.... ಸುಮಾರು ೧೦ ವರ್ಷದ ಹಿಂದಿನ ನೆನಪು.
ಅದೊಂದು ದಿನ ಜೋರಾಗಿ ಮಳೆ ಸುರಿಯುತ್ತಿತ್ತು. ನಾನು ಆಗಿನ್ನೂ ಹೈಸ್ಕೂಲಿನಲ್ಲಿದ್ದಿರಬಹುದು. ಹೊರಗೇನು ನಡೆಯುತ್ತಿದೆ ಎಂಬುದೂ ಕೇಳಿಸದಷ್ಟು ಜೋರಾಗಿ ಮಳೆ ಬರುತ್ತಿತ್ತು. ನಾನು ವಿಟ್ಲದ ನಮ್ಮ ಮನೆಯ ಜಗಲಿಯಲ್ಲಿ ಸುಮ್ಮನೆ ನಿಂತು ಎಲ್ಲೋ ನೋಡುತ್ತಿದೆ. ಅಮ್ಮ ಅದೇನೋ ಕೆಲಸದಲ್ಲಿದ್ದರು. ಇದ್ದಕ್ಕಿದ್ದಂತೆ, ಮಳೆಯ ಧೋ ಸದ್ದಿನಲ್ಲೂ ದೂರದಲ್ಲೆಲ್ಲೋ ಜೋರಾಗಿ ಅರಚುವ ಸದ್ದು ಕೇಳಿ ಬಂತು. ನಾನು, ಅಮ್ಮ ಇಬ್ಬರೂ ಕಿವಿಗೊಟ್ಟು ಕೇಳಿದಾಗ ಗೊತ್ತಾಗಿದ್ದು ಮೇಲಿನ ಮನೆಯಿಂದ ಅಂತ. ತಕ್ಷಣ ಇಬ್ಬರೂ ಛತ್ರಿ ಹಿಡಿದು ಓಡಿದೆವು. ಆಗ ಕಂಡ ದೃಶ್ಯ ಮಾತ್ರ ಎಂಥ ಕಟುಕನಲ್ಲೂ ವೇದನೆ ಹುಟ್ಟಿಸುವಂಥದ್ದು. ಹೆಣ್ಣುನಾಯಿಯೊಂದು ಮಳೆಯಲ್ಲೇ ಮೇಲಿನ ಮನೆಯ ತೆಂಗಿನ ಮರದ ಬುಡದಲ್ಲಿ ಮರಿ ಹಾಕುವ ಗಳಿಗೆಯಲ್ಲಿತ್ತು. ಪಕ್ಕದಲ್ಲೇ ಮೇಲಿನ ಮನೆಯ ಹುಡುಗರು ನಾಯಿಗೆ ಜೋರಾಗಿ ಹೊಡೆಯುತ್ತಿದ್ದರು. ದೂರದಿಂದಲ್ಲೇ ಇನ್ನಿಬ್ಬರು ನಾಯಿಯತ್ತ ಕಲ್ಲೆಸೆಯುತ್ತಿದ್ದರು. ಆ ನಾಯಿ ಅತ್ತ ಹೆರುವ ನೋವೂ ತಾಳಲಾರದೆ, ಇತ್ತ ಈ ಹುಡುಗರ ಕಾಟವೂ ತಾಳಲಾರದೆ ಒದ್ದಾಡುತ್ತಿತ್ತು. ನನ್ನಮ್ಮ ಹುಡುಗರನ್ನು ಎಷ್ಟು ಕೇಳಿಕೊಂಡರೂ ಅವರು ಹೊಡೆಯುವುದನ್ನು ನಿಲ್ಲಿಸಲಿಲ್ಲ. ನಾಯಿ ಒಂದು ಮರದ ಬುಡದಿಂದ ಮತ್ತೊಂದು ಮರದ ಬುಡಕ್ಕೆ ಕಷ್ಟಪಟ್ಟು ಓಡಿ ಹೋಗಿ ಕೂತಿತು. ಅಲ್ಲಿಗೂ ಬಿಡದ ಹುಡುಗರು, ಒಟ್ಟಾರೆ ಅವರ ಮನೆಯ ಕಾಂಪೌಂಡಿನಿಂದಲೇ ಓಡಿಸುವ ಶತ ಪ್ರಯತ್ನ ನಡೆಸುತ್ತಿದ್ದರು. ಯಾಕೆ ಹೀಗೆ ಹೋಡೀತಾ ಇದ್ದೀರಿ ಎಂದಾಗ ಅವರಿಂದ ಬಂದ ಉತ್ತರ, ‘ಅದು ಇಲ್ಲಿ ಮರಿ ಹಾಕಿದ್ರೆ, ಆ ಮರಿಗಳು ಇಲ್ಲಿಂದ ಎಷ್ಟು ದಿನವಾದ್ರೂ ಹೋಗಲ್ಲ. ಆಗ ನಮಗೆ ಕಷ್ಟವಾಗುತ್ತೆ’ ಎಂದು. (ಹಳ್ಳಿಗಳಲ್ಲಿ ಇದು ಸಾಮಾನ್ಯ. ಬೀದಿ ಹೆಣ್ಣು ನಾಯಿ ತಮ್ಮ ಮನೆ ಕಾಂಪೌಂಡಿನಲ್ಲಿ ಮರಿ ಹಾಕದಿದ್ದರೆ ಸಾಕು ಎಂದು ಎಲ್ಲರೂ ದೇವರಲ್ಲಿ ಪ್ರಾರ್ಥಿಸುತ್ತಲೇ ಇರುತ್ತಾರೆ.) ‘ಆದ್ರೂ ಇಂಥ ಸಂದರ್ಭ ನೀವು ಕಾಟ ಕೊಟ್ರೆ ನಿಮಗೆ ಅದರ ಶಾಪ ತಟ್ಟದಿರದು. ನೀವು ಅಂಥ ಸಂದರ್ಭದಲ್ಲಿದ್ದರೆ ನಿಮಗೆ ಗೊತ್ತಾಗುತ್ತೆ ಆ ನೋವು ಎಂಥಾದ್ದು ಅಂತ’ ಎಂದು ಅಮ್ಮ ಜೋರಾಗಿ ಅವರಿಗೆ ಬೈದಾಗ ಕೊನೆಗೂ ಕಲ್ಲು ಹೊಡೆಯೋದು ನಿಲ್ಲಿಸಿದ್ರು. ನಾಯಿ ಕೊನೆಗೂ ೩ ಮರಿಗಳನ್ನೂ ಹಾಕಿತು.
...... ಇದು ಮೊನ್ನೆ ಮೊನ್ನೆ ನಡೆದ ಘಟನೆ. ಅದ್ಯಾವುದೋ ಸುದ್ದಿಯ ಬೆನ್ನೇರಿ ಯಶವಂತಪುರಕ್ಕೆ ಹೋಗಿದ್ದೆ. ಹಿಂತಿರುಗಿ ಬರುತ್ತಿದ್ದಾಗ ರಸ್ತೆಯಲ್ಲಿ ಅದ್ಯಾಕೋ ಎಲ್ಲ ವಾಹನಗಳು ರಸ್ತೆಯ ಮಧ್ಯಭಾಗವನ್ನು ಹೊರತು ಪಡಿಸಿ ಬದಿಯಿಂದಲೇ ಸಾಗುತ್ತಿದ್ದವು. ಹೀಗಾಗಿ ಸಂಚಾರ ಸಹಜವಾಗಿಯೇ ಅಸ್ತವ್ಯಸ್ತವಾಗಿತ್ತು. ದೂರದಿಂದಲೇ ಸಂಚಾರದ ತೊಂದರೆ ಅನುಭವಕ್ಕೆ ಬಂದರೂ ಯಾಕೆ ಅಂತ ಗೊತ್ತಾಗಲಿಲ್ಲ. ಬೆಂಗಳೂರಲ್ಲಿ ಇದು ಸಾಮಾನ್ಯವಾದ್ದರಿಂದ ಸುಮ್ಮನೆ ಕಾರಲ್ಲಿ ಕೂತಿದ್ದೆವು. ಆದರೆ, ಹತ್ತಿರ ಹೋದಾಗಲೇ ಗೊತ್ತಾಗಿದ್ದು, ರಸ್ತೆಯ ಮಧ್ಯದಲ್ಲೇ ನಾಯಿಯೊಂದು ಮಲಗಿದೆ ಎಂದು. ಅದಕ್ಕೆ ಗಾಯವಾಗಿತ್ತು. ಏಳಲೂ ಆಗುತ್ತಿರಲಿಲ್ಲ. ಹಾಗಾಗಿ ನಿಶ್ಚಿಂತೆಯಿಂದ ಅದು ರಸ್ತೆ ಮಧ್ಯದಲ್ಲೇ ಮಲಗಿ ಬಿಟ್ಟಿತು. ಪರಿಸ್ಥಿತಿ ಏನೆಂದು ಅರ್ತವಾಗುತ್ತಿರುವ ಕ್ಷಣದಲ್ಲೇ ನಾಲ್ಕೈದು ಮಂದಿ ಬೈಕ್ ಸವಾರ ಯುವಕರು ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿ ನಾಯಿಯನ್ನು ಅಲ್ಲಿಂದ ಎತ್ತಿದರು.
....... ಇದು ಎರಡು ಮುಖ.
5 comments:
ಮಾನವೀಯತೆಯ ಎರಡು ಮುಖ ತೋರಿಸಿದ್ದೀರಿ. ಚೆನ್ನಾಗಿದೆ ನಿಮ್ಮ ಬರಹ. ನಿರಂತರವಾಗಿ ಬರೆಯುತ್ತಿರಿ.
ಏನಾದರೂ ಬರೆಯಿ ರೀ..
ಬೆಂಗಳೂರಿನ ಹಲವು ಮುಖಗಳ ಪರಿಚಯ ಇನ್ನಷ್ಟು ಆಗುವುದಿದೆ .................
matte eardu mukha anta koneyali bekirailla... arta agutte...
but chennnagide baravanigeya vegha mattu oogha..
ಸಂವೇದನೆಗೆ ಸಾಣಿ ಹಿಡಿವ ಮನಸ್ಸು ಕಣೆ ನಿಂದು
Post a Comment