Thursday, October 30, 2008

ಕೆಂಪುದೀಪದ ಆ ಸರದಾರರು..

ಇನ್ನೂ ೧೨೦ ಸೆಕೆಂಡುಗಳಿವೆ. ಉಫ್‌.. ಕೀಲಿಯನ್ನು ಎಡಕ್ಕೆ ತಿರುಗಿಸಿ ಆಫ್‌ ಮಾಡಿದೆ. ಅತ್ತಿತ್ತ ಕಣ್ಣು ತಿರುಗಿಸಿದರೆ ಎಲ್ಲರೂ ನನ್ನಂತೆ ಹೊರಟವರು. ವಾಚು ನೋಡಿದೆ. ಇನ್ನು ೧೫ ನಿಮಿಷ ಮಾತ್ರ ಇದೆ. ವಿಧಾನಸೌಧದವರೆಗಿನ ಸಿಗ್ನಲ್‌ ದಾಟಲು ೧೫ ನಿಮಿಷ ಸಾಕು. ಅಲ್ಲಿಂದ ಆಫೀಸಿಗೆ ಒಂದೇ ಸಿಗ್ನಲ್‌ ಇದ್ದರೂ ದಾಟಲು ಮಾತ್ರ ಈ ಹೊತ್ತಿನಲ್ಲಿ ಅಬ್ಬಬ್ಬಾ ಅಂದರೂ ೧೦ ನಿಮಿಷವಾದ್ರೂ ಬೇಕು. ಛೇ.. ಅಂತ ಮನಸ್ಸಲ್ಲೇ ಲೆಕ್ಕ ಹಾಕುತ್ತಾ ಕಣ್ಣುಮುಚ್ಚಿದೆ. ತೆರೆದಾಗ ಚಾಚಿದ ಕೈಯೊಂದು ನನ್ನ ಮುಂದೆ ದಯನೀಯ ದೃಷ್ಠಿ ನೇಯುತ್ತಿತ್ತು. ತಿದ್ದದೆ ತೀಡದೆ ಇದ್ದರೂ ಸ್ಟ್ರೈಟನಿಂಗ್‌ ಮಾಡಿಸಿಟ್ಟಂತಹ ನೇರ ಕೆಂಚು ಕೂದಲ ಆ ಹುಡುಗಿ ಅಳುಕಿಲ್ಲದೆ ಕೈಯನ್ನು ಮುಂದಕ್ಕೆ ಚಾಚಿದ್ದಳು. ಪಾಪ.. ಅಂತ ಒಂದು ಕ್ಷಣ ಅನಿಸಿದರೂ ಅಷ್ಟಾಗಲೇ ಕೆಂಪುದೀಪ ಮಾಯವಾಗಿತ್ತು. ಹಸಿರುದಾರಿ ಮುಂದಿತ್ತು. ಛೂ ಬಿಟ್ಟ ನಾಯಿಯಂತೆ ಒಂದೇ ಉಸಿರಿಗೆ ಓಡಿದ ವಾಹನಗಳಂತೆ ನಾನೂ ಅನಾಯಾಸವಾಗಿ ಮುಂದೆ ಚಲಿಸಿದೆ. ನೇರ ಕೆಂಚು ಕೂದಲ ಆ ಹುಡುಗಿ ಮನದಿಂದ ಮರೆಯಾದಳು.
............ ................ ............
ರಾತ್ರಿ ಗಂಟೆ ಹನ್ನೊಂದು ದಾಟಿರಬೇಕು. ಪುಟ್ಟ ಪುಟ್ಟ ಆಡುವ ಕೈಗಳಲ್ಲಿ ಬಣ್ಣಬಣ್ಣದ ಬಲೂನುಗಳು. ಆದರೆ, ಆಡಲಿಕ್ಕಲ್ಲ. ನಿಮಿಷಕ್ಕೊಂದು ಬಾರಿ ಹರಿದುಹೋಗುವ ವಾಹನಗಳು ಆ ಕೆಂಪು ದೀಪವನ್ನು ನೋಡಿ ನಿಂತುಬಿಡುತ್ತವಲ್ಲ.. ಆಗ ಮಾರಲಿಕ್ಕೆ. ನನ್ನಂತೆ ಕಚೇರಿಯ ಕೆಲಸ ಮುಗಿಸಿಯೋ.. ಅಥವಾ ಷಾಪಿಂಗು ಮುಗಿಸಿಯೋ.. ಇಲ್ಲವೇ, ಇನ್ನಾವುದೋ ಪಾರ್ಟಿಯಲ್ಲಿ ಮಿಂಚಿ ತಿಂದು ತೇಗಿಯೋ ಬರುತ್ತಿರುವ ಸಾವಿರಾರು ಮಂದಿಯೆದುರು ಬಲೂನು ಹಿಡಿದರೆ ಎರಡೋ, ನಾಲ್ಕೋ ಮಾರಾಟವಾಗುತ್ತವೆ. ಹೊಟ್ಟೆಯ ಬಲೂನೂ ತುಂಬುತ್ತದೆ. ಆಡುವ ಬಲೂನು ಹೊಟ್ಟೆಗೆ ಮಾತ್ರ ಹಿಟ್ಟು! ಆದರೆ... ಒಮ್ಮೊಮ್ಮೆ, ಅದೇ ಕೆಂಪುದೀಪ ದಾಟಿಯೇ ಹೋಗುವ ನನಗೆ ಆಡುವ ಕೈಗಳು ಮಾತ್ರವಲ್ಲ. ದಿನಗಳುರುಳಿ ತಿಂಗಳಾದರೂ ‘ಮಾಸದ ಗಾಯದ’ ಚಾಚುವ ಕೈಗಳೂ ಎದುರಾಗುತ್ತವೆ. ಹಣೆಗೊಂದು ಬಿಳಿಯ ಪಟ್ಟಿ. ಆ ಬಿಳಿ ಪಟ್ಟಿಯ ಮಧ್ಯದಲ್ಲೊಂದು ಕೆಂಪು ರಕ್ತದ ಕಲೆ. ಕೈಯಲ್ಲೊಂದು ಚೀಲ. ದಣಿದು ಎರಡು ದಿನಗಳಿಂದ ಹೊಟ್ಟೆಗೆ ಹಿಟ್ಟಿಲ್ಲದ ಮುಖಭಾವ. ಇವಿಷ್ಟಿದ್ದರೆ ಸಾಕು. ಆ ಕೆಂಪುದೀಪ ಆಶ್ರಯ ನೀಡುತ್ತದೆ. ವಿಚಿತ್ರವೆಂದರೆ.. ಆ ಕೆಂಪು ರಕ್ತದ ಕಲೆಯ ಬಿಳಿಪಟ್ಟಿ ವಾರಗಳೇ ಕಳೆದರೂ ಮಾಸುವುದಿಲ್ಲ. ಗಾಯವೂ ಗುಣವಾಗುವುದಿಲ್ಲ! ಪಾಪ...
............... ................. ...........
ಅದೊಂದು ದಿನ, ಸಮಾಜ ಕಲ್ಯಾಣ ಇಲಾಖೆ ಈ ಕೆಂಪುದೀಪದ ಸರದಾರರ ಬೇಟೆಗೆ ಹೊರಟಿತ್ತು. ಆ ದಿನ ಬೆಳ್ಳಂಬೆಳಗ್ಗೆಯೇ ಪತ್ರಕರ್ತರಾದ ನಮಗೂ ಆ ದೆಸೆ. ಇಲಾಖೆಯ ಜೀಪಿನಲ್ಲಿ ಹೊರಟೆವು. ನಗರವಿಡೀ ಸುತ್ತಿ ಹತ್ತಿಪ್ಪತ್ತು ಮಂದಿಯನ್ನು ಒಳಗೆ ಹಾಕಿದ್ದೂ ಆಯಿತು. ನಡು ಮಧ್ಯಾಹ್ನವಾಗುವ ಹೊತ್ತಿಗೆ ಕಮರ್ಶಿಯಲ್‌ ರಸ್ತೆಯ ಆ ಸಂದಿಗೆ ತಲುಪಿದೆವು. ಆ ಕೆಂಪುದೀಪದಡಿಯಲ್ಲಿ ಆಕೆಯ ಕಂಕುಳಲ್ಲಿ ತಿಂಗಳ ಮಗು ಒರಗಿತ್ತು. ಇಲಾಖೆಯ ಜೀಪಿ ಕಂಡಿದ್ದೇ ತಡ ತಿಂಗಳ ಮಗುವೂ ಆಕೆಗೆ ಬೇಡವಾಗಿತ್ತು. ರಸ್ತೆಗೆಸೆದು ಓಡಿಹೋದ ಆಕೆಯೇನೋ ಇಲಾಖೆಯ ಸಿಬ್ಬಂದಿ ಕೈಯಿಂದ ತಪ್ಪಿಸಿಕೊಂಡಳು. ಮಗು ಟಾರುರಸ್ತೆಗೆ ಬಿದ್ದ ರಭಸಕ್ಕೆ ರಕ್ತ ಒಸರುತ್ತಿತ್ತು. ಎಲ್ಲರ ಜತೆಗೆ ಈ ಮಗುವೂ ಇಲಾಖೆ ಪಾಲಾಯಿತು. ಅಷ್ಟರಲ್ಲಿ ಪಕ್ಕದ ಪೋಲೀಸ್‌ಠಾಣೆಗೆ ಕಣ್ಣೀರು ಸುರಿಸುತ್ತಾ ಮತ್ತೊಬ್ಬ ಪ್ರತ್ಯಕ್ಷ. ‘ಸಾರ್‌, ನನ್ನ ಮಗು ಎತ್ತಿಕೊಂಡು ಹೋದ್ರು ಸಾರ್‌’ ಅಂತ ಗೋಳಿಟ್ಟ. ಪಕ್ಕದಲ್ಲಿ ಆತನ ಹೆಂಡತಿಯಂತೆ. ಜೋರಾಗಿ ಅಳುತ್ತಿದ್ದಳು. ಇಲಾಖೆಯವರಿಗೆ ಫಚೀತಿ. ಮಗೂನ ಆ ರೀತಿ ರಸ್ತೆಗೆಸೆದು ಹೋದೋರು ಬೇರೇನೇ. ಈಗ ನನ್ನ ಮಗುವೆಂದು ಹೇಳುತ್ತಾ ಬಂದಿರುವ ಇಬ್ಬರು ಬೇರೇನೇ. ಪೋಲೀಸರು, ‘ಆ ಮಗು ನಿಮ್ಮದೆಂದು ಹೇಳಲು ನಿಮ್ಮಲ್ಲಿ ಯಾವ ದಾಖಲೆಯಿದೆ?’ ಅಂದರು. ‘ದಾಖಲೆ ಸಮೇತ ಇಲಾಖೆಯ ನಿರಾಶ್ರಿತರ ಪುನರ್ವಸತಿ ಕೇಂದ್ರಕ್ಕೆ ಹೋಗಿ. ನಿಮ್ಮ ಮಗು ನಿಮಗೇ ಕೊಡುತ್ತಾರೆ’ ಅಂದರು. ಅಳುತ್ತಾ ಆ ದಂಪತಿಗಳೆಂದು ಹೇಳಿಕೊಂಡವರು (ದಂಪತಿಗಳಂತೆ ಕಾಣಲಿಲ್ಲ ಬಿಡಿ) ಹೋದರು. ಅವರಿಗೆ ಬೆಂಬಲ ನೀಡಿ ಗಲಾಟೆ ಮಾಡಿದ ಹತ್ತಾರು ಮಂದಿಯೂ ಹಿಂದೆ ಸರಿದರು. ಹಸಿದ ಮಗುವಿಗೆ ಪ್ರೆಸ್‌ಕ್ಲಬ್‌ನಲ್ಲಿ ನಾನು, ರಶ್ಮಿ ಬಿಸ್ಕೆಟ್‌ ತಿನ್ನಿಸಿ ಹಾಲು ಕುಡಿಸಿದೆವು. ಆ ಮಗುವಿನತ್ತ ಎನ್‌ಜಿಒ ಬಾಸ್ಕೋದ ಮಂದಿ ತೋರಿದ ತಾಯಿಯ ಮಮತೆ ಮಾತ್ರ ಇನ್ನೂ ಕಣ್ಣಿಂದ ಮಾಯವಾಗೋದಿಲ್ಲ. ಅದೇನೇ ಇರಲಿ, ಆಮೇಲೆ ಯಾರೂ ಆ ನಿರಾಶ್ರಿತರ ಪುನರ್ವಸತಿ ತಾಣಕ್ಕೆ ಅದು ನನ್ನ ಮಗುವೆಂದು ಹೇಳಿಕೊಂಡು ಬರಲಿಲ್ಲವಂತೆ!
.......... ........... .........
ಆಮೇಲೆ.....ಯಾಕೋ..
... ಎರಡು ರುಪಾಯಿಯೇನು ಮಹಾ.. ಅಂತ ದಯನೀಯ ಕೈಗೆ ಹಾಕುತ್ತಿದ್ದ ನನ್ನ ಕೈಯೂ ಈಗ ಬರಿದಾಗಿವೆ.

14 comments:

ಆಲಾಪಿನಿ said...

ಹೇ ರಾಧಿಕೆ, ವಾಸ್ತವವನ್ನ ಪುಟ್ಟ ಪುಟ್ಟ ಪದಪುಂಜಗಳಲ್ಲಿ ಹಿಡಿದಿಟ್ಟಿರೋ ರೀತಿ ಇಷ್ಟವಾಯ್ತು ಕಣೆ.... ಮತ್ತಷ್ಟು ಬರಿಯೇ..

ಪ್ರಿಯಾ ಕೆರ್ವಾಶೆ said...

ಹಲವು ಚಾಚಿದ ಕೈಗಳನ್ನು, ಕೆಂಪು ಸಿಗ್ನಲ್‌ಗಳನ್ನೂ ದಾಟಿ ಸಾಗುತಿದೆ ಬದುಕಿನ ಬಂಡಿ. ಇದನ್ನು ಓದ್ತಾ ಇದ್ರೆ ನಂಗೆ ಅದ್ಯಾವುದೋ ಸಿನಮಾ ನೋಡಿದ ನೆನಪಾಯಿತು. ಹೆಸರೇನೋ ನೆನಪಾಗ್ತಿಲ್ಲ. ಆದರೆ ಚಾಚುವ ಕೈಗಳು, ದಾಟುವ ಸಗ್ನಲ್‌ಗಳಿಗೆ ಕೊನೆಯೆಲ್ಲಿ ಹೇಳು...

ಮನೋರಮಾ.ಬಿ.ಎನ್ said...

tumba laikiddu maraiti...vaastavada exact bimba..

www.kumararaitha.com said...

ಸರಾಗ ಓದಿಸಿಕೊಳ್ಳುವಿಕೆ,ಎಲ್ಲಿಯೂ ಗೊಂದಲವಿಲ್ಲ.ಹೇಳಬೇಕೆನ್ನಿಸಿದ್ದು ಮುಕ್ತ.ಗ್ರಹಿಕೆ ಮತ್ತು ಅಭಿವ್ಯಕ್ತಿ
ಚೆನ್ನ,ಹೀಗೆ ಬರೆಯುತ್ತಾ ಹೋಗಿ

ಸಂದೀಪ್ ಕಾಮತ್ said...

edde undu:)

dinesh said...

ಕೆಂಪು ದೀಪದ ಅಡಿಯಲ್ಲಿ ಸಣ್ಣ ುಕ್ಕಿನ ಗೋಲದೊಳಗೆ ದೇಹ ತೂರಿಸಿ,ಒಳ್ಳೆ ಜಿಮ್ನಾಸ್ಟಿಕ್ ನ ಪಟ್ಟುಗಳನ್ನು ಹಾಕಿ, ದಯನೀಯ ಮುಖ ಮಾಡಿಕೊಂಡು ಎದುರು ಬಂದು ಕೈಯೊಡ್ಡುವವರನ್ನೂ ನೀವು ನೋಡಿರಬಹುದೇನೋ ...! ಬರಹ ತುಂಬಾ ಚೆನ್ನಾಗಿದೆ. ಜೊತೆಗೊಂದು ಚಿತ್ರವಿದ್ದರೆ ಚೆನ್ನವಿತ್ತು...... !

ಗಿರೀಶ್ ರಾವ್, ಎಚ್ (ಜೋಗಿ) said...

ಸೈಕಾಲಜಿ ಕ್ಲಾಸಿನ ಕಿಟಿಕಿ ಬದಿ ಬೆಂಚಿನ ಕರಾಮತ್ತು ನಮಗೆ ಮಾತ್ರ ಗೊತ್ತು ಬಿಡು!
-Write about this.

-jogi

Harisha - ಹರೀಶ said...

ರಾಧಿಕಾ ಅವರೇ, ಕೈಯಲ್ಲಿ ಕಸುವಿದ್ದರೂ ದುಡಿಯದ ಇಂಥ ಜನರಿಂದಲೇ ಭಾರತ "ಬಡವರ ದೇಶ"ದಂತೆ ಕಾಣುತ್ತದೆ.

ಪ್ರಿಯಾ ಅವರೇ, ನೀವು ನೋಡಿರಬಹುದಾದ ಸಿನಿಮಾ Traffic Signal ಇರಬಹುದು...

ರಾಧಿಕಾ ವಿಟ್ಲ said...

ಶ್ರೀದೇವಿ, ಪ್ರಿಯಾ, ಮನು, ಕುಮಾರ ರೈತ, ಸಂದೀಪ್‌ ಕಾಮತ್‌, ದಿನೇಶ್‌, ಹರೀಶ್‌ ಎಲ್ಲರಿಗೂ ಧನ್ಯವಾದ.
ಜೋಗಿಯವರೇ... ಸೈಕಾಲಜಿ ಕ್ಲಾಸಿನ ಪುರಾಣ ಇನ್ನೊಮ್ಮೆ ಬರೆಯುತ್ತೇನೆ.
- ರಾಧಿಕಾ

ಹರೀಶ್ ಕೇರ said...

Radhika,
Good one.
please keep writing.
In CHENNAI also !
- Harish Kera

ಇಂಚರ said...

we are fist year journalism students of sdm college ujire.we have started a practicle journal 'inchara'.for to read it click to www.incharaepaper.blogspot.com
something special is there!

with regards,
IRSHAD.M.VENUR

ಆಲಾಪಿನಿ said...

ಚೆನ್ನೈನಲ್ಲಿನ ಟ್ರಾಫಿಕ್ ಸಿಗ್ನಲ್‌ ಅನುಭವ ಬರಿಯೇ...

ಸುನಿಲ್ ಹೆಗ್ಡೆ said...

ಅಸಲಿ- ನಕಲಿಗಳನ್ನು ನಿರ್ಧರಿಸಲಾಗದೆ ಹೊಯ್ದಾಡುವ ಮನಸ್ಸು ಮತ್ತು ಖಾಲಿಯಾದ ಕೈಗಳಲ್ಲಿ ನನ್ನದೂ ಒಂದು...
ಚೆನ್ನಾದ ಬರಹಕ್ಕಾಗಿ ಒಂದು ಪುಟ್ಟ ಥ್ಯಾಂಕ್ಸ್... ;)

Jagali bhaagavata said...

ಹ್ಮ್.....
ಚೆನ್ನಾಗಿ ಬರೀತೀರ. ಯಾಕೆ ನಿಲ್ಲಿಸಿದ್ರಿ?