Thursday, January 29, 2009

ಸುಮ್ಮನೆ, ಒಂದು ಕ್ಷಣದ ಮೌನ...

ಊರಿಗೆ ಬಂದು ಭರ್ತಿ ಮೂರು ದಿನಗಳಾಗಿದ್ದವು. ಅಮ್ಮನ ಜತೆ ಹಾಳುಮೂಳು ಹರಟೆ, ಲೊಟ್ಟೆ ಪಟ್ಟಾಂಗ ಹೊಡೆಯದೆ ಬಹಳ ದಿನಗಳಾಗಿದ್ದವು. ಇನ್ನೂ ಬಹಳ ಇದೆ ಮಾತಾಡೋದಿಕ್ಕೆ ಅಂದುಕೊಳ್ಳುತ್ತಿರುವಾಗಲೇ ಹೊರಡುವ ದಿನ ಬಂದುಬಿಟ್ಟಿತ್ತು. ಹೊರಡುವಾಗ ಯಾಕೋ ಮನಸ್ಸು ಖಾಲಿ ಖಾಲಿ. ಅಮ್ಮನ ಚಕ್ಕುಲಿ, ಉಂಡ್ಲಕಾಳು, ನೇಂದ್ರ ಬಾಳೆಕಾಯಿ ಚಿಪ್ಸು... ಇನ್ನೂ ಏನೇನೋ, ಜತೆಗೆ ಒಂದಿಷ್ಟು ಅಮ್ಮನ ಪ್ರೀತಿ, ಅಪ್ಪನ ನೇವರಿಕೆಗಳೆಲ್ಲವೂ ಸೇರಿ ಇದ್ದ ನಾಲ್ಕು ಬ್ಯಾಗುಗಳೂ ಮಣಭಾರವಾಗಿಬಿಟ್ಟಿದ್ದವು. ವಿಟ್ಲ ಬಸ್‌ಸ್ಟಾಂಡಿನಲ್ಲಿ ಆಟೋದಿಂದ ಇಳಿಸುವಷ್ಟರಲ್ಲಿ ಸಾಕು ಸಾಕಾಗಿತ್ತು. ಇನ್ನು ದೂರದ ಚೆನ್ನೈಗೆ ಇದನ್ನು ಸಾಗಿಸುವಷ್ಟರಲ್ಲಿ.. ಅಂತ ನನ್ನ ಹೈರಾಣುತನದ ಕಲ್ಪನೆಯಲ್ಲೇ ನಿಂತಿದ್ದೆ. ಅಪ್ಪ ಅದೇನೋ ಕೆಲಸಕ್ಕೆಂದು ಆಚೆ ಹೋಗಿದ್ದರು. ಇಷ್ಟಾದಾಗ ಅದೆಲ್ಲಿಂದಲೋ ಆ ಸಣಕಲು ಪೇಪರ್‌ ಮನುಷ್ಯ ನನಗೆ ತಗುಲಿ ಹಾಕಿಕೊಂಡು ಬಿಟ್ಟ.
‘ಪೇಪರ್‌ ಬೇಕಾ? ಉದಯವಾಣಿ, ವಿಜಯ ಕರ್ನಾಟಕ, ಡೆಕ್ಕನ್‌ ಹೆರಾಲ್ಡ್‌..’ ಎಮ್ಮೆ ಉಚ್ಚೆ ಹೊಯ್ದಂತೆ ತನ್ನ ರಾಗ ದಾಟಿಸಿದ ನನ್ನತ್ತ. ಬೇಡ ಅಂದೆ. ನನ್ನ ಕಣ್ಣೋ ಪಕ್ಕದಲ್ಲಿ ನಾನಿಟ್ಟಿದ್ದ ನಾಲ್ಕು ಬ್ಯಾಗುಗಳನ್ನು ಬಿಟ್ಟು ಕದಲುತ್ತಿರಲಿಲ್ಲ. ಮುಖದ ಮೇಲೆ ಸೂರ್ಯನ ಬಿಸಿಲು ನೇರವಾಗಿ ಬೀಳುತ್ತಿತ್ತು. ಇದನ್ನೇ ಗಮನಿಸಿದಂತೆ, ಪೇಪರ್ ಮನುಷ್ಯ, ‘ಆ ಕಡೆ ನೆರಳಿನಲ್ಲಿ ನಿಲ್ಲಿ’ ಅಂದ. ನಾನು ಮಾತನಾಡಲಿಲ್ಲ. ‘ಬ್ಯಾಗು ಇದೆ ಅಂತ ತಲೆ ಬಿಸಿ ಮಾಡಬೇಡಿ. ನಾನಿದ್ದೇನೆ. ಬ್ಯಾಗು ಇಲ್ಲಿ ಏನೂ ಆಗುವುದಿಲ್ಲ’ ಅಂದ. ನನಗೆ ಸಿಟ್ಟು ಬರಲು ಶುರುವಾಗಿತ್ತು. ‘ಅರೆ, ನಾನು ನನ್ನ ಪಾಡಿಗೆ ನನ್ನ ಬ್ಯಾಗಿನ ಜತೆ ನಿಂತರೆ ಇವನ್ಯಾರು ತಲೆಹರಟೆ? ಸಿಟಿ ರೋಗ ಇಲ್ಲಿಗೂ ತಗುಲಿರ್‍ಬೇಕು. ಇಲ್ಲದಿದ್ದರೆ, ನಾನು ಬಿಸಿಲಿನಲ್ಲಿ ಒಣಗಿಹೋದರೆ ಇವನಿಗೇನು ತಲೆಬಿಸಿ. ಸುಮ್ಮನೆ ಕೊನೆಗೆ ದುಡ್ಡು ಕೇಳುವ ವರಸೆಯನ್ನು ಇಲ್ಲಿಂದಲೇ ಆರಂಭಿಸುತ್ತಿದ್ದಾನೆ...’ ಅಂದುಕೊಂಡೆ. ಹೀಗೆ ಅಂದುಕೊಳ್ಳುತ್ತಿರುವಾಗಲೇ ಅಪ್ಪ ಬರುತ್ತಿರುವುದು ಕಾಣಿಸಿತು. ಅಷ್ಟಾಗಲೇ ಮಂಗಳೂರು ಬಸ್ಸೂ ಸರಿಯಾಗಿ ಹಾಜರಿತ್ತು. ಈಗ ನಾಲ್ಕು ಮಣಭಾರದ ಬ್ಯಾಗನ್ನು ಮಂಗಳೂರು ಬಸ್ಸಿನ ಮಡಿಲಿಗೆ ಹಾಕುವ ನೇತೃತ್ವ ಅಪ್ಪ ವಹಿಸುವ ಮೊದಲೇ.. ಪೇಪರ್‌ ಮನುಷ್ಯ, ‘ ಓ ಈರೆನ ಮಗಳಾ.. ’ ಅನ್ನುತ್ತಾ ತಾನೇ ಆ ಕಾರ್ಯಕ್ರಮದ ನೇತೃತ್ವ ವಹಿಸಿದ. ಓಹೋ ನಾನು ಊಹಿಸಿದಂತೆಯೇ ಈತ ದುಡ್ಡು ಮಾಡಲು ಇಷ್ಟೆಲ್ಲ ಹೆಲ್ಪ್‌ ಮಾಡ್ತಾ ಇದ್ದಾನೆ ಅಂತ ನಾನು ಮೊದಲು ಊಹಿಸಿದ್ದು ಸರಿಯಾಗೇ ಇದೆ ಇದೆ ಅಂದುಕೊಂಡೆ. ಎಷ್ಟು ಬೇಗ ಸಿಟಿ ಸಂಸ್ಕೃತಿಯನ್ನು ಊರಲ್ಲೂ ಕಲಿತುಬಿಟ್ಟರು ಅಂದುಕೊಳ್ಳುತ್ತಲೇ ಬಸ್ಸೇರಿದೆ.
ಪೇಪರ್‌ ಮನುಷ್ಯ ನಗುತ್ತಾ ಅಪ್ಪನ ಜತೆ ಮಾತನಾಡುತ್ತಾ ನಿಂತಿದ್ದ. ನಾನು ೨೦ರ ನೋಟೊಂದನ್ನು ಪರ್ಸಿನಿಂದ ತೆಗೆದು ಅಪ್ಪನ ಕೈಗೆ ದಾಟಿಸಿದೆ. ಪ್ರಶ್ನಾರ್ಥಕವಾಗಿ ಅಪ್ಪ ನನ್ನನ್ನೇ ನೋಡುತ್ತಾ, ‘ನಿನ್ನ ಬೆಂಗ್ಳೂರು ಬುದ್ಧಿ ಇಲ್ಲಿ ತೋರಿಸಬೇಡ’ ಅಂದರು. ಅಪ್ಪನಿಗೆ ಈ ಪೇಪರ್‌ ಮನುಷ್ಯ ಇಷ್ಟು ಸಹಾಯ ಮಾಡಿದ್ದು ಯಾಕೆ ಅಂತ ಅರ್ಥವೇ ಆಗಿಲ್ಲ ಅಂದುಕೊಳ್ಳುತ್ತಲೇ ಆ ೨೦ರ ನೋಟನ್ನು ನಾನೇ ಪೇಪರ್‌ ಮನುಷ್ಯನ ಕೈಗೆ ದಾಟಿಸಿದೆ. ನನ್ನ ಕೈಯ ೨೦ರ ನೋಟು ಅವನ ಕಣ್ಣಿಗೆ ಬೀಳುತ್ತಲೇ ಸರಕ್ಕನೆ ಹಿಂದೆ ಸರಿದ. ಆತನ ಮುಖದಲ್ಲಾದ ಬದಲಾವಣೆ ನನಗೆ ಮುಜುಗರ ತರಿಸಿತ್ತು. ‘ಅಯ್ಯೋ, ಯಾನ್‌ ಇಂದೆಕ್ಕ್ ಅತ್ತ್‌ ಬ್ಯಾಗ್‌ ಬಸ್ಸ್‌ಗ್‌ ಪಾಡ್ದ್‌ನ. ಇಂಚಿನ ಬೇಲೆ ಮಾತ ಎಂಕ್ಲ್‌ ಮನ್‌ಪುಜ್ಯ (ಅಯ್ಯೋ, ನಾನು ಇದಕ್ಕಲ್ಲ ಬ್ಯಾಗ್‌ ಬಸ್ಸಿಗೆ ತಂದು ಹೆಲ್ಪ್‌ ಮಾಡಿದ್ದು. ಇಂಥ ಕೆಲಸ ಎಲ್ಲ ನಾನು ಮಾಡೋದಿಲ್ಲ.)’ ಅಂದು ಬಿಟ್ಟ. ನನಗೆ ನಾಚಿಕೆಯಾಗಿತ್ತು ಅನ್ನೋದಕ್ಕಿಂತಲೂ ನನ್ನ ಅಪ್ಪನ ಮುಖ ನನಗೆ ನೋಡೋದಕ್ಕೆ ಕಷ್ಟವಾಯಿತು. ‘ನಾನು ಮೊದಲೇ ಹೇಳಲಿಲ್ಲವಾ’ ಅಂದರು ಅಪ್ಪ. ನನಗೆ ಮಾತನಾಡಲು ಏನೂ ಉಳಿದಿರಲಿಲ್ಲ.
‘....ಛೇ. ಹೇಗಾಗಿಬಿಟ್ಟೆನಲ್ಲ’ ಅಂತನಿಸಿತು. ಆದರೂ, ಇಂಥ ಮುಗ್ಥ ಜಗತ್ತಿನಲ್ಲಿ ೨೦ ವರ್ಷ ಇದ್ದುದಕ್ಕೆ ಖುಷಿ ಪಡುತ್ತಾ, ನಗರ ನಾಲ್ಕು ಗೋಡೆಗಳ ವ್ಯಾವಹಾರಿಕ ಜಗತ್ತಿನೊಳಗೆ ಹುಟ್ಟುವ ಮುಗ್ಧ ಹಸುಳೆಗಳನ್ನು ನೆನೆಯುತ್ತಾ ಸುಮ್ಮನಾದೆ. ಸುಮ್ಮನೆ ಹೀಗೆ ಒಂದು ಕ್ಷಣ ನಮ್ಮ ಮೂವರೊಳಗೆ ದಾಟಿದ್ದು ಗೊತ್ತೇ ಆಗಲಿಲ್ಲ.
ಬಸ್ಸು ಹೊರಟಿತು. ಪೇಪರ್‌ ಮನುಷ್ಯನೆಡೆಗೆ ಒಂದು ಕೃತಜ್ಞತೆಗೆ ನಗು ದಾಟಿಸುವ ಧೈರ್ಯ ನನ್ನಲ್ಲಿರಲಿಲ್ಲ. ಆತ ಸುಮ್ಮನೆ ಬಸ್ಸಿಳಿದು ಹೋದ.

10 comments:

ಸಂದೀಪ್ ಕಾಮತ್ said...

ಮಾನವೀಯತೆ ಮಂಗಳೂರಿನಲ್ಲಿ ಇನ್ನೂ ಜೀವಂತವಾಗಿದೆ.ಅಂಥ ಊರಲ್ಲಿ ಈಗ ಅಸಭ್ಯ ವರ್ತನೆ ಕಂಡು ತುಂಬಾನೇ ಬೇಜಾರಾಗ್ತಾ ಇದೆ:(

ಪ್ರಿಯಾ ಕೆರ್ವಾಶೆ said...

ತುಂಬಾ ಚೆನ್ನಾಗಿದೆ ಪುಟ್ಟ ಲೇಖನ. ಹೌದು, ಸಿಟಿ ಲೈಫ್‌ ಕೆಲವೊಮ್ಮೆ ನಮ್ಮ ಮನಸ್ಥಿತಿಯನ್ನೂ ಬದಲಿಸಿ ಬಿಡುತ್ತದೆ. ಹಳ್ಳಿ ಎಂದಿಗೂ ಅದೇ ಪ್ರೀತಿ ಉಳಿಸಿಕೊಂಡಿರುತ್ತದೆ. ಅದು ನಮ್ಮರಿವಿಗೆ ಬರುವಾಗ ನಮ್ಮ ಮನಸ್ಸೂ ತುಂಬಿ ಬರುತ್ತದೆ.

ಸಂದೀಪ್‌ ಅವ್ರು ಮಂಗಳೂರು ಪಬ್‌ ಕ್ರೌರ್ಯವನ್ನು ಅಸಭ್ಯ ವರ್ತನೆ ಅಂತ ಹೇಳಿದ್ದಾರೆ ಅಂದ್ಕೋತೀನಿ.

VENU VINOD said...

ಅದಕ್ಕೇ ನಾವೆಲ್ಲ ಪೇಟೆ ಸೇರಿಕೊಂಡಾಕ್ಷಣ ಥ್ಯಾಂಕ್ಸ್, ಸಾರಿ ಇತ್ಯಾದಿ ಫಾರ್ಮಾಲಿಟಿಗಳಿಗೆ ಬಲಿಯಾಗುತ್ತೇವೆ...ನಮ್ಮ ಪ್ರಪಂಚದಲ್ಲೇ ಮುಳುಗಿರುವಾಗ ಇಂಥ ಘಟನೆಗಳು ಎಚ್ಚರಿಸುತ್ತವೆ...

ಹರೀಶ್ ಕೇರ said...

ಪರವಾಯಿಲ್ಲೆ, ನಲ್ಲ ಇರುಕ್ಕು !
ಅಂದ ಹಾಗೆ, ‘ಚೆನ್ನೈ ಡೈರಿ’ ಯಾವಾಗಿಂದ ಶುರು ?
- ಹರೀಶ್ ಕೇರ

Santhosh Ananthapura said...

ನಿಜವಾದ ಮಾನವೀಯತೆಯನ್ನು ನಾವು ಹಳ್ಳಿಗಳಲ್ಲಿ ಮಾತ್ರ ನೋಡಲು ಸಾದ್ದ್ಯ. ಅಂದಹಾಗೆ ನೀವು ಬೆಂಗಳೂರಿನಲ್ಲಿ ಇಲ್ಲ್ವೇ..? ಚೆನ್ನೈ ನಲ್ಲಿ ಏನು ಮಾಡುತ್ತಿದ್ದೀರಿ...?

Harisha - ಹರೀಶ said...

ಬೇರೆಯವರ ಉದ್ದೇಶವನ್ನು ಅಪಾರ್ಥ ಮಾಡಿಕೊಂಡರೆ ನಾವೇ ಮುಜುಗರಕ್ಕೊಳಗಾಗುವುದೇ ಹೆಚ್ಚು..

ಬರಹ ಆಪ್ಯಾಯಮಾನವಾಗಿದೆ..

ಚಿತ್ರಾ ಸಂತೋಷ್ said...

ರಾಧಿಕಾ ನಮಸ್ತೆ....
ಇವತ್ತೇ ನೋಡಿದ್ದು ನಿಮ್ಮ ಬ್ಲಾಗನ್ನು.ಚೆನ್ನಾಗಿದೆ ಬರಹಗಳ ಸರಮಾಲೆ.
ನಾನಂತೂ ಊರಿಗೆ ಹೋದ್ರೆ ಸಾರಿ, ಥ್ಯಾಂಕ್ಸ್ ಎಲ್ಲ ಬಿಟ್ಟು ..ಎಡ್ಡೆ ಅಂಡ್, ಉಪಕಾರ ಆಂಡ್ ಅನ್ತಿನಿ..
-ಚಿತ್ರಾ

ಸಾಗರದಾಚೆಯ ಇಂಚರ said...

ತುಂಬಾ ಸುಂದರ ಲೇಖನ, ಹೀಗೆ ಬರೆಯುತ್ತಿರಿ.

ಹರೀಶ ಮಾಂಬಾಡಿ said...

ಸಿಟಿ ರೋಗ ಅಂದರೇನು ಮೋಸ,ಹಣಕ್ಕಾಗಿ ಹಪಹಪಿಕೆ ಎಂದು ಮಾರ್ಮಿಕವಾಗಿ ತೋರಿಸಿಕೊಟ್ಟೆ. ಹಳ್ಳಿ ಬಿಟ್ಟು ಪಟ್ಟಣ ಸೇರಿದರೂ ಹಳ್ಳಿಯ ಜೀವಂತಿಕೆನನ್ನು ಉಳಿಸಿಕೊಂಡು ಹೋಗಬೇಕಮ್ಮಾ..!

ಮಾನವೀಯತೆ ಮಂಗಳೂರಿನಲ್ಲಿ ಮಾತ್ರ ಅಲ್ಲ ಎಲ್ಲಾ ಊರುಗಳಲ್ಲೂ ಇನ್ನೂ ಜೀವಂತವಾಗಿದೆ. ಎಲ್ಲಾ ಊರುಗಳಲ್ಲು ಅಸಭ್ಯ ವರ್ತನೆಯೂ ಜಾರಿಯಲ್ಲಿದೆ

anu said...

nijavaagiyu paropakara buddi nammura janaralli innu ulidukondide.. nija radhikaravare ellavannu naavu drushtiyalli nodidare sahrudhayatege bele kattidante aagutte... its nice .. nagara jeevana namage kanditavagiyu manaushyanananu ariyuva kalisuvudilla ellavannu anumaanisuva, laabhavannu noduva buddiyannu bittu.

prasad.g.
udupi