆ ಮಹಾದ್ವಾರವಿದ್ದಂತೆ. ಈ ಕಣಿವೆ ಮನಾಲಿಯಿಂದ ರೋಹ್ತಂಗ್ ಪಾಸ್ ಮೂಲಕ ಸಂಪರ್ಕ ಹೊಂದಿದೆ. ಚಳಿಗಾಲದಲ್ಲಿ ರೋಹ್ತಂಗ್ ಪಾಸ್ ಸೇರಿದಂತೆ ರಸ್ತೆಯೇ ಹಿಮದಿಂದ ಮುಚ್ಚಿಹೋಗುವುದರಿಂದ, ಸ್ಪಿತಿಗೆ ಹೋಗಬೇಕಾದರೆ ಶಿಮ್ಲಾದಿಂದ ಸುತ್ತಿ ಬಳಸಿ ಸಾಗಿ ಇಲ್ಲಿಗೆ ತಲುಪಬಹುದು.

ಸ್ಪಿತಿ ಹಾಗೂ ಲಾಹೋಲ್ ಕಣಿವೆಗಳೆರಡೂ ಬಹಳ ವಿಶಿಷ್ಟವಾದದ್ದು, ಹಾಗೆಗೇ ವಿಭಿನ್ನವಾದದ್ದು ಕೂಡಾ. ಸ್ಪಿತಿ ಕಣಿವೆ ಶೀತ ಮರುಭೂಮಿಯಾಗಿದ್ದು, ಬರಡು ಹಾಗೂ ಕ್ಲಿಷ್ಟಕರವಾದದ್ದು. ಸ್ಪಿತಿ ನದಿ ಹಾಗೂ ಹಿಮ ಕರಗಿ ಇಳಿಯುವ ತೊರೆಗಳೇ ಇಲ್ಲಿಯ ಜೀವಜಲ. ಇಂತಹ ವಿಚಿತ್ರ, ಕ್ಲಿಷ್ಟ ಹಾಗೂ ಅಪರೂಪದ ಪ್ರದೇಶದಲ್ಲಿ ಜೀವನವೂ ಅಷ್ಟೇ ಕಷ್ಟಕರವಾದದ್ದು. ಹಾಗಾಗಿಯೇ ಇದು ಇಡೀ ಭಾರತದಲ್ಲೇ ಮೂರನೇ ಅತಿ ಕಡಿಮೆ ಜನಸಂಖ್ಯೆಯಿರುವ ಜಿಲ್ಲೆ. ಸ್ಪಿತಿಯ ಕೀ, ಟಾಬೋ, ಢಂಕರ್ ಬೌದ್ಧ ವಿಹಾರಗಳು ಸಾವಿರಾರು ವರ್ಷಗಳು ಹಳೆಯವುಗಳು ಹಾಗೂ ಅತಿ ಪುರಾತನವಾದವು.

ಹಿಮಾಚಲ ಪ್ರದೇಶದ ಮನಾಲಿಯಿಂದ ಸ್ಪಿತಿ ಕಣಿವೆಯ ಪ್ರಮುಖ ಪಟ್ಟಣ ಕಾಝಾಕ್ಕೆ ಇರುವ ದೂರ ಸುಮಾರು 210 ಕಿ.ಮೀ.ಗಳು. ಆದರೆ, ಹೈವೇನಲ್ಲಿ ಸಾಗಿದಂತೆ 3-4 ಗಂಟೆಯಲ್ಲಿ ಕಾಝಾ ತಲುಪಬಹುದೆಂದು ಲೆಕ್ಕಾಚಾರ ಹಾಕಿದರೆ, ಅದು ತಲೆಕೆಳಗಾಗುವುದು ಗ್ಯಾರೆಂಟಿ. ಕುಲುವಿನಿಂದ ಬೆಳಗ್ಗಿನ ಜಾವ ದಿನವೂ 3.30ಗೆ ಸರ್ಕಾರಿ ಬಸ್ಸು ಹೊರಡುತ್ತದೆ. ಅದು ಮನಾಲಿಯಿಂದ ಬೆಳಗ್ಗೆ 5ಕ್ಕೆ ಕಾಝಾ ಕಡೆಗೆ ರೋಹ್ತಂಗ್ ಪಾಸ್ ಮೂಲಕ ಸಾಗುತ್ತದೆ. ಹಾದಿ ಅತೀ ದುರ್ಗಮ. ರುದ್ರ ರಮಣೀಯ. ದೈತ್ಯ ಪರ್ವತಗಳಲ್ಲಿ ಹೆಬ್ಬಾವಿನಂತೆ ಸುರುಳಿ ಸುತ್ತಿ ಮಲಗಿರುವ ಏರು ತಗ್ಗಿನ ಕಲ್ಲು ಮುಳ್ಳಿನ ರಾಜ್ಯ ಹೆದ್ದಾರಿ(?!)ಯಲ್ಲಿ ಬಸ್ಸು ಸಾಗುತ್ತದೆ. ಹಾದಿ ಮಧ್ಯೆ ಏನೇ ತೊಂದರೆಗಳಾಗದೆ, ರೋಹ್ತಂಗ್ ಪಾಸ್ ನ ಟ್ರಾಫಿಕ್ಕಿನಲ್ಲಿ ಸಿಕ್ಕಿಹಾಕದಿದ್ದರೆ, ಬಸ್ಸು ಸರಿಯಾಗಿ ಕಾಝಾವನ್ನು ಸಂಜೆ 5ಕ್ಕೆ ತಲುಪುತ್ತದೆ, ಅಂದರೆ, 200 ಕಿ.ಮೀ ಸಾಗಲು ಬರೋಬ್ಬರಿ 12 ಗಂಟೆಗಳು ಬೇಕಾಗುತ್ತವೆ! ಈ ಲಾಂಗ್ಝಾ ಹಳ್ಳಿಯು ಕಾಝಾದಿಂದ ಸುಮಾರು 10 ಕಿ.ಮೀ ದೂರದಲ್ಲಿದೆ.

(ಅಕ್ಟೋಬರ್ 11, 2012ರ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ಬರಹ)

Tuesday, June 26, 2012

ಆ 7.30ರ ಮುಸ್ಸಂಜೆ...



ಕೈಯಲ್ಲೊಂದು ಹಳದಿ ಬುಲ್ಡೋಜರ್! ಗಂಟೆ ಮುಸ್ಸಂಜೆ 7.30 ದಾಟಿದೆ. ಆ ಪುಟ್ಟ ಹುಡುಗ ತೂಕಡಿಸಿ ತೂಕಡಿಸಿ, ಆಗಷ್ಟೇ ಬಂದು ಆ ಸೀಟಿನಲ್ಲಿ ಕೂತ ನನ್ನ ಮೇಲೆ ಬಿದ್ದ.
ಮೆಲ್ಲನೆ ತಟ್ಟಿ ಎಬ್ಬಿಸಿದೆ. ಹಠಾತ್ತನೆ ಎಚ್ಚೆತ್ತು, ನನ್ನ ಮುಖವನ್ನೊಮ್ಮೆ ದಿಟ್ಟಿಸಿದ, ಆ ಕಡೆ ಕಂಡಕ್ಟರ್ ಬಂದು 'ಟಿಕೆಟ್' ಎಂದ, 'ಮಿಲಾಗ್ರಿಸ್ ಸರ್ಕಲ್ - ಒಂದು' ನಾನು ಟಿಕೆಟ್ ತೆಗೆದುಕೊಂಡೆ.
ಹುಡುಗನಿಗೆ ಟಿಕೆಟ್ ಸಿಗಲಿಲ್ಲ, ಆತ ಕೊಟ್ಟ ಎರಡು ರೂ ನಾಣ್ಯ ಕಿಸೆಗೆ ಹಾಕಿ ಕಂಡಕ್ಟರು ಹಿಂದಿನ ಸೀಟಿಗೆ ಹೋಗಿ ಕೂತ. ಹುಡುಗ ಟಿಕೆಟು ಸಿಗದ ಬೇಸರದಲ್ಲಿ, 'ಇವರು ಹೀಗೆಯೇ, ನಮಗೆ ಟಿಕೆಟ್ಟೇ ಕೊಡುವುದಿಲ್ಲ, ಮೊನ್ನೆಯೂ ಹೀಗೆಯೇ ಮಾಡಿದ್ದರು, ಚೆಕ್ಕಿಂಗಿನವ್ರು ಬಂದ್ರೆ, ನಮಗೆ ಬಯ್ತಾರೆ' ಎಂದ. ನಾನು ನಕ್ಕೆ.
'ಎಷ್ಟನೇ ಕ್ಲಾಸು?' ನಾನು ಕೇಳಿದೆ
'ನಾಲ್ಕನೇ ಕ್ಲಾಸು'
'ಯಾವ ಶಾಲೆ?'
'ಕೆಲಿಂಜ'
'ಹೆಸರು?'
'ಖಾದರ್'
'ಇಷ್ಟೊತ್ತಲ್ಲಿ ಯಾಕೆ ಒಬ್ಬನೇ ಬಸ್ಸಿನಲ್ಲಿ?'
'ಬುಲ್ಡೋಜರ್ ತೆಗೀಲಿಕ್ಕೆ ಪೇಟೆಗೆ ಬಂದಿದ್ದೆ'
'ಮನೇಲಿ ಹೇಳಿದ್ದೀಯಾ?'
'ಇಲ್ಲ'
'ಅವರು ಹುಡುಕಲ್ವಾ? ಅವರಿಗೆ ಭಯ ಆದ್ರೆ?'
'ಇಲ್ಲ, ಅವರಿಗೆ ಭಯ ಆಗಲ್ಲ. ಗಂಡು ಹುಡುಗ ಅಲ್ವಾ ನಾನು'
ಎಲಾ ಇವನಾ! ನಾನು ಅವಾಕ್ಕಾದೆ, ಚೋಟುದ್ದದ ಹುಡುಗನ ಪೌರುಷಕ್ಕೆ!
'ದುಡ್ಡು ಯಾರು ಕೊಟ್ರು?' ನಾನು ತಿರುಗಿ ಪ್ರಶ್ನೆ ಹಾಕಿದೆ.
ತಾಯಿ ಮೊನ್ನೆ ಕೊಟ್ಟಿದ್ರು, ಅದನ್ನು ಎತ್ತಿ ಇಟ್ಟಿದ್ದೆ. ನಮ್ಮ ಶಾಲೆಯಲ್ಲಿ ಎಲ್ಲ ಮಕ್ಕಳ ಹತ್ರನೂ ಬುಲ್ಡೋಜರ್ ಇದೆ'
ನಾನು ಮತ್ತೆ ಪ್ರಶ್ನಿಸಲಿಲ್ಲ. ಅಂಗಡಿಗಳ ಬೆಳಕಿನ ಸಾಲನ್ನು ಆಗಷ್ಟೇ ಮುಗಿಸಿ, ಕತ್ತಲನ್ನು ಸೀಳುತ್ತಾ ಬಸ್ಸು ಸಾಗುತ್ತಿತ್ತು.
'ನೀವು ಯಾವ ಕ್ಲಾಸು?' ಆತನೇ ಕೇಳಿದ.
'ನಾನು ಶಾಲೆಗೆ ಹೋಗಲ್ಲ'
'ಯಾಕೆ?'
'ಶಾಲೆಗೆ ಹೋಗಿ ಮುಗಿದಾಗಿದೆ'
'ಹೌದಾ? ಹಾಗಾದರೆ ಈಗ ಏನು ಮಾಡ್ತಾ ಇದ್ದೀರಿ?'
'ಕೆಲಸ ಮಾಡ್ತಾ ಇದ್ದೀನಿ'
'ಏನು? ಟೀಚರ್ ಕೆಲಸವಾ?'
'ಹೆಂಗಪ್ಪಾ ಹೇಳೋದು ಇವನಿಗೆ?' ಅಂತ ತಲೆಬಿಸಿಯಾಯ್ತು. 'ಟೀಚರ್ ಅಲ್ಲಪ್ಪಾ. ಟಿವಿ ನೋಡ್ತೀಯಾ, ಪೇಪರ್ ಓದ್ತೀಯಾ?' ನಾನು ಮರು ಪ್ರಶ್ನೆ ಹಾಕಿದೆ.
'ಹುಂ, ನೋಡ್ತೀನಿ'
'ನಾನು ಟಿವಿ/ ನ್ಯೂಸ್ ಪೇಪರಿಗೆ ಕೆಲಸ ಮಾಡೋದು'
'ಬಿಜೆಪಿ, ಕಾಂಗ್ರೆಸ್  ಅಂತೆಲ್ಲಾ ಪೇಪರಲ್ಲಿ ದಿನಾ ಬರುತ್ತಲ್ವಾ? ಅದೆಲ್ಲಾ ನೀವೇ ಬರೆಯೋದಾ?'
'...... ಹುಂ, ಹೌದು. ಅದೇ ಕೆಲಸ. ನಿನಗೆ ಇಂಟ್ರೆಸ್ಟ್ ಇದೆಯಾ ರಾಜಕೀಯ ಓದೋದಕ್ಕೆ?', ನಾನು ಕೇಳಿದೆ.
'ಇಲ್ಲ, ನಾನು ಓದಲ್ಲ. ತಂದೆ ಕಾಂಗ್ರೆಸ್ ಬಗ್ಗೆ ಓದ್ತಾರೆ. ನಮ್ಮ ಮನೆಯಲ್ಲಿ ಎಲ್ಲರೂ ಕಾಂಗ್ರೆಸ್'
ನಾನು ನಕ್ಕೆ.
ಅಷ್ಟರಲ್ಲಿ, ಬಸ್ಸು ಮಂಗಲಪದವು ದಾಟಿ ಮುಂದೆ ಸಾಗುತ್ತಿತ್ತು. ನಾನು ಬದಿಯ ಕಿಟಕಿಯಿಂದ, ವಿರುದ್ಧ ದಿಕ್ಕಿಗೆ ಚಲಿಸುತ್ತಿದ್ದ ಕಪ್ಪು ಮರಗಳನ್ನು ನೋಡುವುದನ್ನು ಮುಂದುವರಿಸಿದೆ. ಕತ್ತಲ ಹಿತವಾದ ಗಾಳಿಗೆ ಹಾರುತ್ತಿದ್ದ ಕೂದಲನ್ನು ಕಿವಿಯ ಹಿಂದಕ್ಕೆ ಅನಾಯಾಸವಾಗಿ ತಳ್ಳುತ್ತಲೇ ಇದ್ದೆ.
'ನೀವು ಎಲ್ಲಿ ಹೋಗ್ತಾ ಇದ್ದೀರಿ?' ಆತ ತನ್ನ ಪ್ರಶ್ನಾ ಸರಣಿಯನ್ನು ಮುಂದುವರಿಸಿದ.
'ಚೆನ್ನೈಗೆ'
ಚೈನ್ನೈ ಎಲ್ಲಿರೋದು? ಎಷ್ಟು ದೂರ ಇಲ್ಲಿಂದ?'
ತಮಿಳುನಾಡಲ್ಲಿ. ಇಲ್ಲಿಂದ ರೈಲಲ್ಲಿ ಸುಮಾರು  800 -900 ಕಿಮೀ ಆಗ್ಬಹುದು'
'ಭಯ ಆಗಲ್ವಾ? ರಾತ್ರಿ ಒಬ್ಬರೇ ಹೇಗೆ ಹೋಗ್ತೀರಿ?'
'ಚೋಟುದ್ದ ಇರೋ ನಿಂಗೇ ಭಯ ಆಗಲ್ಲ, ಇನ್ನು ನಂಗ್ಯಾಕಪ್ಪಾ ಭಯ?' ಎಂದೆ. ಇಬ್ಬರೂ ಮನಸಾರೆ ನಕ್ಕೆವು.
ಆಮೇಲೆ  ನಾನೇ, 'ಭಯ ಏನೂ ಇಲ್ಲ. ಮಂಗಳೂರಲ್ಲಿ ಇಳಿದು, ರೈಲು ಹತ್ತಿ ಹೋಗ್ತೀನಿ, ನಾಳೆ ಮಧ್ಯಾಹ್ನ ಚೆನ್ನೈ ತಲುಪುತ್ತೆ'
'ಚೆನ್ನೈ ದೊಡ್ಡ ಸಿಟಿ ಅಲ್ವಾ? ಅಲ್ಲಿ ದೊಡ್ಡ ದೊಡ್ಡ ಸಿನಿಮಾ ಟಾಕೀಸ್  ಇರುತ್ತದೆ ಅಲ್ವಾ?'
'ಹೌದು. ನೀನು ಹೋಗಿದ್ದೀಯಾ?'
'ಚೆನ್ನೈಗೆ ಹೋಗಿಲ್ಲ. ಆದ್ರೆ, ಅಲ್ಲೆಲ್ಲ ಇರುವ ಸಿನಿಮಾ ಟಾಕೀಸ್ ಥರಾನೇ ಮಂಗಳೂರಲ್ಲೂ ಈಗ ಶುರುವಾಗಿದೆ. ಒಮ್ಮೆ ನಾನು- ನನ್ನ ಫ್ರೆಂಡು ಅವತ್ತೊಮ್ಮೆ ಮಂಗಳೂರಿಗೆ ಹೋಗಿ ಪಿಕ್ಚರ್ ನೋಡಿ ಬಂದಿದ್ದೇವೆ'
'ಆಗ್ಲೂ ಮನೆಯಲ್ಲಿ ಹೇಳದೆ ಹೋಗಿದ್ದಾ?' ನಾನು ಕಣ್ಣು ಮಿಟುಕಿಸುತ್ತಾ ಕಾಲೆಳೆದೆ.
'ಹೌದು' ಎಂದು ಆತ ನಕ್ಕ. ಹಿಂದೆಯೇ ಇದ್ದ ಕಂಡಕ್ಟರ್ ಮೀಸೆಯಂಚಿನಲ್ಲೂ ನಗು.
ಅಷ್ಟರಲ್ಲಿ ಕೆಲಿಂಜ ಸ್ಟಾಪು ಬಂತು. ತನ್ನ ಹಳದಿ ಬುಲ್ಡೋಜರಿನ ಜೊತೆ ಎದ್ದ ಹುಡುಗ ಮೆಟ್ಟಲ ಬಳಿ ನಿಂತು ನನ್ನೆಡೆಗೆ ತಿರುಗಿ ನೋಡಿದ.
ನಾನು ಕಂಡಕ್ಟರ್ ಕಡೆಗೆ ತಿರುಗಿ, 'ಇನ್ನೊಮ್ಮೆ ಇವನು ಈ ಬಸ್ಸಿನಲ್ಲಿ ಬಂದ್ರೆ ಅವನಿಗೆ ಟಿಕೇಟು ಕೊಡಿ ಆಯ್ತಾ' ಎಂದು ನಕ್ಕೆ
ಕಂಡಕ್ಟರು ನಗುತ್ತಾ ಸೀಟಿ ಊದಿದರು.
ಖಾದರ್ ನಕ್ಕು ಟಾಟಾ ಮಾಡಿ ಕೆಳಗಿಳಿದ.
ಬಸ್ಸು ಅದೇ ವೇಗದಲ್ಲಿ ಮತ್ತೆ ಹೊರಟಿತು. ನಾನು ಕಿಟಕಿಯೆಡೆಗೆ ತಿರುಗಿದೆ. ಕಪ್ಪು ಮರಗಳು ಅದೇ ರಭಸದಲ್ಲಿ ಹಿಂದಕ್ಕೆ ಸಾಗುತ್ತಲೇ ಇದ್ದವು, ಯಾಕೋ ಬಸ್ಸು ನಿಧಾನ ಅನಿಸಿತು...