Wednesday, July 10, 2013

ರೋಮಾಂಚನವೀ ಕನ್ನಡ...

ಅದೊಂದು ದಿನ ಸೈಬರ್ ಕೆಫೆಯಲ್ಲಿ ಯಾವುದೋ ಪ್ರಿಂಟ್ ಔಟ್ ತೆಗೆಯಲು ಕೂತಿದ್ದೆ. ಪಕ್ಕದಲ್ಲಿ ಕೂತ ಇಬ್ಬರು ಅದ್ಯಾವುದೋ ಹಾಡು ಕೇಳುತ್ತಾ ಕೂತಿದ್ದರು. ಆ ಹಾಡು ಅವರ ಹೆಡ್ ಫೋನಿನಿಂದ ಹೊರಚಿಮ್ಮಿ ನನ್ನ ಕಿವಿಯಲ್ಲಿ ಗುಟ್ಟಿನಲ್ಲಿ ಯಾರೋ 'ಅನಿಸುತಿದೆ ಯಾಕೋ ಇಂದು...' ಎಂದು ಸುಶ್ರಾವ್ಯವಾಗಿ ಹಾಡಿದಂತನಿಸಿತು. ತಿರುಗಿದೆ. ಕಿವಿ ಮಾತ್ರ ಆ ಕಡೆಗೆ ಕೊಟ್ಟು, ನನ್ನ ಕೆಲಸದಲ್ಲಿ ಮಗ್ನಳಾದೆ. ಹೌದು, ಅವರು ಮುಂಗಾರು ಮಳೆ ಹಾಡು ಕೇಳುತ್ತಿದ್ದರು. ಹಾಡು ಕೇಳುತ್ತಿದ್ದಾಕೆ, ಹಾಡು ಕೇಳಿಸಿದಾಕೆಗೆ, ಇದು ಯಾವ ಭಾಷೆ? ಅಂದಳು. 'ತೆಲುಗು' ಸತ್ಯಕ್ಕೇ ಹೊಡೆದಂತೆ ಆಕೆ ಉತ್ತರಿಸಿದಳು. ನನಗೆ ಸುಮ್ಮನಿರಲಾಗಲಿಲ್ಲ. ಆಕೆಯೆಡೆಗೆ ತಿರುಗಿ, 'ನೋ, ಇದು ಕನ್ನಡ' ಎಂದೆ. ಇಬ್ಬರೂ ಹೌದಾ ಎಂಬಂತೆ ನನ್ನನ್ನೇ ನೋಡಿದರು!

ಚೆನ್ನೈಯೆಂಬ 'ತಮಿಳು'ನಾಡಿಗೆ ನಾನು ಕಾಲಿಟ್ಟಾಗ ನಡೆದ ಘಟನೆ ಇದು. ಮೊನ್ನೆ ಮೊನ್ನೆ ಬೆಂಗಳೂರಿಗೆ ಬಂದಿದ್ದೆ. ಯಥಾವತ್ ಜಯನಗರ ನಾಲ್ಕನೇ ಬಡಾವಣೆಯ ಪೇಪರ್ ಸ್ಟಾಲಿನಲ್ಲಿ ಮ್ಯಾಗಜಿನ್ ತಡಕಾಡುತ್ತಿದ್ದೆ. ಕನ್ನಡಕ್ಕಿಂತಲೂ ಸ್ವಲ್ಪ ಹೆಚ್ಚೇ ಎಂಬಂತೆ ಇತರ ಭಾಷೆಯ ಪತ್ರಿಕೆ, ಮ್ಯಾಗಜಿನ್, ಕಾದಂಬರಿಗಳು ಅಲ್ಲಿ ಕೂತಿದ್ದವು. ಯಾವುದೋ ಹೆಣ್ಣು ಮಗಳೊಬ್ಬಳು ಬಂದು, '2013ರ ರಾಶಿ ವರ್ಷ ಭವಿಷ್ಯ ಇದ್ಯಾ? ಕನ್ನಡದ್ದೇ ಕೊಡಿ' ಎಂದಾಗ ಆಕೆಯೆಡೆಗೆ ತಿರುಗಿದೆ. ಅಷ್ಟರಲ್ಲಿ, ಹಿಂದೆ ಇದ್ದ ಇಬ್ಬರು ಕನ್ನಡಿಗರು 'ಅಲೆಕ್ಸ್ ಪಾಂಡ್ಯನ್' ಎಂಬ ತಮಿಳು ಸಿನೆಮಾದ ಬಗ್ಗೆ ಭಾರೀ ಚರ್ಚೆ ನಡೆಸುತ್ತಿದ್ದರು.

ಈ ಎರಡೂ ವೈರುಧ್ಯಗಳು ಅಪ್ಪಟ ಸತ್ಯ. ನಾನು ಚೆನ್ನೈಗೆ ಬಂದ ಮೇಲೆ ನನಗೆ ನೆನಪಿರುವ ಹಾಗೆ, ಚೆನ್ನೈಯಲ್ಲಿ ಬಿಡುಗಡೆಯಾದ ಚಿತ್ರಗಳು ಕೇವಲ ನಾಲ್ಕು. ಒಂದು 'ಎರಡನೇ ಮದುವೆ'. ನಂತರ 'ಜಾಕಿ', ಆಮೇಲೆ 'ಅಣ್ಣಾಬಾಂಡ್'. ನಂತರ 'ಡ್ರಾಮಾ'. ಇದಕ್ಕೂ ಮೊದಲು ಬಲ್ಲವರ ಪ್ರಕಾರ, 'ಮುಂಗಾರು ಮಳೆ' ಚಿತ್ರ ಕೇವಲ ಒಂದು ದಿನ ಕನ್ನಡಿಗರಿಗೆ ತೋರಿಸಲಾಗಿತ್ತು. ಇನ್ನು 'ಎರಡನೇ ಮದುವೆ'ಯನ್ನು ಚೆನ್ನೈಯಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ ಎಂಬ ಪ್ರೀತಿಯಿಂದ ನೋಡಲು ಹೋದೆ. ಪರವಾಗಿಲ್ಲ ಎಂಬಷ್ಟು ಜನ ಸೇರಿದ್ದರು. ನೋಡಲು ಬಂದ ಎಲ್ಲರೂ ಕನ್ನಡಿಗರೇ ಇದ್ದಂತೆ ಕಾಣಲಿಲ್ಲ. ಯಾಕೋ ಖುಷಿಯಾಯಿತು. ಆಮೇಲೆ ಬಂದಿದ್ದು ಜಾಕಿ. ಇದು ನಗರದಿಂದ ಹೊರವಲಯದಲ್ಲಿರುವ ಮಲ್ಟಿಪ್ಲೆಕ್ಸ್ ನಲ್ಲಿ ಬಿಡುಗಡೆಯಾದ ಕಾರಣ, ನಮಗೆ ಸುದ್ದಿ ತಿಳಿಯುವಷ್ಟರಲ್ಲಿ, ಚಿತ್ರ ಅಲ್ಲಿಂದ ಜಾಗ ಖಾಲಿ ಮಾಡಿತ್ತು. ಇನ್ನು 'ಅಣ್ಣಾಬಾಂಡ್' ಸರದಿ!

ಅಂದು ಭಾನುವಾರ. ವಾರವಿಡೀ ಕೆಲಸ ಮಾಡಿ ಸುಸ್ತಾಗಿ ತಡವಾಗಿಯೇ ಎದ್ದೆ. ಚೆನ್ನೈಯಲ್ಲಿ ಕನ್ನಡ ಚಿತ್ರಗಳ ಪರಿಸ್ಥಿತಿ ಗೊತ್ತಿದ್ದರಿಂದ ಟಿಕೆಟ್ ಖಂಡಿತ ಸಿಗಬಹುದು ಎಂದು ಹೊರಟೆವು. ಸಿನೆಮಾ ಶುರುವಾಗಲು ಅರ್ಧ ಗಂಟೆ ಬಾಕಿ ಇತ್ತು. ಟಿಕೆಟ್ ಕೌಂಟರಿಗೆ ಹೋದರೆ, 'ಹೌಸ್ ಫುಲ್' ಎಂಬ ಉತ್ತರ. ಸಿಕ್ಕಾಪಟ್ತೆ ಖುಷಿ. ಟಿಕೆಟ್ ಸಿಗದಿದ್ದುದಕ್ಕೆ ನಾನು ಈವರೆಗೆ ಇಷ್ಟು ಖುಷಿಪಟ್ಟಿಲ್ಲ! ಆದರೆ, ಇಲ್ಲಿ ನಾನು ಖುಷಿ ಪಡಲು ಬೇರೆಯೇ ಕಾರಣ ಇತ್ತು. ಕನ್ನಡ ಚಿತ್ರ ಚೆನ್ನೈಯಲ್ಲಿ ಹೌಸ್ ಫುಲ್ ಆಯಿತಲ್ಲ ಎಂಬ ಸಂತೋಷ. 'ಮುಂದಿನ ಸಾಲು 10 ರೂಪಾಯಿಯದು ಎರಡೇ ಸೀಟ್ ಇವೆ. ಬೇಕಿದ್ರೆ ಕೊಡ್ತೀನಿ' ಅಂದ ಆತ. (ಚೆನ್ನೈ ಮಲ್ಟಿಪ್ಲೆಕ್ಸ್ ಗಳಲ್ಲಿ ಮುಂದಿನ ಸೀಟುಗಳು ಸಬ್ಸಿಡಿ ದರದಲ್ಲಿ 10 ರೂಪಾಯಿ ನಿಗದಿ ಮಾಡಲಾಗಿದೆ) ಸಿಕ್ಕಿದ್ದೇ ಚಾನ್ಸ್ ಎಂದು ಖರೀದಿಸಿದೆವು. ಜೊತೆಗೆ ನಾನು ಹೌಸ್ ಫುಲ್ ಆಗಿದ್ದನ್ನು ಕಣ್ಣಾರೆ ಕಾಣಬೇಕಿತ್ತು. ಜನರಿಂದ ಗಿಜಿಗುಡುತ್ತಿದ್ದ ಆ ಹಾಲ್ ಕೇಕೆ, ಸಿಳ್ಳಿನಿಂದ ತುಂಬಿತ್ತು. ನನ್ನ ಕಣ್ಣಂತೂ, ಬಂದಿರೋರಲ್ಲಿ ಎಲ್ಲರೂ ಕನ್ನಡಿಗರಾ, ಅಥವಾ ಅನ್ಯಭಾಷಿಕರೂ ಇದ್ದಾರಾ ಎಂದು ಅಳೆಯುವಲ್ಲೇ ಮಗ್ನವಾಗಿತ್ತು. ಇನ್ನು ಚಿತ್ರದ ಬಗ್ಗೆ ಹೇಳಬೇಕಾಗಿಲ್ಲ. ಎಲ್ಲರೂ ಬೇಕಾದಷ್ಟು ಬರೆದಿದ್ದಾರೆ!

ಮೊನ್ನೆ 'ಡ್ರಾಮಾ' ಚಿತ್ರ ತಮಿಳು ನೆಲಕ್ಕೆ ಕಾಲಿಟ್ಟಿದೆ ಎಂಬುದನ್ನು ಕನ್ನಡ ಪತ್ರಿಕೆಗಳ ಅಂತರ್ಜಾಲ ಪೇಜುಗಳಲ್ಲಿ ನೋಡಿ ಗೊತ್ತಾಯಿತು. ಸರಿ, ನಾನೂ, ಗೆಳತಿ ಸ್ನೇಹಾ ಇಬ್ಬರೂ ಸಂಶೋಧನೆ ಶುರು ಮಾಡಿದೆವು. ಕೊನೆಗೂ, ನಾವಿರುವ ಜಾಗದಿಂದ ತುಂಬಾ ದೂರವಿರುವ ಥಿಯೇಟರಿನಲ್ಲಿ ಅದು ಬಿಡುಗಡೆಯಾಗಿದೆ ಎಂದು ತಿಳಿಯಿತು. ಸರಿ, ಹೇಗಾದರೂ ಮಾಡಿ ಹೋಗಿ ನೋಡಲೇಬೇಕು ಎಂದು ನಾವು ಆನ್ ಲೈನಿನಲ್ಲಿ ಬುಕ್ ಮಾಡಲು ನೋಡಿದರೆ, ಆ ಪೇಜು, ಈ ಕನ್ನಡ ಚಿತ್ರದ ಯಾವ ಮಾಹಿತಿಯನ್ನೂ ನಮಗೆ ಕೊಡಲಿಲ್ಲ. ಸರಿ ಫೋನು ಮಾಡೋಣ ಎಂದು ಪ್ರಯತ್ನಿಸಿದರೂ, ಕನ್ನಡ ಚಿತ್ರ ಬಂದಿಲ್ಲ ಎಂಬ ಉತ್ತರ. ನಮ್ಮ ಉತ್ಸಾಹ ಠುಸ್ಸ್ ಆಯಿತು. ನಿಜಕ್ಕೂ ಡಾಮಾ ಚೆನ್ನೈಯಲ್ಲಿ ಬಿಡುಗಡೆ ಆಯಿತೋ ಎಂಬುದು ನಮಗೆ ಕೊನೆಗೂ ತಿಳಿಯಲೇ ಇಲ್ಲ.

ಮೊನ್ನೆ ಮೊನ್ನೆಯ ವಿಶ್ವರೂಪಂ ಸೇರಿದಂತೆ ಹಲವು ತಮಿಳು, ತೆಲುಗು ಚಿತ್ರಗಳು ಕನ್ನಡ ನೆಲದಲ್ಲಿ ಸದ್ದು ಮಾಡುವಾಗ, ಇಲ್ಲಿ ಕೂತ ನನಗೆ, 'ಛೇ, ಒಂದಾದರೂ ಕನ್ನಡ ಚಿತ್ರ ಇಲ್ಲಿ ಹೀಗೆ ಸದ್ದು ಮಾಡಬಾರದಾ?' ಅನಿಸುತ್ತದೆ. ಕನಿಷ್ಟ ಪಕ್ಷ, ಸದ್ದು ಮಾಡದಿದ್ದರೂ, ಬಿಡುಗಡೆಯಾದರೂ ಆಗಬಾರದಾ ಅನಿಸುತ್ತದೆ. ದಿನಬೆಳಗಾದರೆ, ಪತ್ರಿಕೆ ಬಿಡಿಸಿ ನೋಡುವಾಗ ಹಿಂದಿ, ತೆಲುಗು, ಮಲಯಾಳಂ ಚಿತ್ರಗಳು ನಗರದಲ್ಲಿ ಎಲ್ಲೆಲ್ಲಿ ಬಿಡುಗಡೆಯಾಗಿದೆ ಎಂಬ ಉದ್ದ ಪಟ್ಟಿ ಇದ್ದರೂ, ಅದರಲ್ಲಿ 'ಕನ್ನಡ' ಎಂಬ ಹೆಸರೂ ಪಟ್ಟಿಯಲ್ಲಿ ನೋಡಬೇಕೆಂದರೆ ಒಂದೋ ಎರಡೋ ವರ್ಷ ಕಾಯಬೇಕು. ಅನ್ಯ ಭಾಷಿಕರು, ತಮ್ಮ ಇತ್ತೀಚಿನ ಯಶಸ್ವೀ ಚಿತ್ರಗಳ ಬಗ್ಗೆ ಮಾತನಾಡುವಾಗ, ಹೆಮ್ಮೆಯಿಂದ ನಮ್ಮ ಚಿತ್ರಗಳನ್ನು ಉದಾಹರಿಸಲು ಹೋದರೆ, ಅದರಲ್ಲಿ ಅರ್ಧಕ್ಕರ್ಧ ಚಿತ್ರಗಳು, ತಮಿಳಿನಿಂದಲೋ, ತೆಲುಗಿನಿಂದಲೋ ಬಂದ ರಿಮೇಕುಗಳಾಗಿರುತ್ತವೆ. ಹಾಗಾಗಿಯೋ ಏನೋ, ಇಲ್ಲಿನ ಕನ್ನಡಿಗರು ತಮಿಳು, ಹಿಂದಿ, ತೆಲುಗು ಚಿತ್ರ ನೋಡುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಏನೇನು ನಡೆಯುತ್ತಿದೆ ಎಂಬುದೂ ಇಲ್ಲಿನ ಕನ್ನಡಿಗರಿಗೆ ತಿಳಿಯುವುದಿಲ್ಲ.

ಕಳೆದ ವರ್ಷ ತೆಲುಗಿನಲ್ಲಿ, 'ಈಗ' ಚಿತ್ರ ಭಾರೀ ಸುದ್ದಿ ಮಾಡಿತು. ತಮಿಳಿನಲ್ಲೂ 'ನಾನ್ ಈ' ಎಂಬ ಹೆಸರಿನಲ್ಲಿ ಇದು ಜನಪ್ರಿಯವಾಯಿತು. ನಾನೂ ನೋಡಲು ಹೋದೆ. ಇತ್ತೀಚಿನ ದಿನಗಳಲ್ಲಿ, ಕನ್ನಡ ನಟನೊಬ್ಬ ಪರನಾಡಿನಲ್ಲಿ ಈ ಮಟ್ಟಿಗೆ ಜನಪ್ರಿಯನಾಗಿದ್ದು ಹೊಸದು. ತಮಿಳು, ತೆಲುಗು ನಟ ನಟಿಯರ ಜನಪ್ರಿಯತೆ ಕನ್ನಡ ನೆಲದಲ್ಲಿ ಸಾಧಾರಣವೇ ಆಗಿದ್ದರೂ, ಕನ್ನಡ ನಟನ ಹೆಸರು ಇಲ್ಲಿ ಓಡುತ್ತಿರುವುದು ಹೊಸದು. ಚಿತ್ರಮಂದಿರದಲ್ಲೂ, ಎಲ್ಲರೂ ಸುದೀಪ್ ಬಗ್ಗೆ ಮಾತನಾಡುವವರೇ. ಸ್ಕ್ರೀನಿನಲ್ಲಿ 'ಕಿಚ್ಚ ಸುದೀಪ್' ಹೆಸರು ಮಿಂಚಿ ಮಾಯವಾದಾಗ ಅಕ್ಕಪಕ್ಕದವರ 'ಈ ನಟ ಕನ್ನಡದವರಂತೆ' ಎಂಬ ಪಿಸುಮಾತು ಖುಷಿಯೆನಿಸಿತು.

ಮೊನ್ನೆ ಮೊನ್ನೆ ತಮಿಳಿನ 'ಕುಮ್ಕಿ' ಚಿತ್ರ ನೋಡಿದೆ. ಒಂದು ಆನೆ, ನವಿರು ಪ್ರೇಮ ಕಥಾನಕವಿರುವ ಇದು ಒಂದು ಉತ್ತಮ ಪ್ರಯತ್ನ. ಅದರಲ್ಲೊಂದು ದೃಶ್ಯ ಬರುತ್ತದೆ. ನಾಯಕನಿಗೆ ನಾಯಕಿ ಜಲಪಾತ ತೋರಿಸಲು ಕೇಳುತ್ತಾಳೆ. ಅದು ನಮ್ಮ ಜೋಗ. ಇಂಥದ್ದೇ ಒಂದು ಸನ್ನಿವೇಶ ನಮ್ಮ ಮುಂಗಾರು ಮಳೆಯಲ್ಲೂ ಬರುತ್ತದೆ. ಮುಂಗಾರು ಮಳೆಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟ ಸನ್ನಿವೇಶವದು. ಜೋಗವನ್ನು ಅದ್ಭುತ ಎನ್ನುವ ರೀತಿಯಲ್ಲಿ ಕ್ಯಾಮೆರಾದಲ್ಲಿ ಸೆರೆಹಿಡಿದದ್ದು ಇದೇ ಸನ್ನಿವೇಶದಲ್ಲಿ. ಕುಮ್ಕಿಯ ಆ ಸನ್ನಿವೇಶ, ಅದರ ಛಾಯಾಗ್ರಹಣ ನೋಡಿ, ಅರೆ, ಇದು ಬಹುತೇಕ ಮುಂಗಾರು ಮಳೆಯಿಂದ ಸ್ಪೂರ್ತಿ ಪಡೆದಂತಿದೆಯಲ್ಲ ಅನಿಸಿದ್ದು ಸುಳ್ಳಲ್ಲ!

ಕೊನೆಯದಾಗಿ, ನನ್ನನ್ನು ಸಿಕ್ಕಾಪಟ್ಟೆ ತೀವ್ರವಾಗಿ ಕಾಡಿದ ಪತ್ರಿಕೆಗಳ ಬಗ್ಗೆ ಬರೆಯದಿದ್ದರೆ, ನನ್ನ ಮನಸ್ಸಿಗೆ ತೃಪ್ತಿಯಾಗದು. ಮೊನ್ನೆ ಕನ್ನಡದ ಹೆಸರಾಂತ ಮ್ಯಾಗಜಿನ್ ಒಂದು ಬೇಕಿತ್ತು. ಸರಿ ಗಾಡಿ ಹತ್ತಿ ಹೊರಟೆ. 'ಇಂಥಾ ಜಾಗದಲ್ಲಿ ಸಿಗಬಹುದು' ಎಂದು ಲೆಕ್ಕಾಚಾರ ಹಾಕಿ ಹಲವರು ಕೆಲವು ಸ್ಥಳಗಳನ್ನು ಉಲ್ಲೇಖಿಸಿದರು. ಎಲ್ಲಿ ಹುಡುಕಿದರೂ, ಊಹೂಂ, ಸಿಗಲೇ ಇಲ್ಲ. ಪ್ರತಿ ಅಂಗಡಿಯಲ್ಲೂ 'ತೆಲುಗು, ಮಲಯಾಳಂ ಇದೆ, ಕನ್ನಡ ಮಾತ್ರ ಇಲ್ಲ' ಎಂಬ ಉತ್ತರ. ಹುಡುಕಿ ಹುಡುಕಿ ಕೊನೆಗೂ ಸಿಗಲಿಲ್ಲ. ಆಮೇಲೆ ತಿಳಿಯಿತು, ಕೇವಲ ಒಂದು ಸ್ಥಳದಲ್ಲಿ ಮಾತ್ರ ಸಿಗುತ್ತೆ ಅಂತೆ. ಆನ್ ಲೈನಿನಲ್ಲಿ ಎಲ್ಲ ಪತ್ರಿಕೆಗಳು ಸಿಗುತ್ತಾದರೂ, ತಮಿಳುನಾಡಿನ ಅಂಗಡಿಯಲ್ಲಿ ಕನ್ನಡ ಪತ್ರಿಕೆ ಕೊಂಡು ಓದುವ ಸುಖವೇ ಬೇರೆ. ಬಹುಶಃ ಇಲ್ಲಿನ ಕನ್ನಡಿಗರು ಕನ್ನಡ ಪತ್ರಿಕೆ ಓದುವುದೇ ಇಲ್ಲವೋ ಗೊತ್ತಿಲ್ಲ. ಇಲ್ಲಿಯೇ ಹುಟ್ಟಿ ಬೆಳೆದ ಬಹುತೇಕ ಕನ್ನಡಿಗರಿಗೆ ಕನ್ನಡ ಓದಲು ಬಾರದು ಎಂಬುದೂ ನಿಜವೇ.

ಹಾಗೆಂದು ಇಲ್ಲಿ ಕನ್ನಡ ಕಾರ್ಯವೇ ನಡೆಯುವುದಿಲ್ಲವೆಂದಲ್ಲ. ಇಲ್ಲಿನ ಐನಾವರಂನಲ್ಲಿ ಸರ್ವಜ್ಞನ ಪ್ರತಿಮೆ ಅನಾವರಣವಾದಾಗ ಸೇರಿದ್ದ ಭಾರೀ ಜನಸಾಗರ, ಕರ್ನಾಟಕ ಸಂಘದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ, ಕರಾವಳಿ ಉತ್ಸವ, ಕರ್ನಾಟಕ ರಾಜ್ಯೋತ್ಸವಗಳಿಗೆ ಸೇರುವ ಜನಜಾತ್ರೆ ಇಲ್ಲಿನ ಕನ್ನಡಿಗರ ಕನ್ನಡ ಪ್ರೀತಿಗೆ ಸಾಕ್ಷಿ. ಆದರೂ, ನನಗೆ ಮಾತ್ರ ಇಲ್ಲಿಯೇ ಕೂತು ಕನ್ನಡ ಚಿತ್ರ ನೋಡುವಾಸೆ. ನನ್ನ ಹಾಗೆಯೇ ಇತರ ಭಾಷಿಗರೂ, ಕನ್ನಡ ಚಿತ್ರಗಳನ್ನು ನೋಡಲಿ, ಮೆಚ್ಚಿಕೊಳ್ಳಲಿ ಎಂಬ ಅತಿಯಾಸೆ. ತಮಿಳಿನ ಗೂಡಂಗಡಿಯಿಂದ ಕನ್ನಡ ಮ್ಯಾಗಜಿನ್ ಕೊಂಡುಕೊಳ್ಳುವಾಸೆ. ಕಡೇ ಪಕ್ಷ, ಅಂಗಡಿಯಾತ ಸಾಮಾನು ಸುತ್ತಿ ಕೊಟ್ಟ ಪೇಪರಾದರೂ ಕನ್ನಡವಾಗಿರಲಿ ಎಂಬಾಸೆ. ನನ್ನ ಆಸೆ ಎಂದು ಈಡೇರೀತು?!

(ಸಖಿ ಮ್ಯಾಗಜಿನ್ ನಲ್ಲಿ ಮಾರ್ಚ್ ತಿಂಗಳಲ್ಲಿ ಪ್ರಕಟಿತ ಲೇಖನ) (ಚಿತ್ರಕೃಪೆ- ಅಂತರ್ಜಾಲ)

4 comments:

VENU VINOD said...

ಚೆನ್ನೈನಲ್ಲೂ ಕನ್ನಡ! ನಿಜಕ್ಕೂ ಖುಷಿಕೊಡೋ ವಿಚಾರ

SANTOSH KULKARNI said...

kannada magzine galige subscribe madi neeviruva chennai address kotre aitappa....athava online nalli kannda pustakagalannu khareedi madi door delivery madidanta helidare aitalla....

kashmir said...

ಓದಿ ತುಂಬಾ ಖುಷಿಯಾಯ್ತು.

kashmir said...

ಓದಿ ತುಂಬಾ ಖುಷಿಯಾಯ್ತು.