Sunday, June 8, 2008

ಅವನ ನೆನೆದು...,

ಇದು ೩ ವರ್ಷಗಳ ಹಿಂದಿನ ನೆನಪು. ಆಗ ನಾನಿನ್ನೂ ಅಂತಿಮ ಪತ್ರಿಕೋದ್ಯಮ ಪದವಿಯಲ್ಲಿದ್ದೆ. ವಿಶಾಖಪಟ್ಟಣದಲ್ಲಿ ಆಗಷ್ಟೇ ದಕ್ಷಿಣ ಭಾರತ ಮಟ್ಟದ ಪೇಂಟಿಂಗ್‌ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿ ರೈಲಿನಲ್ಲಿ ಮಂಗಳೂರಿಗೆ ಮರಳುತ್ತಿದ್ದ ಸಮಯ. ವಿಶಾಖಪಟ್ಟಣದಿಂದ ಚೆನ್ನೈ ರೈಲು ನಿಲ್ದಾಣಕ್ಕೆ ನಮ್ಮ ರೈಲು ಬೆಳಗ್ಗಿನ ಜಾವ ನಾಲ್ಕು ಗಂಟೆಗೇ ತಲುಪಿತ್ತು. ಮಂಗಳೂರಿಗೆ ಇನ್ನೊಂದು ರೈಲೇರಲು ಇನ್ನೂ ಬರೋಬ್ಬರಿ ಆರು ಗಂಟೆಗಳ ಸಮಯವಿತ್ತು. ಹಾಗಾಗಿ, ಸಹಜವಾಗಿಯೇ ಚೆನ್ನೈ ಸುತ್ತುವ ಹುಮ್ಮಸ್ಸಿನಲ್ಲಿ ನಮ್ಮ ಮಂಗಳೂರು ಕಪಿಸೈನ್ಯ ಮೊದಲು ಹೋಗಿದ್ದು ಮರೀನಾ ಸಮುದ್ರ ತೀರಕ್ಕೆ. ಹತ್ತು ಹನ್ನೆರಡು ಜನರಿದ್ದ ತಂಡದಲ್ಲಿ ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳಿದ್ದರೂ, ಅಷ್ಟಾಗಲೇ ನಮ್ಮ ನಡುವೆ ಸ್ನೇಹ ಮೊಳೆತಿತ್ತು. ಆಗಷ್ಟೇ ಕೆಂಬಣ್ಣದ ಸೂರ್ಯ ನಿಧಾನವಾಗಿ ನೀರಿನಿಂದ ಮೇಲೇಳುತ್ತಿದ್ದ. ನಮ್ಮೆಲ್ಲರ ಕ್ಯಾಮರಾಗಳು ಈ ಅಪರೂಪದ ಕ್ಷಣಗಳನ್ನು ಸೆರೆಹಿಡಿವಲ್ಲಿ ಮಗ್ನವಾಗಿದ್ದವು. ಇನ್ನೇನು ಹೊರಡಬೇಕೆನ್ನುವ ಹೊತ್ತಿನಲ್ಲಿ ನನಗ್ಯಾಕೋ ಸಮಾಧಾನವಿರಲಿಲ್ಲ. ನನ್ನ ಬೆರಳೆಣಿಕೆಯ ಗೆಳತಿಯರಿಗೆ ಏನನ್ನಾದರೂ ವಿಶೇಷವಾದುದನ್ನು ಖರೀದಿಸಬೇಕಿತ್ತಲ್ಲಾ ಎಂಬ ತುಡಿತ. ಅಂತೂ ನನ್ನ ಕಣ್ಣಿಗೆ ಸಮುದ್ರ ತೀರದಲ್ಲಿ ಕೆಲವು ಅಪರೂಪದ ಚಿಪ್ಪುಗಳನ್ನು ಹರವಿ ಕೂತ ವ್ಯಕ್ತಿ ಕಂಡ. ಅಂಗೈಯಗಲದ ವಿಶೇಷವಾದ ಆಕರ್ಷಕ ಚಿಪ್ಪುಗಳು ಆತನ ಬಳಿಯಿದ್ದವು. ಒಂದನ್ನೊಂದು ಮೀರಿಸುವ ಕುಸುರಿ ಆ ಚಿಪ್ಪುಗಳಲ್ಲಿದ್ದುದು ನನ್ನ ಉತ್ಸಾಹವನ್ನು ಹೆಚ್ಚಿಸಿದವು. ನೆನಪಿಗಾಗಿ ಕೊಡಲು, ನನ್ನ ಜತೆಯೇ ಇಡಲು ಇದಕ್ಕಿಂತ ಉತ್ತಮ ವಸ್ತು ಯಾವುದಾದರೂ ಇದೆಯೇ.. ಅಂತೂ, ಆತನ ಬಳಿ ಹಿಂದಿಯಲ್ಲಿ ಮಾತನಾಡುತ್ತಾ, ಸ್ವಲ್ಪ ಚೌಕಾಸಿ ಮಾಡಿ ಕಡಿಮೆ ಬೆಲೆಯಲ್ಲಿ ಹತ್ತಾರು ಚಿಪ್ಪುಗಳು ನನ್ನ ಬ್ಯಾಗು ಸೇರಿದವು. ಕಡಿಮೆ ಬೆಲೆಗೆ ಚಿಪ್ಪು ನೀಡಲು ಆತನ ಬಳಿಯೂ ಕಾರಣವಿತ್ತು. ಅದು ಆತನೂ ಕನ್ನಡಿಗ ಎಂಬುದು. ಗುಂಪಿನಲ್ಲಿ ಕನ್ನಡದಲ್ಲಿ ಹರಟುತ್ತಿದ್ದ ನಮ್ಮ ಸಂಭಾಷಣೆ ಕೇಳಿ ಆತನ ಮುಖ ಅಷ್ಟಗಲ ಅರಳಿತ್ತು.

ಒಂದು ವಾರದ ಆ ದೊಡ್ಡ ವಿಶಾಖಪಟ್ಟಣವನ್ನು ಹಾಗೂ ಮರೀನಾವನ್ನು ಆ ಸಣ್ಣ ಸಣ್ಣ ಚಿಪ್ಪುಗಳಲ್ಲಿ ತುಂಬಿ ನಾನು ಮತ್ತೆ ರೈಲೇರಿದೆ. ಬೆಳಗ್ಗಿನ ಜಾವ ೩ರ ಹೊತ್ತಿಗೆ ನಮ್ಮ ನಮ್ಮ ಲಗ್ಗೇಜುಗಳ ಜತೆ ನಾವು ಮಂಗಳೂರಲ್ಲಿದ್ದೆವು. ಎಲ್ಲರಿಗೂ ಬೈ ಹೇಳಿ ನಾನು ವಿಟ್ಲಕ್ಕೆ ಕಾಲ್ಕಿತ್ತೆ. ನಾವು ಮಂಗಳೂರಿಗೆ ಮರಳಿದ ದಿನ ಕಾಲೇಜು ಇರಲಿಲ್ಲ. ಕ್ರಿಸ್‌ಮಸ್‌ ಅಂಗವಾಗಿ ಎರಡು ದಿನ ರಜಾ ಇತ್ತು. ಸ್ಪರ್ಧೆಯಲ್ಲಿ ಪ್ರೈಸು ಬರಲಿಲ್ಲವಲ್ಲಾ ಎಂಬ ಬೇಸರವಿದ್ದರೂ ಆ ನೆನಪುಗಳೆಲ್ಲವೂ ಚಿಪ್ಪಿನೊಳಗೆ ಭದ್ರವಾಗಿದ್ದವು. ಗಳತಿಯರಿಗೆ ಆ ಚಿಪ್ಪುಗಳನ್ನು ಕೊಟ್ಟು ಅವರ ಖುಷಿಯನ್ನು ಸವಿಯುವ ಧಾವಂತವೂ ನನ್ನಲ್ಲಿತ್ತು. ಆದರೆ,ಅಷ್ಟಾಗಲೇ ವಿಧಿಲಿಖಿತ ಬೇರೆಯೇ ಆಗಿತ್ತು ಎಂಬ ಅರಿವು ನನ್ನಲ್ಲಿರಲಿಲ್ಲ.

ತಿರುಗಾಡಿ ಬಂದ ಸುಸ್ತಿನಲ್ಲೋ ಏನೋ, ಪ್ರಪಂಚ ಮುಳುಗಿದರೂ ಆ ದಿನ ಎಚ್ಚರಾಗುವ ಸ್ಥಿತಿಯಲ್ಲಿ ನಾನಿರಲಿಲ್ಲ. ಜತೆಗೆ, ಮಾರನೇ ದಿನ ಮುಂಜಾವಿನಲ್ಲೇ ಮನೆ ಬಿಟ್ಟು ಕ್ಲಾಸಿಗೆ ಹಾಜರಾಗಲೇಬೇಕಿತ್ತು. ಹಾಗಾಗಿ ಬೇಗನೇ ಹಾಸಿಗೆ ಸೇರಿದೆ. ಮಾರನೇ ದಿನ ಬೇಗ ಎದ್ದು ಬಿ.ಸಿ.ರೋಡ್‌ ಬಸ್‌ ನಿಲ್ದಾಣದಲ್ಲಿ ಧರ್ಮಸ್ಥಳ ಬಸ್ಸೇರಲು ಕಾಯುತ್ತಿದ್ದೆ. ಇದ್ದಕ್ಕಿದ್ದಂತೆ ದೊಡ್ಡ ತಲೆಬರಹ (‘ಭೂಮಿ ಕುಲುಕಿದರೆ, ಸಮುದ್ರ ತುಳುಕಾಡಿದರೆ, ನೀನ್ಯಾವ ಲೆಕ್ಕವೋ ಹುಲು ಮಾನವ?’ ಎಂಬ ತಲೆಬರಹವಿದ್ದಂತೆ ನೆನಪು) ಹಾಗೂ ಸಮುದ್ರ ತೆರೆಯ ಚಿತ್ರವಿದ್ದ ‘ಕನ್ನಡಪ್ರಭ’ ನನ್ನನ್ನು ಆಕರ್ಷಿಸಿತು. ಖರೀದಿಸಿದರೆ, ನನಗೆ ಆಘಾತವಾಗುವ ಸುದ್ದಿ ಅಲ್ಲಿತ್ತು. ಚೆನ್ನೈ ಮರೀನಾ ಬೀಚ್‌ನಲ್ಲಿ ಸುನಾಮಿ!.. ಸುನಾಮಿ ಹೆಸರೇ ಆಗ ಹೊಸದು. ಭೀಕರ ದೃಶ್ಯಗಳ ಚಿತ್ರಗಳು ಒಂದು ಕ್ಷಣ ನನ್ನಲ್ಲಿ ಬೀಕರ ಅಲೆಗಳನ್ನೆಬ್ಬಿಸಿದರೂ ಸುನಾಮಿಯ ಅರ್ಥ ನನಗಾಗ ನಿಜಕ್ಕೂ ತಿಳಿದಿರಲಿಲ್ಲ. ನಾವೆಲ್ಲರೂ ನಡೆದಾಡಿದ, ನಗುತ್ತಾ ನಿಂತು ಕ್ಲಿಕ್ಕಿಸಿಕೊಂಡ ಜಾಗಗಳೆಲ್ಲವೂ ಮುಳುಗಿ ಹೋಗಿದ್ದ ದೃಶ್ಗಳ ಚಿತ್ರಗಳು ಪತ್ರಿಕೆಯ ಮುಖಪುಟದಲ್ಲಿ ಇದ್ದವು. ನಾವು ಮರೀನಾ ಬೀಚ್‌ನಲ್ಲಿ ನಡೆದಾಡಿದ ಮಾರನೇ ದಿನವೇ ಆ ದುರ್ಘಟನೆ ನಡೆದಿತ್ತು.

ಹಾಗಾದರೆ, ಆ ಕನ್ನಡಿಗ ಚಿಪ್ಪು ಮಾರುವ ಮನುಷ್ಯನ ಗತಿ...?! ಮೊದಲು ನನ್ನಲ್ಲಿ ಉದ್ಭವಿಸಿದ ಪ್ರಶ್ನೆ ಇದು. ಪ್ರತಿನಿತ್ಯ ಆ ಮರೀನಾ ಬೀಚ್‌ನಲ್ಲಿ ಮುಂಜಾವಿನಿಂದಲೇ ಚಿಪ್ಪು ಮಾರಲು ಕೂರುವ ಆತ ಹಾಗಾದರೆ...? ಹೀಗೆ ಆಗ ಕಾಡಿದ ಆ ಪ್ರಶ್ನೆ ಈಗಲೂ ಕಾಡುತ್ತಲೇ ಇದೆ. ಅಂದಿದ್ದ ಆ ಸುಂದರ ಮುಂಜಾವು ಈಗಲೂ ದುಸ್ವಪ್ನವಾಗಿ ನನ್ನ ಜತೆ ಇದ್ದೇ ಇದೆ. ಆ ಚಿಪ್ಪುಗಳಲ್ಲಿದ್ದ ಸುಂದರ ಕ್ಷಣಗಳ ಜತೆ ಈ ಭಯಂಕರ ನೆನಪೂ ಸೇರಿಕೊಳ್ಳುತ್ತದೆ. ಅಂಗೈಯಗಲದ ಆ ಚಿಪ್ಪುಗಳು ಇನ್ನೂ ನನ್ನ ಬಳಿ ಇವೆ. ಅದನ್ನು ಯಾರಿಗಾದರೂ ಹೇಗೆ ಕೊಡಲಿ ನಾನು???..

11 comments:

ರಾಜೇಶ್ ನಾಯ್ಕ said...

ರಾಧಿಕಾ,
ಬ್ಲಾಗಿನ ಮೊದಲ ಲೇಖನ ಚೆನ್ನಾಗಿದೆ. ’ಅವನ ನೆನೆದು’ ಸ್ವಲ್ಪ ಹೊತ್ತು ನನ್ನನ್ನೂ ಅವನ ಗುಂಗಿನಲ್ಲೇ ಇರುವಂತೆ ಮಾಡಿತು. ಸಮಯ ಸಿಕ್ಕಾಗ ಬರೆಯುತ್ತಾ ಇರಿ.

VENU VINOD said...

ಲೇಖನ ಚೆನ್ನಾಗಿದೆ, ಬರವಣಿಗೆ ಶೈಲಿಯೂ ಹಿಡಿಸಿದೆ, ಮತ್ತೇಕೆ ತಡ ಮಧುಬನದಿ ರಾಧಿಕೆ ಸದಾ ಕುಣಿಯುತಿರಲಿ :)

ಅಮರ said...

ನೆನೆಪುಗಳೆ ಹಾಗೆ ಯಾವಗ ಯಾರನ್ನ ಹೊತ್ತು ತರುತ್ತವೊ ತಿಳಿಯೊಲ್ಲ ... ನಮ್ಮ ಬೀದಿಯಲ್ಲಿ ಯಾವತ್ತೊ ತಿರುಗಾಡಿದ ಹಳೆ ಪೇಪರ್ ಸಾಬಿ ನೆನಪಾಗಿ ಉಳಿದುಬಿಡ್ತಾನೆ ... ಇವರು ಮಾತ್ರ ನೆನಪಿನಲ್ಲಿರಲಿ ಇವರು ಬೇಡ ಅಂತ ನಾವು ಮನಸ್ಸಿಗೆ ತಾಕೀತು ಮಾಡ್ಲಿಕ್ಕಾಗೊಲ್ಲಾ ಅಲ್ವ...

ಸಮುದ್ರ ದಂಡೆಯ ನೆನಪುಗಳನ್ನ ಕಪ್ಪೆ ಚಿಪ್ಪಿನಲಿ ತುಂಬುಕೊಟ್ಟವನ ಬದುಕು ನಲುಗದಿರಲಿ.
-ಅಮರ

Anonymous said...

really nice writing, it shwos ur

Anonymous said...

mdubanadalli radike yavagulu ege breyutftirli,

ಆಲಾಪಿನಿ said...

houdhu kane radhike...
suddi keli, nodine thumbaa aaghaathavaagittu namage. ninne nodiddu naale illa andre adeshtu sankatavaagatte alve? any way brevanige ishtavaaaythu.

Anonymous said...

ಇದು ಬಾಳು ನೋಡು ಇದ ತಿಳಿದೆನೆಂದರು ತಿಳಿದ ಧೀರನಿಲ್ಲ..
ಹಲವುತನದ ಮೈಮರೆಸುವಾಟವಿದು ನಿಜವ ತೋರದಲ್ಲ..

ನೀವು ಬರೆಯುತ್ತಿರುವುದು
ಅಳುವ ಕಡಲೊಳು ತೇಲಿಬರುತಲಿದೆ ನಗೆಯ ಹಾಯಿ ದೋಣಿ.

Anonymous said...

so meany days, y no writing, i am wating to read your writings so plz ...

ಮನೋರಮಾ.ಬಿ.ಎನ್ said...

ninna nenepina chippinolage hudhugi koote hudugi...
neenu andu kaiyallitta chippa nodi......

ಮೌನಿ said...

"avana nenedu" chennagide radike.
madhubanadi ulida chippu avana nenedu marugadirali.indugale hage,nenneya halavugalannu tindubidutave. eny way baravanige chennagide....

mcs.shetty said...

hi ..

really good one...